অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕಾಕ್‍ಕ್ರಾಪ್ಟ್, ಸರ್ ಜಾನ್ ಡೌಗ್ಲಾಸ್

ಕಾಕ್‍ಕ್ರಾಪ್ಟ್, ಸರ್ ಜಾನ್ ಡೌಗ್ಲಾಸ್

ಕಾಕ್‍ಕ್ರಾಪ್ಟ್, ಸರ್ ಜಾನ್ ಡೌಗ್ಲಾಸ್ (1897-1976 ) ೧೯೫೧

ಬ್ರಿಟನ್ -ಭೌತಶಾಸ್ತ್ರ ವೇಗೋತ್ಕರ್ಷಿತ ಕಣಗಳಿಂದ ಅಣು ಬೀಜಗಳಲ್ಲಿ ಪಾರವಿಕಲ್ಪ (Transmutation)    ತಂದ ಮೊದಲಿಗ. 

ಕಾಕ್‍ಕ್ರಾಪ್ಟ್ ಪದವಿ ಪ್ರಾಪ್ತಿಗಾಗಿ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯ ಸೇರಿದ ಒಂದೇ ವರ್ಷದಲ್ಲಿ ಮೊದಲ ಜಾಗತಿಕ ಯುದ್ದ ಪ್ರಾರಂಭವಾಯಿತು.  ಇದರಿಂದಾಗಿ ಕಾಕ್‍ಕ್ರಾಪ್ಟ್ ಶಿಕ್ಷಣವನ್ನು ಮೊಟಕುಗೊಳಿಸಿ ರಾಯಲ್ ಫೀಲ್ಡ್ ಆರ್ಟಿಲರಿಯಲ್ಲಿ ಸಂಜ್ಞೆಕಾರನಾಗಿ ಸೇರಬೇಕಾಯಿತು. ಮೂರು ವರ್ಷಗಳ ಕಾಲ ಹಾಗೂ ನಂತರ ನಡೆದ ಯುದ್ದಗಳಲ್ಲಿ ಕಾಕ್‍ಕ್ರಾಪ್ಟ್ ಯಶಸ್ವಿ ಹಾಗೂ ಗಣನೀಯವಾದ ಸೇವೆ ಸಲ್ಲಿಸಿದನು.  ನಂತರ ಮೆಟ್ರೋಪಾಲಿಟನ್  ವಿಕರ್ಸ್ ಎಲೆಕ್ಟ್ರಿಕ್ ಕಂಪನಿ ಸೇರಿದನು. 1924ರಲ್ಲಿ ಕೇಂಬ್ರಿಜ್‍ನಿಂದ ಗಣಿತದಲ್ಲಿ ಪದವಿ ಗಳಿಸಿದನು.  ಪದವಿ ಪಡೆದ ನಂತರ ಕಾಕ್‍ಕ್ರಾಪ್ಟ್ ಕ್ಯಾವೆಂಡಿಷ್ ಪ್ರಯೋಗಾಲಯದಲ್ಲಿದ್ದ  ವಿಶ್ವ ವಿಖ್ಯಾತನಾಗಿದ್ದ ರುದರ್’ಫೋರ್ಡ್ ನೇತೃತ್ವದ  ಸಂಶೋಧನಾ ತಂಡದ ಸದಸ್ಯನಾಗಿ  ವೃತ್ತಿ ಜೀವನ ಪ್ರಾರಂಭಿಸಿದನು.  1932ರಲ್ಲಿ ಇ.ಟಿ.ಎಸ್. ವಾಲ್ಟರ್ ಜೊತೆ ಸೇರಿ ಕ್ಯಾವೆಂಡಿಷ್ ಪ್ರಯೋಗಾಲಯದಲ್ಲಿ ನಡೆಸಿದ ಸಂಶೋಧನೆಗಳಿಗಾಗಿ 1951ರ ಭೌತಶಾಸ್ತ್ರದಲ್ಲಿನ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಖಚಿತ ನಿರ್ಧಾರದ ನಿಲುವಿನವನೂ, ಸ್ಪಷ್ಟ ಚಿಂತಕನೂ ಆಗಿದ್ದ ಕಾಕ್‍ಕ್ರಾಪ್ಟ್ ವ್ಯವಸ್ಥಿತ ಕ್ರಿಯಾಶೀಲವ್ಯಕ್ತಿ.  ಜೀವಿತದ ಕೊನೆ ಎರಡು ದಶಕಗಳಲ್ಲಿ ಸಂಶೋಧನೆಗಿಂತಲೂ, ಅದರ ನಿರ್ವಹಣೆಯತ್ತ ಒಲಿದಿದ್ದ ಕಾಕ್‍ಕ್ರಾಪ್ಟ್ 1940ರಲ್ಲಿ ಅಸಂಸಂಗಳೊಡನೆ ಯುದ್ದ ಕಾಲದ ತಾಂತ್ರಿಕ ಒಪ್ಪಂದಗಳಿಗಾಗಿ ನೇಮಿಸಲ್ಪಟ್ಟ ‘ಏರ್‍ಬೌರ್ಡ್ ಮಿಷನ್‍ನ ಸಕ್ರಿಯ ಸದಸ್ಯನಾಗಿದ್ದನು. 1946ರಲ್ಲಿ ಪರಮಾಣು ಚೈತನ್ಯ ಸಂಶೋಧನಾ ಸಂಸ್ಥೆಯ  ಸಂಸ್ಥಾಪಕ ನಿರ್ದೇಶಕದನಾದನು.  