ಕ್ಯಾಪಿಟ್ಸ, ಪಿಯಾಟ್ರ್ ಲಿಯೋಡೋವಿಚ್ (1894-1984) ೧೯೭೮ ರಷ್ಯಾ-ಭೌತಶಾಸ್ತ್ರ- ಅಧಿಕ ಕಾಂತ ಕ್ಷೇತ್ರ , ನಿಮ್ನ ತಾಪಮಾನಗಳ ಬಗೆಗೆ ಪ್ರಯೋಗ ನಡೆಸಿದಾತ.
ಕ್ಯಾಪಿಟ್ಸ್‍ನ ತಂದೆ ಹಾಗೂ ತಾತ ಇಬ್ಬರೂ ಇಂಜಿನಿಯರ್ ಆಗಿದ್ದರು. ಈಗ ಸೇಂಟ್ ಪೀಟರ್ಸ್‍ಬರ್ಗ್ ಎಂದು ಕರೆಯಲಾಗುವ ಆಗಿನ ಪೆಟ್ರೊಗ್ರಾಡ್ ಪಾಲಿಟೆಕ್ನಿಕ್‍ನಲ್ಲಿ ಕ್ಯಾಪಿಟ್ಸ ಇಂಜಿನಿಯರಿಂಗ ಪದವಿಗಳಿಸಿದನು. ಇಲ್ಲಿ ಮೂರು ವರ್ಷಗಳ ಕಾಲ ಉಪನ್ಯಾಸಕನಾಗಿದ್ದನು. 1919ರಲ್ಲಿ ಜರುಗಿದ ಕ್ರಾಂತಿ , ಆವರಿಸಿದ ಬರಗಾಲದಿಂದಾಗಿ ಕ್ಯಾಪಿಟ್ಸನ ಮಡದಿ ಮತ್ತು ಇಬ್ಬರು ಮಕ್ಕಳು ಅಸು ನೀಗಿದರು. ಇದರಿಂದ ಜುಗುಪ್ಸೆ ಹೊಂದಿದ ಕ್ಯಾಪಿಟ್ಸ , 1921ರಲ್ಲಿ ಇಂಗ್ಲೆಂಡ್‍ಗೆ ಹೋಗಿ ರುದರ್’ಫೋರ್ಡ್ ಸ್ಥಾಪಿಸಿದ್ದ ಕೇಂಬ್ರಿಜ್ ಲ್ಯಾಬೋರೇಟರಿಯಲ್ಲಿ ನೌಕರಿ ಗಿಟ್ಟಿಸಿದನು. ಕ್ಯಾಪಿಟ್ಸ್ ಹಾಗೂ ರುದರ್’ಫೋರ್ಡ್ ಇಬ್ಬರೂ ಪ್ರಯೋಗ ಪರಿಣಿತರಾಗಿದ್ದು ಪರಸ್ಪರ ಪ್ರಶಂಸಕರಾಗಿದ್ದರು, ಇಲ್ಲಿಯೆೀ ಕ್ಯಾಪಿಟ್ಸ ಡಾಕ್ಟರೇಟ್ ಪೂರ್ಣಗೊಳಿಸಿದನು. ಅಧಿಕ ಕಾಂತ ಕ್ಷೇತ್ರಗಳನ್ನು ಪಡೆಯುವ ಬಗ್ಗೆ ಕ್ಯಾಪಿಟ್ಸ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದನು. 0.01 ಸೆಕೆಂಡಿಗೂ ಅಲ್ಪಾವಧಿಗೆ, 10000 ಆ್ಯಂಪಿರೀಗೂ ಮೀರಿದ ವಿದ್ಯುತ್ ಪ್ರವಾಹ ಹರಿಸಿ, 1924ರ ವೇಳೆಗೆ ಕ್ಯಾಪಿಟ್ಸ ಅತ್ಯಧಿಕ ಕಾಂತತ್ವ ಗಳಿಸುವಲ್ಲಿ ಯಶಸ್ವಿಯಾದನು. ಲೋಹಗಳು ಅಧಿಕ ಕಾಂತಕ್ಷೇತ್ರದಲ್ಲಿರುವಾಗಲೂ, ಅಲ್ಪ ತಾಪಮಾನವಿರುವಾಗಲೂ, ವೈದ್ಯುತ್ ರೋಧತ್ವವನ್ನು ಹೆಚ್ಚಿಸಿಕೊಳ್ಳುತ್ತವೆ. ಈ ಪ್ರಭಾವ ಬಳಸಿಕೊಂಡು, ಹೀಲಿಯಂ ದ್ರವೀಕರಣಕ್ಕೆ ಕ್ಯಾಪಿಟ್ಸ, ಮುಂದಾದನು. ಇದಕ್ಕಾಗಿ ಅವನಿಗೆ ಹೊಸ ಪ್ರಯೋಗಾಲಯ 1933ರಲ್ಲಿ ನಿರ್ಮಿಸಿಕೊಡಲಾಯಿತು. 