ಫೆಯ್ನ್’ಮನ್, ರಿಚರ್ಡ್ ಫಿಲಿಪ್ಸ್ (1918-1988 ) ೧೯೬೫
ಅಸಂಸಂ-ಸೈದ್ಧಾಂತಿಕ ಭೌತಶಾಸ್ತ್ರ-ಕಣ ಭೌತಶಾಸ್ತ್ರದ ಗಣಿತೀಯ ಸಿದ್ಧಾಂತ ಅಭಿವೃದ್ದಿಗೊಳಿಸಿದಾತ.
ಫೆಯ್ನ್‍ಮನ್‍ನ ತಂದೆ ಸಮವಸ್ತ್ರ ತಯಾರಕನಾಗಿದ್ದನಲ್ಲದೆ, ಬಾಲಕನ ವೈಜ್ಞಾನಿಕ ಆಸಕ್ತಿ, ವೀಕ್ಷಣೆಗಳಿಗೆ ಬೆಂಬಲವಿತ್ತನು. ಮೆಸಾಚುಸೆಟ್ಸ್ ಮತ್ತು ಪ್ರಿನ್ಸ್’ಟನ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದ ಫೆಯ್ನಮನ್ ಮೊದಲ ಅಣ್ವಸ್ತ್ರ ತಯಾರಿಕೆ ಯೋಜನೆ ಮ್ಯಾನ್‍ಹಟನ್ ಪ್ರಾಜೆಕ್ಟ್‍ನಲ್ಲಿ ದುಡಿದನು. ಇದಾದ ನಂತರ ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬೋಧಕ ಸಿಬ್ಬಂದಿಯಾದನು. 1940ರಲ್ಲಿ ಫೆಯ್ನ್‍ಮನ್ ಕ್ವಾಂಟಂ ಸಿದ್ಧಾಂತದ ನೆರಳಿನಡಿಯಲ್ಲಿಯೇ ವೈದ್ಯುತ್ ಕಾಂತೀಯ ಅಂತ:ಕ್ರಿಯೆಗಳನ್ನು ವಿವರಿಸುವ ಗಣಿತೀಯ ತಂತ್ರಗಳನ್ನು ನೀಡಿದನು. ಇದು ಕ್ವಾಂಟಂ ವೈದ್ಯುತ್-ಗತಿಶಾಸ್ತ್ರಕ್ಕೆ Quantun Electrodynamics)ಅಪಾರ ವೈಶ್ಲೇಷಿಕ ಸಾಮರ್ಥ್ಯ ನೀಡಿತು. ಇದು ಪ್ರಯೋಗದ ಫಲಿತಾಂಶ ಮತ್ತು ಸೈದ್ಧಾಂತಿಕ ಲೆಕ್ಕಾಚಾರಗಳನ್ನು ಪರಸ್ಪರ ಹತ್ತಿರ ತಂದಿತು. ಪರಮಾಣುಗಳ ಕಣಗಳ ಮಧ್ಯದ ಅಂತಕ್ರಿಯೆಯನ್ನು ಅರಿಯುವ , ವಿವರಿಸುವ ವಿಶಿಷ್ಟ ಗಣಿತ ಮತ್ತು ನಕ್ಷೆಗಳನ್ನು ಫೆಯ್ನ್’ಮನ್ ಪರಿಚಯಿಸಿದನು. ಕ್ವಾಂಟಂ ವೈದ್ಯುತ್ ಗತಿಶಾಸ್ತ್ರಕ್ಕೆ ನೀಡಿದ ಕೊಡುಗೆಗಾಗಿ ಫೆಯ್ನ್’ಮನ್ 1965ರ ನೊಬೆಲ್ ಪ್ರಶಸ್ತಿ ಪಡೆದನು. ಫೆಯ್ನ್’ಮನ್ ವಿದ್ಯಾರ್ಥಿಗಳಲ್ಲಿ ಬಹು ಪ್ರಿಯನಾಗಿದ್ದನು. ಅವನ ಆಕರ್ಷಕ ಉಪನ್ಯಾಸಗಳು ನಗೆ ಚಟಾಕಿಗಳು, ವೈವಿಧ್ಯಮಯ ಶೈಕ್ಷಣೇತರ ಚಟುವಟಿಕೆಗಳು ಅವನನ್ನು ಇತರ ವಿಜ್ಞಾನಿಗಳಿಗಿಂತ ಬೇರೆಯಾಗಿ ಕಾಣುವಂತೆ ಮಾಡಿದ್ದವು. ತಮಟೆ ಬಾರಿಸುವುದು, ಮಾಯಾ ನಾಗರಿಕತೆಯ ಲಿಪಿಗಳ ಅಧ್ಯಯನ , ಜೀವಶಾಸ್ತ್ರದಲ್ಲಿ ಪ್ರಯೋಗ , ಗಣಕಗಳ ಬಳಕೆ ಫೆಯ್ನ್’ಮನ್ ನೆಚ್ಚಿನ ಹವ್ಯಾಸಗಳಾಗಿದ್ದವು. ಪಸಾಡೆನಾದಲ್ಲಿನ , ಮೇಲುಡೆಗೆಯಿಲ್ಲದ ತರುಣಿಯರನ್ನು ನೇಮಿಸಿಕೊಂಡಿದ್ದ ಹೋಟೆಲ್ ಮುಚ್ಚುವಂತೆ ಸ್ಥಳೀಯ ಆಡಳಿತ ಸೂಚನೆ ನೀಡಿದಾಗ , ಅದರ ಪರವಾಗಿ ತಡೆಯಾಜ್ಞೆ ತರಲು ಫೆಯ್ನ್’ಮನ್ ಯತ್ನಿಸಿದ್ದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 10/16/2019