ಡೇವಿಡ್ ,ಎಂ. ಲೀ (1931--) ೧೯೯೬
ಅಸಂಸಂ-ಭೌತಶಾಸ್ತ್ರ-ನಿಮ್ನ ತಾಪಮಾನ, ಅತಿಪ್ರವಾಹಿತತೆಯ ಸಂಶೋಧನೆಗಳ ಮುಂದಾಳು.
ಇಂಗ್ಲೆಂಡ್ ಹಾಗೂ ಲಿಥುವೇನಿಯಾ ಮೂಲದ ಯಹೂದಿ ವಲಸೆಗಾರ ಕುಟುಂಬದ ಇಂಜಿನಿಯರ್ ತಂದೆ, ಶಿಕ್ಷಕಿ ತಾಯಿಯರ ಮಗನಾಗಿ 20 ಜನವರಿ 1931 ರಂದು ನ್ಯೂಯಾರ್ಕ್ ಬಳಿಯ ಸಣ್ಣ ಹಳ್ಳಿಯಲ್ಲಿ ಡೇವಿಡ್ ಜನಿಸಿದನು. ಡೇವಿಡ್ ಬಾಲ್ಯ ಮನೆ ಸನಿಹದಲ್ಲಿದ್ದ ಸಮುದ್ರ ತೀರದಲ್ಲಿ ಕಪ್ಪೆ ಚಿಪ್ಪು, ಶಂಖು ಹಾಗೂ ಬಗೆ ಬಗೆಯ ಜೀವಿ, ಸಸ್ಯಗಳನ್ನು ಸಂಗ್ರಹದಲ್ಲಿ ಕಳೆಯಿತು. ರೈಲುಗಳ ಬಗೆಗೆ ಬಹು ಕುತೂಹಲ ಹೊಂದಿದ್ದ ಡೇವಿಡ್, ಬಾಲಕನಾಗಿದ್ದಾಗಲೇ ನೂರಾರು ರೈಲು ಬರುವ ಹಾಗೂ ಬಿಡುವ ವೇಳೆಗಳನ್ನು ಜ್ಞಾಪಕದಲ್ಲಿಟ್ಟುಕೊಂಡಿದ್ದನು. ಪ್ರೌಢಶಾಲೆಗೆ ಬಂದಾಗ ಹವಾಗುಣ, ಹವಾಮಾನಗಳ ಬಗೆಗೆ ಅಸಕ್ತಿ ಹೊಂದಿದ್ದನು. ಮಳೆ ಬಿಸಿಲುಗಳನ್ನು ಸೂಚಿಸುವ ತನ್ನದೇ ದಾಖಲೆಗಳನ್ನು ಹೊಂದಿದ್ದನು. ಡೇವಿಡ್ ಪ್ರೌಢಶಾಲೆಯಲ್ಲಿದ್ದಾಗ ಗ್ರಂಥಾಲಯದಿಂದ ಸರ್ ಜೇಮ್ಸ್ ಜೀನ್ಸ್‍ನ ದಿ ಮಿಸ್ಟೀರಿಯಸ್ ಯೂನಿವರ್ಸ್‍ನ ಪುಸ್ತಕವನ್ನು ತಂದುಕೊಡುವಂತೆ ಕೇಳಿದನು. ಈ ಪುಸ್ತಕವನ್ನು ಬಹು ಜನ ಓದಿರುವರಾದರೂ, ಅದನ್ನು ಅರ್ಥಮಾಡಿಕೊಂಡಿರುವವರು, ಕಡಿಮೆ ಜನವೆಂದು ಹೇಳಿದ ಆತನ ತಂದೆ, ಡೇವಿಡ್‍ನ ಆಸೆಯನ್ನು ಮೊಟಕುಗೊಳಿಸಲಿಲ್ಲ. ಡೇವಿಡ್ ಈ ಪುಸ್ತಕ ಓದಿ ಆಗಿನ ಆಧುನಿಕ ಬ್ರಹ್ಮಾಂಡ ವಿಜ್ಞಾನದ ರೂಪು ರೇಷೆಗಳನ್ನು ಅರಿತನು. 1948ರಲ್ಲಿ ಪ್ರೌಢಶಿಕ್ಷಣ ಮುಗಿಸಿ, ಹಾರ್ವರ್ಡ್ ವಿಶ್ವವಿದ್ಯಾಲಯ ಸೇರಿ ಪ್ರಮುಖವಾಗಿ ಭೌತಶಾಸ್ತ್ರವನ್ನು ಆರಿಸಿಕೊಂಡನು. ವೈದ್ಯನಾಗಬೇಕೆಂದು ಕೆಲಕಾಲ ಆಶಿಸಿದ ಡೇವಿಡ್, ಕೆಲ ಕಾಲ ಇದರಲ್ಲಿ ತರಬೇತಿ ಹೊಂದಿದನಾದರೂ, ನಂತರ ಇದರಲ್ಲಿ ಪೂರ್ಣ ಅಭಿರುಚಿ ಹೊಂದದೆ ದೂರ ಉಳಿದನು. 