ಮೆಲ್ವಿನ್, ಷಾರ್ಷ್ (1932--) ೧೯೮೮
ಅಸಂಸಂ -ಭೌತಶಾಸ್ತ್ರ –ಪೈಯಾನ್, ಮ್ಯುಯಾನ್ ಕಣಗಳ ಕ್ರಿಯಾ ಅದ್ಯಯನ ಪ್ರಾರಂಭಿಸಿದಾತ.
ಅಸಂಸಂ ತೀವ್ರ ಆರ್ಥಿಕ ಖಿನ್ನತೆಯಲ್ಲಿ ನರಳುತ್ತಿದ್ದ ಕಾಲದಲ್ಲಿ ಮೆಲ್ವಿನ್ ಜನನವಾಯಿತು. ಇದರಿಂದಾಗಿ ಈತನ ಕುಟುಂಬ ಕಡು ಕಷ್ಟದಲ್ಲಿದ್ದಿತು. ಮೆಲ್ವಿನ್ ನೆನಪುಗಳು ಬಾಲ್ಯದ ಬಡತನದ ನೆನಪಿನಿಂದ ತೋಯ್ದು ಹೋಗಿವೆ. ಮಹಾನ್ ಅಶಾವಾದಿಯಾಗಿದ್ದ ಮೆಲ್ವಿನ್ ತಂದೆ ಮುಂದೆ ಒಳ್ಳೆ ದಿನಗಳು ಬಂದೇ ಬರುವವೆಂಬ ನಂಬುಗೆಯಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಪರಿಶ್ರಮಿಸಿದನು. ಮೆಲ್ವಿನ್ ಹನ್ನೆರಡನೇ ವಯಸ್ಸಿನಲ್ಲಿ ನ್ಯೂಯಾರ್ಕ್‍ನ ಬ್ರಾಂಕ್ಸ್ ಹೈಸ್ಕೂಲ್ ಆಫ್ ಸೈನ್ಸ್ ಸೇರಿದನು. ಈ ಪ್ರೌಢಶಾಲೆಯಲ್ಲಿ ಓದಿದ ನಾಲ್ಕು ಜನರು ಮುಂದೆ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತರಾದುದೊಂದು ವಿಶೇಷ. ಪದವಿಗಾಗಿ ಕೊಲಂಬಿಯಾ ವಿಶ್ವ ವಿದ್ಯಾಲಯ ಸೇರಿದ ಮೆಲ್ವಿನ್‍ಗೆ ಐ.ಐ.ರಬಿಯ ಮಾರ್ಗದರ್ಶನ ದಕ್ಕಿತು. ಮೆಲ್ವಿನ್ 1958ರಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ವೃತ್ತಿ ಜೀವನ ಆರಂಭಿಸಿದನು. ಜಾಕ್ ಸ್ಟೀನ್‍ಬರ್ಜರ್, ಟಿ.ಡಿ ಲೀಯವರ ಬೆಂಬಲ ಹಾಗೂ ಮಾರ್ಗದರ್ಶನ ಮೆಲ್ವಿನ್‍ಗೆ ದಕ್ಕಿದವು. 1966ರಲ್ಲಿ ಸ್ಟ್ಯಾನ್’ಫೋರ್ಡ್’ ವಿಶ್ವವಿದ್ಯಾಲಯಕ್ಕೆ ಹೋದ ಮೆಲ್ವಿನ್ ಇಲ್ಲಿ ಹೊಸದಾಗಿ ನಿರ್ಮಾಣಗೊಂಡಿದ್ದ ಕಣ ವೇಗೋತ್ಕರ್ಷಕಗಳಲ್ಲಿ (PARTICLA ACCELERATORS) ಪ್ರಾರಂಭವಾಗಿದ್ದ ಸಂಶೋಧನೆಗಳಲ್ಲಿ ಭಾಗಿಯಾದನು. ಬಹು ದೀರ್ಘಾವಧಿ ಅಸ್ತಿತ್ವ ಹೊಂದಿರುವ ತಟಸ್ಥ ಕವೊನ್ ಶೈಥಿಲ್ಯದ (DECAY) ಅಸಮಾಂಗೀಯತೆಯ ( NONSYMMETRY) ಅಧ್ಯಯನ ನಡೆಸಿದನು. ಮೆಲ್ವಿನ್‍ನಿಂದ ಮುಂದುವರೆದ ಸಂಶೋಧನೆಗಳಿಂದ ಜಲಜನಕ ಹೋಲುವ ಪೈಯಾನ್ ಹಾಗೂ ಮ್ಯೂಯಾನ್‍ಗಳಿಂದಾದ ಹೊಸ ಬಗೆಯ ಪರಮಾಣುಗಳ ಉತ್ಪನ್ನ ಹಾಗೂ ಶೋಧನೆಗಳು ಸಾಧ್ಯವಾದವು. ಇದಕ್ಕಾಗಿ ಮೆಲ್ವಿನ್ 1988ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. 1970ರ ನಂತರ ಸಂವಹನ ಹಾಗೂ ಗಣಕ ಕ್ರಾಂತಿಯ ಭವಿಷ್ಯವನ್ನು ಮೆಲ್ವಿನ್ ಮನಗಂಡನು. ಈ ಹೊಸ ರಂಗದಲ್ಲಿ ಕ್ರಿಯಾಶೀಲನಾಗಬೇಕೆಂದು ಹಂಬಲಿಸಿ ಡಿಜಿಟಲ್ ಪಾಥ್‍ವೇ ಇನ್ಕ್ ಕಂಪನಿ ಸೇರಿದನು. ಮುಂದೆ ಇದರ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾದನು. 1991ರಲ್ಲಿ ಬ್ರೂಕ್ ಹೇವೆನ್ ನ್ಯಾಷನಲ್ ಲ್ಯಾಬೋರೇಟರಿಯ ಸಹ ನಿರ್ದೇಶಕನಾದನು. ಮೆಲ್ವಿನ್ ಈಗಲೂ ಇದೇ ವೃತ್ತಿಯಲ್ಲಿದ್ದಾನೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019