ಮೋಸ್‍ಬೌವರ್, ರುಡಾಲ್ಫ್ ಲುಡ್‍ವಿಗ್ (1929--) ೧೯೬೧
ಜರ್ಮನಿ-ಭೌತಶಾಸ್ತ್ರ- ಮೋಸ್‍ಬೌವರ್ ಪರಿಣಾಮ ಅನಾವರಣಗೊಳಿಸಿ ಅದನ್ನು ಸಾಪೇಕ್ಷ ಸಿದ್ಧಾಂತದ ಪರಿಶೀಲನೆಗೆ ಬಳಸಿದಾತ.
1955ರಲ್ಲಿ ಹೈಡೆಲ್‍ಬರ್ಗ್‍ನ ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್ ಅಫ್ಮೆಡಿಕಲ್ ರಿಸರ್ಚ್‍ನಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾಗ ಮೋಸ್‍ಬೌವರ್ ಈಗ ಆತನ ಹೆಸರಿನಲ್ಲಿ ಕರೆಯಲಾಗುತ್ತಿರುವ ಪರಿಣಾಮವನ್ನು ಅನಾವರಣಗೊಳಿಸಿದನು. ಯಾವುದೇ ಪರಮಾಣುವಿನ ಬೀಜದಿಂದ ಉತ್ಸರ್ಜಿತವಾದ (Emitted) ಗಾಮಾ ಕಿರಣಗಳ ಚೈತನ್ಯ ಸ್ವಲ್ಪ ಚದುರಿರುತ್ತದೆ. ಹೈಸೆನ್‍ಬರ್ಗ್‍ನ ಅನಿಶ್ಚಿತತೆಯ ಸಿದ್ಧಾಂತದಂತೆ ಯಾವುದೇ ಕಣದ ಚೈತನ್ಯವನ್ನು ಖಚಿತವಾಗಿ ನಿರ್ಧರಿಸಲು ಸಾಧ್ಯವಿಲ್ಲ ಎನ್ನುವುದು ಇದರ ಮೊದಲ ಕಾರಣ .ಇದರೊಂದಿಗೆ ಎಲ್ಲಾ ಪರಮಾಣುಗಳು ಶಾಖದಿಂದ ಕಂಪನ ಸ್ಥಿತಿಯಲ್ಲಿರುತ್ತವೆ. ಹೀಗಾಗಿ ಗಾಮಾ ಕಿರಣಗಳನ್ನು ಉತ್ಸರ್ಜಿಸುವ ಪರಮಾಣು ಬೀಜ ಮತ್ತು ಅದನ್ನು ಹೀರಿಕೊಳ್ಳುವ ಸಾಧನದ ಮಧ್ಯೆ ಅನಿರ್ದಿಷ್ಟ ಹಾಗೂ ವ್ಯತ್ಯಸ್ತ ಚಲನೆಯಿರುತ್ತದೆ. ಇದರಿಂದಲೂ ಗಾಮಾ ಕಿರಣಗಳು ಚದುರುತ್ತವೆ. ಇದು ಡಾಪ್ಲರ್ ಚದುರಿಕೆ. ಈ ಚದುರಿಕೆಯ ನಿವಾರಣೆ ಸಾಧ್ಯ. ಇದಕ್ಕಾಗಿ ಮೋಸ್‍ಬೌವರ್ ಗಾಮಾಕಿರಣದ ಆಕರ ಮತ್ತುಅದನ್ನು ಹೀರಿಕೊಳ್ಳುವ ಸಾಧನವನ್ನು ಶೀತಲೀಕರಿಸಿ, ಚದುರಿಕೆಯನ್ನು ಕನಿಷ್ಟಗೊಳಿಸಲು ಯತ್ನಿಸಿದನು. ಆದರೆ ಪ್ರಯೋಗಗಳಿಂದ ಇದಕ್ಕೆ ತದ್ವಿರುದ್ದವಾದ ಫಲಿತಾಂಶಗಳು ದಕ್ಕಿ, ಮೊದಲಿಗಿಂತಲೂ ಶೀತಲೀಕರಿಸಿದ ಸ್ಥಿತಿಯಲ್ಲಿನ ಚದುರಿಕೆ ಹೆಚ್ಚಾಗಿದ್ದಿತು. ಇದೇ ಮೋಸ್‍ಬೌವರ್ ಪರಿಣಾಮ. 42 ಧಾತುಗಳ 72 ಸಮಸ್ಥಾನಿಗಳ ,88 ಗಾಮಾ ಉತ್ಸರ್ಜನೆಯಲ್ಲಿ ಈ ಪರಿಣಾಮವನ್ನು ಗುರುತಿಸಲಾಗಿದೆ. ಈ ಆಧಾರದ ಮೇಲೆ ಪರಮಾಣುವಿನ ಸುತ್ತಲಿರುವ ವಿಭಿನ್ನ ಎಲೆಕ್ಟ್ರಾನಿಕ್ ಪರಿಸರಗಳನ್ನು ಮೋಸ್‍ಬೌವರ್ ರೋಹಿತದಿಂದ ನಿರ್ಧರಿಸಬಹುದು. Fe304 ಕಬ್ಬಿಣದ ಅದಿರಿನಲ್ಲಿ Fe2 ಹಾಗೂ Fe3 ಬೀಜಗಳನ್ನು ಪ್ರತ್ಯೇಕವಾಗಿ ಗುರುತಿಸುವುದೂ ಮೋಸ್‍ಬೌವರ್ ಪರಿಣಾಮದಿಂದ ಸಾಧ್ಯ. ಗಾಮಾ ಕಿರಣಗಳು ಒಂದು ಗುರುತ್ವ ವಿಭವದಿಂದ (Potential) ಮತ್ತೊಂದು ಗುರುತ್ವ ವಿಭವಕ್ಕೆ ಸಾಗುವಾಗ ಅವುಗಳ ತರಂಗಾಂತರ ಬದಲಾಗುತ್ತದೆ. ಇದನ್ನು ಅಳೆದು ಐನ್‍ಸ್ಟೀನ್‍ನ ಸಾಪೇಕ್ಷತಾ ಸಿದ್ಧಾಂತ ಪರಿಶೀಲಿಸಲಾಗಿದೆ. ಮೋಸ್‍ಬೌವೆರ್ 1961ರ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/24/2020