1952ರಲ್ಲಿ ಹಾರ್ವರ್ಡ್‍ನಿಂದ ಪದವಿ ಗಳಿಸಿದ ಡೇವಿಡ್, ಅಸಂಸಂ ಸೇನೆಗೆ ಸೇರಿ 22 ತಿಂಗಳುಗಳ ಕಾಲ ಸೇವೆ ಸಲ್ಲಿಸಿದನು. ಉತ್ತರ ಕೊರಿಯಾದ ಯುದ್ದದ ಅಂತಿಮ ಘಟ್ಟಗಳಲ್ಲಿ ಭಾಗವಹಿಸಿದ್ದನು. ಸೇನೆಯಲ್ಲಿರುವಾಗ ಹರ್ಬಟ್ ಬ್ರೌನ್ ಎಂಬ ಸೈನಿಕನ ಪರಿಚಯವಾಯಿತು. ಈತ ಕನೆಕ್ಟಿಕಟ್ ವಿಶ್ವವಿದ್ಯಾಲಯದಲ್ಲಿ ಪೌಲ್ ಜಿಲ್‍ಸೆಲ್ ಕೆಳಗೆ ಅತಿ ಪ್ರವಾಹಿತ್ವದ (Superfluidity) ಬಗೆಗೆ ವಿಶೇಷ ಅಧ್ಯಯನ ನಡೆಸಿದ್ದನು. ಇವರಿಬ್ಬರು ವಿಜ್ಞಾನ ಕುರಿತಾಗಿ ಬಹು ಫಲಪ್ರಧ ಚರ್ಚೆ ಸಾಗಿಸುತ್ತಿದ್ದರು. ಮುಂದೆ ಹರ್ಬರ್ಟ್ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಸೈದ್ಧಾಂತಿಕ ಭೌತಶಾಸ್ತ್ರದ ಪ್ರಾಧ್ಯಾಪಕನಾದನು. 1954ರಲ್ಲಿ ಸೇನೆಯ ಸೇವೆ ಪೂರ್ಣಗೊಳಿಸಿದ ಡೇವಿಡ್ ಕನೆಕ್ಟಿಕಟ್ ವಿಶ್ವವಿದ್ಯಾಲಯ ಸೇರಿದನು. ಇಲ್ಲಿ ಪ್ರಯೋಗಶೀಲ ಭೌತಶಾಸ್ತ್ರದ ಮೂಲ ತತ್ತ್ವಗಳನ್ನು ಕಲಿತನು. ಇಲ್ಲಿ ಪ್ರಾಧ್ಯಾಪಕನಾಗಿದ್ದ ಎಡ್ಗರ್ ಎವರ್‍ಹಾರ್ಟ್ ನಿರ್ಮಿಸುತ್ತಿದ್ದ ಕಾಕ್‍ರಾಫ್ಟ್-ವಾಲ್ಟನ್ ವೇಗೋತ್ಕರ್ಷಕಕ್ಕೆ (Accelerator) ಅಯಾನೀಕರಣ ಮಾಪಕ ವಿನ್ಯಾಸಗೊಳಿಸುವ ಹೊಣೆ ಡೇವಿಡ್‍ಗೆ ಬಂದಿತು. ಇದೇ ವಿಶ್ವವಿದ್ಯಾಲಯದಲ್ಲಿದ್ದ ಪ್ರಾಧ್ಯಾಪಕ ರೆನಾಲ್ಡ್ಸ್‍ನಿಂದಾಗಿ ಅತಿದ್ರಾವಕತೆ, ನಿಮ್ನ ತಾಪಮಾನಗಳ, ಭೌತಶಾಸ್ತ್ರದತ್ತ ಒಲವು ಬೆಳೆಯಿತು. ಇಲ್ಲಿರುವಾಗಲೇ ಪ್ರಯೋಗ ಪರಿಣಿತನಾದ ಜಾನ್ ರೆಪ್ಟ್‍ನ ಸ್ನೇಹ ದಕ್ಕಿತು. ಈ ಸ್ನೇಹ ಅತ್ಯಂತ ಫಲಪ್ರದವಾದುದ್ದಾಗಿದ್ದಿತು. ಜಾನ್ ರೆಪ್ಟ್, ಅತ್ಯುತ್ತಮ ಪರ್ವತಾರೋಹಿಯಾಗಿದ್ದು, ಡೇವಿಡ್ ಸಹ ಅದರಲ್ಲಿ ಗಮಾನಾರ್ಹವಾಗಿ ತೊಡಗಿಕೊಳ್ಳುವಂತೆ ಮಾಡಿದನು. ಕನೆಕ್ಟಿನಟ್‍ನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಡೇವಿಡ್ 1955ರಲ್ಲಿ ಯೇಲ್ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಗಳಿಕೆಗೆ ನೊಂದಾಯಿಸಿಕೊಂಡನು. ಯೇಲ್ ವಿಶ್ವವಿದ್ಯಾಲಯದಲ್ಲಿ ನಿರ್ಮಾಣ ಹಂತದಲ್ಲಿದ್ದ ಭಾರ ಆಯಾನ್ ಸರೇಖೀಯ ವೇಗೋತ್ಕರ್ಷಕದಲ್ಲಿ ಅಯಾನ್‍ನಿಂದ ಎಲೆಕ್ಟ್ರಾನ್‍ಗಳನ್ನು ಹೊರತೆಗೆಯುವ ವಿಧಾನದ ಅಧ್ಯಯನಕ್ಕೆ ಡೇವಿಡ್ ನಿಯೋಜಿತನಾದನು. ಅಯಾನ್‍ಗಳಿಂದ, ಹೆಚ್ಚು ಎಲೆಕ್ಟ್ರಾನ್‍ಗಳನ್ನು ತೆಗೆದಂತೆಲ್ಲಾ, ನಿವ್ವಳ ಆವಿಷ್ಟವನ್ನು ಹೆಚ್ಚಿಸಿ ಅವುಗಳನ್ನು ವೇಗವರ್ಧನೆಗೊಳಿಸಿ ಅಧಿಕ ಚೈತನ್ಯ ಗಳಿಸುವಂತೆ ಮಾಡಬಹುದು. ಈ ಕಾರ್ಯದಲ್ಲಿ ಡೇವಿಡ್‍ಗೆ ಗಮನಾರ್ಹ ಯಶಸ್ಸು ಲಭಿಸಿತು. ಯೇಲ್‍ನಲ್ಲಿ ಹಿರಿಯ ಸಂಶೋಧಕ ವಿದ್ಯಾರ್ಥಿಯಾಗಿದ್ದ ರಸೆಲ್ ಡೊನೆಲ್‍ನ ಪರಿಚಯವಾಗಿ, ಆತನಿಗೆ ಪ್ರಯೋಗಗಳಲ್ಲಿ ನೆರವಾಗುತ್ತ ನಿಮ್ನ ತಾಪಮಾನ ಭೌತಶಾಸ್ತ್ರದಲ್ಲಿ ಡೇವಿಡ್ ತನ್ನ ಭವಿಷ್ಯವನ್ನು ಗುರುತಿಸಿಕೊಂಡನು. 1959ರಲ್ಲಿ ಡಾಕ್ಟರೇಟ್ ಗಳಿಸಿದ ಡೇವಿಡ್, ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕನಾದನು. ಇಲ್ಲಿ ಹೀಲಿಯಂ ದ್ರವಕಾರಕದ ನಿರ್ಮಾಣಕ್ಕೆ ಕಾರಣನಾದನು. ಡೇವಿಡ್ ಹಾಗೂ ಆತನ ವಿದ್ಯಾರ್ಥಿಗಳ ಪ್ರಯೋಗಗಳಿಂದ , ಘನಗಳಲ್ಲಿ ಪ್ರತಿ,ಫೆರೋ ಕಾಂತೀಯ ಕ್ರಮಗಳು ಅನಾವರಣಗೊಳಿಸಲ್ಪಟ್ಟವು. ಹೀಲಿಯಂನ ಅತಿ ದ್ರಾವಕತೆಯ (Superliquidity) ಬಗೆಗೆ ಡೇವಿಡ್ ಹಾಗೂ ಸಂಗಡಿಗರಿಂದ ನೂರಾರು ಪ್ರಯೋಗಗಳು ರೂಪುಗೊಂಡು ಹೊಸ ವಿದ್ಯಾಮಾನಗಳನ್ನು ಬೆಳಕಿಗೆ ತಂದವು. ಡೇವಿಡ್ ಹಾಗೂ ಜಾನ್ ರೆಪ್ಟ್ ಅಸಂಸಂದ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಆಯ್ಕೆಯಾದರು. ನಿಮ್ನ ತಾಪಮಾನ ಭೌತಶಾಸ್ತ್ರದಲ್ಲಿನ ಸಾಧನೆಗಾಗಿ ಡೇವಿಡ್ 1996ರ ನೊಬೆಲ್ ಪ್ರಶಸ್ತಿ ಗಳಿಸಿದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 10/9/2019