ರೊಲ್ಫ್ ,ಎಂ. ಝಿಂಕರೇಂಜೆಲ್ (1944--) ೧೯೯೬
ಸ್ವಿಟ್ಸಲ್ರ್ಯಾಂಡ್-ವೈದ್ಯಕೀಯ-
ರೋಲ್ಫ್ ಬೇಸೆಲ್ ಹತ್ತಿರದ ರೀಹೆನ್ ಹಳ್ಳಿಯಲ್ಲಿ 1944 ರಂದು ಜನಿಸಿದನು. ತನ್ನ ಜೀವನದ ಮೊದಲ 25 ವರ್ಷಗಳನ್ನು ಇಲ್ಲಿಯೇ ಕಳೆದನು. ರೋಲ್ಫ್‍ನ ಪೂರ್ವಜರು ಮೂಲತ ಜರ್ಮನಿಯವರಾಗಿದ್ದು 1918ರಲ್ಲಿ ಬೇಸಲ್‍ಗೆ ಬಂದು ನೆಲೆಸಿದ್ದರು. ರೋಲ್ಫ್‍ನ ತಂದೆ ಬೇಸಲ್‍ನಲ್ಲಿದ್ದು ಖ್ಯಾತ ಔಷಧಿ ಕಂಪನಿ ಜೆ.ಅರ್.ಗೀಗೈ ಕಂಪನಿಯಲ್ಲಿ ಡಾಕ್ಟರೇಟ್ ಹೊಂದಿ ಕೆಲಸಕ್ಕೆ ಸೇರಿದ ಪ್ರಥಮ ವ್ಯಕ್ತಿಯೆಂದು ದಾಖಲಾಗಿದ್ದಾನೆ. 1968ರಲ್ಲಿ ರೋಲ್ಫ್ ವೈದ್ಯಕೀಯ ಪದವಿ ಗಳಿಸಿದನು. ಇದೇ ವರ್ಷ ತನ್ನ ಸಹ ಪಾಠಿಯಾಗಿದ್ದ ವೈದ್ಯ ಕ್ಯಾಥರಿನ್‍ಳನ್ನು ಮದುವೆಯಾದನು. ಕುಷ್ಟರೋಗ ಕುರಿತು ಹೆಚ್ಚಿನ ಸಂಶೋಧನೆಗಾಗಿ ಆಫ್ರಿಕಾ ಖಂಡಕ್ಕೆ ಹೋಗಬೇಕೆಂದು ಈ ದಂಪತಿಗಳು, ವಿಶ್ವ ಸಂಸ್ಥೆಯ ಆರೋಗ್ಯ ಇಲಾಖೆಗೆ ಹಾಗೂ ಇತರ ಅಂತರಾಷ್ಟ್ರೀಯ ಅರೋಗ್ಯ ಸಂಸ್ಥೆಗಳಿಗೆ ಅರ್ಜಿ ಸಲ್ಲಿಸಿದರು. ಆದರೆ ಇವರ ಅನನುಭವದಿಂದ ಎಲ್ಲಿಯೂ ಕೆಲಸ ದಕ್ಕಲಿಲ್ಲ. 1969ರಿಂದ ರೋಲ್ಫ್ ಬೇಸೆಲ್‍ನ ಆಸ್ಪತ್ರೆಯೊಂದರಲ್ಲಿ ವೈದ್ಯನಾಗಿ ವೃತ್ತಿ ಜೀವನ ಪ್ರಾರಂಭಿಸಿದನು. ಅಲ್ಪಾವಧಿಯಲ್ಲೇ ಝೂರಿಕ್ ವಿಶ್ವವಿದ್ಯಾಲಯದಲ್ಲಿ ಪ್ರಾಯೋಗಿಕ ವೈದ್ಯಕೀಯದಲ್ಲಿ ಸ್ನಾತಕೋತ್ತರ ಪದವಿಗೆ ಸೇರಿದನು. ಇಲ್ಲಿರುವಾಗಲೇ ಅಣ್ವಯಿಕ ಜೀವಶಾಸ್ತ್ರ, ಜೀವ ರಸಾಯನಶಾಸ್ತ್ರ, ತಳಿಶಾಸ್ತ್ರ ನರಜೀವಶಾಸ್ತ್ರ, ರೋಗರೋಧಶಾಸ್ತ್ರದಲ್ಲಿನ ಮೂಲ ಅಂಶಗಳು ರಾಲ್ಫ್’ಗೆ ಮನದಟ್ಟಾದವು. 