ಹ್ಯಾನ್ಸ್, ಡೆಹ್‍ಮೆಲ್ಟ್ (1923--) ೧೯೮೯
ಜರ್ಮನಿ-ಭೌತಶಾಸ್ತ್ರ-ಬೈಜಿಕ ಚತುರ್‍ಧೃವ ಅನುರಣನ ವಿದ್ಯಾಮಾನವನ್ನು ಅನಾವರಣಗೊಳಿಸಿದಾತ.
ಡೆಹ್‍ಮೆಲ್ಟ್‍ನ ತಂದೆ ಬರ್ಲಿನ್ ವಿಶ್ವವಿದ್ಯಾಲಯದಿಂದ ಕಾನೂನಿನ ಪದವಿ ಪಡೆದು. ಸೇನೆಯಲ್ಲಿ ಕೆಲಕಾಲ ಅಧಿಕಾರಿಯಾಗಿದ್ದನು. ಮೊದಲನೆ ಜಾಗತಿಕ ಯುದ್ದದಿಂದ ಜರ್ಝರಿತವಾಗಿದ್ದ ಜರ್ಮನಿಯಲ್ಲಿ ಜೀವನ ಬಹು ದುಸ್ತರವಾಗಿದ್ದಿತು. 1933ರಲ್ಲಿ ಹತ್ತನೇ ವರ್ಷದವನಿರುವಾಗ ಡೆಹ್‍ಮೆಲ್ಟ್ ,ತಾಯಿಯ ಪ್ರಯತ್ನದಿಂದಾಗಿ ಬರ್ಲಿನ್‍ನ ಅತ್ಯಂತ ಹಳೆಯ ಶಾಲೆಯೆಂದು ಖ್ಯಾತಿ ಹೊಂದಿದ್ದ ಜಿಮ್ನಾಷಿಯಂ ಝಮ್ ಗ್ರಾಯೆನ್ ಕ್ಲಾಸ್ಟರ್‍ಗೆ ಸೇರಿಸಿದನು. ಜರ್ಮನಿಯನ್ನು ಒಗ್ಗೂಡಿಸಿದ ಅಟ್ಟೋವಾನ್ ಬಿಸ್ಮಾರ್ಕ್ ಸಹ ಇಲ್ಲಿಯೇ ಓದಿದ್ದನು. ಬಿಡುವಿನ ವೇಳೆಯಲ್ಲಿ ವಿಜ್ಞಾನದ ಪುಸ್ತಕಗಳನ್ನೋದಿದ ಡೆಹ್‍ಮೆಲ್ಟ್‍ಗೆ ಭೌತಶಾಸ್ತ್ರದಲ್ಲಿ ಅಭಿರುಚಿ ಮೊಳೆಯತೊಡಗಿತು. ಶಾಲೆಯಲ್ಲಿಯೂ ಅತ್ಯುತ್ತಮ ಉಪಾಧ್ಯಾಯರಿದ್ದರು. 1940ರಲ್ಲಿ ಪ್ರೌಢಶಿಕ್ಷಣ ಮುಗಿಸಿ, ಯುದ್ದ ವಿಮಾನ ವಿರೋಧಿ ದಳಕ್ಕೆ ಸೇರಿದನು. ಸ್ಟ್ಯಾಲಿನ್‍ಗ್ರಾಡ್‍ಗೆ ಮುತ್ತಿಗೆ ಹಾಕಿದ ಜರ್ಮನಿ ಸೇನೆ ಅಪಾಯಕಾರಿ ಪರಿಸ್ಥಿತಿಗೆ ಸಿಲುಕಿತು. ಇವರನ್ನು ಬಿಡುಗಡೆಗೊಳಿಸಲು ಡೆಹ್‍ಮೆಲ್ಟ್ ಸೇವೆಯಲ್ಲಿದ್ದ ತುಕಡಿಯನ್ನು ಕಳಿಸಲಾಯಿತು. ಆದರೆ ಕೂದಲೆಯ ಅಂತರದಿಂದ ಈ ತುಕಡಿ, ರಷ್ಯಾ ಸೈನಿಕರಿಂದ ತಪ್ಪಿಸಿಕೊಂಡು ಹಿಂದಕ್ಕೆ ಬಂದಿತು. ಇದಾದ ಅಲ್ಪ ಕಾಲದಲ್ಲೇ 1943ರಲ್ಲಿ ಸೇನೆಯ ತನ್ನ ಕಾರ್ಯಕ್ರಮದಡಿ ಬ್ರೆಸ್ಲೌ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪದವಿ ಗಳಿಸಲು ಡೆಹ್‍ಮೆಲ್ಟನನ್ನು ಕಳಿಸಿತು. ಪದವಿಯ ಮೊದಲ ಒಂದು ವರ್ಷ ಪೂರ್ಣಗೊಂಡಾಗ, ಸೇನೆಯಿಂದ ಬಂದ ಕರೆಗೆ ಓಗೊಟ್ಟು ಡೆಹ್‍ಮೆಲ್ಟ್ ಬಲ್ಫ್ ಕದನದಲ್ಲಿ ಭಾಗಿಯಾಗಿ ಸೆರೆಯಾಳಾದನು. ಫ್ರಾನ್ಸ್’ನಲ್ಲಿ, ಯುದ್ದ ಕೈದಿಯಾಗಿ ಸೆರೆಮನೆ ವಾಸ ಅನುಭವಿಸಿ, 1946ರಲ್ಲಿ ಬಿಡುಗಡೆಗೊಂಡನು. ಇದಾದ ನಂತರ, ಬರ್ಲಿನ್‍ಗೆ ಹಿಂದುರುಗಿ, ರೇಡಿಯೋ ದುರಸ್ತಿಗಾರನಾಗಿ ಜೀವನ ಪ್ರಾರಂಭಿಸಿ, ಗಟ್ಟಿಂಜೆನ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪದವಿ ಅಧ್ಯಯನ ಮುಂದುವರಿಸಿದನು. ಇಲ್ಲಿ ಜಗದ್ವಿಖ್ಯಾತ ಭೌತಶಾಸ್ತ್ರಜ್ಞರ ಬೋಧನೆ ಕೇಳುವ ಅವಕಾಶಗಳು ದಕ್ಕಿದವು. ವುಲ್ಪ್‍ಗ್ಯಾಂಗ್ ಪೌಲ್‍ನ ಮಾರ್ಗದರ್ಶನದಲ್ಲಿ ಭೌತಶಾಸ್ತ್ರದ ಪ್ರಯೋಗಗಳಲ್ಲಿ ಡೆಹ್‍ಮೆಲ್ಟ್ ನೈಪುಣ್ಯ ಸಾಧಿಸಿದನು. 1948ರಲ್ಲಿ ಕೊಫ್ ಫರ್ಮನ್ಸ್ ಸಂಸ್ಥೆಯಲ್ಲಿ ಪೀಟರ್ ಬ್ರಿಕ್ಸ್‍ನ ಕೈಕೆಳಗೆ ದ್ರವ್ಯ ರೋಹಿತಶಾಸ್ತ್ರದಲ್ಲಿ (MASS SPECTROSCOPY) ಸಂಶೋಧನೆ ಮಾಡಿ ಸ್ನಾತಕೋತ್ತರ ಪದವಿ ಪಡೆದನು. ಇದಾದ ನಂತರ ಹರ್ಬರ್ಟ್ ಕ್ರುಗೆರ್ ಮಾರ್ಗದರ್ಶನದಲ್ಲಿ ಬೈಜಿಕ ಕಾಂತೀಯ ಅನುರಣನ (NUCLEAR MAGNETIC RESONANCE)ಕುರಿತಾಗಿ ಸಂಪ್ರಂಬಂಧ ಮಂಡಿಸಿ ಡಾಕ್ಟರೇಟ್ ಗಳಿಸಿದನು. 