ವ್ಯಾಲ್, ಲಾಗ್ಸ್‍ಡನ್ ಫಿಚ್ (1923--) ೧೯೮೦ ಅಸಂಸಂ - ಭೌತಶಾಸ್ತ್ರ-ಪರಮಾಣು ಬೀಜದ ತ್ರಿಜ್ಯ ಅಳೆದಾತ-ಕೆ-ಮೆಸಾನ್‍ಗಳ ಅಂತಕ್ರಿಯೆಯಲ್ಲಿ ಸಾಮ್ಯತೆ ಭಂಗವಾಗುವುದನ್ನು ತೋರಿಸಿದಾತ.
ವ್ಯಾಲ್ ನೆಬ್ಬಾಸ್ಕ ಪ್ರಾಂತದ ಹಳ್ಳಿಯೊಂದರಲ್ಲಿ 10 ಮಾರ್ಚ್ 1923ರಂದು ಜನಿಸಿದನು. ವ್ಯಾಲ್ ಜನಿಸಿದ ಹಳ್ಳಿ ತೀರಾ ಹಿಂದುಳಿದ ಪ್ರದೇಶವಾಗಿದ್ದು ಅತಿ ವಿರಳ ಜನ ಸಂಖ್ಯೆಂಯ ಪ್ರದೇಶವಾಗಿದ್ದಿತು. ಈ ಪ್ರದೇಶದಲ್ಲಿ ಸಿಯಾಕ್ಸ್ ಇಂಡಿಯನ್ ಮೂಲ ನಿವಾಸಿಗಳು ನೆಲೆಸಿದ್ದರು. ಕುದುರೆ ಸವಾರಿಯೊಂದರಲ್ಲಿ ಬಿದ್ದು ಬೆನ್ನನ್ನು ಘಾಸಿ ಮಾಡಿಕೊಂಡ ವ್ಯಾಲ್ ತಂದೆ, ತನ್ನ್ನ ತೋಟ ಮಾರಿ ಹತ್ತಿರದ ಗೋರ್ಡಾನ್ ಪಟ್ಟಣಕ್ಕೆ ಹೋಗಿ ನೆಲಸಿ ವಿಮಾ ವ್ಯವಹಾರ ಪ್ರಾರಂಭಿಸಿದನು. ವ್ಯಾನ್‍ನ ಬಾಲ್ಯ ಕುಟುಂಬದ ತೋಟ ಹಾಗೂ ಗೋಶಾಲೆಗಳಲ್ಲಿ ಕಳೆಯಿತು. ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ ವ್ಯಾಲ್ ಸೈನಿಕವಾಗಿ ಆಯ್ಕೆಗೊಂಡು, ಮ್ಯಾನ್‍ಹಟನ್ ಯೋಜನೆ ಸಾಗುತ್ತಿದ್ದ ಲಾಸ್ ಆಲ್ಮೋಸ್‍ಗೆ ನಿಯೋಜಿತನಾದನು. ಎನ್ರಿಕೋಫರ್ಮಿ, ಬೊಹ್ರ್, ಚಾಡ್‍ವಿಕ್, ರಬಿಯಂತಹ ಖ್ಯಾತರು ಇಲ್ಲಿ ಕಾರ್ಯ ಮಗ್ನರಾಗಿರುವುದನ್ನು ವ್ಯಾಲ್ ಕಂಡನು. ಪರಮಾಣು ವಿಜ್ಞಾನಿಗಳ ಜೀವನ ಚರಿತ್ರೆಯ ದಾಖಲಾತಿಯಾದ ಆಲ್ ಇನ್ ಅವರ್ ಟೈಮ್ಸ್ ಸಂಪಾದಿತ ಕೃತಿಯಲ್ಲಿ ವ್ಯಾಲ್ ಲಾಸ್ ಆಲ್ಮೋಸ್‍ನಲ್ಲಿನ ತನ್ನ ಅನುಭವಗಳನ್ನು ಹಂಚಿಕೊಂಡಿದ್ದಾನೆ. ಲಾಸ್ ಅಲ್ಮೋಸ್‍ನಲ್ಲಿರುವಾಗ ವ್ಯಾಲ್ ಪ್ರಯೋಗಶೀಲ ಭೌತಶಾಸ್ತ್ರದ ಮೂಲ ತತ್ತ್ವಗಳನ್ನು ಅರಿತನು. ಸೂಕ್ಷ್ಮಪ್ರಯೋಗಗಳಲ್ಲಿ ನಿಷ್ಕೃಷ್ಟ ಅಳತೆಗಳು ಅತ್ಯಗತ್ಯ. ಇವುಗಳಿಗೆ ಬೇಕಾದ ಮಾಪನ ಉಪಕರಣಗಳ ತಂತ್ರಜ್ಞಾನ, ಮತ್ತು ನಿರ್ಮಾಣದಲ್ಲಿ ವ್ಯಾಲ್ ಪರಿಣಿತಿ ಗಳಿಸಿದನು. ಯುದ್ದ ಮುಗಿದ ನಂತರ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಜಿಮ್ ರೇನ್‍ವಾಟರ್ ಕೈಕೆಳಗೆ ಸಂಶೋಧನೆ ಮುಂದುವರೆಸಿ ವ್ಯಾಲ್ ಡಾಕ್ಟರೇಟ್ ಗಳಿಸಿದನು. ಈ ಅವಧಿಯಲ್ಲಿ ಅಗೆ ಬೋಹ್ರ್, ರೇನ್‍ವಾಟರ್‍ನ್ನು ಕಾಣಲು ಬಂದಿದ್ದನು. ಇವರಿಬ್ಬರ ಸಂಭಾಷಣೆಯ ಮಧ್ಯೆ ವ್ಯಾಲ್ ಮ್ಯೂ-ಮೆಸಿಕ್ ಪರಮಾಣುಗಳನ್ನು ಕುರಿತಾದ ಲೇಖನವೊಂದನ್ನು ಪಡೆದನು. ಇದೇ ಸಮಯಕ್ಕೆ ಕೊಲಂಬಿಯಾದಲ್ಲಿ ನೆವಿಸ್ ಸೈಕ್ಲೋಟ್ರಾನ್ ನಿರ್ಮಾಣಗೊಂಡು, ಅದರಲ್ಲಿ ಪ್ರಯೋಗಗಳು ಪ್ರಾರಂಭಗೊಂಡಿದ್ದವು. ಸೈಕ್ಲೋಟ್ರಾನ್‍ನಲ್ಲಿ ದಕ್ಕಿದ ಪೈ-ಮೆಸಾನ್ ದೂಲಗಳಲ್ಲಿ ಕೆಲವು ಶೈಥಿಲ್ಯ (DECAY) ಹೊಂದಿ ಮ್ಯೂ-ಮೆಸಾನ್‍ಗಳು ದಕ್ಕಿದ್ದವು. ಮ್ಯೂ-ಮೆಸಾನ್‍ಗಳನ್ನು ಸೋಡಿಯಂ ಅಯೋಡೈಡ್‍ನ್ನು ಥ್ಯಾಲಿಯಯೊಂದಿಗೆ ಪಟೂಕರಣಗೊಳಿಸಿ (ACTIVATION) ಪ್ರತ್ಯೇಕಿಸುವುದು ಸಾಧ್ಯವೆಂದು ಹಾಫ್ಸ್ಟ್ಯಾಡ್‍ಟರ್ ತೋರಿಸಿದ್ದನು. ಇದನ್ನು ಅತ್ಯುತ್ತಮ ಮಿನುಗುಕಾರಕದಂತೆಯೂ (SCINTILLATOR) ಗಾಮಾ ಕಿರಣಗಳ ಚೈತನ್ಯದ ರೋಹಿತದರ್ಶಕದಂತೆಯೂ (SPECTROSCOPE) ಬಳಸಬಹುದಾಗಿದ್ದಿತು. ಇವೆಲ್ಲ ತಂತ್ರಗಳನ್ನು ಬಳಸಿ ವ್ಯಾಲ್ ಪರಮಾಣು ಬೀಜದ ತ್ರಿಜ್ಯವನ್ನು ಅಳೆಯುವಲ್ಲಿ ಯಶಸ್ಸನ್ನು ಕಂಡನು. ಇದರ ಮುಂದುವರಿಕೆಯಾಗಿ ಮ್ಯೂ-ಮೆಸಾನ್ ದ್ರವ್ಯ ನಿರ್ಧಾರವೂ ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ವ್ಯಾಲ್ ಕೆ-ಮೆಸಾನ್‍ಗಳ ಅಧ್ಯಯನದಲ್ಲಿ ನಿರತನಾದನು. ಇವುಗಳು ಅಂತಕ್ರಿಯೆಗೊಳಗಾದಾಗ ಸಾಮ್ಯತೆ (PಚಿಡಿIಣಥಿ) ಭಂಗವಾಗುವುದು ತಿಳಿದು ಬಂದಿತು. ಇದಕ್ಕಾಗಿ ವ್ಯಾಲ್ 1980ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/24/2019