ಷ್ರೋಡಿಂಗರ್, ಎರ್ವಿನ್ (1887-1961) ೧೯೩೩
ಆಸ್ಟ್ರೀಯಾ-ಭೌತಶಾಸ್ತ್ರ- ತರಂಗ ಬಲವಿಜ್ಞಾನದ (Wave Mechanics) ಸ್ಥಾಪಕ.
ಷ್ರೋಡಿಂಗರ್ ಶ್ರೀಮಂತ ಬಟ್ಟೆ ವ್ಯಾಪಾರಿಯ ಮಗ. ಖಾಸಗಿ ಶಿಕ್ಷಕನಿಂದ ,ತಂದೆಯಿಂದ ಪ್ರಾಥಮಿಕ ವಿದ್ಯಾಭ್ಯಾಸ ಗಳಿಸಿದ ಷ್ರೋಡಿಂಗರ್, ವಿಯೆನ್ನಾ ವಿಶ್ವವಿದ್ಯಾಲಯದಿಂದ 1910ರಲ್ಲಿ ಡಾಕ್ಟರೇಟ್ ಗಳಿಸಿ, ಅಲ್ಲಿಯೇ ಬೋಧಕ ಸಿಬ್ಬಂದಿಯಾದನು. ಮೊದಲ ಜಾಗತಿಕ ಯುದ್ದದಲ್ಲಿ ಷ್ರೋಡಿಂಗರ್ ಸೇನೆಗೆ ಸೇರಿದನು. ಆಗ ಆತನನ್ನು ನಿರ್ಜನ ದ್ವೀಪದ ಕಾವಲಿಗಿದ್ದ ಫಿûರಂಗಿ ದಳದೊಂದಿಗೆ ಸೇನೆಗೆ ನಿಯೋಜಿಸಲಾಯಿತು. ಇಲ್ಲಿಯೇ ಷ್ರೋಡಿಂಗರ್ ಭೌತಶಾಸ್ತ್ರದ ಮೂಲ ತತ್ತ್ವಗಳನ್ನು ಗ್ರಹಿಸಿದನು. 1920ರಿಂದ ತರಂಗ ಬಲವಿಜ್ಞಾನಕ್ಕೆ ತಳಹದಿಯಾದ ಹಲವಾರು ಲೇಖನಗಳನ್ನು ಪ್ರಕಟಿಸಿದನು. ಇದರಿಂದಾಗಿ 1927ರಲ್ಲಿ ಮಾಕ್ಸ್ ಪ್ಲಾಂಕ್‍ನಿಂದ ತೆರವಾದ ಸೈದ್ಧಾಂತಿಕ ಭೌತಶಾಸ್ತ್ರ ಪ್ರಾಧ್ಯಾಪಕ ಹುದ್ದೆ ಅಲಂಕರಿಸಿ ಬರ್ಲಿನ್‍ನಲ್ಲಿ ನೆಲೆಸಿದನು. 1937ರಲ್ಲಿ ಹಿಟ್ಲರ್ ಅಧಿಕಾರಕ್ಕೆ ಬಂದಾಗ, ತಕ್ಷಣವೇ ಈ ಹುದ್ದೆಗೆ ರಾಜಿನಾಮೆಯಿತ್ತನು. ಇಲ್ಲಿಂದ ಆಕ್ಸ್ಫರ್ಡ್‍ಗೆ ಹೋದನಾದರೂ, ತಾಯ್ನಾಡಿನ ಸೆಳೆತದಿಂದ ಪಾರಾಗಲಾರದೆ, 1936ರಲ್ಲಿ ಗ್ರಾಝ್‍ಗೆ ಮರಳಿದನು. 1938ರಲ್ಲಿ ಆಸ್ಟ್ರಿಯಾ, ಹಿಟ್ಲರ್‍ನ ವಶವಾಯಿತು. ಆಗ ಜೀವ ಉಳಿಸಿಕೊಳ್ಳಲು ಷ್ರೋಡಿಂಗರ್ ಡಬ್ಲಿನ್‍ಗೆ ಹೋದನು. ಐರ್ಲೆಂಡಿನ ಪ್ರಧಾನಮಂತ್ರಿ ಡೆ ವರೇರಾ, ಗಣಿತ ಪ್ರೇಮಿಯಾಗಿದ್ದು ಷ್ರೋಡಿಂಗರ್‍ಗಾಗಿಯೇ ಸ್ಥಾಪಿಸಿದ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‍ಡ್ ಸ್ಟಡೀಸ್‍ನಲ್ಲಿ ಕೆಲಸ ಪ್ರಾರಂಭಿಸಿದನು. ಇಲ್ಲಿ ಹದಿನೇಳು ವರ್ಷಗಳ ಕಾಲ ಫಲಪ್ರದ ಸಂಶೋಧನೆ ಮಾಡಿದನು. ಸೋವಿಯತ್ ರಷ್ಯಾ ವಿಯೆನ್ನಾದಿಂದ ಹೊರಹೋದ ಮೇಲೆಯೇ ಸ್ವದೇಶಕ್ಕೆ ಹಿಂದುರುಗಿದ ಷ್ರೋಡಿಂಗರ್ ಅಲ್ಪ ಕಾಲದಲ್ಲೇ ಅನಾರೋಗ್ಯದಿಂದ ಮರಣ ಹೊಂದಿದನು. 1924ರಲ್ಲಿ ಬ್ರೊಗ್ಲಿ ಮಂಡಿಸಿದಫಲಿತಾಂಶಗಳ ಬಗೆಗೆ ವಿಚಾರಿಸತೊಡಗಿದನು. ಇದರ ಫಲವಾಗಿ ಷ್ರೋಡಿಂಗರ್ ಯಾವುದೇ ಕಣದೊಂದಿಗೂ ಒಂದು ತರಂಗ ಇರುವುದೆಂದೂ, ಆದ್ದರಿಂದ ಅದರ ಲಕ್ಷಣಗಳು ಕಣ ಹಾಗೂ ತರಂಗಗಳೆರಡಕ್ಕೂ ಹೋಲುವುದೆಂದು ತಿಳಿಸಿದನು ಷ್ರೋಡಿಂಗರ್ ಮತ್ತು ಬ್ರೊಗ್ಲಿ ಇದಕ್ಕಾಗಿ ಹೊಸ ಬಗೆಯ ಸಮೀಕರಣ ರೂಪಿಸಿದರು. ಇದು ಕಣ ಸಿದ್ಧಾಂತ ಅನುಸರಿಸಿದ ಬೊಹ್ರ್ ಸಿದ್ಧಾಂತದಲ್ಲಿನ ಹಲವಾರು ಕೊರತೆಗಳನ್ನು ಸರಿ ಪಡಿಸಿತು. ಷ್ರೋಡಿಂಗರ್ ಹ್ಯಾಮಿಲ್ಟನ್ ವಿಧಾನದಲ್ಲಿ ಕಣದ ಚಲನೆಯನ್ನು ನೀಡಿ, ಅದನ್ನು ತರಂಗ ರೂಪದಲ್ಲಿ ಬರೆದನು. ಇದು ಷ್ರೋಡಿಂಗರ್ ಸಮೀಕರಣವೆಂದೂ ಹೆಸರಾಗಿದೆ. ಇದು ಪ್ರಯೋಗ ವೀಕ್ಷಿತಫಲಿತಾಂಶಗಳಿಗೆ ತಾಳೆಯಾಗುತ್ತದೆ. ಬೊಹ್ರ್ ಆಭಿಗೃಹೀತಗಳಿಲ್ಲದೆ (Assumptions)ಷ್ರೋಡಿಂಗರ್ ಸಮೀಕರಣ, ಪರಮಾಣುವಿನಲ್ಲಿರುವ ಎಲೆಕ್ಟ್ರಾನ್‍ನ ಚೈತನ್ಯದ ಅಳತೆಗಳನ್ನು ಸರಿಯಾಗಿ ನೀಡುತ್ತಿದ್ದಿತು. ಇದಕ್ಕಾಗಿ ಷ್ರೋಡಿಂಗರ್ ಡಿರಾಕ್ ಜೊತೆಗೆ 1933ರ ನೊಬೆಲ್ ಪ್ರಶಸ್ತಿ ಪಡೆದನು. 1926ರ ವೇಳೆ ಷ್ರೋಡಿಂಗರ್ ಸಿದ್ಧಾಂತ ,ತರಂಗ ಬಲವಿಜ್ಞಾನ ಎಂದು ಹೆಸರಾಯಿತು. ಇದು, ಈ ಮೊದಲೇ ಬಾರ್ನ್, ಜೋರ್ಡಾನ್ ಹಾಗೂ ಹೈಸೆನ್‍ಬರ್ಗ್ ನೀಡಿದ ಮಾತೃಕೆ ಗಣಿತಕ್ಕೆ ಸಮನಾದುದೆಂದು ಡಿರಾಕ್ ತೋರಿಸಿದನು. ಇವೆರಡು ಸಿದ್ಧಾಂತಗಳು, ಪೌಲಿ ಬಹಿಷ್ಕರಣ ತತ್ತ್ವದೊಂದಿಗೆ, ಸೇರಿಸಿ ಡಿರಾಕ್ ಕ್ವಾಂಟಂ ಬಲವಿಜ್ಞಾನವನ್ನು ಪೂರ್ಣಗೊಳಿಸಿದನು. ಕ್ವಾಂಟಂ ಬಲವಿಜ್ಞಾನದಿಂದ ನೂರಾರು ವೀಕ್ಷಿತ, ಪ್ರಯೋಗ ಲಭ್ಯ ವಿದ್ಯಾಮಾನಗಳಿಗೆ ಸಮರ್ಪಕ ವಿವರಣೆ ದಕ್ಕಿ ಆವರೆಗೆ ಅಜ್ಞಾತವಾಗಿದ್ದ ಎಷ್ಟೋ ಸಂಗತಿಗಳಿಗೆ ಮುನ್ಸೂಚನೆ ನೀಡಿತು. ಇಷ್ಟೆಲ್ಲ, ಆದರೂ ಷ್ರೋಡಿಂಗರ್‍ಗೆ ಕಣವನ್ನು ಅಲೆಯಂತೆ ಕಾಣುವುದು ಒಂದು ಬಗೆಯ ವೈರುಧ್ಯವೆನಿಸಿದ್ದಿತು. ಇದನ್ನು ಬಾರ್ನ್ ಪರಿಹರಿಸಿದನು. ಷ್ರೋಡಿಂಗರ್ ಸಮೀಕರಣದಲ್ಲಿನ ತರಂಗದ ಪಾರ (Amplitude) ಕಣದ ಸ್ಥಾನ ಸೂಚಿಯೆಂದು ತಿಳಿಸಿದನು. ಇದರಿಂದಾಗಿ ಎಲೆಕ್ಟ್ರಾನ್‍ನ ಸ್ಥಾನ ಹಾಗೂ ಆವಿಷ್ಟ ನಿರ್ದಿಷ್ಟ ಮೌಲ್ಯಗಳಾಗಿರದೆ, ಯಾವುದೇ ಸಮಯದಲ್ಲಿನ ಸಂಭಾವ್ಯತೆಗಳಾದವು. ಷ್ರೋಡಿಂಗರ್, ಬ್ರೊಗ್ಲಿ ಹಾಗೂ ಐನ್‍ಸ್ಟೀನ್ , ಬಾರ್ನ್‍ನ ಈ ಪರಿಕಲ್ಪನೆಯನ್ನು ತೀವ್ರವಾಗಿ ವಿರೋಧಿಸಿದರು. ಬಾರ್ನ್ ಪರಿಕಲ್ಪನೆ ಇಡೀ ಭೌತ ಜಗತ್ತನ್ನು ಕಾರ್ಯ ಕಾರಣ ಸಂಬಂಧಗಳಿಂದ ಹೊರಗೆಳೆದು ಸಂಭಾವ್ಯತೆಯ ಅನುಮಾನಕ್ಕಿಳಿಸಿದೆಯೆಂದು ಇವರ ವಾದವಾಗಿದ್ದಿತು. ಷ್ರೋಡಿಂಗರ್ ಯಾವಾಗಲೂ ಪಾದರಕ್ಷೆ ಧರಿಸಿ, ಹೆಗಲಿಗೆ ಚೀಲವೇರಿಸಿಕೊಂಡಿರುತ್ತಿದ್ದನು. ಇದರಿಂದ ನೊಬೆಲ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹೋದಾಗ, ಸಭಾಂಗಣದೊಳಕ್ಕೆ ಹೋಗಲು ತೊಂದರೆ ಎದುರಿಸಬೇಕಾಯಿತು. ಷ್ರೋಡಿಂಗರ್ ಸದಾ ಹಸನ್ಮುಖಿಯೂ , ವಿದ್ಯಾರ್ಥಿಗಳ ನೆಚ್ಚಿನ ಗುರುವೂ ಆಗಿದ್ದನು. ಈತನಿಗೆ ವ್ಯಾಕರಣ ಹಾಗೂ ಜರ್ಮನ್ ಕಾವ್ಯ ಅಚ್ಚು ಮೆಚ್ಚಿನಗಳಾಗಿದ್ದವು. ವಾಟ್ ಈಸ್ ಲೈಫ್ಕೃತಿಯನ್ನು ಸಹ ಷ್ರೋಡಿಂಗರ್ ರಚಿಸಿದ್ದಾನೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 1/28/2020