ಆ್ಯಪಲ್‍ಟನ್, ಸರ್ ಎಡ್ವರ್ಡ್ (ವಿಕ್ಟರ್) (1892-1968)-1947
ಬ್ರಿಟನ್-ಭೌತಶಾಸ್ತ್ರ-ಭೂಮಿಯ ಐಯೋನೋಗೋಳದ ಬಗ್ಗೆ ವ್ಯಾಪಕ ಸಂಶೋಧನೆ ನಡೆಸಿ ಅದರ ಹಲವಾರು ಪದರುಗಳ ಪ್ರತಿಫಲನ ಗುಣಗಳನ್ನು ವಿವರಿಸಿದಾತ.
ಆ್ಯಪಲ್‍ಟನ್ ಕೇಂಬ್ರಿಜ್‍ನಲ್ಲಿ ಭೌತಶಾಸ್ತ್ರ ಅಭ್ಯಸಿಸಿದನು. ನಂತರ ಮೊದಲನೆ ಜಾಗತಿಕ ಯುದ್ದದಲ್ಲಿ ಸಿಗ್ನಲ್ ಅಫಿಸರ್ ಆಗಿ ಕಾರ್ಯನಿರ್ವಹಿಸುತ್ತಾ ರೇಡಿಯೋಗಳ ಬಗೆಗೆ ಆಸಕ್ತಿ ತಳೆದನು. 1924ರಲ್ಲಿ ಲಂಡನ್‍ನ ಕಿಂಗ್ಸ್ ಕಾಲೇಜಿನಲ್ಲಿ ಪ್ರಯೋಗಶೀಲ ಭೌತಶಾಸ್ತ್ರದ ಅಧ್ಯಾಪಕನಾಗಿ ನೇಮಕಗೊಂಡನು. 1939ರಲ್ಲಿ ಡಿಪಾರ್ಟ್‍ಮೆಂಟ್ ಆಫ್ ಸೈಂಟಿಫಿಕ್ ಹಾಗೂ ಇಂಡಸ್ಟ್ರಿಯಲ್ ರಿಸರ್ಚ್‍ನ ಕಾರ್ಯದರ್ಶಿಯಾಗಿ ನಂತರ ಎಡಿನ್‍ಬರೋ ವಿಶ್ವವಿದ್ಯಾಲಯದ ಕುಲಪತಿಯೂ ಆದನು. 1901ರಲ್ಲಿ ಮಾರ್ಕೊನಿ ರೇಡಿಯೋ ಸಂಜ್ಞೆಗಳನ್ನು ಅಟ್ಲಾಂಟಿಕ್ ಸಾಗರದಾಚೆಗೆ ಪ್ರಸಾರ ಮಾಡಿದನು. ಇದಕ್ಕೂ ಮುಂಚೆ ಹಲವು ವಿಜ್ಞಾನಿಗಳು ರೇಡಿಯೋ ಸಂಜ್ಞೆಗಳು ವೈದ್ಯುತ್ ಕಾಂತೀಯ ಅಲೆಗಳಾಗಿರುವುದರಿಂದ ನೇರ ರೇಖೆಯಲ್ಲಿ ಚಲಿಸುವುವೆಂದೂ, ಭೂಮಿಯ ಮೇಲ್ಮೈ ವಕ್ರವಾಗಿರುವುದರಿಂದ ಅವನ್ನು ಭೂಮಿಯ ಮೇಲಿನ ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ಕಳಿಸುವುದು ಸಾಧ್ಯವಿಲ್ಲವೆಂದೂ ನಂಬಿದ್ದರು. ಆದರೆ ಮಾರ್ಕೊನಿಯ ಸಾಧನೆ ಇದನ್ನು ಹುಸಿಗೊಳಿಸಿದ್ದಿತು. ಎ,ಇ,ಕೆನ್ನೆಲ್ಲಿ ಹಾಗೂ ಹೀವಿಸೈಡ್ ಇದಕ್ಕೆ ಒಂದು ವಿವರಣೆ ನೀಡಿದರು. ಅವರ ವಾದದಂತೆ ಭೂಮಿಯ ವಾತಾವರಣದಲ್ಲಿ ಆವಿಷ್ಟಿತ ಕಣಗಳ ಪದರಗಳಿದ್ದು, ಈ ಪದರದಿಂದ ಮಾರ್ಕೊನಿ ಕಳಿಸಿದ ಸಂಜ್ಞೆಗಳು ಪ್ರತಿಫಲನಗೊಂಡಿದ್ದವು. 1925ರಲ್ಲಿ ಆ್ಯಪಲ್‍ಟನ್ ವ್ಯಾಪಕ ಸಂಶೋಧನೆ ನಡೆಸಿ, ಅಂತಹ ಪದರಗಳು ಐಯೊನೋಗೋಳದಲ್ಲಿ ಇರುವುದನ್ನು ಸಂಶಯಾತೀತವಾಗಿ ನಿರೂಪಿಸಿದನು. ಚಾರ್ನೆಮೌತ್ ನಗರದಿಂದ 170 ಕಿ.ಮಿ. ದೂರದ ಕೇಂಬ್ರಿಜ್‍ಗೆ ರೇಡಿಯೋ ಸಂಜ್ಞೆಗಳನ್ನು ಕಳಿಸಿದನು. ಹಾಗೆ ಕಳಿಸಿದಾಗ ಸಂಜ್ಞೆಯ ಒಂದು ಘಟಕ ಸರಳ ರೇಖೆಯಲ್ಲಿ ಸಾಗಿದರೆ ಮತ್ತೊಂದು ಸಂಜ್ಞೆ ಅಯೋನೋಗೋಳದಿಂದ ಪ್ರತಿಫಲಿಸಿ ಬಂದುದೆಂದು ಸಕಾರಣವಾಗಿ ತೋರಿಸಿದನು. ನಂತರದ ಪ್ರಯೋಗಗಳಿಂದ ಹೀಗೆ ಪ್ರತಿಫಲನಗೊಳಿಸುವ ಪದರಗಳು 70 ಕಿ.ಮಿ. ಎತ್ತರದಲ್ಲಿರುವುದಾಗಿ ಸ್ಪಷ್ಟವಾಯಿತು. ಇದೇ ಹೀವ್‍ಸೈಡ್ ಅಥವಾ ಇ-ಪದರ . ರಾತ್ರಿಯ ವೇಳೆ ಸೂರ್ಯನಿಲ್ಲದಾಗ ಅತಿ ನೇರಳೆ ಕಿರಣಗಳು ಇರುವುದಿಲ್ಲವಾದುದಎಂದ . ಅಯೋನೋಗೋಳದ ಮೇಲೆ ಅವುಗಳ ಪರಿಣಾವುವಿರುವುದಿಲ್ಲ. ಹೀಗಾಗಿ ರಾತ್ರಿ ವೇಳೆ ದೂರದ ರೇಡಿಯೋ ಸಂಕೇತಗಳು ಹಗಲಿಗಿಂತಲೂ ಹೆಚ್ಚು ಸ್ಪಷ್ಟ ಹಾಗೂ ಪರಿಣಾಮಕಾರಿಯಾಗಿ ದಕ್ಕುತ್ತವೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 6/6/2020