অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಬಾರ್ನ್ , ಮ್ಯಾಕ್ಸ್

ಬಾರ್ನ್ , ಮ್ಯಾಕ್ಸ್

ಬಾರ್ನ್ , ಮ್ಯಾಕ್ಸ್(1882-1970)  - ೧೯೫೪

ಜರ್ಮನ್-ಭೌತಶಾಸ್ತ್ರ - ಮಾತೃಕೆ ಬಲವಿಜ್ಞಾನ ( Matrix Mechanics) ಪರಿಚಯಿಸಿದಾತ. ಅಲೆಫಲನಗಳಿಗೆ (Wave Function)s ಸಂಖ್ಯಾಕಲನ (Statistical) ವಿವರಣೆ ನೀಡಿದಾತ.

ಮ್ಯಾಕ್ಸ್, ಬ್ರೆಸ್ಲೆ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕನಾಗಿದ್ದ ಅಂಗರಚನಾಶಾಸ್ತ್ರದ ವೈದ್ಯನ ಮಗ.  ನಾಲ್ಕು ವರ್ಷದವನಿದ್ದಾಗ ತಾಯಿಯನ್ನು ಕಳೆದುಕೊಂಡ ಬಾರ್ನ್, ಅಜ್ಜಿಯ ಆರೈಕಯಲ್ಲಿ ಬೆಳೆದನು.  ಬ್ರೆಸ್ಲೆ, ಹೈಡೆಲ್‍ಬರ್ಗ್, ಜೂರಿಕ್ ಹಾಗೂ ಕೇಂಬ್ರಿಜ್’ಗಳಲ್ಲಿ  ವಿದ್ಯಾಭ್ಯಾಸ ಮಾಡಿದ ಬಾರ್ನ್, 1907ರಲ್ಲಿ ಗಟ್ಟಿಂಜೆನ್‍ನಿಂದ ಪಿ.ಎಚ್.ಡಿ. ಪಡೆದನು. ಗಟ್ಟಿಂಜೆನ್‍ನಲ್ಲಿ ಉಪನ್ಯಾಸಕನಾಗಿ ವೃತ್ತಿ ಜೀವನ ಪ್ರಾರಂಭಿಸಿದ ಬಾರ್ನ್ 1921ರಲ್ಲಿ ಅಲ್ಲೇ ಭೌತಶಾಸ್ತ್ರ ಪ್ರಾಧ್ಯಾಪಕನಾದನು.  ಪ್ರಾಧ್ಯಾಪಕನಾಗಿರುವಾಗ, ಸೈದ್ಧಾಂತಿಕ ಭೌತಶಾಸ್ತ್ರದ ಶಾಖೆಯನ್ನು ತನ್ನ ವಿಶ್ವ ವಿದ್ಯಾಲಯದಲ್ಲಿ ಪ್ರಾರಂಭಿಸಿದನು.  ಇಡೀ ಜಗತ್ತಿನಲ್ಲಿ ಕೊಪೆನ್‍ಹೆಗೆನ್‍ನ ನೀಲ್ಸ್ ಬೊಹ್ರ್  ಸಂಸ್ಥೆ ಹೊರತುಪಡಿಸಿದರೆ ಈ ಬಗೆಯ ಅಧ್ಯನದಲ್ಲಿ ಇದು ಎರಡನೆಯದೆಂದು ಖ್ಯಾತವಾಯಿತು. ಯಹೂದಿಯಾಗಿದ್ದ ಬಾರ್ನ್, ನಾಝಿಗಳ ಭಯದಿಂದಾಗಿ 1933ರಲ್ಲಿ ಜರ್ಮನಿಯನ್ನು ತೊರೆದು ಕೇಂಬ್ರಿಜ್‍ನಲ್ಲಿ ನೆಲೆಸಿ, ಎಡಿನ್‍ಬರೋದಲ್ಲಿ ಪ್ರಾಧ್ಯಾಪಕನಾಗಿ, 1953ರಲ್ಲಿ ನಿವೃತ್ತಿಯ ನಂತರ ಗಟ್ಟಿಂಜೆನ್‍ನಲ್ಲಿ  ನಿವೃತ್ತ ಜೀವನ ಕಳೆದನು.  