ಮಾರ್ಟಿನ್, ಪರ್ಲ್ 1920--) ೧೯೯೫
ಅಸಂಸಂ-ಭೌತಶಾಸ್ತ್ರ-ಕಣ ಭೌತಶಾಸ್ತ್ರಕ್ಕೆ ಗಮನಾರ್ಹ ಕೊಡುಗೆ ನೀಡಿದಾತ. ಮಾರ್ಟಿನ್ ತಂದೆ ತಾಯಿ ರಷ್ಯಾ ಹಿಡಿತದಲ್ಲಿದ್ದ ಪೋಲೆಂಡ್ ಮೂಲದವರಾಗಿದ್ದು 1900 ಸುಮಾರಿಗೆ ಉತ್ತಮ ಜೀವನವನ್ನು ಅರಸಿ ಅಸಂಸಂಗಳಿಗೆ ಬಂದು ನೆಲೆಸಿದ್ದರು. ಯಹೂದಿಗಳಾಗಿದ್ದ ಇವರು ನ್ಯೂಯಾರ್ಕ್‍ನ ಬಹು ಹಿಂದುಳಿದ ಪ್ರದೇಶದಲ್ಲಿ ಉಳಿದರು. ಹೇಗಾದರೂ ತಾವು ಮಧ್ಯಮವರ್ಗದ ಮಟ್ಟಕ್ಕೇರಬೇಕೆಂದು ಇವರು ಸದಾ ಶ್ರಮಿಸುತ್ತಿದ್ದರು. ಇದರ ಫಲವಾಗಿ ಮಾರ್ಟಿನ್ ಬೇರೆ ಯಹೋದಿಗಳಿಗಿಂತ ಭಿನ್ನವಾಗಿ ಯಾವುದೇ ಆಡಚಣೆಯಿಲ್ಲದೆ ಶಾಲಾ ವಿದ್ಯಾಭ್ಯಾಸ ಮಾಡುವಂತಾಯಿತು. ಮಾರ್ಟಿನ್ ತಂದೆ ತಾಯಿಗಳು ಶಿಕ್ಷಣಕ್ಕೆ ಭಾರಿ ಮಹತ್ವ ನೀಡಿದ್ದರಲ್ಲದೆ ಉಪಾಧ್ಯಾಯರುಗಳನ್ನು ಅತ್ಯುಚ್ಛ ಮಟ್ಟದಲ್ಲಿ ಪರಿಗಣಿಸುತ್ತಿದ್ದರು. ಮಾರ್ಟಿನ್ ಶಾಲಾ ಜೀವನದುದ್ದಕ್ಕೂ ಪುಸ್ತಕ ಪ್ರೇಮಿಯಾಗಿದ್ದನು. ಕಾವ್ಯ, ಕಥೆ, ವಿಜ್ಞಾನ, ಹಾಸ್ಯ ಎಲ್ಲವುದರಲ್ಲೂ ಅಭಿರುಚಿ ಬೆಳೆಸಿಕೊಂಡನು. ಗ್ರಂಥಾಲಯದಲ್ಲಿ ಕಾಲ ಕಳೆಯುವುದು ಆತನ ನೆಚ್ಚಿನ ಹವ್ಯಾಸವಾಗಿದ್ದಿತು. ಮಾರ್ಟಿನ್‍ಗೆ ಎಂದೂ ವಿಜ್ಞಾನಿಯಾಗಬೇಕೆಂಬ ಹಂಬಲವಿರಲಿಲ್ಲ. ಉತ್ತಮ ಪದವಿ ಗಳಿಸಿ ಆಕರ್ಷಕ ಸಂಬಳ ಪಡೆಯುವುದು ಆತನ ಗುರಿಯಾಗಿದ್ದಿತು. ಹೀಗಾಗಿ ಮಾರ್ಟಿನ್ ರಾಸಾಯನಿಕ ಇಂಜಿನಿಯರಿಂಗ್‍ನಲ್ಲಿ ಪದವಿಗೆ ಸೇರಲು ನಿರ್ಧರಿಸಿದನು. ವಿದ್ಯಾಭ್ಯಾಸ ಮುಗಿಸಿದ ನಂತರ ಜನರಲ್ ಎಲೆಕ್ಟ್ರಿಕ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದನು. ಇಲ್ಲಿ ಅಲ್ಪ ಕಾಲವಿದ್ದ ಮಾರ್ಟಿನ್‍ಗೆ ಭೌತಶಾಸ್ತ್ರದಲ್ಲಿ ಆಸಕ್ತಿ ಮೂಡ ತೊಡಗಿತು. 1950ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಅಧ್ಯಯನಕ್ಕೆ ಸೇರಿದನು. ಇಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಲಭ್ಯವಿರಲಿಲ್ಲ. ಒಂದೇ ವರ್ಷದಲ್ಲಿ ಮಾರ್ಟಿನ್‍ಗೆ ತಾನು ಭೌತಶಾಸ್ತ್ರದಲ್ಲಿ ಮುಂದುವರೆಯಲಾರನೆಂದು, ಅದು ಐನ್‍ಸ್ಟೀನ್‍ರಂತಹುವರಿಗೆ ಮಾತ್ರ ಸಾಧ್ಯವೆಂದು ತೀರ್ಮಾನಿಸಿ ಮನೆಗೆ ಮರಳಿದನು. ಮಾರ್ಟಿನ್ ತಂದೆ ತಾಯಿ, ಐನ್‍ಸ್ಟೀನ್‍ಗೆ ಸಾಧ್ಯವಾದುದು ಮಾರ್ಟಿನ್‍ಗೆ ಏಕಾಗದೆಂದು ಪ್ರಶ್ನಿಸಿ ಹಿಂದಕ್ಕೆ ಕಾಲೇಜಿಗೆ ಕಳಿಸಿದರು. ಇಲ್ಲಿ ನೊಬೆಲ್ ಪ್ರಶಸ್ತಿ ವಿಜೇತನಾದ ರಬಿಯ ಮಾರ್ಗದರ್ಶನ ದಕ್ಕಿತು. 1955ರಲ್ಲಿ ಡಾಕ್ಟರೇಟ್ ಪಡೆದ ಮಾರ್ಟಿನ್ ಮಿಷಿಗನ್ ವಿಶ್ವ ವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಬೋಧಕನಾದನು. ಇಲ್ಲಿ ಡೊನಾಲ್ಡ್ ಗ್ಲೇಸರ್‍ನೊಂದಿಗೆ ಕೆಲಕಾಲ ಗುಳ್ಳೆ ಕೋಠಿಯಲ್ಲಿ (Bubble Chamber)ಕಾರ್ಯ ನಿರ್ವಹಿಸಿದನು. ಕಣ ಭೌತಶಾಸ್ತ್ರದಲ್ಲಿ ಮಾರ್ಟಿನ್ ಗಮನಾರ್ಹ ಸಂಶೋಧನೆಗಲನ್ನು ಮಾಡಿದ್ದಾನೆ. ಇದಕ್ಕಾಗಿ 1995ರಲ್ಲಿ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಮಾರ್ಟಿನ್‍ಗೆ ದಕ್ಕಿತು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/12/2020