ಗ್ಯಾಬೊರ್, ಡೆನ್ನಿಸ್ (1900-1979) ೧೯೭೧ ಹಂಗರಿ-ಬ್ರಿಟನ್-ಭೌತಶಾಸ್ತ್ರ- ಪೂರ್ಣಬಿಂಬ ಗ್ರಹಣ ತಂತ್ರ (HALOGRAPHY) ಉಪಜ್ಞೆಕಾರ.
ಗ್ಯಾಬೋರ್‍ನ ತಂದೆ ವ್ಯಾಪಾರಗಾರನಾಗಿದ್ದನು. ಗ್ಯಾಬೋರ್ ಬುಡಾಪೆಸ್ಟ್ ಮತ್ತು ಬರ್ಲಿನ್‍ನಲ್ಲಿ ವೈದ್ಯುತ್ ಇಂಜಿನಿಯರಿಂಗ್ ಓದಿದನು. ಸೀಮನ್ಸ್ ಮತ್ತು ಹಾಲ್ಸ್ಕೆ ಕಂಪನಿಯಲ್ಲಿ ಸಂಶೋಧಕನಾಗಿ ಕೆಲಸಕ್ಕೆ ಸೇರಿದನು. ನಾಝಿಗಳ ಜನಾಂಗೀಯ ಭೇದ ದೃಷ್ಟಿಗೆ ತುತ್ತಾದ ಗ್ಯಾಬೋರ್, ಜರ್ಮನಿ ತೊರೆದು ಬ್ರಿಟನ್‍ಗೆ ಹೋಗಿ ನೆಲೆಸಿ , ಮೊದಲಿಗೆ ಥಾಮ್ಸನ್ ಹಾಸ್ಟನ್ ಕಂಪನಿ ಸೇರಿದನು. 1948ರಲ್ಲಿ ಲಂಡನ್‍ನ ಇಂಪೀರಿಯಲ್ ಕಾಲೇಜಿನಲ್ಲಿ ವೃತ್ತಿ ಮುಂದುವರೆಸಿದನು. 1947-48ರಲ್ಲಿ ಗ್ಯಾಬೋರ್‍ಗೆ ಎಲೆಕ್ಟ್ರಾನ್ ಸೂಕ್ಷ್ಮದರ್ಶಕದಲ್ಲಿ ಉತ್ತವI ಚಿತ್ರ ಪಡೆಯಲು, ಬೆಳಕಿನ ಅಲೆಯು ತೀವ್ರತೆ (INTENSITY)ಮತ್ತು ಪ್ರಾವಸ್ಥ ಸ್ಥಿತಿಯನ್ನು (PHASED CONDITION) ಏಕೆ ಬಳಸಬಾರದೆಂಬ ಚಿಂತನೆ ಮೂಡಿತು. ಇದಕ್ಕಾಗಿ ಬೆಳಕನ್ನು ಸಂಲಗ್ನಗೊಳಿಸುವ (COHERENCE) ಸಾಧ್ಯತೆಗೆ ಯತ್ನಿಸಿದನು. ಸಾಧಾರಣ ಬೆಳಕಿನಲ್ಲಿ ಪ್ರತಿಯೊಂದು ಅಲೆಯೂ ತನ್ನದೇ ಆದ ಅವಸ್ಥೆಯಲ್ಲಿದ್ದರೆ, ಸಂಲಗ್ನಗೊಳಿಸಿದ ಬೆಳಕಿನಲ್ಲಿ ಎಲ್ಲಾ ಅಲೆಗಳು ಒಂದೇ ಸ್ಥಿತಿ ಹಾಗೂ ಪ್ರಾವಸ್ಥೆಯಲ್ಲಿರುತ್ತವೆ. ಇದರಿಂದ ಘನದಲ್ಲಿರುವ ಅಣುಗಳನ್ನು ಅತ್ಯಧಿಕವಾಗಿ ವಿಯೋಜಿಸಿ (RESOLUTION) 3-ಆಯಾಮಗಳಲ್ಲಿ ಸ್ಫುಟವಾದ ಚಿತ್ರಗಳನ್ನು ಎಲೆಕ್ಟ್ರಾನ್ ಸೂಕ್ಷ್ಮದರ್ಶಕದಲ್ಲಿ ನೋಡುವುದು ಸಾಧ್ಯವಾಯಿತು. ಸಂಲಗ್ನಗೊಂಡ ಬೆಳಕಿಗೆ, ಫಲಕವೊಂದನ್ನು ಒಡ್ಡಿದಾಗ, ಅಲೆಗಳ ವ್ಯತಿಕರಣದಿಂದಾಗಿ (INTERFERENCE)ಮೂರು ಆಯಾಮದ ಚಿತ್ರಗಳು ಮೂಡಿ ಹಾಲೊಗ್ರಫಿ (HALOGRAPHY) ತಂತ್ರಜ್ಞಾನದ ಉದಯಕ್ಕೆ ನಾಂದಿ ಹಾಡಿತು. ಬೆಳಕಿನ ಕಿರಣಗಳನ್ನು ಸಂಲಗ್ನಗೊಳಿಸುವ ಗ್ಯಾಬೋರ್‍ನ ಪರಿಕಲ್ಪನೆಯ ಹಿನ್ನೆಲೆಯಲ್ಲಿ 1960ರಲ್ಲಿ ಲೇಸರ್ (LASER) ಉಪಜ್ಞೆಯಾಯಿತು. ಇ.ಲೀಥ್, ಜೆ.ಉಪಟ್ನೀಕ್ಸ್, ಗ್ಯಾಬೋರ್‍ನ ತಂತ್ರವನ್ನು ಪರಿಷ್ಕರಿಸಿ ಉತ್ತಮಗೊಳಿಸಿದರು. ಗ್ಯಾಬೋರ್ 1971ರ ಭೌತಶಾಸ್ತ್ರದಲ್ಲಿನ ನೊಬೆಲ್ ಪ್ರಶಸ್ತಿಯಿಂದ ಸನ್ಮಾನಿತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 10/6/2019