1954ರಲ್ಲಿ ಬಾರ್ನ್, ಕ್ವಾಂಟಂ ಬಲವಿಜ್ಞಾನದಲ್ಲಿ ಸಲ್ಲಿಸಿದ ಸೇವೆಗಾಗಿ ಬೊಥೆಯೊಂದಿಗೆ  ನೊಬೆಲ್ ಪುರಸ್ಕೃತನಾದನು.ಬಾರ್ನ್ ಸಂಶೋಧನೆ ಪ್ರಾರಂಭಿಸಿದಾಗ ಜಾಲಂಧ್ರ ಗತಿಶೀಲತೆಯಲ್ಲಿ (Laltice Dynamics)  ಆಸಕ್ತನಾಗಿದ್ದನು. ಘನವಸ್ತುಗಳು ಕಂಪಿಸುವಾಗ ಅದರ ಪರಮಾಣುಗಳು ಹೇಗೆ ಒಂದಕ್ಕೊಂದು ಬೆಸೆದುಕೊಂಡಿರುವುದೆಂದು ನಿಷ್ಕರ್ಷಿಸುವಲ್ಲಿ ನಿರತನಾಗಿದ್ದನು.  ಇದರ ಫಲವಾಗಿ ಬಾರ್ನ್ ಹೇಬರ್ ಪ್ರತಿಕ್ರಿಯೆ ಚಕ್ರಗಳ ವಿವರಣೆ ಹೊರಬಂದಿತು. ಈ ವಿವರಣೆ ಅಯೋನಿಕ್ ಹರಳುಗಳ ಪರಮಾಣುಗಳ ಮಧ್ಯದ ಜಾಲಂಧ್ರ ಚೈತನ್ಯವನ್ನು  (Laltice Energy) ಲೆಕ್ಕಹಾಕಲು ಶಕ್ತವಾಗಿದೆ. 1923ರವೇಳೆಗೆ ಪ್ಲಾಂಕ್ ,ಐನ್‍ಸ್ಟೀನ್ , ಬೊಹ್ರ್ ಹಾಗೂ ಸೊಮ್ಮರ್’ಫೀಲ್ದ್ ‘ನಿಂದ ಸ್ಥಾಪಿತಗೊಂಡಿದ್ದ ಕ್ವಾಂಟಂ  ಬಲವಿಜ್ಞಾನ  ಹಲವಾರು ವೈಜ್ಞಾನಿಕ ವೀಕ್ಷಣೆಗಳಿಗೆ ಸಮರ್ಪಕವಾದ ಉತ್ತರಕೊಡುವಲ್ಲಿ ಸೋತಿದ್ದಿತು. ಕಣಗಳು  ಅಲೆಗಳಂತಹ ಗುಣಗಳನ್ನು ಹೊಂದಿದ್ದರೆ, ಇಂತಹ ವೀಕ್ಷಣೆಗಳಿಗೆ ವೈಜ್ಞಾನಿಕವಾದ ಸಮರ್ಪಕ ವಿವರಣೆ ನೀಡಬಹುದೆಂದು 1924ರಲ್ಲಿ ಬ್ರೊಗಿಲಿ ಸೂಚಿಸಿದನು. ಈ ಹಿನ್ನೆಲೆಯಲ್ಲಿ ಬಾರ್ನ್, ಇ.ಪಿ. ಜೋರ್ಡಾನ್ , ಹೈಸೆನ್‍ಬರ್ಗ್ ಹಾಗೂ ಪೌಲಿ ಸಂಯುಕ್ತವಾಗಿ ಹಲವಾರು ಹೊಸ, ವಿಸ್ತೃತ ಪರಿಕಲ್ಪನೆಗಳಿಗೆ ನಾಂದಿ ಹಾಡಿದರು. 1925ರಲ್ಲಿ ಬಾರ್ನ್, ಜೋರ್ಡಾನ್, ಜೊತೆ ಸೇರಿ, ಹೊಸದಾಗಿ ರೂಪುಗೊಳ್ಳುತ್ತಿರುವ ಪರಿಕಲ್ಪನೆಗಳನ್ನು ಸಮರ್ಥವಾಗಿ ಬಿಂಬಿಸುವ, ಹಾಗೂ ಪರಿಹಾರ ಒದಗಿಸುವ ಮಾತೃಕೆ ವಿಧಾನವನ್ನು ಕ್ವಾಂಟಂ ಬಲವಿಜ್ಞಾನದಲ್ಲಿ ಬಳಕೆಗೆ ತಂದನು. ಡಿರಾಕ್ ಈ ವಿಧಾನವನ್ನು ಬಳಸತೊಡಗಿದನು. 