ವಿಗ್ನೆರ್, ಯುಜೆನ್ ಪೌಲ್ (1902-1995) ೧೯೬೩
ಹಂಗರಿ-ಅಸಂಸಂ-ಭೌತಶಾಸ್ತ್ರ- ಕ್ವಾಂಟಂ ಬಲವಿಜ್ಞಾದಲ್ಲಿ ಸಮೂಹ ಸಿದ್ಧಾಂತದ ಬಳಕೆ ತಂದಾತ. ಬೈಜಿಕ ಪ್ರತಿಕ್ರಿಯೆಗಳಲ್ಲಿ ಸಾಮ್ಯತೆಯ ಸಂರಕ್ಷಣೆ ಅನಾವರಣಗೊಳಿಸಿದಾತ.
ವಿಗ್ನೆರ್, ವ್ಯಾಪಾರಿಯ ಮಗನಾಗಿದ್ದನು. 1925ರಲ್ಲಿ ಬರ್ಲಿನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಇಂಜಿನಿಯರಿಂಗ್‍ನಲ್ಲಿ ಡಾಕ್ಟರೇಟ್ ಪಡೆದನು. 1930ರಲ್ಲಿ ಪ್ರಿನ್ಸ್‍ಟನ್‍ಗೆ ಹೋದ ವಿಗ್ನೆರ್ , 1938ರಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕನಾಗಿ 1971ರಲ್ಲಿ ನಿವೃತ್ತಿಯಾಗುವವರೆಗೂ ಅಲ್ಲಿದ್ದನು. ವಿಗ್ನೆರ್ ಡಿರಾಕ್‍ನ ಭಾವ ಮೈದುನನಾಗಿದ್ದನು. ವಿಗ್ನೆರ್, ಕ್ವಾಂಟಂ ಸಿದ್ಧಾಂತ ಹಾಗೂ ಬೈಜಿಕ ಭೌತಶಾಸ್ತ್ರದಲ್ಲಿ ಮಹತ್ತರ ಕೊಡುಗೆ ನೀಡಿದನು. ಭೌತಶಾಸ್ತ್ರದಲ್ಲಿ ಸಮಾಂಗೀಯತೆ ತತ್ತ್ವಗಳಿಗೆ ಸಮೂಹ ಸಿದ್ಧಾಂತ ಬಳಸಿದನು. 1927ರಲ್ಲಿ ವಿಗ್ನೆರ್ ಬೈಜಿಕ ಪ್ರತಿಕ್ರಿಯೆಗಳಲ್ಲಿ ಸಾಮ್ಯತೆಯ ಸಂರಕ್ಷಣೆಯಾಗುವುದೆಂದು ತೋರಿಸಿದನು. ಇದರ ಅರ್ಥವೆಂದರೆ ಭೌತಶಾಸ್ತ್ರದಲ್ಲಿ ಎಡ-ಬಲ, ಋಣ- ಧನ ಎನ್ನುವ ವೈವಿಧ್ಯತೆಗಳು ಭೌತಿಕ ಕ್ರಿಯೆಗಳ ಮೇಲೆ ಯಾವುದೇ ಪ್ರಭಾವ ಬೀರಲಾರವು. ಅದರೆ 1958ರಲ್ಲಿ ಲೀ ಹಾಗೂ ಟಿಂಗ್ ಸಾಮ್ಯತೆಗೆ ಬಹು ಅಪರೂಪದ ಅಪವಾದಗಳನ್ನು ಗುರುತಿಸಿದರು. ಬೀಟಾ ಶೈಥಿಲ್ಯಗೊಂಡು (Decay) ಬೀಜದಿಂದ ಎಲೆಕ್ಟ್ರಾನ್ ಹೊಮ್ಮಿದಾಗ ಕ್ರಿಯಾಸಾಮ್ಯತೆ ನಷ್ಟವಾಗುವುದೆಂದು ತೋರಿಸಿದರು. 1930ರ ಅವಧಿಯಲ್ಲಿ ವಿಗ್ನೆರ್ ನ್ಯೂಟ್ರಾನ್‍ಗಳ ಬಗೆಗೆ ಸಂಶೋಧಿಸಿ, ನ್ಯೂಟ್ರಾನ್ ಹಾಗೂ ಪ್ರೋಟಾನ್‍ಗಳನ್ನು ಬಂಧಿಸಿರುವ ಪ್ರಬಲ ಬಲದ ಸ್ವರೂಪ ಅರಿಯಲು ಯತ್ನಿಸಿದನು. ಪ್ರಬಲ ಬಲ 10-15 ಮೀ ದೂರಕ್ಕೆ ಮಾತ್ರ ಸೀಮಿತವಾಗಿದ್ದು ಯಾವುದೇ ವೈದ್ಯುತ್ ಆವಿಷ್ಟವನ್ನು ಹೊಂದಿರುವುದಿಲ್ಲವೆಂದು ತೋರಿಸಿದನು. ಚಲಿಸುತ್ತಿರುವ ನ್ಯೂಟ್ರಾನ್ ನಿಶ್ಚಲ ಬೀಜದೊಂದಿಗೆ ಹೇಗೆ ಅಂತರ್‍ಕ್ರಿಯೆ ಹೊಂದಿರುವುದೆಂದು ಬ್ರೆಯಿಟ್ ವಿವರಿಸಿದನು. 1942ರಲ್ಲಿ ವಿಗ್ನೆರ್, ಸುಸ್ಥಿರ ಬೈಜಿಕ ಕ್ರಿಯಾ ಸರಣಿ ಸಾಧಿಸುವ ಮೊದಲ ಸ್ಥಾವರ ನಿರ್ಮಿಸುವಲ್ಲಿಫರ್ಮಿಗೆ ನೆರವಾದನು. ವಿಗ್ನೆರ್, 1963ರಲ್ಲಿ ಹ್ಯಾನ್ಸ್ ಜೆನ್ಸನ್ ಮತ್ತು ಮಾರಿಯಾ ಗೊಪೆರ್ಟ್ ಮೇಯರ್‍ರೊಂದಿಗೆ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 5/27/2020