ಮಾರ್ಟಿನಸ್ ,ಜೆ.ಟಿ ವೆಲ್ಟ್’ಮನ್ (1931--) ೧೯೯೯
ನೆದರ್’ಲ್ಯಾಂಡ್-ಭೌತಶಾಸ್ತ್ರ-ಭ ಕ್ವಾಂಟಂ ವರ್ಣಗತಿಶಾಸ್ತ್ರದ ಮುಂದಾಳು.
ವೆಲ್ಟ್’ಮನ್ 27 ಜೂನ್ 1931ರಂದು ವಾಲ್ ವಿರ್ಜೆರ್ ಎಂಬ ಹಳ್ಳಿಯಲ್ಲಿ ಜನಿಸಿದನು. ಈತನ ತಂದೆ ಶಾಲಾ ಉಪಾಧ್ಯಾಯನಾಗಿದ್ದನು. 1940ರಲ್ಲಿ ಹಾಲೆಂಡ್ ಜರ್ಮನಿಯ ವಶವಾಗಿ, ಜನ ಜೀವನ ನಿಗ್ರಹಕ್ಕೊಳಗಾಯಿತು. ಆಗ ವೆಲ್ಟ್’ಮನ್ ಪ್ರೌಢಶಾಲೆಯಲ್ಲಿದ್ದನು. ಯುದ್ದ ರಂಗದಲ್ಲಿ ಸಿಕ್ಕುವ ಅಳಿದುಳಿದ ಮದ್ದಿನ ಪುಡಿ ತಂದು ಸಿಡಿಸಿ ವೆಲ್ಟ್’ಮನ್ ಹಾಗೂ ಸ್ನೇಹಿತರು ಆನಂದಿಸುತ್ತಿದ್ದರು. ಯುದ್ದದಿಂದ ಬಸವಳಿದಿದ್ದ ಹಾಲೆಂಡ್‍ನಲ್ಲಿ ಶಾಲೆಗಳು ಸರಿಯಾಗಿ ನಡೆಯುತ್ತಿರಲಿಲ್ಲ. ವೆಲ್ಟ್’ಮನ್ , 1948ರಲ್ಲಿ ಪ್ರೌಢ ಶಿಕ್ಷಣ ಪೂರೈಸಿದನು. ರಜಾ ದಿನಗಳಲ್ಲಿ ರೇಡಿಯೋ ದುರಸ್ತಿ ಗೊತ್ತಿದ್ದ ಪ್ಲಂಬರ್‍ನೊಂದಿಗೆ ಕಳೆಯುತ್ತಿದ್ದ ವೆಲ್ಟ್‍ಮನ್‍ಗೆ ಎಲೆಕ್ಟ್ರಾನಿಕ್ಸ್‍ನಲ್ಲಿ ಅತ್ಯಾಸಕ್ತಿಯಿದ್ದಿತು. ಪ್ರೌಢಶಾಲೆಯಲ್ಲಿ ಉತ್ತಮ ದರ್ಜೆಯನ್ನು ಪಡೆಯದಿದ್ದ ವೆಲ್ಟ್‍ಮನ್‍ಗೆ ಇಂಜಿನಿಯರಿಂಗ್ ಪ್ರವೇಶ ಸಿಕ್ಕದೆ, ಭೌತಶಾಸ್ತ್ರದ ಪದವಿಗೆ ಸೇರಿದನು. ವೆಲ್ಟ್’ಮನ್ ನೆಲೆಸಿದ್ದ ವಾಲ್ ವಿಜಿಕ್‍ನಲ್ಲಿ ಕಾಲೇಜುಗಳಿಲ್ಲದಿದ್ದುದರಿಂದ ವಸತಿ ನಿಲಯಗಳಲ್ಲಿದ್ದು ಹಣ ಪಾವತಿ ಮಾಡುವಷ್ಟು ಆರ್ಥಿಕ ಸಾಮಥ್ರ್ಯವಿರದಿದ್ದುದರಿಂದ ದಿನನಿತ್ಯ ಊರಿನಿಂದ ಕಾಲೇಜಿಗೆ ರೈಲಿನಲ್ಲಿ ಹೋಗಬಹುದಾದ ಉಟ್‍ರೆಕ್ಟ್ ವಿಶ್ವವಿದ್ಯಾಲಯ ಸೇರಿದನು. ಎರಡನೇ ಜಾಗತಿಕ ಯುದ್ದದಿಂದಾಗಿ ಹಾಲೆಂಡ್‍ನ ಶಿಕ್ಷಣ ವ್ಯವಸ್ಥೆಯೇ ಕುಸಿದು ಬಿದ್ದಿದ್ದಿತು. ಉತ್ತಮ ಶಿಕ್ಷಕರು ಪರ ದೇಶಗಳಿಗೆ ವಲಸೆ ಹೋಗಿದ್ದರೆ, ಇನ್ನು ಕೆಲವರು ನಾಝಿಗಳಿಂದ ಹತರಾಗಿದ್ದರು. ಹೀಗಾಗಿ ಪದವಿ ಕಾಲದಲ್ಲಿ ವೆಲ್ಟ್‍ಮನ್‍ಗೆ ಯಾವುದೇ ವಿಷಯದಲ್ಲಿ ಆಸಕ್ತಿ ಮೂಡಲಿಲ್ಲ. ಆರ್ಥಿಕ ಸಂಕಷ್ಟದಿಂದ ಹೊರಬರಲು ಟೈಪಿಂಗ್ ಕೆಲಸಕ್ಕೆ ವೆಲ್ಟ್’ಮನ್ ಮೊರೆ ಹೋದನು. ಅದೆಷ್ಟೋ ವೇಳೆ ಅನ್ನ, ಆಹಾರಗಳಿಲ್ಲದೆ ಬರಿ ನೀರಿನಲ್ಲಿ ಕಾಲ ಕಳೆದನು. ಚಿಕ್ಕ ಪುಟ್ಟ ಗೃಹೋಪಕರಣ ಸಾಮಾನುಗಳನ್ನು ಮಾರಲು ಯತ್ನಿಸಿದನು. ಸುಳ್ಳು ಹೇಳುವುದನ್ನು ದ್ವೇಷಿಸುತ್ತಿದ್ದ ವೆಲ್ಟ್’ಮನ್ ಎಂದಿಗೂ ಯಾವುದೇ ಸಾಮಾನನ್ನು ಯಾರಿಗೂ ಮಾರುವಲ್ಲಿ ಸಫಲನಾಗಲಿಲ್ಲ. ವೆಲ್ಟ್‍ಮನ್‍ನ ನೇರ ಬಿಚ್ಚು ನುಡಿಗಳಿಂದ ಜನ ಬೆಚ್ಚುತ್ತಿದ್ದರು. ಪದವಿ ಮುಗಿಸಿ ಎರಡು ವರ್ಷಗಳ ನಂತರ ವೆಲ್ಟ್’ಮನ್ ಗಮನಾರ್ಹವಲ್ಲದ ಅಭ್ಯರ್ಥಿ ಪರೀಕ್ಷೆಯಲ್ಲಿ ತೇರ್ಗಡೆಯಾದನು. ಈ ಸಮಯದಲ್ಲಿ ಸಾಪೇಕ್ಷ ಸಿದ್ಧಾಂತದ ಪುಸ್ತಕ ದೊರೆಯಿತು. ಇದನ್ನು ಓದಿ ಪುಳಕಿತನಾದ ವೆಲ್ಟ್‍ಮನ್‍ಗೆ ಅರೆಕಾಲಿಕ ಉಪಾಧ್ಯಾಯನಾಗಿ ಸರ್ಕಾರಿ ಕೆಲಸ ಸಿಕ್ಕಿತು. ತೃಪ್ತಿ ನೀಡದ ಈ ಕೆಲಸದಲ್ಲಿದ್ದ ಮೆಲ್ಟಮನ್ 1955ರಲ್ಲಿ ಆ್ಯಮಸ್ಟರ್‍ಡ್ಯಾಂನ ವ್ಯಾನ್‍ಡೆರ್ ವಾಲ್ಸ್ ಪ್ರಯೋಗಾಲಯದಲ್ಲಿದ್ದ ವೆಲ್ಟ್’ಮನ್ 1959ರಲ್ಲಿ ವ್ಯಾನ್ ಹೂವೆನ್‍ನ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಗಳಿಸಲು ಊಟ್‍ರೆಕ್ಟ್ ವಿಶ್ವವಿದ್ಯಾಲಯ ಸೇರಿದನು. ಕಣ ಭೌತಶಾಸ್ತ್ರದಲ್ಲಿ ಆಸಕ್ತಿಯಿದ್ದ ವೆಲ್ಟ್‍ಮನ್‍ಗೆ ಇಲ್ಲಿ ಅದರ ಅಧ್ಯಯನಕ್ಕಾಗಿ ಅವಕಾಶಗಳಿರಲಿಲ್ಲ. ಆದ್ದರಿಂದ ಕಣ ಭೌತಶಾಸ್ತ್ರದಲ್ಲಿನ ಖ್ಯಾತರ ಉಪನ್ಯಾಸಗಳನ್ನು ಪರ ಊರುಗಳಿಗೆ ಹೋಗಿ ಕೇಳತೊಡಗಿದನು. 