অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಗೆರಾಡಸ್ ಟೆ ಹೂಪ್ಟ್

ಗೆರಾಡಸ್ ಟೆ ಹೂಪ್ಟ್

ಗೆರಾಡಸ್ ಟೆ ಹೂಪ್ಟ್ (1950--)  ೧೯೯೯

ನೆದರ್‍ಲ್ಯಾಂಡ್-ಭೌತಶಾಸ್ತ್ರ- ಕ್ವಾಂಟಂ ವರ್ಣಗತಿಶಾಸ್ತ್ರದ ಮುಂದಾಳು.

ಹೂಪ್ಟ್, ಡೆನ್‍ಹೆಲ್ಡರ್‍ನಲ್ಲಿ ಜನಿಸಿ, ಹೇಗ್‍ನಲ್ಲಿ ಬಾಲ್ಯವನ್ನು ಕಳೆದನು.  ಹೂಪ್ಟ್‍ನ ಹಿರಿಯ ಮಾವ  ಫ್ರಿಟ್ಸ್ ಝೆರ್ನಿಕೆ 1953ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.  ಈತನ ಕುಟುಂಬದಲ್ಲಿ ಹಲವಾರು ಪ್ರಾಧ್ಯಾಪಕರು, ವಿಜ್ಞಾನಿಗಳು, ಖ್ಯಾತರು ಜನಿಸಿದ್ದರು.  ಹೂಪ್ಟ್‍ನ ತಂದೆ ನೌಕೆಗಳ ಇಂಜಿನಿಯರ್ ಆಗಿದ್ದು ಮಾಸ್ ಡ್ಯಾಂ, ರಿಜೆನ್ ಡ್ಯಾಂನಂತಹ ಬೃಹತ್ ನೌಕೆಗಳ ನಿರ್ಮಾಣದಲ್ಲಿ ಪಾಲ್ಗೊಂಡಿದ್ದನು.  ಹೂಪ್ಟ್ ಎಂಟು ವರ್ಷದವನಿರುವಾಗ ಅವನ ಕುಟುಂಬ ಲಂಡನ್‍ಗೆ ಹೋಯಿತು.  ಇಲ್ಲಿ ಸಾರ್ವಜನಿಕ ಶಾಲೆ ಸೇರಿ, ಇಂಗ್ಲಿಷ್‍ನ್ನು ಕಲಿಯಲು ಪ್ರಾರಂಭಿಸುವ ಮೂಲಕ ಹೂಪ್ಟ್ ಪ್ರಾಥಮಿಕ ಶಿಕ್ಷಣ ಪೂರೈಸಿದನು.  ನಂತರ ಹೇಗ್‍ನ ಡಾಲ್ಟನ್ ಲೈಸಿಯಂ ಪ್ರೌಢಶಾಲೆ ಸೇರಿದನು.  ಹೂಪ್ಟ್‍ನ ತಂದೆ ರೇಡಿಯೋ ಒಂದನ್ನು ಕೊಡಿಸಿದನು.   ಹೂಪ್ಟ್ ರೇಡಿಯೋ ಹೇಗೆ ಕೆಲಸ ಮಾಡುವುದೆಂದು ತಿಳಿಯಲು ನಾನಾ ಆಕರಗಳಿಂದ ರೇಡಿಯೋ ಬಗೆಗೆ ಅತ್ಯಧಿಕ ಮಾಹಿತಿಯನ್ನು ಸಂಗ್ರಹಿಸಿ, ಅರ್ಥೈಸಿಕೊಂಡನು.  ಹೇಗ್‍ನ ಪ್ರೌಢಶಾಲೆಯಲ್ಲಿದ್ದ ವಿಜ್ಞಾನದ ಶಿಕ್ಷಕರಿಂದ ಹೂಪ್ಟ್ ಅದರಲ್ಲಿನ ಆಸಕ್ತಿ ವಿಸ್ತಾರವೂ, ಆಳವೂ ಆಗತೊಡಗಿತು.  ಹದಿನಾರನೇ ವಯಸ್ಸಿನಲ್ಲಿ ಡಚ್ ಗಣಿತ ಒಲಿಂಪಿಕ್‍ನಲ್ಲಿ ಭಾಗವಹಿಸಿದ ಹೂಪ್ಟ್ ದ್ವೀತಿಯ ಪ್ರಶಸ್ತಿ ಗಳಿಸುವಲ್ಲಿ ಸಮರ್ಥನಾದನು.  1964ರಲ್ಲಿ ಉಟ್ರೆಕ್ಟ್ ವಿಶ್ವವಿದ್ಯಾಲಯ ಸೇರಿದನು.  