1970ರಲ್ಲಿ ತೌಸೆನೆ “ವಿಶ್ವವಿದ್ಯಾಲಯದಲ್ಲಿ ಜೀವ ರಸಾಯನಶಾಸ್ತ್ರದಲ್ಲಿ ಹೆಚ್ಚಿನ ವ್ಯಾಸಂಗ ಮುಂದುವರೆಸಿದನು. ಅತಿಥೇಯ ಕೋಶಗಳ ರೋಗರೋಧಕ ಶಕ್ತಿ ವ್ಯತ್ಯಯಕ್ಕೆ ಕಾರಣಗಳ ಹುಡುಕಾಟದಲ್ಲಿ ಕೋಶಗಳನ್ನು ರೇಡಿಯೋ ಸಮಸ್ಥಾನಿಗಳಿಂದ (Isotope) ಗುರುತಿಸಿ ಹಲವಾರು ಪ್ರಯೋಗಗಳನ್ನು ನಡೆಸಿದನು. ಆದರೆ ಇವುಗಳಿಂದ ಯಾವುದೇ ನಿರ್ಣಾಯಕ ಫಲಿತಾಂಶಗಳು ದಕ್ಕಲಿಲ್ಲ. ರೋಗ ರೋಧತ್ವದ (Immunity) ಕ್ರಿಯಾಶೀಲತೆಯ ಬಗೆಗೆ ಹೆಚ್ಚಿನ ಅಧ್ಯಯನ ಹಾಗೂ ಸಂಶೋಧನೆ ಬಯಸಿ ರಾಲ್ಫ್ ದಂಪತಿಗಳು ಜಗತ್ತಿನಾದ್ಯಂತ ಐವತ್ತಕ್ಕೂ ಹೆಚ್ಚು ಕಡೆ ಪ್ರವೇಶ ಬಯಸಿದರಾದರೂ ಅವರಿಗೆ ನಿರಾಶೆ ಕಾದಿದ್ದಿತು. ರಾಲ್ಫ್ 1972ರಲ್ಲಿ ಕ್ಯಾನ್‍ಬೆರಾದ ಸೂಕ್ಷ್ಮ ಜೀವಿ ವಿಭಾಗದಲ್ಲಿ ಕೋಶ ಮೂಲದ ಹಾಗೂ ಪ್ರತಿಕಾಯ (Antibody) ಮೂಲದ ಮೇಲೆ ಅವಲಂಬಿತವಾಗಿರುವ ರೋಗರೋಧ ವ್ಯವಸ್ಥೆಗಳ ತೌಲನಿಕ ಅಧ್ಯಯನ ಪ್ರಾರಂಭಿಸಿದನು. ಇಲ್ಲಿನ ಜಾನ್ ಕುಟಿನ್ ಶಾಲಾ ವಿಭಾಗದಲ್ಲಿದ್ದು ಪೀಟರ್ ಡೊಹೆರ್ತಿ ಸೆಮ್‍ಲಿಕಿ ಕಾಡಿನ ವೈರಸ್ ಪೀಡಿತ ಇಲಿಗಳ ಮೆದುಳಿನಲ್ಲಿನ ಊತಕಗಳನ್ನು ಕುರಿತಾಗಿ ಸಂಶೋಧನೆ ನಡೆಸಿದ್ದನು. ರೋಲ್ಫ್ ಈತನೊಂದಿಗೆ ಸೇರಿದನು. ಇವರಿಬ್ಬರು ಸೇರಿ ಇಲಿಯ ಮೆದುಳು ಬಳ್ಳಿಯ ರಸವನ್ನು ಸಂಗ್ರಹಿಸಿ ಮೆದುಳಿನ ಊತಕದ ರೋಗರೋಧಕಾರಣಗಳ ವಿಶ್ಲೇಷಣೆ ಪ್ರಾರಂಭಿಸಿದರು. ರೋಲ್ಫ್ ಮುಂದೆ ಹಲವಾರು ಜನ ಬೇರೆಯ ವಿಜ್ಞಾನಿಗಳೊಂದಿಗೆ ವೈರಸ್ ಸೋಂಕಿತ ಅತಿಥೇಯದ ರೋಗ ರೋಧವ್ಯವಸ್ಥೆ, ಅದರ ಕ್ರಿಯಾಶೀಲತೆ ವೈರಸ್‍ನ ಆಕ್ರಮಣ ವ್ಯವಸ್ಥೆಯೊಂದಿಗೆ ಹೇಗೆ ವಿಕಸಿಸಿದೆಯೆಂದು ಅರಿಯಲು ವಿಸ್ತೃತವಾದ ಸಂಶೋಧನೆ ನಡೆಸಿದನು. ಇದಕ್ಕಾಗಿ 1996ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/24/2020