ಹೈಸೆನ್‍ಬರ್ಗ್, ವೆರ್ನರ್ ಕಾರ್ಲ್ (1901-1976) ೧೯೩೨
ಜರ್ಮನಿ-ಭೌತಶಾಸ್ತ್ರಜ್ಞ-ಕ್ವಾಂಟಂ ಬಲವಿಜ್ಞಾನ ಅನಾವರಣಗೊಳಿಸಿದಾತ. ಅನಿಶ್ಚಿತ ಸಿದ್ದಾಂತ ತತ್ತ್ವ ನೀಡಿದಾತ.
ಹೈಸೆನ್‍ಬರ್ಗ್ ತಂದೆ ಮ್ಯೂನಿಕ್‍ನಲ್ಲಿ ಗ್ರೀಕ್ ಭಾಷೆಯ ಪ್ರಾಧ್ಯಾಪಕನಾಗಿದ್ದನು. ಹೈಸೆನ್‍ಬರ್ಗ್ ಮ್ಯೂನಿಕ್ ಮತ್ತು ಗಟ್ಟಿಂಜೆನ್‍ನಲ್ಲಿ ಶಿಕ್ಷಣ ಪಡೆದನು. ಗಟ್ಟಿಂಜೆನ್‍ನಲ್ಲಿ ಬಾರ್ನ್ ಮತ್ತು ಕೊಪೆನ್‍ಹೇಗ್‍ನಲ್ಲಿ ನೀಲ್ಸ್ ಬೊಹ್ರ್ ಜೊತೆ ಹೈಸೆನ್‍ಬರ್ಗ್ ಕೆಲಸ ಮಾಡಿದನು. 1927ರಲ್ಲಿ ಲೀಪ್‍ಝಿಗ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾದನು. ಹೈಸೆನ್‍ಬರ್ಗ್ ಭೌತಶಾಸ್ತ್ರಕ್ಕೆ ಮಹತ್ತರ ತಿರುವು ನೀಡಿ, ಕ್ರಾಂತಿ ತಂದವನೆಂದು ಪರಿಗಣಿತನಾಗಿದ್ದಾನೆ. 24 ವಯಸ್ಸಿನ ಯುವಕನಾಗಿರುವಾಗಲೇ ಹೈಸೆನ್‍ಬರ್ಗ್ ಕ್ವಾಂಟಂ ಬಲವಿಜ್ಞಾನ ಸಿದ್ಧಾಂತ ರೂಪಿಸಿದನು. ಈ ಸಿದ್ಧಾಂತ ಸಾಪೇಕ್ಷ ಸಿದ್ದಾಂತದಿಂದ ಬೇರೆಯಾಗಿದ್ದಿತು. ಇದಕ್ಕಾಗಿ ಹೈಸೆನ್‍ಬರ್ಗ್ ಮ್ಯಾಟ್ರಿಕ್ಸ್ ಬಲವಿಜ್ಞಾನವನ್ನು ಬಳಕೆಗೆ ತಂದನು. ಇದಕ್ಕೆ ಸರಿ ಸಮಾನವಾದ ತರಂಗ ಬಲವಿಜ್ಞಾನ ಸಿದ್ದಾಂತವನ್ನು ಷ್ರೋಡಿಂಜರ್ 1925ರಲ್ಲಿ ಬಳಕೆಗೆ ತಂದನು. ಹೈಸೆನ್‍ಬರ್ಗ್ ತನ್ನ ಈ ಸಾಧನೆಗಾಗಿ 1932ರ ನೊಬೆಲ್ ಪ್ರಶಸ್ತಿ ಪಡೆದನು. ಹೈಸೆನ್‍ಬರ್ಗ್ ಕ್ವಾಂಟಂ ಸಿದ್ಧಾಂತ ಮಂಡಿಸುವ ಮೊದಲು ಎಲೆಕ್ಟ್ರಾನ್ ಅಲೆ ಸ್ವರೂಪದ್ದೇ ಅಥವಾ ಕಣ ಸ್ವರೂಪದ್ದೇ ಎನ್ನುವ ವಿವಾದಗಳು ಹಾಗೂ ಅದನ್ನು ಯಾವಾಗ ಹೇಗೆ ಪರಿಗಣಿಸಬೇಕೆಂಬ ಸಮಸ್ಯೆಗಳು ತಲೆದೋರಿದ್ದವು. ಹೈಸೆನ್‍ಬರ್ಗ್ ಅಲೆ, ಕಣ ಎನ್ನುವಂತಹ ತೋರಿಕೆಗಳನ್ನು