ಜಾನ್ , ಬಾರ್ಡಿನ್, (1908--)1956 & ೧೯೭೨
ಅಸಸಂ-ಭೌತಶಾಸ್ತ್ರ- ಟ್ರಾನ್ಸಿಸ್ಟರ್‍ನ ಸಹ ಉಪಜ್ಞೆಕಾರ- ಬಿ.ಸಿ.ಎಸ್. ಅತಿವಾಹಕ ಸಿದ್ಧಾಂತಕ್ಕೆ ಕಾಣಿಕೆ ಸಲ್ಲಿಸಿದಾತ-ಎರಡು ಬಾರಿ ನೊಬೆಲ್ ಪ್ರಶಸ್ತಿ ಪಡೆದಾತ.
ಶೈಕ್ಷಣಿಕ ಹಿನ್ನೆಲೆಯ ಕುಟುಂಬದಲ್ಲಿ ಜನಿಸಿದ ಬಾರ್ಡೀನ್ ವಿಸ್ಕಾನ್ಸಿನ್‍ನಲ್ಲಿ ವೈದ್ಯುತ್ ಇಂಜಿನಿಯರಿಂಗ್ ಪದವಿ ಗಳಿಸಿದ್ದನು. ಮೊದಲ 3 ವರ್ಷ ಬಾರ್ಡಿನ್ ಭೂಭೌತಶಾಸ್ತ್ರಜ್ಞನಾಗಿ ಗಲ್ಪ್ ಸಂಶೋಧನಾ ಪ್ರಯೋಗಾಲಯದಲ್ಲಿ ದುಡಿದನು. ನಂತರ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವಿಗ್ನರ್ ಕೈಕೆಳಗೆ 1936ರಲ್ಲಿ ಗಣಿತೀಯ ಭೌತಶಾಸ್ತ್ರದಲ್ಲಿ ಪಿ.ಎಚ್.ಡಿ ಪಡೆದನು. ಇದಾದ ನಂತರ ಕೆಲಕಾಲ ಮಿನ್ನೆಸೊಟಾ ವಿಶ್ವವಿದ್ಯಾಲಯದಲ್ಲಿ ನಂತರ ನೇವಲ್ ಆರ್ಡ್‍ನ್ಯಾನ್ಸ್ ಲ್ಯಾಬೋರೇಟರಿಯಲ್ಲಿ ದುಡಿದನು. ಎರಡನೇ ಜಾಗತಿಕ ಯುದ್ದದ ಕೊನೆಯ ವೇಳೆಗೆ ಬಾರ್ಡಿನ್ ಬೆಲ್ ಪ್ರಯೋಗಾಲಯದ ಘನಸ್ಥಿತಿ ಭೌತಶಾಸ್ತ್ರದ ಗುಂಪಿಗೆ ಸೇರಿದನು. ಬಾರ್ಡೀನ್ ಮಹತ್ತರವಾದ ಕಾರ್ಯಗಳು ಇಲ್ಲಿಂದ ಪ್ರಾರಂಭವಾಗಿ ಅವನು 1951ರಲ್ಲಿ ಇಲಿನಾಯಿಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ಸೇರುವವರೆಗೆ ಅವ್ಯಾಹತವಾಗಿ ಮುಂದುವರೆದವು. ಬಾರ್ಡೀನ್, ಬ್ರಾಟೇನ್ ಹಾಗೂ ಷಾಕ್ಲೆ ಜೊತೆ ಸೇರಿ 1956ರ ನೊಬೆಲ್ ಪಾರಿತೋಷಕವನ್ನು ಬಿಂದು ಸಂಪರ್ಕ ಟ್ರಾನ್ಸಿಸ್ಟರ್ ಅಭಿವೃದ್ದಿಗಾಗಿ ಹಂಚಿಕೊಂಡನು. ಅದಲ್ಲದೆ 1972ರಲ್ಲಿ ಮತ್ತೊಮ್ಮೆ ಕೂಪರ್ ಹಾಗೂ ಷ್ರೀಫರ್ ಜೊತೆ ಅಲೆವಾಹಕತ್ವವನ್ನು ಕುರಿತಾಗಿ ಮಂಡಿಸಿದ ಸಿದ್ಧಾಂತಕ್ಕಾಗಿ ನೊಬೆಲ್ ಪಾರಿತೋಷಕವನ್ನು ಎರಡನೇ ಬಾರಿಗೆ ಪಡೆದನು. ಈ ಸಿದ್ಧಾಂತ ಈಗ ಬಾರ್ಡೀನ್ ಕೂಪರ್ ಷ್ರೀಫರ್ (ಬಿ.ಸಿ.ಎಸ್ ಸಿದ್ಧಾಂತ) ಸಿದ್ಧಾಂತವೆಂದೇ ಖ್ಯಾತ. ಬಾರ್ಡೀನ್ ಭೌತಶಾಸ್ತ್ರದಲ್ಲಿ ಎರಡು ಬಾರಿ ನೊಬೆಲ್ ಪಾರಿತೋಷಕ ಪಡೆದ ಮೊದಲಿಗ.1911ರಲ್ಲಿ ಕ್ಯಾಮೆರ್‍ಲಿಂಗ್ ಒನ್ನೆಸ್ ಅತಿವಾಹಕತ್ವವನ್ನು ಅನಾವರಣಗೊಳಿಸಿದ್ದರು. 