ಇಲ್ಲಿ ಮೆದು ಸ್ವಭಾವದವನಾಗಿದ್ದ ಹೂಪ್ಟ್ ಹಿರಿ ವಿದ್ಯಾರ್ಥಿಗಳಿಂದ  ರ್ಯಾಗಿಂಗ್‍ಗೆ ತುತ್ತಾದನು.  ಇಲ್ಲಿ ಸೈದ್ಧಾಂತಿಕ ಭೌತಶಾಸ್ತ್ರವನ್ನು ಆಯ್ಕೆಮಾಡಿಕೊಂಡು, ತನ್ನ ಮಾರ್ಗದರ್ಶಕನಾದ ವೆಲ್ಟ್‍ಮನ್‍ನಿಂದ ಕಠಿಣ ಪರೀಕ್ಷೆಗೊಳಗಾದನು.  ವೆಲ್ಟ್‍ಮನ್ ಸಿದ್ಧಾಂತವೊಂದನ್ನು ಮಂಡಿಸಿದ್ದನು.  ಇದರ ಪ್ರಕಾರ ತಟಸ್ಥ ಪೈಯಾನ್‍ಗಳು ಶೈಥಿಲ್ಯ ಹೊಂದಿ ಪ್ರೋಟಾನ್‍ಗಳಾಗಲಾರವು ಅದರಂತೆ ಬೀಟಾ ಕಣ ಶೈಥಿಲ್ಯ (Decay)   ಹೊಂದಿ ಮೂರು ಪೈಯಾನ್‍ಗಳಾಗಲಾರದು.  ಆದರೆ ಪ್ರಯೋಗಗಳು ಹೀಗಾಗುವುದನ್ನು ಖಚಿತಗೊಳಿಸಿದ್ದವು.  ವೆಲ್ಟ್‍ಮನ್ ಈ ಸಿದ್ಧಾಂತದ ಅಧ್ಯಯನವನ್ನು ಹೂಪ್ಟ್‍ಗೆ ವಹಿಸಿದನು.  ಮುಂದೆ ಗಣಿತದ ಮಾದರಿಯಲ್ಲಿದ್ದ ದೋಷದಿಂದ ಇಂತಹ ಸೈದ್ಧಾಂತಿಕ ತಪ್ಪು ನಿರ್ಧಾರಗಳಿಗೆ ವೆಲ್ಟ್‍ಮನ್ ಬಂದಿದ್ದನೆಂದು ತಿಳಿದು ಬಂದಿತು.  1969ರಲ್ಲಿ ಡಾಕ್ಟರೇಟ್ ಗಳಿಸಲು ಹೂಪ್ಟ್ ಅಧ್ಯಯನಕ್ಕೆ ಸೇರಿದನು.  ಆ ಕಾಲದಲ್ಲಿ ಡಾಕ್ಟರೇಟ್ ಗಳಿಸುವುದು ಹಾಲೆಂಡ್‍ನಲ್ಲಿ ಬಹು ಪ್ರತಿಷ್ಟೆಯ  ವಿಷಯವಾಗಿದ್ದು, ಅದನ್ನು ಗಳಿಸುವ ವೇಳೆಗೆ ವಿದ್ಯಾರ್ಥಿಗಳ ತಾರುಣ್ಯದ ಅರ್ಧ ಭಾಗ ಕಳೆದಿರುತ್ತಿದ್ದಿತು.  ಹೂಪ್ಟ್‍ನ ಸಂಶೋಧನಾ ಮಾರ್ಗದರ್ಶಕನಾಗಿದ್ದ  ವೆಲ್ಟ್‍ಮನ್ ಮೂಲ ಕಣಗಳ ಅರಿವಿಗೆ ಹೂಪ್ಟ್ ಅನುಸರಿಸುತ್ತಿದ್ದ ಮಾರ್ಗಗಳನ್ನು ಅನುಮೋದಿಸಿರಲಿಲ್ಲ  ಪ್ರಬಲ ಬೈಜಿಕ ಬಲಗಳ ಕ್ಷೇತ್ರದಲ್ಲಿ ಯಾಂಗ್-ಮಿಲ್ಸ್ ಕಣಗಳೆಂದು ಪ್ರಸಿದ್ದವಾಗಿದ್ದ ಮೂಲ ಕಣಗಳನ್ನು ಅರಿಯಲು ಹೂಪ್ಟ್ ಈ ಮೊದಲು ಫೆಯ್ನಮನ್ ರೂಪಿಸಿದ್ದ ನಿಯಮಗಳನ್ನು ಬಳಸತೊಡಗಿ ಅದರಲ್ಲಿ ಯಶಸ್ಸನ್ನು ಕಾಣತೊಡಗಿದನು. ಇದನ್ನು ಗುರುತಿಸಿದ ವೆಲ್ಟ್‍ಮನ್ 1971ರಲ್ಲಿ ಆ್ಯಮ್‍ಸ್ಟರ್‍ಡ್ಯಾಂನಲ್ಲಿ ನಡೆದ ಕಣ ಭೌತಶಾಸ್ತ್ರದ ಸಮ್ಮೇಳನದಲ್ಲಿ ಈ ಫಲಿತಾಂಶಗಳನ್ನು ವಿವರಿಸಲು ಹೂಪ್ಟ್‍ಗೆ ಅವಕಾಶ ಕಲ್ಪಿಸಿದನು.  