ಎರ್ನ್‍ಸ್ಟ್ ,ಥಾಮಸ್ ಸಿಂಟನ್ ವಾಲ್ಟನ್ (1903-1995) ೧೯೫೧
ಐರ್ಲೆಂಡ್-ಭೌತಶಾಸ್ತ್ರ-
ಥಾಮಸ್ ತಂದೆ, ಟಿಪ್ಪರೇರಿ ಪಟ್ಟಣದಲಿ ಚರ್ಚ್‍ನ ಮಿನಿಸ್ಟರ್ ಆಗಿದ್ದನು. ಇದರಿಂದಾಗಿ ಊರಿಂದ ಊರಿಗೆ ವರ್ಗವಾಗುವ ಅನಿವಾರ್ಯತೆ ಈತನಿಗೆ ಒದಗಿ ಬಂದಿತು. 6 ಅಕ್ಟೋಬರ್ 1903ರಂದು ವಾಟರ್ಫೋರ್ಡ್ ಕೌಂಟಿಯ ಡುಂಗರ್‍ವನ್‍ನಲ್ಲಿ ಥಾಮಸ್‍ನ ಜನನವಾಯಿತು. ಬಾನ್‍ಬ್ರಿಡ್ಜ್ ಹಾಗೂ ಕುಕ್ಸ್‍ಟಿನ್‍ಗಳಲ್ಲಿ ಥಾಮಸ್‍ನ ಆರಂಭಿಕ ಶಿಕ್ಷಣ ಜರುಗಿತು. 1915ರಲ್ಲಿ ಬೆಲ್ಫಾಸ್ಟ್ನಲ್ಲಿದ್ದ ಆವಾಸಿ ಕಾಲೇಜಿಗೆ ಥಾಮಸ್ ಸೇರಿದನು. ಇಲ್ಲಿ ಗಣಿತ ಹಾಗೂ ಭೌತಶಾಸ್ತ್ರದಲ್ಲಿ ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣನಾದನು. 1922ರಲ್ಲಿ ವಿದ್ಯಾರ್ಥಿ ವೇತನ ಪಡೆದು ಡಬ್ಲಿನ್‍ನ ಟ್ರಿನಿಟಿ ಕಾಲೇಜ್ ಸೇರಿದನು. 1926ರಲ್ಲಿ ಪದವಿ ಗಳಿಸಿ 1927ರಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ಸಹ ಪೂರೈಸಿದನು. ಇದೇ ವರ್ಷ ರಾಯಲ್ ಕಮಿಷನರ್ಸ್ ಫಾರ್ ದಿ ಎಕ್ಸಿಬಿಷ್‍ನ್‍ನಿಂದ ವಿದ್ಯಾರ್ಥಿವೇತನ ಗಳಿಸಿ, ಕೇಂಬ್ರಿಜ್ ಕ್ಯಾವೆಂಡಿಷ್ ಪ್ರಯೋಗಾಲಯದಲ್ಲಿ ರುದರ್ಫೋರ್ಡ್‍ನ ಸಹಾಯಕನಾದನು. 1930ರಲ್ಲಿ ಡಿಪಾರ್ಟ್‍ಮೆಂಟ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್‍ನಿಂದ ಸಂಶೋಧನಾ ಪ್ರಶಸ್ತಿ ಪಡೆದು 1931ರಲ್ಲಿ ಡಾಕ್ಟರೇಟ್ ಪದವಿ ಗಳಿಸಿದನು. ಕ್ಯಾವೆಂಡಿಷ್ ಪ್ರಯೋಗಾಲಯದಲ್ಲಿ ಜಲಗತಿಶಾಸ್ತ್ರದಲ್ಲಿನ (Hydrodynamics)ಸಮಸ್ಯೆಗಳ ಅಧ್ಯಯನದಿಂದ ಥಾಮಸ್‍ನ ಸಂಶೋಧನಾ ಜೀವನ ಪ್ರಾರಂಭವಾಯಿತು. ಇಲ್ಲಿರುವಾಗ ಮುಂದೆ ಬೀಟಾಟ್ರಾನ್ ಎಂದು ಹೆಸರಾದ ಸರೇಖೀಯ ವೇಗೋತ್ಕರ್ಷಕಗಳನ್ನು (Linear Accelerator)ಬಳಸಿ, ಪರೋಕ್ಷ ಮಾರ್ಗದಿಂದ ವೇಗಗಾಮಿ ಕಣಗಳನ್ನು ಪಡೆಯಲು ಥಾಮಸ್ ಯತ್ನಿಸಿದನು. ಮುಂದೆ ಜೆ.ಡಿ.ಕಾಕ್‍ರಾಪ್ಟ್‍ನೊಂದಿಗೆ ಅಧಿಕ ಪ್ರಚನ್ನತೆಯಡಿಯಲ್ಲಿ (Potential) ವೇಗಗಾಮಿ ಕಣಗಳನ್ನು ಉತ್ಪಾದಿಸಿದನು. ಇದನ್ನು ಪರಿಷ್ಕರಿಸಿ ವಿಶಿಷ್ಟವಾದ ಪ್ರಾಯೋಗಿಕ ಸಲಕರಣೆಯೊಂದನ್ನು ರೂಪಿಸಿದನು. ಇದರಲ್ಲಿ ಹಗುರ ಕಣಗಳನ್ನು, ವೇಗಗಾಮಿ ಪ್ರೋಟಾನ್‍ಗಳಿಂದ ತಾಡಿಸಿ ಶಿಥಿಲಗೊಳಿಸಬಹುದೆಂದು ತೋರಿಸಿದನು. ಲಿಥಿಯಂ ಬೀಜವನ್ನು ವೇಗೋತ್ಕರ್ಷಗೊಳಿಸಿದ ಪ್ರೋಟಾನ್‍ಗಳಿಂದ ತಾಡಿಸಿ, ಹೀಲಿಯಂ ಬೀಜ ಪಡೆಯುವಲ್ಲಿ ಥಾಮಸ್ ಯಶಸ್ವಿಯಾದನು. ಥಾಮಸ್ ಡಬ್ಲಿನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‍ಡ್ ಸ್ಟಡೀಸ್, ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ರಿಸರ್ಚ್ ಅಂಡ್ ಸ್ಟ್ಯಾಂಡಡ್ರ್ಸ್, ದಿ ರಾಯಲ್ ಸಿಟಿ ಆಫ್ ಡಬ್ಲಿನ್ ಹಾಸ್ಪಿಟಲ್, ರಾಯಲ್ ಐರಿಷ್ ಅಕಾಡೆಮಿ ಹೀಗೆ ಹಲವು ಹತ್ತಾರು ಶೈಕ್ಷಣೇತರ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದನು. ಬೈಜಿಕ ಭೌತಶಾಸ್ತ್ರ ,ಜಲಗತಿಶಾಸ್ತ್ರ ,ಸೂಕ್ಷ್ಮ ತರಂಗಗಳನ್ನು ಕುರಿತಾಗಿ ಹಲವಾರು ವೈಜ್ಞಾನಿಕ ಲೇಖನಗಳನ್ನು ಪ್ರಕಟಿಸಿದನು. 1938ರಲ್ಲಿ ಕಾಕ್‍ರಾಪ್ಟ್ ಹಾಗೂ ಥಾಮಸ್ ಲಂಡನ್‍ನ ರಾಯಲ್ ಸೊಸೈಟಿಯಿಂದ ಹ್ಯೂಗ್ಸ್ ಪದಕ ಪುರಸ್ಕೃತರಾದರು. 1959ರಲ್ಲಿ ಬೆಲ್ಫಾಸ್ಟ್ನ ಕೀನ್ಸ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಗಳಿಸಿದನು. 1951ರಲ್ಲಿ ಥಾಮಸ್ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 8/25/2019