1934ರಲ್ಲಿ ಹೀಲಿಯಂ ದ್ರವ, ತಾಮ್ರಕ್ಕಿಂತಲೂ ಉತ್ತಮ ವಾಹಕವಾಗಿರುವುದೆಂದು ಕ್ಯಾಪಿಟ್ಸ ತೋರಿಸಿದನು. ಹೀಲಿಯಂ 2.2ಕೆಲ್ವಿನ್ ತಾಪಮಾನದಲ್ಲಿ ಎಲ್ಲಾ ಬಗೆಯ ಸ್ನಿಗ್ದತೆಯನ್ನು (VISCOSITY) ಕಳೆದುಕೊಳ್ಳುತ್ತದೆ. ಕ್ಯಾಪಿಟ್ಸನ ಸ್ನೇಹಿತನಾಗಿದ್ದ ಲಂಡಾವ್ ಇದಕ್ಕೆ ಮುಂದೆ ಸೈದ್ಧಾಂತಿಕ ಕಾರಣಗಳನ್ನು ನೀಡಿದನು. 1934ರಲಿ ಕ್ಯಾಪಿಟ್ಸ, ತನ್ನ ಅನಾರೋಗ್ಯ ಪೀಡಿತ ತಾಯಿಯನ್ನು ನೋಡಲು ರಷ್ಯಾಕ್ಕೆ ತೆರಳಿದನು. ಅವನು ಯುರೋಪಿಗೆ ಮರಳಲು ರಷ್ಯಾ ಸರ್ಕಾರ ಅನುಮತಿ ನೀಡಲಿಲ್ಲ. ಇದನ್ನು ಯುರೋಪಿನ ಸಂಘ, ಸಂಸ್ಥೆಗಳು ತೀವ್ರವಾಗಿ ಪ್ರತಿಭಟಿಸಿದವು. ಆದರೆ ಕ್ಯಾಪಿಟ್ಸ ಪ್ರಾವ್ಡ್ ಪತ್ರಿಕೆಯ ವರದಿ ಓದಿ ವಿಸ್ಮಯಗೊಂಡನು. ಅದರಲ್ಲಿ ಮಾಸ್ಕೋದ ಬಳಿ ಹೊಸದಾಗಿ ನಿರ್ಮಾಣಗೊಂಡಿದ್ದ ಭೌತಿಕ ಸಮಸ್ಯೆಗಳ ಪರಿಹಾರ ಸಂಸ್ಥೆಯ ನಿರ್ದೇಶಕನಾಗಿ ಕ್ಯಾಪಿಟ್ಸನನ್ನು ನೇಮಿಸಲಾಗಿದ್ದಿತು. ಕೇಂಬ್ರಿಜ್‍ನಿಂದ ಕ್ಯಾಪಿಟ್ಸ ಬಳಸುತ್ತಿದ್ದ ವ್ಶೆಜ್ಞಾನಿಕ ಉಪಕರಣಗಳನ್ನು ಮಾಸ್ಕೋಗೆ ತರಿಸಲಾಯಿತು. ಕ್ಯಾಪಿಟ್ಸನ ಸ್ನೇಹಿತ ಲಂಡಾವ್‍ನನ್ನು ದೇಶದ್ರೋಹದ ಅಪರಾಧದಮೇಲೆ ಬಂಧಿಸಲಾಯಿತು. ಕ್ಯಾಪಿಟ್ಸ ಇದಕ್ಕೆ ಉಗ್ರ ಪ್ರತಿಭಟನೆ ತೋರಿದನು,. ನಾನಾ ಬಗೆಯ ಬೇರೆ ಕಾರಣಗಳಿಂದ ಲಂಡಾವ್ ಗಲ್ಲಿನ ಶಿಕ್ಷೆಗೊಳಗಾಗಿ ಪಾರಾದನು. ನಂತರ ಅದರಿಂದ 1939ರಿಂದ ಕ್ಯಾಪಿಟ್ಸ ದ್ರವೀಕೃತ ಗಾಳಿ, ಆಮ್ಲಜನಕದ ಬಗೆಗೆ ಸಂಶೋಧಿಸಿ, ರಷ್ಯಾದ ಉಕ್ಕಿನ ತಯಾರಿಕೆಯ ಹೆಚ್ಚಳಕ್ಕೆ ನೆರವಾದನು. 1946ರಲ್ಲಿ ಕ್ಯಾಪಿಟ್ಸ, ಗುಪ್ತಚಾರ ವಿಭಾಗದ ಮುಖ್ಯಸ್ಥನಾಗಿದ್ದ ಬೆರಿಯರ್‍ನ ಅಸಾಮರ್ಥ್ಯವನ್ನು ಉಲ್ಲೇಖಿಸಿ ಸ್ಟ್ಯಾಲಿನ್‍ಗೆ ಪತ್ರ ಬರೆದನು. ಇದರಿಂದಾಗಿ ಕ್ಯಾಪಿಟ್ಸ ಗೃಹ ಬಂಧನಕ್ಕೊಳಗಾಗಿ , ಅಲ್ಲಿಯೆೀ ತನ್ನ ಸಂಶೋಧನೆ ಮುಂದುವರೆಸಿದನು. ಇದಾದ ಎಂಟು ವರ್ಷಗಳ ನಂತರ ಸ್ಟ್ಯಾಲಿನ್ ಮರಣ ಹೊಂದಿದನು. ಬೆರಿಯರ್‍ಗೆ ಮರಣ ದಂಡನೆ ವಿಧಿಸಲಾಯಿತು. ಆಗ ಕ್ಯಾಪಿಟ್ಸ ಗೃಹ ಬಂಧನದಿಂದ ಬಿಡುಗಡೆಗೊಂಡು , ರಾಯಲ್ ಸೊಸೈಟಿಯ ಫೆಲೋ ಆಗಿ ನೇಮಕಗೊಂಡನು. 1978ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/24/2019