ಹೆನ್ರಿ , ಕೆಂಡಾಲ್ –(1926-1999) ೧೯೯೦
ಅಸಂಸಂ-ಭೌತಶಾಸ್ತ್ರ- ಎಲೆಕ್ಟ್ರಾನ್‍ಗಳ ಸ್ಥಿತಿಸ್ಥಾಪನಾಹೀನ ಚದುರಿಕೆಯ ಸಂಶೋಧನೆ ನಡೆಸಿದಾತ.
9 ಡಿಸೆಂಬರ್ 1926ರಂದು ಮೆಸಾಚುಸೆಟ್ಸ್ ರಾಜ್ಯದ ಬೋಸ್ಟನ್‍ನಲ್ಲಿ ಕೆಂಡಾಲ್ ಜನನವಾಯಿತು. ಬಾಲ್ಯದಲ್ಲಿ ಓದುವ ಹಾಗೂ ಸ್ಪಷ್ಟ ಉಚ್ಛಾರದ ತೊಂದರೆಯಿಂದ ಕೆಂಡಾಲ್ ಬಳಲಿದನು. ಪದವಿಪೂರ್ವ ಶಿಕ್ಷಣದವರೆಗೆ, ವಿದ್ಯಾಭ್ಯಾಸದಲ್ಲಿ ಕೆಂಡಾಲ್ ಸಾಧನೆ ಸರಾಸರಿಗಿಂತ ಕೆಳಮಟ್ಟದ್ದು ಹಾಗೂ ಅಸಮರ್ಪಕವಾಗಿದ್ದಿತು. ಆದರೆ ಯಾಂತ್ರಿಕ, ವೈದ್ಯುತ್ ಸಂಬಂಧಿ ವಿಷಯಗಳಲ್ಲಿ ಕೆಂಡಾಲ್‍ಗೆ ಅಪರಿಮಿತ ಕುತೂಹಲವಿದ್ದಿತು. 1945ರಲ್ಲಿ ಜಪಾನಿನ ಮೇಲೆ ಬೈಜಿಕಾಸ್ತ್ರ (NUCLEAR WEAPON) ಪ್ರಯೋಗವಾದಾಗ ಕೆಂಡಾಲ್ ಯುಎಸ್ ಮಾರ್ಚೆಂಟ್ ಮೆರೈನ್ ಅಕಾಡೆಮಿಯಲ್ಲಿದ್ದನು. ಬೈಜಿಕಾಸ್ತ್ರದ ಪ್ರಯೋಗ ನಿಸರ್ಗದ ಒಂದು ರಹಸ್ಯವನ್ನು ಬೇಧಿಸಿತೆಂದೇ ಕೆಂಡಾಲ್ ಭಾವಿಸಿದ್ದನು. ಆದರೆ ನಂತರ ಅದರ ಪರಿಣಾಮದಿಂದಾಗಿ ಅಪಾರ ಪ್ರಾಣ ಹಾನಿಯ ವಿವರ ತಿಳಿದು ಮರುಗಿದನು. 1950ರಲ್ಲಿ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಭೌತಸಾಸ್ತ್ರದ ಪದವಿಗೆ ಸೇರಿದನು. ಇಲ್ಲಿಂದ ಡಾಕ್ಟರೇಟ್ ಗಳಿಸಿ ಸ್ಟ್ಯಾನ್’ಫೋರ್ಡ್’ ವಿಶ್ವವಿದ್ಯಾಲಯ ಸೇರಿದನು. ಇಲ್ಲಿ ನ್ಯೂಟ್ರಾನ್, ಪ್ರೋಟಾನ್ ರಾಚನಿಕ ಸ್ವರೂಪ ಕುರಿತಾಗಿ ಸಂಶೋಧನೆ ನಡೆಸುತ್ತಿದ್ದ, ಮುಂದೆ ಇದಕ್ಕಾಗಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದ ಹಾಫ್ಸ್ಟ್ಯಾಡ್‍ಟರ್‍ನ ಮಾರ್ಗದರ್ಶನ ದಕ್ಕಿತು. ಇದೇ ಸಮಯದಲ್ಲಿ ಸ್ಟ್ಯಾನ್’ಫೋರ್ಡ್’ ಸರೇಖೀಯ ವೇಗೋತ್ಕರ್ಷಕ (LINEAR ACCELERATOR) ನಿರ್ಮಾಣಗೊಂಡಿತು. ಕೆಂಡಾಲ್ ಇಲ್ಲಿ ರಿಚರ್ಡ್ ಟೇಲರ್, ಜೆರೋಮ್ ಫ್ರೀಡ್’ಮನ್‍ರೊಂದಿಗೆ ಸಂಶೋಧನೆ ನಡೆಸಿದನು. 