1926ರಲ್ಲಿ ನಂತರ ಷ್ರೊಡಿಂಜರ್ ಸಮಾನ ಅಲೆ ಬಲವಿಜ್ಞಾನ ರೂಪಿಸಿ, ಹಳೆಯ ಹಾಗೂ ಹೊಸ ಪರಿಕಲ್ಪನೆಗಳನ್ನು ಕ್ವಾಂಟಂ ಬಲವಿಜ್ಞಾನದಲ್ಲಿ ಸಮನ್ವಯಗೊಳಿಸಿದನು. ಬಾರ್ನ್ ಅಲೆಫಲನದ ಸಂಭವನೀಯ ವಿವರಣೆಯನ್ನು ಮಂಡಿಸಿದನು.  ಷ್ರೋಡಿಂಜರ್’ನ ಅಲೆ ಬಲವಿಜ್ಞಾನದಲ್ಲಿ. ಪ್ರತಿಯೊಂದು ಕಣವೂ ಒಂದು ಅಲೆಯ ಪೊಟ್ಟಣದಂತೆ ಪರಿಗಣಿತವಾಗಿದೆ.  ಈ ಅಲೆ, ಕ್ರಮೇಣ ಇಲ್ಲದಂತಾಗುತ್ತದೆ.  ಆದರೆ ಬಾರ್ನ್ ಇದನ್ನು ಒಪ್ಪದೆ ಯಾವುದೇ ಬಿಂದುವಿನಲ್ಲಿ ಕಣದ ಇರುವಿಕೆಯನ್ನು ಸಂಭವನೀಯತೆಯಿಂದ ಮಾತ್ರ ತಿಳಿಸಬಹುದೆಂದು ವಾದಿಸಿದನಲ್ಲದೆ, ಅಂತಹ ಸಂಭವನೀಯ ಇರುವನ್ನು ಗಣಿತೀಯ ಸೂತ್ರದಿಂದ ನಿರೂಪಿಸಿದನು. ಕ್ವಾಂಟಂ ಬಲವಿಜ್ಞಾನಕ್ಕೆ ಸಂಭವನೀಯತೆ ತರುವುದರ ಮೂಲಕ, ಭೌತಶಾಸ್ತ್ರವನ್ನು  ನಿರ್ಧಾರಕ ಸ್ಥಿತಿಯಿಂದ ಅನಿರ್ಧಾರಕ ಸ್ಥಿತಿಗೆ, ಒಯ್ಯುವುದೆಂದು ಅಂತಹ ಸಿದ್ದಾಂತ ಅನಪೇಕ್ಷಿತವೆಂದು ಐನ್‍ಸ್ಟೀನ್ ವಿರೋಧಿಸಿದನು. ಈ ವಿಚಾರವಾಗಿ ಬಾರ್ನ್ ಹಾಗೂ ಐನ್‍ಸ್ಟೀನ್ ಬಹು ವರ್ಷಗಳ ಕಾಲ ಸಂವಾದ, ನಡೆಸಿದ್ದರು. 1970ರಲ್ಲಿ ನಿಧನನಾದ ಬಾರ್ನ್‍ನನ್ನು ಗಟ್ಟಿಂಜೆನ್‍ನಲ್ಲಿ ಸಮಾಧಿ ಮಾಡಲಾಗಿದೆಯಲ್ಲದೆ, ಅದರ ಶಾಖೆಯ ಮೇಲೆ ಅವನು ಪ್ರಾರಂಭಿಸಿದ ಮಾತೃಕೆ ಬಲವಿಜ್ಞಾನದ ಮೂಲ ಸೂತ್ರ  pq – p-h/2 ಸೂತ್ರವನ್ನು ಬರೆಯಲಾಗಿದೆ.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 7/23/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate