ಗ್ಲೇಸರ್, ಡೊನಾಲ್ಡ್ ಆರ್ಥರ್ (1926--)೧೯೬೦
ಅಸಂಸಂ-ಭೌತಶಾಸ್ತ್ರ ಮೂಲಕಣಗಳ ವೀಕ್ಷಣೆಗೆ ಗುಳ್ಳೆ ಕೋಠಿ (Bubble Chamber) ನಿರ್ಮಿಸಿದಾತ.
ಕ್ಲೀವ್‍ಲ್ಯಾಂಡ್‍ನ ಕೇಸ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವಿ ಪಡೆದ ಗ್ಲೇಸರ್, ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೇರಿ ವಿಶ್ವ ಕಿರಣಗಳ ಬಗ್ಗೆ ಅಧ್ಯಯನ ಮಾಡಿ, 1950ರಲ್ಲಿ ಡಾಕ್ಟರೇಟ್ ಗಳಿಸಿದನು. ಮಿಷಿಗನ್, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಗಳಲ್ಲಿ ವೃತ್ತಿ ಜೀವನ ಮುಂದುವರೆಸಿ, 1964ರಲ್ಲಿ ಅಣ್ವಕ ಜೀವಶಾಸ್ತ್ರದತ್ತ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದನು. ಮೂಲಕಣಗಳನ್ನು ಪತ್ತೆ ಹಚ್ಚಲು ವಿಲ್ಸನ್ ಮೇಘ ಕೋಠಿಯನ್ನು ನಿರ್ಮಿಸಿದ್ದನು. ಈ ಕೋಠಿಯಲ್ಲಿ ಅಧಿಕ ಚೈತನ್ಯದ, ತೀವ್ರ ವೇಗದ ಮೂಲಕಣಗಳನ್ನು ಪತ್ತೆ ಮಾಡಲಾಗುತ್ತಿರಲಿಲ್ಲ. ಇದನ್ನು ಉತ್ತಮಗೊಳಿಸಲು ಗ್ಲೇಸರ್ ಯತ್ನಿಸಿದನು. ಅತಿಶಾಖದ, ದ್ರವದ ಮೂಲಕ ಹಾದು ಹೋಗುವ ಮೂಲ ಕಣಗಳು ತಮ್ಮ ಜಾಡಿನುದ್ದಕ್ಕೂ ಸಣ್ಣ ಅನಿಲದ ಗುಳ್ಳೆಗಳನ್ನು ಚಿಮ್ಮಿಸುತ್ತಾ ಸಾಗುವುವೆಂದೂ ಗ್ಲೇಸರ್‍ಗೆ ತಿಳಿಯಿತು. ಇದರ ಆಧಾರದ ಮೇಲೆ 1952ರಲ್ಲಿ ಡೀ ಈಥೈಲ್ ಈಥರ್‍ನಿಂದ ತುಂಬಿದ ಕಿರುಗಾತ್ರದ, ಗುಳ್ಳೆ ಕೋಠಿಯನ್ನು ನಿರ್ಮಿಸಿದನು. ಮೂಲಕಣಗಳ ಜಾಡುಗಳನ್ನು ಅಧಿಕ ವೇಗದ ಕ್ಯಾಮರಾಗಳಿಂದ ಚಿತ್ರಿಸಲಾಯಿತು. ಗ್ಲೇಸರ್‍ನ ತತ್ತ್ವದ ಮೇಲೆ ಅಲ್ವಾರೆಝ್ ಹಲವಾರು ಮೀಟರ್ ವ್ಯಾಸದ, ದ್ರವ ಜಲಜನಕ ತುಂಬಿದ ಗುಳ್ಳೆ ಕೋಠಿ ನಿರ್ಮಿಸಿದನು. ಇದು ಕಾರ್ಯವ್ಯಾಪ್ತಿ ಮತ್ತು ದಕ್ಷತೆಯಲ್ಲಿ ಗ್ಲೇಸರ್‍ನದಕ್ಕಿಂತಲೂ ಉತ್ತಮವಾಗಿದ್ದಿತು. 1960ರಿಂದ 1970ರ ದಶಕದವರೆಗೆ ಮೂಲ ಕಣಗಳ ಸಂಶೋಧನೆಯಲ್ಲಿ ತಾಂತ್ರಿಕತೆಯಲ್ಲಿ ಗ್ಲೇಸರ್‍ನ ವಿಧಾನ ಕ್ರಾಂತಿಯನ್ನೇ ತಂದಿತು. ಗ್ಲೇಸರ್ ನೀರು, ಅಲ್ಕೋಹಾಲ್, ಸೋಡಾ ನೀರುಗಳನ್ನು ಕೋಠಿಗಳಲ್ಲಿ ಬಳಸಲು ಯತ್ನಿಸಿದನಾದರೂ ಯಶಸ್ಸನ್ನು ಕಾಣಲಿಲ್ಲ. ನೀರು ಅಧಿಕ ಮೇಲ್ಮೈ ಕರ್ಷಣೆಯಿಂದ (Surface Tension) ನಿರರ್ಥಕ ಮಾಧ್ಯಮವೆನಿಸಿತು. 1960ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಗ್ಲೇಸರ್ ತನ್ನ ಸಾಧನೆಗಾಗಿ ಪಡೆದುಕೊಂಡನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 6/8/2020