1949ರಲ್ಲಿ ಡೆಹ್‍ಮೆಲ್ಟ್ ಹಾಗೂ ಸಂಗಡಿಗರು ಬೈಜಿಕ ಚತುರ್‍ಧೃವ ಅನುರಣನ (NUCLEAR QUADRAPOLE RESONANCE) ವಿದ್ಯಾಮಾನವನ್ನು ಆವಿಷ್ಕರಿಸಿದರು. ಈ ಸಾಧನೆಯಿಂದಾಗಿ ಡ್ಯೂಕ್ ವಿಶ್ವವಿದ್ಯಾಲಯದ ಸೂಕ್ಷ್ಮ ತರಂಗ ಪ್ರಯೋಗಾಲಯ ಸೇರಿದ ಡೆಹ್‍ಮೆಲ್ಟ್ ಜೇಮ್ಸ್ಫ್ರಾಂಕ್, ಫ್ರಿಟ್ಸ್,, ಲಂಡನ್ ಹಾಗೂ ಲೋಥರ್ ನಾರ್ಡ್‍ಹೀಮ್‍ರೊಂದಿಗೆ ಸಂಶೋಧನೆಯಲ್ಲಿ ನಿರತನಾದನು. ಡೆಹ್‍ಮೆಲ್ಟ್ 1955ರಲ್ಲಿ ಬ್ರಿಟೀಷ್ ಕೊಲಂಬೋ ವಿಶ್ವವಿದ್ಯಾಲಯದ ಜಾರ್ಜ್ ವೋಲ್ಕೋಪ್ಶ್ ಪ್ರಯೋಗಾಲಯದಲ್ಲಿ ಸ್ವತಂತ್ರವಾಗಿ ಎಲೆಕ್ಟ್ರಾನ್ ಸಂಘಟ್ಟನೆಯ ಸಾಧನ ನಿರ್ಮಿಸಿದನು. 1959ರಲ್ಲಿ ಜೇಕ್ ಜಾನ್ಸನ್ ನೆರವಿನೊಂದಿಗೆ ಮೊದಲ ಬಾರಿಗೆ ಅಧಿಕ ನಿರ್ವಾತದ ಕಾಂತೀಯ ಸೆರೆ ಸಾಧನ (TRAP DEVICE) ನಿರ್ಮಿಸಿದ ಡೆಹ್‍ಮೆಲ್ಟ್, ಅದರಲ್ಲಿ ಹತ್ತು ಸೆಕೆಂಡ್‍ಗಳಿಗೂ ಅಧಿಕ ಕಾಲ ಎಲೆಕ್ಟ್ರಾನ್‍ನ್ನು ಸೆರೆಹಿಡಿದು, ಅದರ ಅನುರಣಗಳನ್ನು ಅಳೆಯುವಲ್ಲಿ ಯಶಸ್ವಿಯಾದನು. 1966ರಲ್ಲಿ ಫಾರ್ಟ್‍ಸನ್ ಹಾಗೂ ಮೇಜರ್‍ರೊಂದಿಗೆ ಡೆಹ್‍ಮೆಲ್ಟ್ ಹೀಗೆ ಸೆರೆಹಿಡಿಯಲ್ಪಟ್ಟ ಅಯಾನ್‍ಗಳನ್ನು ಬಳಸಿ ಲೇಸರ್ ಪಡೆಯುವ ವಿಧಾನ ಸೂಚಿಸಿದನು. 1989ರಲ್ಲಿ ಎಲೆಕ್ಟ್ರಾನ್ ತ್ರಿಜ್ಯವನ್ನು ನಿಖರವಾಗಿ ನಿರ್ಧರಿಸುವ ಮಾರ್ಗ ಹಾಗೂ ಪ್ರಯೋಗ ವಿಧಾನಗಳನ್ನು ಡೆಹ್‍ಮೆಲ್ಟ್ ವಿವರಿಸಿದನು. ಪ್ರಯೋಗಶೀಲ ಭೌತಶಾಸ್ತ್ರದಲ್ಲಿನ ಸಾಧನೆಗಾಗಿ ಡೆಹ್‍ಮೆಲ್ಟ್ , ವೂಲ್ವ್‍ಗ್ಯಾಂಗ್ ಪೌಲಿ ಹಾಗೂ ನಾರ್ಮನ್ ರ್‍ಯಾಮ್ಸೆಯೊಂದಿಗೆ 1989ರ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019