ಟೊಮೊನಾಗ, ಸಿನ್-ಇಟಿರೋ (1906-1979) ೧೯೬೫
ಜಪಾನ್-ಸೈದ್ಧಾಂತಿಕ ಭೌತಶಾಸ್ತ್ರ- ಕ್ವಾಂಟಂ ವೈದ್ಯುತ್ ಗತಿಶಾಸ್ತ್ರದ ಸ್ಥಾಪಕ.
ಟೊಮೊನಾಗ, ಕ್ಯೋಟೋ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಪದವಿ ಗಳಿಸಿ, ಲೀಪ್‍ಜಿಗ್‍ನಲ್ಲಿ ಹೈಸೆನ್‍ಬರ್ಗ್ ಜೊತೆ ಉನ್ನತ ವಿದ್ಯಾಭ್ಯಾಸ ಮಾಡಿ, 1941ರಲ್ಲಿ ಟೋಕಿಯೋದಲ್ಲಿ ಪ್ರಾಧ್ಯಾಪಕನಾದನು. 1956ರಲ್ಲಿ ಟೊಕಿಯೋ ವಿಶ್ವವಿದ್ಯಾಲಯದ ಅಧ್ಯಕ್ಷನಾದನು. ಫ್ಲೋಟಾನ್ ಜೊತೆ ಅಂತರ್‍ಕ್ರಿಯೆ ಹೊಂದಿದ ಎಲೆಕ್ಟ್ರಾನ್‍ನ್ನು ಸಾಪೆಕ್ಷ ಸಿದ್ಧಾಂತದ ದೃಷ್ತಿಯಲ್ಲಿ ವಿವರಿಸಲು ಟೊಮೊನಾಗ ಯತ್ನಿಸಿದನು. ಫೆಯ್ನಮನ್, ಷ್ಟಿಂಜರ್ ಸಹ ಇದೇ ಮಾರ್ಗದ ಅನ್ವೇಷಣೆಯಲ್ಲಿದ್ದನು. ಆದರೆ ಯಾರಿಗೂ ಮತ್ತೊಬ್ಬರು ಈ ಕಾರ್ಯದಲ್ಲಿ ಮಗ್ನರಾಗಿದ್ದಾರೆಂದು ತಿಳಿದಿರಲಿಲ್ಲ. 1947ರಲ್ಲಿ ಡೈಸನ್ ಈ ಮೂವರೂ ಒಂದೇ ನಿರ್ಧಾರ ಹಾಗೂ ಫಲಿತಾಂಶಗಳಿಗೆ ಬಂದಿದ್ದಾರೆಂದು ತಿಳಿಸಿದನು. ಆಧಿಕ ಚೈತನ್ಯ ಹೊಂದಿದ ಕಣಗಳ ಸೈದ್ಧಾಂತಿಕ ವಿವರಣೆಯ ಪ್ರಾಮುಖ್ಯತೆಯ ಅರಿವಿದ್ದ ಟೊಮೊನಾಗ ಎರಡ ುಕಣಗಳು ಮಿಥ್ಯಾ ಕಣವೊಂದನ್ನು ಪರಸ್ಪರ ವರ್ಗಾಯಿಸಿಕೊಂಡು ಅಂತರ್‍ಕ್ರಿಯೆ ಹೊಂದುತ್ತವೆಯೆಂದು ಹೇಳಿದನು. ಕಾಲ್ಚೆಂಡಿನಲ್ಲಿ ಒಬ್ಬ ಆಟಗಾರನ ತನ್ನ ಆವೇಶವನ್ನು ಚೆಂಡಿನ ಮೂಲಕ ಇನ್ನೊಬ್ಬನಿಗೆ ವರ್ಗಾವಣೆ ಮಾಡುವುದನ್ನು ಈ ಕ್ರಿಯೆ ಸ್ಥೂಲವಾಗಿ ಹೋಲುತ್ತದೆ. ಈಗ ಇದನ್ನು ಕ್ವಾಂಟಂ ವೈದ್ಯುತ್ ಗತಿಶಾಸ್ತ್ರ ಸಿದ್ಧಾಂತ ಎಂದು ಕರೆಯಲಾಗುತ್ತದೆ. 1965ರಲ್ಲಿ ಟೊಮೋನಾಗ, ಫೆಯ್ನಮನ್ ಮತ್ತು ಷ್ವಿಂಜರ್ ನೊಬೆಲ್ ಪ್ರಶಸ್ತಿ ಪಡೆದರು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/26/2020