1960ರಲ್ಲಿ ವ್ಯಾನ್ ಹೂವೆನ್ ಜೀನೀವಾದ ಸಿಇಆರ್‍ಎನ್ ಪ್ರಯೋಗಾಲಯದ ನಿರ್ದೇಶಕನಾದನು. ಆತನೊಂದಿಗೆ ವೆಲ್ಟ್’ಮನ್ ಸಹ ಅಲ್ಲಿಗೆ ಹೋದನು. ಇಲ್ಲಿಗೆ ಹೋದ ನಂತರ ವೆಲ್ಟ್’ಮನ್ ತನಗೆ ಕಣಭೌತಶಾಸ್ತ್ರದಲ್ಲಿರುವ ಜ್ಞಾನ ತೀರ ಸಾಧಾರಣ ಮಟ್ಟದ್ದೆಂದು ಖಚಿತವಾಯಿತು. ನಂತರ ಫೆಯ್ನ್’ಮನ್ಶಿಷ್ಯನಾಗಿದ್ದ ಸ್ಯಾಮ್‍ಬರ್ಮನ್ ಕೈಕೆಳಗೆ ಕೆಲಸಮಾಡಿದನು. ಈತನ ಸಲಹೆಯ ಮೇರೆಗೆ ಅಸ್ಥಿರ ಕಣಗಳ ಕುರಿತಾಗಿ ಅಧ್ಯಯನ ನಡೆಸಿದನು. 1963ರಲ್ಲಿ ಸಿಇಆರ್‍ಎನ್ ನ್ಯೂಟ್ರಿನೋ ಪ್ರಯೋಗಗಳು ಪ್ರಾರಂಭವಾಗಿದ್ದವು. ಇದರಲ್ಲಿ ವೆಲ್ಟ್’ಮನ್ ಭಾಗಿಯಾದನು. 1966ರಲ್ಲಿ ಉಟ್‍ರೆಕ್ಟನಲ್ಲಿ ವ್ಯಾನ್ ಹೂವ್‍ನಿಂದ ತೆರನಾದ ಸೈದ್ಧಾಂತಿಕ ಭೌತಶಾಸ್ತ್ರ ಪ್ರಾಧ್ಯಾಪಕನ ಸ್ಥಾನ ತುಂಬಿದ ವೆಲ್ಟ್’ಮನ್, ಕಣ ಭೌತಶಾಸ್ತ್ರದ ಅಧ್ಯಯನ ಪ್ರಾರಂಭಿಸಿದನು. 1968ರಲ್ಲಿ ರಾಕ್ಫೆಲರ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದನು. ಉಟ್‍ರೆಕ್ಟ್‍ಗೆ ಮರಳಿದ ನಂತರ ವೆಲ್ಟ್’ಮನ್, ಮೂಲ ಕಣಗಳ ಸಂಶೋಧನೆಯಲ್ಲಿ ಗೆರಾಡಸ್ ಟಿ ಹೂಪ್ಟ್‍ಗೆ ಮಾರ್ಗದರ್ಶಕನಾಗಿದ್ದನು. ಇವರಿಬ್ಬರ ಮಧ್ಯೆ ಆಗಾಗ್ಗೆ ಭಿನ್ನಭಿಪ್ರಾಯಗಳು ತಲೆದೋರುತ್ತಿದ್ದವು. ಇವರು ಜಂಟಿಯಾಗಿ ನಡೆಸಿದ ಸಂಶೋಧನೆಗಳಿಂದ ಕ್ವಾಂಟಂ ವರ್ಣಗತಿಶಾಸ್ತ್ರದ (Chromodynamics)ಉಗಮವಾಯಿತು. ಇದಕ್ಕಾಗಿ 1999ರ ನೊಬೆಲ್ ಪ್ರಶಸ್ತಿ ಪಡೆದರು. 1979ರಲ್ಲಿ ಮಿಷಿಗನ್ ವಿಶ್ವವಿದ್ಯಾಲಯಕ್ಕೆ ಹೋಗಿ ಸೇರಿದ ವೆಲ್ಟ್’ಮನ್ 1981ರಲ್ಲಿ ತಾಯ್ನಾಡಿಗೆ ಮರಳಿದ ವಿಶ್ರಾಂತ ಜೀವನ ಸಾಗಿಸುತ್ತಿದ್ದಾನೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/24/2020