ಇದರ ನಂತರ 1972ರಲ್ಲಿ ಡಾಕ್ಟರೇಟ್ ಸಹ ನೀಡಿದನು.  ಇದರ ನಂತರ ಫೆಲೋಷಿಫ್ ಗಳಿಸಿ ಹೂಪ್ಟ್ ಜಿನೀವಾದಲ್ಲಿದ್ದ ಸಿ.ಇ.ಅರ್.ಎನ್ ಕೇಂದ್ರ ಸೇರಿದನು.  ಇಲ್ಲಿಗೆ ವೆಲ್ಟ್‍ಮನ್ ಸಹ ಬಂದನು.  1971 ರಿಂದ ಇವರಿಬ್ಬರೂ ಯಾಂಗ್-ಮಿಲ್ಸ್  ಬೈಜಿಕ ಅಂತಕ್ರಿಯೆಗಳನ್ನು ಕುರಿತಾಗಿ ನೀಡಿದ್ದ ಸಿದ್ಧಾಂತದ ಎಲ್ಲಾ ಮಗ್ಗುಲುಗಳನ್ನು ಪ್ರಯೋಗಗಳಿಂದ ಪರೀಕ್ಷಿಸಿದರು.  1973ರಲ್ಲಿ ಡೇವಿಡ್ ಗ್ರಾಸ್,ಫ್ರಾಂಕ್ ಎಲ್ಕ್‍ಜೆಕ್‍ರ ಅಧ್ಯಯನ ಹಾಗೂ ಹೂಪ್ಟನ ಪರಿಶೋಧನೆಗಳಿಂದ ಯಾಂಗ್-ಮಿಲ್ಸ್ ಸಿದ್ಧಾಂತದಲ್ಲಿದ್ದ ಎಡರು ತೊಡರುಗಳು ಪರಿಹಾರಗೊಂಡು ಕ್ವಾಂಟಂ ವರ್ಣಗತಿಶಾಸ್ತ್ರವೆಂಬ (Chromodynamics)   ಹೊಸ ಶಾಸ್ತ್ರದ ಉಗಮವಾಯಿತು.  ಇದಕ್ಕಾಗಿ ಹೂಪ್ಟ್ ನೊಬೆಲ್ ಪ್ರಶಸ್ತಿ ಪಡೆದನು. 1974ರಲ್ಲಿ ಉಟೆರೆಕ್ಟ್‍ನಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ, 1976ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದ ಅತಿಥಿ ಪ್ರಾಧ್ಯಾಪಕನಾಗಿಯೂ ಹೂಪ್ಟ್ ಸೇವೆ ಸಲ್ಲಿಸಿದನು.  ಈಗ ನಿಸರ್ಗದ ನಾಲ್ಕು ಮೂಲ ಬಲಗಳಲ್ಲಿ ವೈದ್ಯುತ್‍ಕಾಂತೀಯ, ಕ್ಷೀಣ ಹಾಗೂ ಪ್ರಬಲ ಬೈಜಿಕ ಬಲಗಳನ್ನು ಐಕ್ಯಗೊಳಿಸುವುದು ಸಾಧ್ಯವಾಗಿದೆ.  ಬಹು ದುರ್ಬಲವೆನಿಸುವ ಗುರುತ್ವದ ಬಲವನ್ನು ಇವುಗಳೊಂದಿಗೆ ಬೆಸೆದು ಐಕ್ಯತಾ ಸಿದ್ಧಾಂತ ರೂಪಿಸುವುದು ಈಗ ವಿಜ್ಞಾನಿಗಳ ಮುಂದಿರುವ ಸವಾಲು.  ಈ ಸಮನ್ವಯ ಹುಡುಕಾಟದಲ್ಲಿ ಹೂಪ್ಟ್ ನಿರತನಾಗಿದ್ದಾನೆ.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 9/7/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate