ಫ್ರೆಡರಿಕ್, ರೀನೆಸ್ (1918--) ೧೯೯೫
ಅಸಂಸಂ-ಭೌತಶಾಸ್ತ್ರ-ಪ್ರತಿನ್ಯೂಟ್ರಿನೋ ವೀಕ್ಷಿಸಿದಾತ-ಕಣ ಸಂಶೋಧನೆಯ ಮುಂದಾಳು.
ಫ್ರೆಡರಿಕ್ 16 ಮಾರ್ಚ್ 1918 ರಂದು ನ್ಯೂಜೆರ್ಸಿಯ ಪ್ಯಾಟರ್ಸನ್‍ನಲ್ಲಿ ಜನಿಸಿದನು. ಈತನ ತಂದೆ ರಷ್ಯಾದಿಂದ ಅಸಂಸಂಗಳಿಗೆ ವಲಸೆ ಬಂದಿದ್ದನು. ಫ್ರೆಡರಿಕ್ ನ್ಯೂಜೆರ್ಸಿಯ ಯೂನಿಯನ್ ಹೈ ಸ್ಕೂಲ್‍ನಲ್ಲಿ ಪ್ರೌಢ ಶಿಕ್ಷಣ ಮುಗಿಸಿದನು. ಈ ಶಾಲೆ ವಿಜ್ಞಾನಕ್ಕಿಂತಲೂ ಕಲೆ ಹಾಗೂ ಮಾನವಿಕಗಳಲ್ಲಿ ಪ್ರಸಿದ್ದಿ ಹೊಂದಿದ್ದಿತು. ಇಲ್ಲಿ ಸಾಹಿತ್ಯ , ಕಲೆಗಳಲ್ಲಿ ಅಭಿರುಚಿ ತಳೆದ ಫ್ರೆಡರಿಕ್‍ಗೆ ವಿಜ್ಞಾನದ ಅಧ್ಯಯನದಲ್ಲಿ ಅಸಕ್ತಿ ಇರಲಿಲ್ಲ. ಭೌತಶಾಸ್ತ್ರ ಹಾಗೂ ಗಣಿತದ ಅಧ್ಯಾಪಕರಿಂದಾಗಿಫ್ರೆಡರಿಕ್ ವಿಜ್ಞಾನದತ್ತ ಸಾಕಷ್ಟು ಆಕರ್ಷಿತನಾದನು. ಸ್ಟೀವೆನ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೇರಿದಫ್ರೆಡರಿಕ್ 1939 ರಲ್ಲಿ ಇಂಜಿನಿಯರಿಂಗ್ ಪದವಿ ಗಳಿಸಿದನು. 1941ರಲ್ಲಿ ಗಣಿತೀಯ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದನು. ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಂದುವರೆಸಿ, ಎಸ್.ಎ.ಕೊರ್ಫ್ ಮಾರ್ಗದರ್ಶನದಲ್ಲಿ ವಿಶ್ವಕಿರಣ ಭೌತಶಾಸ್ತ್ರದ ಬಗೆಗೆ ಸಂಶೋಧನೆ ನಡೆಸಿ 1944 ವೇಳೆಗೆ ಸಂಪ್ರಬಂಧ ಸಿದ್ದ ಪಡಿಸಿದನು. ಡಾಕ್ಟರೇಟ್ ಪದವಿ ಪೂರ್ಣಗೊಳ್ಳುವ ಮೊದಲೇ ಲಾಸ್ ಅಲ್ಮೋಸ್‍ನಲ್ಲಿ ಪ್ರಾರಂಭವಾಗಿದ್ದ ಮ್ಯಾನ್‍ಹಟ್ಟನ್ ಯೋಜನೆಯಲ್ಲಿ ರಿಚರ್ಡ್ ಫೆಯ್ನ್’ಮನ್ ಸಹಾಯಕನಾಗಿ ಸೈದ್ದಾಂತಿಕ ಭೌತಶಾಸ್ತ್ರ ವಿಭಾಗಕ್ಕೆ ನೇಮಕಗೊಂಡನು. ಇಲ್ಲಿಂದ ಮುಂದೆ ಹದಿನೈದು ವರ್ಷಗಳ ಕಾಲ ಜಗದ್ವಿಖ್ಯಾತ ವಿಜ್ಞಾನಿಗಳೊಂದಿಗೆ ಕೆಲಸ ಮಾಡುವ ಅವಕಾಶ ಫ್ರೆಡರಿಕ್‍ಗೆ ದಕ್ಕಿತು. ಫ್ರೆಡರಿಕ್ ಪರಮಾಣು ಅಸ್ತ್ರ ಸಮಿತಿಯ ಸದಸ್ಯನಾಗಿ ಪರಮಾಣು ಅಸ್ತ್ರದ ನಂತರದ ಪರಿಣಾಮಗಳನ್ನು ಕುರಿತಾದ ಅಧ್ಯಯನ ನಡೆಸಿದನು. 