ಕ್ಲಿಟ್‍ಝಿಂಗ್, ಕ್ಲೌಸ್ ವಾನ್ (1943--) ೧೯೮೫
ಜರ್ಮನಿ-ಭೌತಶಾಸ್ತ್ರ –ಕ್ವಾಂಟಂ ಹಾಲ್ ಪರಿಣಾಮ ಅನಾವರಣಗೊಳಿಸಿದಾತ.
ಕ್ಲಿಟ್‍ಝಿಂಗ್ ಪೊಸೆನ್‍ನಲ್ಲಿ ಜನಿಸಿದನು. ಬ್ರೌನ್ಷ್‍ವಿಗ್ ಹಾಗೂ ವುರ್ಜ್‍ಬರ್ಗ್‍ಗಳಲ್ಲಿ ಅವನ ಶಿಕ್ಷಣ ಸಾಗಿತು. 1980ರಲ್ಲಿ ಮ್ಯೂನಿಕ್‍ನಲ್ಲಿ ಪ್ರಾಧ್ಯಾಪಕನಾದ ಕ್ಲಿಟ್‍ಝಿಂಗ್ 1985ರಲ್ಲಿ ಮ್ಯಾಕ್ಸ್‍ಪ್ಲಾಂಕ್ ಸಂಸ್ಥೆಯ ನಿರ್ದೇಶಕನಾದನು. ತೆಳುವಾದ ಅರೆವಾಹಕದ ಪದರವನ್ನು ತಳಹದಿಯಾಗಿ ಬಳಸಿ, ಇದರ ಮೇಲ್ಮೈಗೆ ಲಗತ್ತಾಗಿರುವಂತೆ ಸೀಮಿತವಾದ ಎಲೆಕ್ಟ್ರಾನಿಕ್ ಅನಿಲವನ್ನು ವಿಶೇಷ ತಂತ್ರದಿಂದ ಪಡೆಯಬಹುದು. ಇವುಗಳನ್ನು ಕಾಂತಕ್ಷೇತ್ರಗಳಿಗೆ ಒಡ್ಡಿದಾಗ, ಈ ಕ್ಷೇತ್ರದಲ್ಲಿರುವ ಎಲೆಕ್ಟ್ರಾನ್‍ಗಳು ನಿರ್ದಿಷ್ಟ ಚೈತನ್ಯದ ಸ್ಥಿತಿಗಳಲ್ಲಿ ವೃತ್ತಿಯ ಕಕ್ಷೆಗಳಲ್ಲಿ ಸುತ್ತುತ್ತವೆ. ಒಂದು ಸ್ಥಿತಿಯಲ್ಲಿ ಇವುಗಳ ವಾಹಕತೆ ಮತ್ತು ರೋಧತೆ ಶೂನ್ಯವಾಗುತ್ತವೆ. ಇದನ್ನು ಕ್ವಾಂಟಂ ಹಾಲ್ ಪರಿಣಾಮವೆನ್ನುತ್ತಾರೆ. ಕ್ಲಿಟ್‍ಝಿಂಗ್‍ನ ಈ ಅನಾವರಣಕ್ಕೆ ಹಲವಾರು ಜನ ಸೈದ್ಧಾಂತಿಕ ವಿವರಣೆ ನೀಡಿದರು. ಈ ವಿದ್ಯಾಮಾನ ಅನಾವರಣಗೊಳಿಸಿದ್ದಕ್ಕಾಗಿ 1985ರ ನೊಬೆಲ್ ಪ್ರಶಸ್ತಿ ಕ್ಲಿಟ್‍ಝಿಂಗ್‍ಗೆ ದಕ್ಕಿತು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 12/4/2019