150ಕೆ ಗಿಂತ ಕಡಿಮೆ ಉಷ್ಣತೆಯಲ್ಲಿ ಲೋಹವೊಂದು ತನ್ನೆಲ್ಲಾ ಕಾಂತ ಕ್ಷೇತ್ರವನ್ನು ಉಚ್ಛಾಟಿಸಿ , ವಿದ್ಯುತ್ ಪ್ರವಾಹಗಳನ್ನು ಕಾಯ್ದು ಕೊಳ್ಳುತ್ತದೆಯಲ್ಲದೆ ಶೂನ್ಯ ಪ್ರತಿರೋಧ ಸ್ಥಿತಿಯಲ್ಲಿರುತ್ತದೆ. 1950ರಲ್ಲಿ ನಡೆಸಿದ ಸಂಶೋಧನೆಗಳಿಂದ ಯಾವುದೇ ಲೋಹ ಅತಿವಾಹಕದಂತೆ ವರ್ತಿಸಲು ಇರಬೇಕಾದ ಗರಿಷ್ಟ ತಾಪಮಾನ ಆ ಲೋಹದ ಪರಮಾಣು ದ್ರವ್ಯರಾಶಿಗೆ ವಿಲೋಮವಾಗಿರುತ್ತದೆಯೆಂದು ತಿಳಿದು ಬಂದಿತು.ಇದನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ ಬಾರ್ಡೀನ್ ಲೋಹದ ಪರಮಾಣು ಜಾಲಂಧ್ರ (Lattice) ಲೋಹದಲ್ಲಿ ವಿದ್ಯುತ್ ವಾಹಕವಾಗಿರುವ ಎಲೆಕ್ಟ್ರಾನ್‍ಗಳೊಂದಿಗೆ ಅಂತ:ಕ್ರಿಯೆಗೊಳ್ಳುವುದಎಂದ ಹೀಗಾಗುತ್ತದೆಯೆಂದು ಪ್ರತಿಪಾದಿಸಿದನು. ಕೂಪರ್ 1956ರಲ್ಲಿ ಇಲಿನಾಯ್ ವಿಶ್ವವಿದ್ಯಾಲಯದಲ್ಲಿ ಹಲವಾರು ಅಧ್ಯಯನಗಳನ್ನು ಕೈಗೊಂಡು , ಎಲೆಕ್ಟ್ರಾನ್‍ಗಳು ತಮ್ಮೊಂಳಗೆ ತಾವೇ ದುರ್ಬಲವಾಗಿ ಆಕರ್ಷಿತಗೊಂಡು ತಮ್ಮ ಸುತ್ತಲಿನ ಲೋಹ ಜಾಲಂಧ್ರವನ್ನು ವಿರೂಪಗಳಿಸುವವೆಂದೂ ಸಾಧಿಸಿದನು. ಇಂತಹ ವಿದ್ಯಾಮಾನ ಜರುಗುವಾಗ, ಎಲೆಕ್ಟ್ರಾನ್‍ಗಳು ಜೋಡಿಗೊಳ್ಳುತ್ತವೆ. ಅಂತಹ ಜೋಡಿಯನ್ನು ಕೂಪರ್-ಜೋಡಿಗಳೆನ್ನುತ್ತಾರೆ. ಬಾರ್ಡೀ£–ಕೂಪರ್ ಹಾಗೂ ಷ್ರಿಫರ್ ಇನ್ನು ಮುಂದುವರೆದು ಇಂತಹ ಹಲವಾರು ಜೋಡಿಗಳು ರೂಪುಗೊಂಡು, ಅತಿವಾಹಕತೆಗೆ ಕಾರಣವಾಗುತ್ತವೆ ಎಂದು ತೋರಿಸಿದರು. ಬಿ.ಸಿ.ಎಸ್. ಸಿದ್ಧಾಂತ , ಅತಿವಾಹಕತೆಯತ್ತ ಗಂಭೀರ ನೋಟ ಹರಿಸುವಂತೆ ಮಾಡಿತಲ್ಲದೆ, ಸೂಕ್ಶ್ಮಾತಿಸೂಕ್ಷ್ಮ ಸ್ಥಿತಿಯಲ್ಲಿ , ಪರಮಾಣುವಿನ ಅಂತರಂಗದಲ್ಲಿ ಜರುಗುವ ಕ್ವಾಂಟಂ ಕ್ರಿಯೆ ಹೇಗೆ ಬಾಹ್ಯದಲ್ಲಿ ಎದ್ದು ಕಾಣುವಂತಹ, ಅತಿವಾಹಕತೆಯಂತಹ ಸ್ಥಿತಿಗೆ ಕಾರಣವಾಗಬಲ್ಲುದೆಂದು ಸ್ಪುಟಗೊಳಿಸಿತು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 8/27/2019