ರಬಿ, ಇಸಿಡೊರ್ ಐಸಾಕ್ (1898-1988) ೧೯೪೪
ಆಸ್ಟ್ರಿಯ-ಅಸಂಸಂ-ಭೌತಶಾಸ್ತ್ರ- ಅಣ್ವಕ ಕಿರಣ (Molecular Beam ) ಪ್ರಯೋಗ ಅಭಿವೃದ್ದಿಪಡಿಸಿದಾತ.
ರಬಿ ನ್ಯೂಯಾರ್ಕ್‍ನ ವಲಸೆ ಸಮುದಾಯದಲ್ಲಿ ಬೆಳೆದು, ಕಾರ್ನೆಲ್ ಹಾಗೂ ಕೊಲಂಬಿಯಾ ವಿಶ್ವವಿದ್ಯಾಲಯಗಳಲ್ಲಿ ಪದವಿ ಗಳಿಸಿದನು. 1937ರಲ್ಲಿ ಕೊಲಂಬಿಯಾದಲ್ಲಿ ಪ್ರಾಧ್ಯಾಪಕನಾದನು. 1927ರಿಂದ 1929ರವರೆಗೆ ಸ್ಟರ್ನ್ ಜೊತೆಗೆ ಸಂಶೋಧನೆ ಪ್ರಾರಂಭಿಸಿ ಅವನ ಪ್ರಭಾವಕ್ಕೊಳಗಾದನು. ಸ್ಟರ್ನ್-ಗೆರ್‍ಲಾಖ್ ಅಣ್ವಕ- ಕಿರಣಗಳ ಸಾಧನವೊಂದನ್ನು ನಿರ್ಮಿಸಿದ್ದನು. ಇದರಿಂದ ಉತ್ತೇಜಿತಗೊಂಡ ರಬಿ ಸಂಶೋಧನಾ ಕಾರ್ಯಕ್ರಮವೊಂದನ್ನು ಪ್ರಾರಂಭಿಸಿ, ಪರಮಾಣು ಕಾಂತೀಯ ಅನುರಣನ ವಿಧಾನಗಳಿಂದ ರೋಹಿತಗಳನ್ನು ಪಡೆದನು. ಈ ವಿಧಾನದಲ್ಲಿ ಸ್ಥಿರವಾದ ಕಾಂತೀಯ ಕ್ಷೇತ್ರ, ಅಣುಗಳನ್ನು ಒಂದು ನಿರ್ದಿಷ್ಟ ಸ್ಥಿತಿಗೆ ಉದ್ರೇಕಿಸುತ್ತದೆ. ಈ ಸ್ಥಿತಿಯಲ್ಲಿ , ಸರಿಯಾದ ಆವರ್ತನೆಯಲ್ಲಿರುವ (Frequency) ರೇಡಿಯೋ ತರಂಗಗಳನ್ನು ಹಾಯಿಸಲಾಗುತ್ತದೆ. ಈ ರೇಡಿಯೋ ತರಂಗಗಳು ಅಣುಗಳನ್ನು ಒಂದು ಕಾಂತೀಯ ಸ್ಥಿತಿಯಿಂದ ಮತ್ತೊಂದು ಸ್ಥಿತಿಗೆ ಪಲ್ಲಟಗೊಳಿಸುತ್ತವೆ. ಪಲ್ಲಟಗೊಂಡ ಪ್ರಮಾಣಕ್ಕನುಸಾರವಾಗಿ ಅಣು ಅಥವಾ ಪರಮಾಣುಗಳ ಎಲೆಕ್ಟ್ರಾನ್ ಭ್ರಾಮ್ಯತೆಗಳನ್ನು ಕ್ವಾಂಟಂ ವೈದ್ಯುತ್ ಗತಿಶೀಲ ಸಿದ್ಧಾಂತಗಳಿಗನುಗುಣವಾಗಿ ಅಳೆಯಲು ಸಾಧ್ಯ. ಇದು ಬೈಜಿಕ ಕಾಂತೀಯ ಅನುರಣನ ತಂತ್ರ ಪರಿಚಯಿಸುವಲ್ಲಿ ಪರ್ಸೆಲ್ ಹಾಗೂ ಬ್ಲಾಖ್‍ಗೆ ನೆರವಾಯಿತು. ಇದು ಪರಮಾಣು ಗಡಿಯಾರ, ಮೇಸರ್, ಲೇಸರ್‍ಗಳ ಸಾಧ್ಯತೆಗೂ ಕಾರಣವಾಯಿತು. ರಬಿ 1944ರಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದನು. ಎರಡನೇ ಜಾಗತಿಕ ಯುದ್ದದಲ್ಲಿ, ಸೂಕ್ಷ್ಮ ತರಂಗ ರಡಾರ್ ಕುರಿತು ಕೆಲಸ ಮಾಡಿದ ರಬಿ, ನಂತರ ವೈಜ್ಞಾನಿಕ ನೀತಿಗಳ ರೂಪಿಸಿಕೆಗೆ ನೆರವಾದನು. ಪರಮಾಣುಶಕ್ತಿ ಸಮಿತಿಯ,ಸಾಮಾನ್ಯ ಸಮಾಲೋಚನಾ ಸಭೆಗೆ ಕಾರ್ಯದರ್ಶಿಯಾಗಿದ್ದ ರಬಿ, ಯುನೆಸ್ಕೋ, ಜಿನೇವಾದಲ್ಲಿ ಸ್ಥಾಪಿಸಿರುವ ಅಧಿಕ ಚೈತನ್ಯ ಭೌತಶಾಸ್ತ್ರ ಪ್ರಯೋಗಾಲಯದ ನಿಯೋಜಿತ ಮಂಡಳಿಯ ಸದಸ್ಯನಾಗಿದ್ದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019