ನಿಕೊಲಾಸ್, ಬ್ಲೂಯೆಂಬರ್ಜನ್ (1920--) ೧೯೮೧ ನೆದರ್‍ಲ್ಯಾಂಡ್ಸ್-ಭೌತಶಾಸ್ತ್ರ-ಬೈಜಿಕ ಕಾಂತೀಯ ಅನುರಣನ ಹಾಗೂ ವಿಶ್ರಾಂತ ಸ್ಥಿತಿ ಅಧ್ಯಯನದ ಮುಂಚೂಣಿಗ
ರಾಸಾಯನಿಕ ಇಂಜಿನಿಯರ್‍ನ ನಾಲ್ಕು ಜನ ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಲ್ಲಿ ನಿಕೊಲಾಸ್ ಎರಡನೆಯವನು. ನೆದರ್‍ಲ್ಯಾಂಡ್ಸ್‍ನ ಡೊಡ್ರೆಕ್ಟ್‍ನಲ್ಲಿ 11 ಮಾರ್ಚ್ 1920 ರಂದು ಜನಿಸಿದನು. ನಿಕೊಲಾಸ್, ಪ್ರಾಥಮಿಕ ಶಾಲೆಯಲ್ಲಿರುವಾಗ, ಆತನ ಕುಟುಂಬ ಉಟ್‍ರೆಸ್ಟ್ ಬಳಿಯ ವಿಲ್ಥೋವನ್ ಪಟ್ಟಣಕ್ಕೆ ಹೋಗಿ ನೆಲೆಸಿತು. ಉಟ್‍ರೆಕ್ಟ್‍ನಲ್ಲಿ ಲ್ಯಾಟಿನ್ ಸ್ಕೂಲ್ ಹೆಸರಿನಲ್ಲಿ 1474ರಲ್ಲಿ ಪ್ರಾರಂಭವಾಗಿದ್ದ ಮುನ್ಸಿಪಲ್ ಜಿಮ್ನಾಷಿಯಂನ್ನು ಹನ್ನೆರಡನೇ ವರ್ಷದಲ್ಲಿ ಸೇರಿದ ನಿಕೊಲಾಸ್ ಲ್ಯಾಟಿನ್, ಗ್ರೀಕ್, ಫ್ರೆಂಚ್ , ಜರ್ಮನ್, ಇಂಗ್ಲೀಷ್, ಡಚ್ ಹಾಗೂ ಮಾನಸಿಕ ವಿಜ್ಞಾನಗಳನ್ನು ಕಲಿತನು. ಪ್ರೌಢಶಾಲೆಯಲ್ಲಿರುವಾಗ ಭೌತ ಹಾಗೂ ರಸಾಯನಶಾಸ್ತ್ರಗಳಲ್ಲಿ ಉತ್ತಮ ಬೋಧಕರಿದ್ದರು. ಇದರಿಂದಾಗಿ ನಿಕೊಲಾಸ್ ವಿಜ್ಞಾನದತ್ತ ಆಕರ್ಷಿತನಾದನು. ಗಣಿತ ಹೇಗೆ ಭೌತಿಕ ಜಗತ್ತನ್ನು ವಿವರಿಸುತ್ತದೆಯೆಂದು ಚಿಂತಿಸಿ ನಿಕೊಲಾಸ್ ಸೋಜಿಗಗೊಂಡಿದ್ದನು. 1938ರಲ್ಲಿ ಉಟ್‍ರೆಸ್ಟ್ ವಿಶ್ವವಿದ್ಯಾಲಯ ಸೇರಿದನು. ಇಲ್ಲಿ ಪ್ರಾಧ್ಯಾಪಕನಾಗಿದ್ದ ಓರ್ನ್‍ಸ್ಟೀನ್, ನಿಕೊಲಾಸ್ ಪದವಿಯ ವಿದ್ಯಾಭ್ಯಾಸದೊಂದಿಗೆ, ಡಾಕ್ಟರೇಟ್‍ಗೆ ಸಂಶೋಧನೆ ನಡೆಸುತ್ತಿದ್ದ ಮತ್ತೊಬ್ಬ ವಿದ್ಯಾರ್ಥಿಗೆ ಸಹಾಯಕವಾಗುವಂತೆ ಮಾಡಿದನು. ಈತನ ಸಂಪ್ರಂಬಂಧ ಪ್ರಕಟನಗೊಂಡಾಗ ಅದಕ್ಕೆ ನೆರವಾದವರ ಪಟ್ಟಿಯಲ್ಲಿ ನಿಕೊಲಾಸ್ ಹೆಸರು ಸೇರಿದ್ದಿತು. ಇದು ಆತ ಪುಳಕಗೊಳ್ಳುವಂತೆ ಮಾಡಿತು. 