ತೊರೆದು ಅಣುವಿನ, ಎಲೆಕ್ಟ್ರಾನ್‍ನ ಮಟ್ಟದಲ್ಲಿ ಅಳೆಯಬಹುದಾದ ವೀಕ್ಷಿಸಬಹುದಾದ ಅಂಶಗಳಿಗೆ ಮಾತ್ರ ಪ್ರಾಮುಖ್ಯತೆ ನೀಡಿದನು. ಎಲೆಕ್ಟ್ರಾನ್ ಬಗೆಗೆ ತಿಳಿಯಬೇಕೆಂದರೆ ಅದರ ಮೇಲೆ ನಾನಾ ಪ್ರಯೋಗಗಳನ್ನು ನಡೆಸಬೇಕು. ಹೈಸೆನ್‍ಬರ್ಗ್ ಇವೆರಡೂ ವ್ಯವಸ್ಥೆಗಳನ್ನು ಬೇರ್ಪಡಿಸಿದನು. ತಿಳಿಯಬೇಕಾದುದು ಮತ್ತು ತಿಳಿಯಲು ಬಳಸುವ ವ್ಯವಸ್ಥೆಗಳನ್ನು ಪ್ರತ್ಯೇಕಿಸುವ ಅನಿವಾರ್ಯತೆಯನ್ನು ತೋರಿಸಿದನು. ಗಣಿತೀಯವಾಗಿ ಇವೆರಡನ್ನು ಸ್ವತಂತ್ರವಾಗಿ ಕಂಡನು. ಹೈಸೆನ್‍ಬರ್ಗ್ ಈ ಮಾರ್ಗದಿಂದ ರೋಹಿತದಲ್ಲಿ ವೀಕ್ಷಿಸಲ್ಪಟ್ಟ ಪಟ್ಟಿಗಳ ತರಂಗಾಂತರಗಳನ್ನು ಖಚಿತವಾಗಿ ನಿರ್ಧರಿಸುವುದು ಸಾಧ್ಯವಾಯಿತು. ಆಲ್ಬರ್ಟ್ ಐನ್‍ಸ್ಟೀನ್‍ನ ಸಾಪೇಕ್ಷ ಸಿದ್ಧಾಂತದಂತೆ ವಿಶ್ವದ ಆಗು ಹೋಗುಗಳು ಖಚಿತವಾಗಿದ್ದವು, ಇದನ್ನು 18ನೇ ಶತಮಾನದಲ್ಲಿದ್ದ ಫ್ರೆಂಚ್ ಗಣಿತಜ್ಞ, ಭೌತಶಾಸ್ತ್ರಜ್ಞ, ಲಾಪ್ಲಾಸ್ ಪ್ರತಿಪಾದಿಸಿದ್ದನು. ಇವರ ನಿಲುವಿನಲ್ಲಿ ವ್ಯವಸ್ಥೆಯೊಂದರ ಆರಂಭಿಕ ಸ್ಥಿತಿಯ ಪ್ರಾಚಲಗಳು (Parameters) ಸಂಪೂರ್ಣವಾಗಿ ದಕ್ಕಿದ್ದೇ ಆದರೆ, ಅವುಗಳ ಆಧಾರಧ ಮೇಲೆ ಅದು ಹೇಗೆ ವರ್ತಿಸಬಲ್ಲುವೆಂದು ನಿರ್ಧರಿಸುವುದು ಸಾಧ್ಯ . ಹೈಸೆನ್‍ಬರ್ಗ್ 1927ರಲ್ಲಿ ಕ್ವಾಂಟಂ ಬಲವಿಜ್ಞಾನದಲ್ಲಿ ಅನಿಶ್ಚತೆತೆಯ ತತ್ತ್ವ ಮಂಡಿಸಿ, ಈ ಸಾಂಪ್ರಾದಾಯಿಕ ದೃಷ್ಟಿಗೆ ಆಘಾತ ನೀಡಿದನು. ಹೈಸೆನ್‍ಬರ್ಗ್‍ನ ಈ ತತ್ತ್ವದಂತೆ ಯಾವುದೇ ಕಣದ ಸ್ಥಾನ ಹಾಗೂ ಆವಿಷ್ಟವನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಸ್ಥಾನದ ನಿಖರತೆ ಹೆಚ್ಚಿದಂತೆ, ಅದರ ಆವಿಷ್ಟತೆಯ ನಿರ್ಧಾರವೂ, ಆವಿಷ್ಟತೆಯ ನಿಖರತೆ ಹೆಚ್ಚಿದಂತೆ ಸ್ಥಾನದ ನಿರ್ಥಾರವೂ ಖಚಿತತೆಯಿಂದ ದೂರ ಸರಿಯುತ್ತವೆ. ಆದುದರಿಂದ ಸ್ಥಾನ ಮತ್ತು ಆವಿಷ್ಟಗಳೆರಡನ್ನು ಸಂಭವನೀಯ ಅಳತೆಗಳಲ್ಲಿ ಹೇಳಲು ಮಾತ್ರ ಸಾಧ್ಯ. ಎಲೆಕ್ಟ್ರಾನ್ ಸ್ಥಾನವನ್ನು ನಿರ್ಧರಿಸಲು ನಾವು ಯತ್ನಿಸಿದಂತೆ ಭಾವಿಸೋಣ. ಅದಕ್ಕಾಗಿ ನಾವು ಎಲೆಕ್ಟ್ರಾನ್‍ನನ್ನು ನೋಡುವಂತಹ ಕ್ರಿಯೆಯೆಸಗಬೇಕು. ಅಂತಹ ನೋಡುವ ಕ್ರಿಯೆಯಿಂದಾಗಿ ಎಲೆಕ್ಟ್ರಾನ್ ಆವಿಷ್ಟ ವ್ಯತ್ಯಾಸಗೊಳ್ಳುತ್ತದೆ. ಅಂತಹ ಸ್ಥಿತಿಯಲ್ಲಿ ನಾವು ಪಡೆದ ಆವಿಷ್ಟ ಎಲೆಕ್ಟ್ರಾನ್ ಸಹಜ ಸ್ಥಿತಿಯದಾಗಿರುವುದಿಲ್ಲವೆಂದು ಹೈಸೆನ್‍ಬರ್ಗ್ ಹೇಳಿದನು. 1932ರಲ್ಲಿ ಚಾಡ್‍ವಿಕ್ ನ್ಯೂಟ್ರಾನ್ ಅಸ್ತಿತ್ವವನ್ನು ಸಾರಿದನು. ಈ ಹಿನ್ನೆಲೆಯಲ್ಲಿ ಹೈಸೆನ್‍ಬರ್ಗ್ ಪ್ರೋಟಾನ್ ಎಲೆಕ್ಟ್ರಾನ್ ಮಾದರಿಯ ಅಣುವಿಗಿಂತಲೂ, ಪ್ರೋಟಾನ್, ನ್ಯೂಟ್ರಾನ್ ಮಾದರಿಯ ಅಣು, ನೈಜತೆಗೆ ಸನಿಹದಲ್ಲಿರುತ್ತದೆಯೆಂದು ಪ್ರತಿಪಾದಿಸಿದನು. ಇನ್ನು ಮುಂದುವರೆದು ಹೈಸೆನ್‍ಬರ್ಗ್ ಪ್ರೋಟಾನ್, ನ್ಯೂಟ್ರಾನ್‍ಗಳು ಬೈಜಿಕ ಮಟ್ಟದಲ್ಲಿನ ಪರಸ್ಪರ ಬಲಗಳಿಂದ ಬಂಧಿತವಾಗಿರಬೇಕೆಂದು ಸೂಚಿಸಿದನು. ಜಪಾನಿನ ಭೌತಶಾಸ್ತ್ರಜ್ಞ ಯುಕಾವ ಸಿದ್ಧಾಂತ ಹೈಸೆನ್‍ಬರ್ಗ್‍ನ ಈ ಸೂಚನೆ ಸರಿಯೆಂದು ಸಾಧಿಸಿತು. 1966ರಲ್ಲಿ ಐಕ್ಯಗೊಳಿಸಿದ ಕಣ ಸಿದ್ದಾಂತವನ್ನು ಹೈಸೆನ್‍ಬರ್ಗ್ ನೀಡಿದನಾದರೂ ಅದು ಹೆಚ್ಚಿನ ಮಟ್ಟದಲ್ಲಿ ವಿಜ್ಞಾನಿಗಳ ಗಮನ ಸೆಳೆಯಲಿಲ್ಲ. ಎರಡನೇ ಜಾಗತಿಕ ಯುದ್ದದಲ್ಲಿ ಜರ್ಮನಿಯ ವಿಜ್ಞಾನಿಗಳು ನಾಝಿ ಪರ ಹಾಗೂ ವಿರುದ್ಧದ ಬಣಗಳಾಗಿ ಒಡೆದು ಹೋದರು. ಹೈಸೆನ್‍ಬರ್ಗ್ ನಾಝಿ ಪರದವನಾಗಿದ್ದರೂ, ಜರ್ಮನಿಯ ವಿಜ್ಞಾನಿಗಳು ಎಂಬ ಹೆಮ್ಮೆ ತಳೆದಿದ್ದನು. ಯಹೂದಿಯಾಗಿದ್ದ ಐನ್‍ಸ್ಟೀನ್‍ನ ಸಿದ್ದಾಂತಗಳನ್ನು ತಿರಸ್ಕರಿಸುವಂತೆ ನಾಝಿ ಪರ ವಾದಿಗಳು ಹೈಸೆನ್‍ಬರ್ಗ್ ಮೇಲೆ ಒತ್ತಡ ತಂದರು. ಹೈಸೆನ್‍ಬರ್ಗ್ ಇದನ್ನು ಸಾರಸಗಟಾಗಿ ತಿರಸ್ಕರಿಸುವುದರ ಮೂಲಕ ನಾಝಿ ಬೆಂಬಲಿಗರ ಕೆಂಗಣ್ಣಿಗೆ ಗುರಿಯಾದನು. ಇದರ ಫಲವಾಗಿ ಝೋಮರ್ಫೆಲ್ಟ್‍ನ ನಂತರ ಹೈಸೆನ್‍ಬರ್ಗ್‍ಗೆ ದಕ್ಕಬೇಕಾಗಿದ್ದ ಮ್ಯೂನಿಕ್‍ನ ಪ್ರಾಧ್ಯಾಪಕ ಸ್ಥಾನವನ್ನು ನಿರಾಕರಿಸಲಾಯಿತು. ಜಾಗತಿಕ ಯುದ್ದಕ್ಕೆ ಬೇಕಾದ ಶಸ್ತ್ರಾಸ್ತ್ರ ತಯಾರಿಕೆಯ ಯೋಜನೆಯಡಿಯಲ್ಲಿ ಅಣುಶಕ್ತಿ ಅಭಿವೃದ್ದಿಗೆ ಹೈಸೆನ್‍ಬರ್ಗ್‍ನನ್ನು ನೇಮಿಸಿ 1941ರಲ್ಲಿ ಕೈಸರ್ ವಿಲ್‍ಹೆಲ್ಮ್ ಸಂಸ್ಥೆಯ ನಿರ್ದೇಶಕನನ್ನಾಗಿಸಲಾಯಿತು. ಯುದ್ದದ ನಂತರ ಹೈಸೆನ್‍ಬರ್ಗ್ ಗಟ್ಟಿಂಜೆನ್‍ನಲ್ಲಿ ಮ್ಯಾಕ್ಸ್ ಪ್ಲಾಂಕ್ ಸಂಸ್ಥೆಯ ಸ್ಥಾಪನೆಗೆ ನೆರವಾದನು. 1955ರಲಿ ಈ ಸಂಸ್ಥೆಯನ್ನು ಮ್ಯೂನಿಕ್‍ಗೆ ಸ್ಥಳಾಂತರಿಸಿದಾಗ ಅದರ ನಿರ್ದೇಶಕನಾದನು. 1941ರಲ್ಲಿ ಬೊಹ್ರ್ ಜೊತೆಗಿನ ಮಾತುಕತೆಯಲ್ಲಿ ಹೈಸೆನ್‍ಬರ್ಗ್ ಹಿಟ್ಲರ್ ಎಂದೂ ಅಣ್ವಸ್ತ್ರ ಪಡೆಯದಂತೆ ತನ್ನ ಸ್ಥಾನ ಖ್ಯಾತಿ ಅಧಿಕಾರದಿಂದ ತಡೆಹಿಡಿಯುತ್ತಿದೆನೆಂದು ತಿಳಿಸಿದನು. ಇದು ತೀವ್ರ ವಿವಾದಕ್ಕೆ ಗುರಿಯಾಯಿತು. ಹಿಟ್ಲರ್ ಅಣ್ವಸ್ತ್ರದ ಕಡೆ ಗಮನ ಹರಿಸದೆ, ವಿಮಾನ, ಕ್ಷಿಪಣಿಗಳತ್ತ ಆಸ್ಥೆ ತಾಳಿದ್ದರಿಂದ ಅಣ್ವಸ್ತ್ರ ದಕ್ಕಲಿಲ್ಲವೇ ಹೊರತು ಹೈಸೆನ್‍ಬರ್ಗ್‍ನ ಯಾವುದೇ ಯತ್ನದಿಂದಲ್ಲವೆಂದು ಈಗ ಹೇಳಲಾಗುತ್ತಿದೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 3/3/2019