ಕಾರ್ಲೋ, ರುಬ್ಬಿಯಾ (1934--) 1984
ಇಟಲಿ-ಭೌತಶಾಸ್ತ್ರ-ಕಣ ಸಂಶೋಧನೆಯ ಮುಂದಾಳು
ರುಬ್ಬಿಯಾನ ತಂದೆ, ದೂರವಾಣಿ ಇಲಾಖೆಯಲ್ಲಿ ವೈದ್ಯುತ್ ಇಂಜಿನಿಯರ್ ಆಗಿದ್ದು ಗೊರಿಝಿಯಾ ಎಂಬ ಪಟ್ಟಣದಲ್ಲಿದ್ದನು. ಇಲ್ಲಿಯೇ 31 ಮಾರ್ಚ್ 1934 ರಂದು ರುಬ್ಬಿಯಾ ಜನಿಸಿದನು. ಎರಡನೇ ಜಾಗತಿಕ ಯುದ್ದದ ಕೊನೆಗೆ, ಗೊರಿಝಿಯಾ ಯುಗೋಸ್ಲೋವಿಯಾದ ವಶವಾದಾಗ, ರುಬ್ಬಿಯಾನ ಕುಟುಂಬ ವೆನಿಸ್‍ಗೂ ನಂತರ ಎಡಿನ್‍ಗೂ ವಲಸೆ ಹೋಯಿತು. ಬಾಲ್ಯದಿಂದಲೇ ರುಬ್ಬಿಯಾಗೆ ಇಂಜಿನಿಯರಿಂಗ್‍ನಲ್ಲಿ ಅತ್ಯಾಸಕ್ತಿಯಿದ್ದಿತು. ರುಬ್ಬಿಯಾ ಪ್ರೌಢಶಿಕ್ಷಣ ಮುಗಿಸಿ, ಪೀಸಾದ ಸ್ಕೂಲ್ ನಾರ್ಮಲೆಗೆ ಸೇರಿ ಹೆಚ್ಚಿನ ವಿಧ್ಯಾಭ್ಯಾಸ ಗಳಿಸಲು ಯತ್ನಿಸಿದನು. ಯುದ್ದ ಕಾಲದಲ್ಲಿನ ಪ್ರಕ್ಷುಬ್ದ , ಭಯ ಭೀತ ವಾತಾವರಣದಲ್ಲಿ ಸಮರ್ಪಕವಾಗಿ, ಓದದೇ ಇದ್ದುದರಿಂದ, ರುಬ್ಬಿಯಾ ಪ್ರವೇಶ ಪರೀಕ್ಷೆಯಲ್ಲಿ ಅನುತ್ತೀರ್ಣನಾದನು. ಇದಕ್ಕೆ ಬದಲಾಗಿ ಮಿಲಾನ್ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಪದವಿಗೆ ಸೇರಿದನು. ಸ್ಕೂಲ್ ನಾರ್ಮಲೆಗೆ ಪ್ರವೇಶ ಪಡೆದಿದ್ದ ಅಭ್ಯರ್ಥಿ ಬೇರೆಡೆಗೆ ತೆರಳಿದುದರಿಂದ, ರುಬ್ಬಿಯಾ ಅದೇ ಕಾಲೇಜಿಗೆ ಸೇರುವ ಅವಕಾಶ ಒದಗಿ ಬಂದಿತು. ಈ ಅಲ್ಪ ಘಟನೆ ರುಬ್ಬಿಯಾನ ಜೀವನವನ್ನೇ ಬದಲಿಸಿತು. ಹಿಂದಿನ ತರಗತಿಗಳಲ್ಲಿ ಓದಿದ್ದೆಲ್ಲವನ್ನು ಮರೆತಿದ್ದ ರುಬ್ಬಿಯಾ, ಬಹು ಪರಿಶ್ರಮದಿಂದ ಅಧ್ಯಯನ ಮಾಡಿ ಉಳಿದ ವಿಧ್ಯಾರ್ಥಿಗಳಿಗೆ ಸಮನಾದ ಸ್ಥಾನಕ್ಕೆ ಬಂದು ನಿಂತನು. ವಿಶ್ವ ಕಿರಣಗಳ ಬಗೆಗೆ ಪ್ರಬಂಧ ಬರೆದು 1954ರಲ್ಲಿ ಪದವಿ ಗಳಿಸಿದನು. 1958ರಲ್ಲಿ ಅಸಂಸಂಗಳಿಗೆ ಹೋಗಿ ಕಣ ವೇಗೋತ್ಕರ್ಷಕಗಳ (PARTICLE ACCELERATOR) ಬಗೆಗೆ, ಅರಿತುಕೊಳ್ಳಲು ರುಬ್ಬಿಯಾ ಯತ್ನಿಸಿದನು. ಇಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಡಬ್ಲ್ಯೂ,ಬೇಕರ್ ಜೊತೆಗೆ, ಸಿಂಕ್ರೋಸೈಕ್ಲೋಟ್ರಾನ್‍ನಲ್ಲಿ ಧೃವೀಕೃತ ಮ್ಯೂಯಾನ್‍ಗಳ ಸೆರೆ ಹಿಡಿತದಲ್ಲಿರುವ ಕೋನೀಯ ಅಸಮಾಂಗೀಯತೆಯನ್ನು (ANGULAR NONSYMMETRY)ಅಧ್ಯಯನ ನಡೆಸಿದನು. ಇದರಲ್ಲಿ ಸಾಮ್ಯತೆ ಭಂಗವಿರುವುದು ತಿಳಿದು ಬಂದಿತು. ಇಲ್ಲಿಂದ ಮುಂದೆ ಬೈಜಿಕ ಕ್ಷೀಣ ಬಲಗಳ ಅಧ್ಯಯನ ರುಬ್ಬಿಯಾನ ಜೀವನದ ಗುರಿಯಾಯಿತು. 1960ರಲ್ಲಿ ಯುರೋಪಿಗೆ ಹೋದ ರುಬ್ಬಿಯಾ ಸಿ.ಇ.ಅರ್.ಎನ್‍ನಲ್ಲಿ ಕ್ಷೀಣ ಬೈಜಿಕ ಬಲಗಳ ಅಧ್ಯಯನ ಮುಂದುವರೆಸಿ, ಧನಾತ್ಮಕ ಪೈಯಾನ್‍ನ ಬೀಟಾ ಶೈಥಿಲ್ಯ (BETA DECAY) , ಮುಕ್ತ ಜಲಜನಕದಿಂದ ಮ್ಯೂಯಾನ್‍ನ ಸೆರೆಯಂತಹ ವಿದ್ಯಾಮನಗಳನ್ನು ಮೊದಲಿಗೆ ಬೆಳಕಿಗೆ ತಂದನು. 1973ರಲ್ಲಿ ಅಸಂಸಂಗಳ ಫರ್ಮಿ ಪ್ರಯೋಗಾಲಯದಲ್ಲಿ ರುಬ್ಬಿಯಾ ಹಾಗೂ ಸಂಗಡಿಗರು ನ್ಯೂಟ್ರಾನ್ ಅಂತಕ್ರಿಯೆಗಳಲ್ಲಿ ಎಲಾ ಬಗೆಯ ಮ್ಯೂಯಾನ್ ಘಟನೆಗಳನ್ನು ದಾಖಲಿಸಿದರು. ಇದರ ಮುಂದುವರಿಕೆಯಿಂದ ಪೈ/ಜೆ ಕಣಗಳು ವೀಕ್ಷಣೆಗೊಂಡವು. ಇದೇ ವೇಳೆಗೆ ಸಿ..ಇ.ಆರ್.ಎನ್‍ನಲ್ಲಿ ವಿಕ್ ವೀಸ್‍ಕಾಫ್ ಪರಸ್ಪರ ವಿರುದ್ದ ದಿಶೆಯಲ್ಲಿ ತಿರುಗುತ್ತಾ ಒಂದಕ್ಕೊಂದು ಘಟ್ಟಿಸುವ ಪ್ರೋಟಾನ್ ದೂಲಗಳ ವೇಗೋತ್ಕರ್ಷಕವನ್ನು (PROTON BEAM ACCELERATOR) ನಿರ್ಮಿಸಿದರು. ಈ ಸಾಧನ ಬಳಸಿ ನೂರಾರು ಪ್ರಯೋಗ ನಡೆಸಿದ ರುಬ್ಬಿಯಾ ಹಾಗೂ ಇತರರು ಮಧ್ಯಂತರ ಬೋಸಾನ್‍ಗಳನ್ನು ಆವಿಷ್ಕರಿಸಿದರು. ಪ್ರೋಟಾನ್, ಪ್ರತಿಪ್ರೋಟಾನ್‍ಗಳನ್ನು ಘಟ್ಟಿಸಿ, ನಾನಾ ಬಗೆಯ ಹೊಸ ಕಣಗಳ ಅಧ್ಯಯನ ನಡೆಸಿದರು. ಇಂತಹ ಸುಕ್ಲಿಷ್ಟ, ಸಂಕೀರ್ಣ ಪ್ರಯೋಗಗಳಲ್ಲಿ ಜಗತ್ತಿನ ವಿವಿಧ ದೇಶಗಳ ಪರಿಣಿತರು ಪಾಲ್ಗೊಂಡಿದ್ದರು. ಮೂಲ ಕಣಗಳ ಸಂಶೋಧನೆಗಾಗಿ ರುಬ್ಬಿಯಾ ಹಾಗೂ ಸೈಮನ್ ವ್ಯಾನ್ ಡರ್ ಮೀರ್ 1984ರ ನೊಬೆಲ್ ಪ್ರಶಸ್ತಿ ಪಡೆದರು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/8/2020