1940ರಲ್ಲಿ ಹಾಲೆಂಡ್ ಜರ್ಮನಿಯ ನಾಝಿಗಳ ವಶವಾಯಿತು. ಓರ್ನ್‍ಸ್ಟೀನ್‍ನ್ನು 1941ರಲ್ಲಿ ವಿಶ್ವವಿದ್ಯಾಲಯದಿಂದ ಉಚ್ಛಾಟಿಸಲಾಯಿತು. ಯುರೋಪಿನ ಇತರ ದೇಶಗಳಿಗೆ ಹೋಗಿ ಶಿಕ್ಷಣ ಮುಂದುವರಿಸಬೇಕೆಂದು ನಿಕೊಲಾಸ್ ರೊಸೆನ್ಫೆಲ್ಡ್ ಕೈ ಕೆಳಗೆ ಸಂಖ್ಯಾಕಲನಶಾಸ್ತ್ರ (STATISTICA) , ದ್ಯುತಿವೈದ್ಯುತ್ ಪತ್ತೆಕಾರಕ (PHOTOELECTRIC DETECTOR) , ಬ್ರೌನಿಯನ್ ಚಲನೆಗಳ ಅಧ್ಯಯನ ಮಾಡಿದನು. 1943ರಲ್ಲಿ ನಾಝಿಗಳು ಊಟ್‍ರೆಸ್ಟ್ ವಿಶ್ವವಿದ್ಯಾಲಯವನ್ನು ಮುಚ್ಚುವುದಕ್ಕಿಂತ ಸ್ವಲ್ಪ ಮುಂಚೆ ನಿಕೊಲಾಸ್‍ಗೆ ಸ್ನಾತಕೋತ್ತರ ಪದವಿ ದಕ್ಕಿತು. ಮುಂದಿನ ಎರಡು ವರ್ಷ ನಾಝಿಗಳ ಕಣ್ಣಿಗೆ ಬೀಳದಂತೆ ಗೆಡ್ಡೆ ಗೆಣಸುಗಳನ್ನು ತಿಂದು ನಿಕೊಲಾಸ್, ದುಸ್ಥಿತಿಯಲ್ಲಿ ಜೀವನ ನಡೆಸಿದನು. ಈ ಅಜ್ಞಾತವಾಸ ಕಾಲದಲ್ಲಿ ಕ್ರ್ಯಾಮರ್‍ನ ಕ್ವಾಂಟಂ ಥಿಯರಿ ಡೆ ಎಲೆಕ್ಟ್ರಾನ್ ಎಂಡ್ ಡೆರ್ ಸ್ಟ್ರಾಹ್‍ಲಂಗ್, ಪುಸ್ತಕವನ್ನು ರಾತ್ರಿ ವೇಳೆ ಎಣ್ಣೆಯ ಬುಡ್ಡಿ ದೀಪದ ಕೆಳಗೆ ಓದಿ, ಕರತಲಾಮಲಕ ಮಾಡಿಕೊಂಡನು. ನಾಝಿ ಆಕ್ರಮಿತ ದೇಶದಲ್ಲಿ ದೀಪಕ್ಕೆ ಬೇಕಾದ ಎಣ್ಣೆಯೂ ದುರ್ಲಭವಾಗಿದ್ದರಿಂದ ವಾಹನಗಳಲ್ಲಿ ಬಳಸಿ ಚೆಲ್ಲಿದ ಉಳಿಕೆ ತೈಲಕ್ಕೆ ನಿಕೊಲಾಸ್ ಮೊರೆ ಹೋಗಿದ್ದನು. ನೆದರ್‍ಲ್ಯಾಂಡ್ಸ್‍ನಿಂದ ಹೊರಗೆ ಹೋಗಿ ಡಾಕ್ಟರೇಟ್ ಗಳಿಸುವ ಉತ್ಕಟೇಚ್ಛೆ ನಿಕೊಲಾಸ್‍ನಲ್ಲಿ ಮನೆಮಾಡಿದ್ದಿತು. ಇಡೀ ಯುರೋಪ್ ಯುದ್ದದಿಂದ ಜರ್ಝರಿತವಾದುದರಿಂದ, ಇದರಿಂದ ಬಹು ದೂರವಿದ್ದ ಅಸಂಸಂ ನಿಕೊಲಾಸ್‍ನ ಗಮನ ಸೆಳೆಯಿತು. ಈ ದಿಶೆಯಲ್ಲಿ ನಡೆಸಿದ ಪ್ರಯತ್ನಗಳ ಫಲವಾಗಿ ಅಸಂಸಂಗಳ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ವ್ಯಾಸಂಗ ಮಾಡುವ ಅವಕಾಶ ನಿಕೊಲಾಸ್‍ಗೆ ಬಂದೊದಗಿತು. ನಿಕೊಲಾಸ್ ಹಾರ್ವರ್ಡ್‍ಗೆ ಸೇರುವ ಆರು ವಾರ ಮೊದಲು ಪಾರ್ಸೆಲ್, ಟಾರಿ ಹಾಗೂ ಪೌಂಡ್ ಬೈಜಿಕ ಕಾಂತೀಯ ಅನುರಣನವನ್ನು (NMR-NUCLEAR MAGNETIC RESONANCE) ಆವಿಷ್ಕರಿಸಿದ್ದರು. ಇವರೆಲ್ಲರೂ ಎಂಐಟಿಯ ವಿಕಿರಣ ಪ್ರಯೋಗಾಲಯಕ್ಕೆ ಬೇಕಾದ ಸೂಕ್ಷ್ಮ ತರಂಗಗಳನ್ನು ಕುರಿತಾಗಿ, ವಿಷಯ ಸಂಗ್ರಹಣೆ ಹಾಗೂ ಪರಿಷ್ಕರಣೆಯಲ್ಲಿ ಕ್ರಿಯಾಶೀಲರಾಗಿದ್ದರು. ಇದರಿಂದಾಗಿ, ಬೈಜಿಕ ಕಾಂತೀಯ ಅನುರಣನ ಸಾಧನೆಯ ಕಾರ್ಯದಲ್ಲಿ ನೆರವಾಗಲು ಹಲವಾರು ವಿದ್ಯಾರ್ಥಿಗಳನ್ನು ಆರಿಸಿಕೊಂಡರು. ಅಂತಹ ಗುಂಪಿನಲ್ಲಿ ನಿಕೊಲಾಸ್ ಸೇರಿದನು. ಈ ಅವಧಿಯಲ್ಲಿ ಜೆ. ಷ್ವೈಂಜರ್ , ಜೆ.ಎಚ್ ವ್ಯಾನ್‍ವ್ಲೆಕ್, ಇ.ಸಿ. ಕೆಂಬ್ಲ್‍ನಂತಹ ಶ್ರೇಷ್ಟ ಪ್ರಾಧ್ಯಾಪಕರ ಪ್ರವಚನ ಕೇಳುವ ಅವಕಾಶ ನಿಕೊಲಾಸ್‍ಗೆ ಲಭ್ಯವಾಯಿತು. ಇದರ ಫಲವಾಗಿ, ಸಾಕಷ್ಟು ಅಜ್ಞಾತವಾಗಿದ್ದ ಘನ, ದ್ರವ, ಅನಿಲಗಳಲ್ಲಿನ ಬೈಜಿಕ ಕಾಂತೀಯ ಅನುರಣನ ಸುಳಿವುಗಳು ನಿಕೊಲಾಸ್‍ಗೆ ದಕ್ಕಿದವು. ಹಾರ್ವರ್ಡ್‍ಗೆ ಸಂದರ್ಶಕ ಪ್ರಾಧ್ಯಾಪಕನಾಗಿದ್ದ ನೆದರ್‍ಲ್ಯಾಂಡ್ಸ್‍ನ ಸಿ.ಜೆ. ಗಾರ್ಟರ್ ಆಹ್ವಾನದ ಮೇರೆಗೆ ತಾಯ್ನಾಡಿಗೆ ಮರಳಿದ ನಿಕೊಲಾಸ್, ಕ್ಯಾಮರ್‍ಲಿಂಗ್ ಒನ್ನೆಸ್ ಪ್ರಯೋಗಾಲಯ ಸೇರಿ ಬೈಜಿಕ ಅನುರಣನ ವಿಶ್ರಾಂತ ಸ್ಥಿತಿಯನ್ನು ಕುರಿತಾಗಿ ಸಂಪ್ರಂಬಂಧ ಮಂಡಿಸಿ, 1948ರಲ್ಲಿ ಡಾಕ್ಟರೇಟ್ ಗಳಿಸಿದನು. ಈ ಸಂಪ್ರಬಂಧದಲ್ಲಿ ಲೋಹಗಳಲ್ಲಿ ಸಂವಹನ ಎಲೆಕ್ಟ್ರಾನ್‍ಗಳಿಂದಲೂ, ಅಯಾನಿಕ ಸ್ಪಟಿಕಗಳಲ್ಲಿ ಅನುಕಾಂತೀಯ ಕಲ್ಮಷಗಳಿಂದಲೂ (PARAMAGNETIC DOPES) ಬೈಜಿಕ ಗಿರಕಿ (NUCLEAR SPIN) ಸಡಿಲಗೊಳ್ಳುವ ಸ್ವರೂಪವನ್ನು ವಿವರಿಸಿದನು. 