1959ರಲ್ಲಿ ಕೇಂಬ್ರಿಜ್‍ನ ಚರ್ಚಿಲ್ ಕಾಲೇಜಿನ ಸಂಸ್ಥಾಪಕ ಆಚಾರ್ಯನಾಗಿ  ನೇಮಕಗೊಂಡು ಹಲವು ಗೌರವಗಳಿಗೆ ಪಾತ್ರನಾದನು. ಸಂಶೋಧಕ ಹಾಗೂ ಸಮರ್ಥ ಆಡಳಿತಗಾರನಾಗಿದ್ದ ಕಾಕ್‍ಕ್ರಾಪ್ಟ್ ವೈಜ್ಞಾನಿಕ ಹಾಗೂ ರಾಜಕೀಯ ರಂಗಗಳಲ್ಲಿ ಖ್ಯಾತನಾಗಿದ್ದನು. 1928ರಲ್ಲಿ ಗ್ಯಾಮೊವ್, ಕಣಗಳಿಂದ ಪರಮಾಣುಗಳನ್ನು ತಾಡಿಸ ಹೊರಟಾಗ ಅವು ಪರಮಾಣುವಿನ ಬೀಜವನ್ನು ಕ್ವಾಂಟಂ ಸುರಂಗಗೊಳ್ಳುವ (Quantum Tunneling)  ಕ್ರಿಯೆಯಿಂದ ಪ್ರವೇಶಿಸಬಹುದೆಂದು ಸೂಚಿಸಿದ್ದನು. ಅದಲ್ಲದೆ ಕೂಲಂಬ್ ನಿರ್ಧರಿಸಿದಂತೆ ಒಂದೇ ವಿದ್ಯುದಾವಿಷ್ಟದ ಕಣಗಳು ಒಂದನ್ನೊಂದು ವಿಕರ್ಷಿಸುವ ಬಲಕ್ಕಿಂತಲೂ ಕಡಿಮೆ ಬಲ, ಕಣಗಳ ಬೈಜಿಕ ಪ್ರವೇಶಕ್ಕೆ ಸಾಕಾಗುವುದೆಂದು ಹೊರಗೆಡಹಿದನು. ಈ ಹೇಳಿಕೆಗಳ ಆಧಾರದ ಮೇಲೆ ಕಾಕ್‍ಕ್ರಾಪ್ಟ್ ಹಾಗೂ  ವಾಲ್ಟರ್ ವಿಭವ ದ್ವಯ (Voltage Doubles ) ಉಪಕರಣ ನಿರ್ಮಿಸಿ ಪ್ರೋಟಾನಗಳನ್ನು 0.8ಒevಗೆ ವೇಗೋತ್ಕರ್ಷಗೊಳಿಸಿ ಲಿಥಿಯಂ ಲಕ್ಷ್ಯವನ್ನು ತಾಡಿಸಿದಾಗ, ಅದರಿಂದ ಆಲ್ಪಾ ಕಣಗಳು ಬಿಡುಗಡೆಯಾದವು. ಇದರಿಂದಾಗಿ ಮೊಟ್ಟ ಮೊದಲ ಕೃತಕವಾದ ಬೈಜಿಕ ಕ್ರಿಯೆಯಾದ ಪಾರವಿಕಲ್ಪ  ಜರುಗಿತು.  ಸಮಾಂತರದಲ್ಲಿ ರುದರ್’ಫೋರ್ಡ್ ಪಾರವಿಕಲ್ಪದ ಅಧ್ಯಯನಕ್ಕೆ   ತನ್ನದೇ ಆದ ವಿಧಾನ ರೂಪಿಸಿಕೊಂಡಿದ್ದು ಅದಕ್ಕಾಗಿ ತಾಡಿಸುವ ಕಣಗಳ ಪೂರೈಕೆಗಾಗಿ ನೈಸರ್ಗಿಕವಾದ ವಿಕಿರಣಶೀಲ  ಆಕರದ ಮೊರೆ ಹೊಕ್ಕಿದ್ದನು. ಕಾಕ್‍ಕ್ರಾಪ್ಟ್ ಹಾಗೂ ವಾಲ್ಟರ್’ರವರ ಈ ಯಶಸ್ವಿ ಪ್ರಯೋಗ ಭೌತಶಾಸ್ತ್ರದ ಬೈಜಿಕ ಅಧ್ಯಯನಕ್ಕೆ ಹೊಸ ಮಾರ್ಗವನ್ನೇ ತೆರೆಯಿತು. ಇದರ ಫಲವಾಗಿ ಸೈಕ್ಲೋಟ್ರಾನ್ ಹಾಗೂ ಸರೇಖೀಯ ವೇಗೋತ್ಕರ್ಷಕಗಳು ನಿರ್ಮಾಣಗೊಂಡವು. ಕಾಕ್‍ಕ್ರಾಪ್ಟ್ ಬೈಜಿಕ ವಿರಳನದಿಂದ ವಿದ್ಯುತ್ ಉತ್ಪಾದನೆಯ ಸಾಧ್ಯತೆಯನ್ನು ತಿಳಿಸಿದನಾದರೂ ರುದರ್’ಫೋರ್ಡ್ ಅದನ್ನು ಎಂದಿಗೂ ನನಸಾಗದ ಸಿಹಿ ಕನಸೆಂದು ನಿರ್ಲಕ್ಷಿಸಿದನು. ಆದರೆ ಮುಂದೆ ಔಷ್ಣೋಬೈಜಿಕ (Thermonuclear)  ವಿದ್ಯುತ್ ಸ್ಥಾವರಗಳ ನಿರ್ಮಾಣ ಸಾಧ್ಯವಾಗಿ ಕಾಕ್‍ಕ್ರಾಪ್ಟ್ ನುಡಿದ ಭವಿಷ್ಯ ನಿಜವಾಯಿತು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 2/17/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate