ಪೆರ್ಸೆಲ್, ಎಡ್ವರ್ಡ್ ಮಿಲ್ಸ್ (1912--) ೧೯೫೨
ಅಸಂಸಂ-ಭೌತಶಾಸ್ತ್ರ- ಬೈಜಿಕ ಕಾಂತೀಯ ಅನುರಣನೆ ವಿಧಾನ (NMR-Nuclear Magnetic Resonance) ಅಭಿವೃದ್ದಿಗೊಳಿಸಿದಾತ. ತಾರಂತರದ 21 ಸೆಂ.ಮೀ ಸೂಕ್ಷ್ಮ ತರಂಗದ ಉತ್ಸರ್ಜನೆ ಪತ್ತೆ ಹಚ್ಚಿದಾತ.
ಪೆರ್ಸೆಲ್, ಪಡ್ರ್ಯೂನಿಂದ ವೈದ್ಯುತ್ ಇಂಜಿನಿಯರಿಂಗ್‍ನಲ್ಲಿ ಪದವಿ ಗಳಿಸಿ, ನಂತರ ಕಾರ್ಲ್‍ಸ್ರುಹೆ ಹಾಗೂ ಹಾರ್ವರ್ಡ್‍ಗಳಲ್ಲಿ ಭೌತಶಾಸ್ತ್ರದ ವ್ಯಾಸಂಗ ಮಾಡಿದನು. 1938ರಲ್ಲಿ ಇಲ್ಲಿಯೇ ಬೋಧಕನಾದನು. 1941ರಿಂದ 1945ರವರೆಗೆ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸೂಕ್ಷ್ಮ ತರಂಗ ರಡಾರ್ ಅಭಿವೃದ್ದಿಗೆ ಶ್ರಮಿಸಿದನು. ನಂತರ ಹಾರ್ವರ್ಡ್‍ನಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕನಾದನು. 1940ರಲ್ಲಿ ಘನ ಹಾಗೂ ದ್ರವಗಳಲ್ಲಿನ ಅಣುಬೀಜಗಳಲ್ಲಿನ ಕಾಂತೀಯ ಭ್ರಾಮ್ಯತೆಗಳನ್ನು ಅಳೆಯಲು ಬೈಜಿಕ ಕಾಂತೀಯ ಅನುರಣನ ವಿಧಾನ ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿದನು. ಯಾವುದೇ ಗಿರಕಿ (Spin) ಉಳ್ಳ ಪರಮಾಣುವಿನ ಬೀಜವನ್ನು ಪ್ರಬಲ ಕಾಂತಕ್ಷೇತ್ರದಲ್ಲಿರಿಸಿದಾಗ ಅದು ಅನುರಣನ ಪ್ರಭಾವದಡಿಯಲ್ಲಿ ರೇಡಿಯೋ ಆವರ್ತದ ವ್ಯಾಪ್ತಿಯಲ್ಲಿ ವಿಕಿರಣವನ್ನು ಹೀರಿಕೊಳ್ಳುತ್ತದೆ. ಇದನ್ನು ಅಳೆದು ಅಣುವಿನ ರಾಚನಿಕ ಸ್ವರೂಪ ನಿರ್ಧರಿಸಬಹುದು. 1940ರ ನಂತರ ಬೈಜಿಕ ಕಾಂತೀಯ ಅನುರಣನ ವಿಧಾನ ಪ್ರಾಯೋಗಿಕ ಭೌತಶಾಸ್ತ್ರದಲ್ಲಿ ಪ್ರಮುಖ ಸ್ಥಾನ ಗಳಿಸಿತು. 1952ರಲ್ಲಿ ಪೆರ್ಸೆಲ್, ಬ್ಲಾಖ್ ಜೊತೆಗೆ ನೊಬೆಲ್ ಪ್ರಶಸ್ತಿ ಪಡೆದನು. 1951ರಲ್ಲಿ ಪೆರ್ಸೆಲ್, ಅಂತರ್ ತಾರಾ ಅಂತರಿಕ್ಷದಲ್ಲಿನ ತಟಸ್ಥ ಜಲಜನಕದ 21 ಸೆಂಮೀ ತರಂಗಾಂತರದ ವಿಕಿರಣವನ್ನು ಪತ್ತೆ ಹಚ್ಚಿದನು. ವ್ಯಾನ್ ಡೆ ಹಸ್ಟ್ ಈ ಮೊದಲೇ ಈ ವಿಕಿರಣದ ಅಸ್ತಿತ್ವದ ಮುನ್ಸೂಚನೆ ನೀಡಿದ್ದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019