1940ರಿಂದ 1951 ರವರೆಗೆ ಜೂನಿಯರ್ ಫೆಲೋ, 1951ರಿಂದ 1957 ರವರೆಗೆ, ಸಹಾಯಕ ಪ್ರಾಧ್ಯಾಪಕನಾಗಿ, 1957ರಿಂದ 1980 ರವರೆಗೆ ಗೋರ್ಡಾನ್ ಮೆಕೆನ್ಸಿ ಪ್ರಾಧ್ಯಾಪಕನಾಗಿ , 1974 ರಿಂದ 1980 ರವರೆಗೆ ಭೌತಶಾಸ್ತ್ರದ ರಮ್ಫೋರ್ಡ್ ಪ್ರಾಧ್ಯಾಪಕನಾಗಿ ನಿಕೊಲಾಸ್ ಸೇವೆ ಸಲ್ಲಿಸಿದನು. ಹಾರ್ವರ್ಡ್ ಸೈಕ್ಲೋಟ್ರಾನ್ ಕೇಂದ್ರದಲ್ಲಿ ಸೂಕ್ಷ್ಮ ತರಂಗ ರೋಹಿತಶಾಸ್ತ್ರದಲ್ಲಿ ಪ್ರಾಯೋಗಿಕ ಅನುಭವಗಳಿಸಿದನು. 1951ರಲ್ಲಿ ನಿಕೊಲಾಸ್ ಹಾಗೂ ಸಂಗಡಿಗರು ಬೈಜಿಕ ಕಾಂತೀಯ ಅನುರಣನ ವಿಭಾಗದಲ್ಲಿ ನಡೆಸಿದ ಪ್ರಯೋಗಗಳಿಂದ, ಅಪರಿಪೂರ್ಣ ಅಯಾನಿಕ ಸ್ಪಟಿಕ ಹಾಗೂ ಮಿಶ್ರ ಲೋಹಗಳಲ್ಲಿ ಚತುಧೃವ ಅಂತಕ್ರಿಯೆಗಳ (QUADRAPOLAR INTERACTION) ಅಧ್ಯಯನ ನಡೆಸಿದರು. ಇದರ ಫಲವಾಗಿ ಲೋಹ, ವಾಹಕ, ಅವಾಹಕ, ಸ್ಪಟಿಕಗಳಲ್ಲಿ ಹಲವಾರು ವಿಧದಲ್ಲಿ ವಿಶ್ರಾಂತ ಸ್ಥಿತಿಯೇರ್ಪಡುವುದು ತಿಳಿದು ಬಂದಿತು. 1958ರಲ್ಲಿ ಷಾಲೋ ಹಾಗೂ ಟೌನೆಸ್ ಮೇಸರ್ ಉತ್ಪಾದಿಸುವ ಪ್ರಸ್ತಾವನೆ ನೀಡಿದರು. ಆಗ ನಿಕೊಲಾಸ್ ಇದು ಪ್ರಯೋಗಶಾಲೆಯ ಮಟ್ಟದಲ್ಲಿ ಸಾಧ್ಯವಾಗದೆ, ಬೃಹತ್ ಕೈಗಾರಿಕಾ ಮಟ್ಟದಲ್ಲಿ ಸಾಧ್ಯವೆಂದು ಹೇಳಿದನು. 1957ರಲ್ಲಿ ಫ್ರಾನ್ಸಿನ ಎಕೊಲೆ ನಾರ್ಮಲೆಯಲ್ಲಿ, 1964ರಿಂದ 1965ರವರೆಗೆ ಕ್ಯಾಲಿಫೋರ್ನಿಯಾವಿಶ್ವವಿದ್ಯಾಲಯಕ್ಕೆ ,1973ರಲ್ಲಿ ಲೀಡೆನ್‍ಗೂ ಸಂದರ್ಶಕ ಪ್ರಾಧ್ಯಾಪಕನಾಗಿ ನಿಕೊಲಾಸ್ ಸೇವೆ ಸಲ್ಲಿಸಿದನು. 1979ರಲಿ ್ಲಬೆಂಗಳೂರಿಗೂ ಸಂದರ್ಶಕ ಪ್ರಾಧ್ಯಾಪಕನಾಗಿ ಭಾರತೀಯ ವಿಜ್ಞಾನ ಮಂದಿರಕ್ಕೆ ನಿಕೊಲಾಸ್ ಭೇಟಿ ಇತ್ತಿದ್ದನು. ಬೈಜಿಕ ಕಾಂತೀಯ ಅನುರಣನ ಹಾಗೂ ವಿಶ್ರಾಂತ ಸ್ಥಿತಿಗಳಲ್ಲಿ ನಡೆಸಿದ ಸಂಶೋಧನೆಗಳಿಗಾಗಿ ನಿಕೊಲಾಸ್ 1981ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019