1970ರಲ್ಲಿ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೇರಿದ ಕೆಂಡಾಲ್ ಕ್ವಾಂಟಂ ವೈದ್ಯುತ್‍ಗತಿಶಾಸ್ತ್ರ (QUANTUM ELECTRODYNAMICS), ಎಲೆಕ್ಟ್ರಾನ್ ಗುಣಗಳಲ್ಲಿ ಸಾಮ್ಯತೆ ಭಂಗ (NON PARITY) ಕುರಿತಾದ ಪ್ರಯೋಗಗಳಲ್ಲಿ ನಿರತನಾದನು. 1960ರ ನಂತರ ಬೈಜಿಕಾಸ್ತ್ರ ಅಭಿವೃದ್ಧಿಯಲ್ಲಿ ಸೇನೆಗೆ ಸೇವೆ ಸಲ್ಲಿಸಿದನು. ಇದರಿಂದ ತಂತ್ರಜ್ಞಾನ ಪ್ರೇರಿತ ಅಸ್ತ್ರಗಳ ವಿರಾಟ್ ವಿನಾಶಶಕ್ತಿಯನ್ನು ಮನಗಂಡನು. 1969ರಲ್ಲಿ ಇಂತಹ ಅಸ್ತ್ರಗಳಿಗೆ ಮಿತಿ ಹೇರಬೇಕೆಂದು ಒತ್ತಾಯಿಸುವ ಯೂನಿಯನ್ ಆಫ್ ಕನ್ಸನ್ರ್ಡ್ ಸೈಂಟಿಸ್ಟ್ ಎಂಬ ಸಂಘ ಸ್ಥಾಪಿಸಿದನು. ಜೆರೋಮ್ ಐಸಾಕ್ ಫ್ರೀಡ್’ಮನ್ ಮತ್ತು ರಿಚರ್ಡ್.ಇ.ಟೇಲರ್ ಸಾಂಗತ್ಯದಲ್ಲಿ ಕೆಂಡಾಲ್ ನಡೆಸಿದ ಪ್ರಯೋಗಗಳಿಂದ ಪ್ರೋಟಾನ್ ಹಾಗೂ ಬದ್ಧ ನ್ಯೂಟ್ರಾನ್‍ಗಳ ಮೇಲೆ ಜರುಗುವ ಎಲೆಕ್ಟ್ರಾನ್‍ಗಳ ಸ್ಥಿತಿಸ್ಥಾಪನಾಹೀನ ಚದುರಿಕೆಯ ಸ್ವರೂಪ ಸ್ಪಷ್ಟಗೊಂಡಿತು. ಇದು ಕಣ ಭೌತಶಾಸ್ತ್ರದಲ್ಲಿ ಕ್ವಾರ್ಕ್ ಮಾದರಿ ಸಿದ್ಧಾಂತ ರೂಪಿಸಲು ನೆರವಾಯಿತು. ಈ ಸಾಧನೆಗಾಗಿ ಕೆಂಡಾಲ್ 1990ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು. ಕೆಂಡಾಲ್ ಪರ್ವಾತಾರೋಹಿಯೆಂದು ಅತ್ಯುತ್ತಮ ಪರ್ವತಾ ಛಾಯಾಗ್ರಾಹಕನೆಂದೂ ಹೆಸರುವಾಸಿಯಾಗಿದ್ದಾನೆ. 15 ಫೆಬ್ರವರಿ1999ರಂದು ಫ್ಲೋರಿಡಾದ ವಾಕುಲ್ಲ ಸ್ಪ್ರಿಂಗ್ಸ್ ಸ್ಟೇಟ್ ಪಾರ್ಕ್‍ನಲ್ಲಿ ನೀರಿನಾಳದ ಗುಹೆಗಳ ಛಾಯಾಗ್ರಹಣ ಮಾಡುತ್ತಿದ್ದಾಗ ಕೆಂಡಾಲ್ ಸಾವನ್ನಪ್ಪಿದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019