1958ರಲ್ಲಿ ಜಿನೇವಾದಲ್ಲಿ ಶಾಂತಿಗಾಗಿ ಪರಮಾಣು ಶಕ್ತಿಯನ್ನು ಕುರಿತಾದ ಅಂತರಾಷ್ಟೀಯ ಸಮ್ಮೇಳನದಲ್ಲಿ ಭಾಗವಹಿಸಿದನು. 1951ರಿಂದ ನ್ಯೂಟ್ರಿನೋ ವೀಕ್ಷಿಸುವ ಪ್ರಯತ್ನದಲ್ಲಿಫ್ರೆಡರಿಕ್ ತಲ್ಲೀನನಾದನು. ಕ್ಲೈಡ್ ಕೊವನ್ ಸಂಗಡ ಹ್ಯಾನ್’ಪೋರ್ಡ್ ಸ್ಥಾವರದಲ್ಲಿ ಹಲವಾರು ಪ್ರಯೋಗ ಕೈಗೊಂಡ ಫ್ರೆಡರಿಕ್‍ಗೆ 1953ರ ವೇಳೆಗೆ ಅಶಾದಾಯಕಫಲಿತಾಂಶಗಳು ದಕ್ಕತೊಡಗಿದವು. ಈ ಕಾಲಕ್ಕೆ ದಕ್ಷಿಣ ಕೆರೋಲಿನಾದ ಸವನ್ನಾ ನದಿ ತೀರದ ಪ್ರತಿಕ್ರಿಯಾಕಾರಕ (Reactor) ಸಿದ್ದಗೊಂಡಿತು. 1955ರಿಂದ ಈ ಸ್ಥಾವರದಲ್ಲಿಫ್ರೆಡರಿಕ್ ಹಾಗೂ ಕ್ಲೈಡ್ ಕೊವೆನ್, ನ್ಯೂಟ್ರಿನೋ ಹುಡುಕಾಟ ಮುಂದುವರೆಸಿದರು. 1956ರಲ್ಲಿ ಇವರು ಎಲೆಕ್ಟ್ರಾನ್ ಪ್ರತಿ ನ್ಯೂಟ್ರಿನೋ ವೀಕ್ಷಿಸುವಲ್ಲಿ ಯಶಸ್ಸನ್ನು ಕಂಡರು. ಇದಾದ ಮೇಲೆ ಅಲ್ಪಾವಧಿಯಲ್ಲೇ ಕ್ಲೈಡ್ ಕೊವೆನ್ ಲಾಸ್ ಅಲ್ಮಾಸ್‍ಗೆ ವರ್ಗಾವಣೆಗೊಂಡನು. ಇದಾದ ಮೇಲೆಫ್ರೆಡರಿಕ್ ಒಂಟಿಯಾಗಿ ನ್ಯೂಟ್ರಿನೋಗಳ ಗುಣಗಳ ಅಧ್ಯಯನಕ್ಕೆ ತೊಡಗಿದನು. 1959ರಲ್ಲಿ ಕ್ಲೀವ್‍ಲ್ಯಾಂಡ್‍ನಲ್ಲಿರುವ ಈಗ ಭೌತಶಾಸ್ತ್ರ ವಿಭಾಗವೆಂದು ಕರೆಯಲಾಗುತ್ತಿರುವ ಆಗಿನ ಕೇಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರಾಧ್ಯಾಪಕನಾದನು. ಇಲ್ಲಿ ಏಳು ವರ್ಷಗಳ ಸೇವೆ ಸಲ್ಲಿಸಿದಫ್ರೆಡರಿಕ್, ಇಲ್ಲಿ ನ್ಯೂಟ್ರಿನೋ ಭೌತಶಾಸ್ತ್ರ, ದ್ವಿ ಬೀಟಾ ಶೈಥಿಲ್ಯ (Decay) ಎಲೆಕ್ಟ್ರಾನ್‍ನ ಅಸ್ತಿತ್ವದ ಅವಧಿ, ನ್ಯೂಕ್ಲಿಯಾನ್ ಶೈಥಿಲ್ಯಗಳನ್ನು ಕುರಿತಾಗಿ ಹಲವು ಹತ್ತಾರು ಪ್ರಯೋಗಗಳನ್ನು ಕೈಗೊಂಡನು. ನ್ಯೂಕ್ಲಿಯಾನ್‍ಗಳ ಶೈಥಿಲ್ಯದ ವೀಕ್ಷಣೆಗಾಗಿಫ್ರೆಡರಿಕ್ ತಂಡ, ದಕ್ಷಿಣ ಆಫಿû್ರಕಾದ ಚಿನ್ನದ ಗಣಿಯ ಆಳ ಸುರಂಗವನ್ನು ಆಯ್ದಕೊಂಡಿತು. ಇಲ್ಲಿ ಮೊಟ್ಟ ಮೊದಲ ಬಾರಿಗೆ ವಾತಾವರಣವನ್ನು ಪ್ರವೇಶಿಸುವ ವಿಶ್ವ ಕಿರಣಗಳಿಂದ ಉತ್ಪನ್ನವಾಗುವ ನ್ಯೂಟ್ರಿನೋಗಳನ್ನು ಗುರುತಿಸಿದರು. ಫ್ರೆಡರಿಕ್ ತಂಡ ನೆಲದಾಳದ ಪ್ರಯೋಗಗಳಿಗಾಗಿ ಅಲ್ಪ ಕಾಲದಲ್ಲೇ ವಿಶ್ವ ವಿಖ್ಯಾತವಾಯಿತು. ಮೂಲಕಣಗಳ ಪತ್ತೆಗಾಗಿ ಈ ತಂಡ ಬೃಹತ್ ದ್ರವ ಮಿನುಗುಕಾರಕ (Liquid Scintillator) ಅಭಿವೃದ್ಧಿಗೊಳಿಸಿತು. 1966ರಲ್ಲಿ ಕ್ಯಾಲಿಫೋರ್ನಿಯಾವಿಶ್ವವಿದ್ಯಾಲಯದ ಇರ್ವಿನ್ ಆವರಣದಲ್ಲಿನ ಭೌತಶಾಸ್ತ್ರದ ಶಾಲೆಯ ಪ್ರಾರಂಭಕ್ಕೆ ಕಾರಣನಾಗಿ, ಅದರ ಪ್ರಥಮ ಮುಖ್ಯಸ್ಥನಾಗಿ ನೇಮಕಗೊಂಡ ಫ್ರೆಡರಿಕ್ 1974ರಲ್ಲಿ ಅಲ್ಲಿಂದ ನಿವೃತ್ತನಾದನು. ಫ್ರೆಡರಿಕ್‍ನಿಂದ ಪ್ರೇರಿತವಾದ ವಿಜ್ಞಾನಿಗಳ ತಂಡ ಮೂಲ ಕಣಗಳನ್ನು ಅರಿಯುವ ನೂರಾರು ಪ್ರಯೋಗಗಳನ್ನು ರೂಪಿಸಿ ನಿರ್ವಹಿಸಿತು. ಈ ತಂಡ ಮೊದಲ ಬಾರಿಗೆ ದ್ವಿ-ಬೀಟಾ ಶೈಥಿಲ್ಯವನ್ನು ಪ್ರಯೋಗಾಲಯದಲ್ಲಿ ಗುರುತಿಸಿತು. ಸೂಪರ್ ನೋವಾ 1987-ಎಯಿಂದ ಹೊಮ್ಮಿದ ನ್ಯೂಟ್ರಿನೋಗಳನ್ನು ಜಪಾನ್‍ನ ಕಾಮಿಯೋ ಕಾಂಡೆಯೊಂದಿಗೆ ಮೊದಲ ಬಾರಿಗೆ ವೀಕ್ಷಿಸಿ, ವರದಿ ಮಾಡಿದುದ್ದನ್ನು ಗುರುತಿಸಿ, ಅಮೆರಿಕಾದ ಖಗೋಳಶಾಸ್ತ್ರ ಸಮಾಜ 1989ರಲ್ಲಿ ಬ್ರುನೋ ರಸ್ಸಿ ಪ್ರಶಸ್ತಿ ನೀಡಿ ಗೌರವಿಸಿತು. ಪ್ರೋಟಾನ್‍ಗೆ ಬದಲು ನ್ಯೂಟ್ರಿನೋ ಮರುಸ್ಥಾನ ಹೊಂದಾಣಿಕೆಯಾಗುವ ನ್ಯೂಟ್ರಿನೋ ಮೋಸ್‍ಬೌವರ್ ಪರಿಣಾಮದಿಂದಾದ ಉಳಿಕೆ ನ್ಯೂಟ್ರಿನೋಗಳನ್ನು ಪತ್ತೆ ಹಚ್ಚುವ ಪ್ರಯತ್ನದಲ್ಲಿಫ್ರೆಡರಿಕ್ ಶ್ರಮಿಸಿದನು. ಗುರುತ್ವಾಕರ್ಷಣೆಯ ವಿಶ್ವ ಸ್ಥಿರಾಂಕದ ಖಚಿತ ನಿರ್ಧಾರ, ಗೋಳೀಯ ಮಸೂರ ಹೊಂದಿದ ಮೂರು ಆಯಾಮದ ದೂರದರ್ಶಕನಂತಹ ಹಲವಾರು ವಿಷಯಗಳಲ್ಲಿಫ್ರೆಡರಿಕ್ ಪ್ರಯತ್ನಗಳು ಸಾಗಿದವು.ಫ್ರೆಡರಿಕ್ 1995 ರಲ್ಲಿ ಮಾರ್ಟಿನ್ ಪರ್ಲ್‍ನೊಂದಿಗೆ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019