ಲಾರೆನ್ಸ್, ಎರ್ನೆಸ್ಟ್ ಓರ್ಲ್ಯಾಂಡೋ (1901-1958) ೧೯೩೯
ಅಸಂಸಂ-ಭೌತಶಾಸ್ತ್ರ- ಸೈಕ್ಲೋಟ್ರಾನ್ ಉಪಜ್ಞೆಕಾರ- ಹೊಸ ವಿಕಿರಣಪಟು ಧಾತುಗಳನ್ನು (Radioactive Element)ಪಡೆದಾತ.
ಲಾರೆನ್ಸ್‍ನ ತಂದೆ ಶಿಕ್ಷಕರ ತರಬೇತಿ ಕಾಲೇಜಿನ ಮುಖ್ಯಸ್ಥನಾಗಿದ್ದನು. ತಾಯಿಯಿಂದ ಲಾರೆನ್ಸ್ ಗಣಿತ ಕಲಿತನು. ದಕ್ಷಿಣ ಡಕೋಟಾದಲ್ಲಿ ಬಾಲ್ಯ ಕಳೆದ ಲಾರೆನ್ಸ್ , ಚುರುಕು ಬಾಲಕನೂ. ಉತ್ತಮ ಕ್ರೀಡಾಪಟುವೂ ಭೌತಶಾಸ್ತ್ರದಲ್ಲಿ ಆಸಕ್ತನೂ ಆಗಿದ್ದನು. ದಕ್ಷಿಣಾ ಡಕೋಟಾ, ಮಿನ್ನೆಸೊಟಾ, ಯೆೀಲ್‍ನಲ್ಲಿ ಶಿಕ್ಷಣ ಪಡೆದು, 1928ರಲ್ಲಿ ಬರ್ಕ್ಲೆಯಲ್ಲಿನ ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾಲಯ ಸೇರಿದನು. 1936ರಲ್ಲಿ ಇಲ್ಲಿನ ವಿಕಿರಣಪಟುತ್ವ ಪ್ರಯೋಗಾಲಯದ ನಿರ್ದೇಶಕನಾದನು. 1929ರಿಂದ ಲಾರೆನ್ಸ್ ಬೈಜಿಕ ಪ್ರತಿಕ್ರಿಯೆಯಿಂದಾಗುವ ಅಧಿಕ ಚೈತನ್ಯದ ಕಣಗಳ ಬಗೆಗೆ ಕೆಲಸ ಮಾಡಿದನು. ಖ್ಯಾತ ಖಗೋಳ ಶಾಸ್ತ್ರಜ್ಞನಾಗಿದ್ದ ಎಡಿಂಗ್ಟನ್, ತಾರೆಗಳು ಬೈಜಿಕ ಪ್ರತಿಕ್ರಿಯೆಯಿಂದ ಚೈತನ್ಯ ಬಿಡುಗಡೆಗೊಳಿಸುತ್ತಿರಬಹುದೆಂದು ಸೂಚಿಸಿದ್ದನು. ಈ ಕಾಲಕ್ಕೆ ಅಧಿಕ ಚೈತನ್ಯದ ಕಣಗಳನ್ನು ಪಡೆಯುವುದು ಬಹು ಪರಿಶ್ರಮದ ಕೆಲಸವಾಗಿದ್ದಿತು. ಲಾರೆನ್ಸ್ 1931ರಲ್ಲಿ ಇದನ್ನು ಪರಿಷ್ಕರಿಸಿ ಕಾಂತ ಕ್ಷೇತ್ರದಲ್ಲಿ ಸರ್ಪಿಲ ಜಾಡಿನಲ್ಲಿ ವೇಗೋತ್ಕರ್ಷಗೊಂಡು , ಅಧಿಕ ಚೈತನ್ಯ ಹೊಂದಿರುವ ಕಣ ಪಡೆಯುವ ಸಾಧನ ನಿರ್ಮಿಸಿದನು. ಇದು ಸ್ಲೈಕ್ಲೊಟ್ರಾನ್ ಎಂದು ಹೆಸರಾಯಿತು. ಮುಂದೆ ಇನ್ನೂ ಪ್ರಬಲ ಸೈಕ್ಲೋಟ್ರಾನ್‍ಗಳು ಚಾಲ್ತಿಗೆ ಬಂದವು. ಇವುಗಳಿಂದ ಲಿಥಿಯಂ ಬೀಜವನ್ನು ಹೀಲಿಯಂ ಬೀಜವಾಗಿ ರೂಪಾಂತರಿಸುವುದು ಸಾಧ್ಯವಾಯಿತು. ಇದನ್ನು ಕಾಕ್‍ಕ್ರಾಫ್ಟ್ ಮತ್ತು ವಾಲ್ಟನ್ ಪ್ರಯೋಗಗಳಲ್ಲಿ ಸಾಧಿಸಿದರು. ಇದರಿಂದಾಗಿ ಕೆಲವೇ ಸಮಯದಲ್ಲಿ ನೂರಾರು ವಿಕಿರಣಪಟು ಸಮಸ್ಥಾನಿಗಳು (Isotopes) ದಕ್ಕಿದವು. ಲಾರೆನ್ಸ್, ಇದನ್ನು ವೈದ್ಯಕೀಯ ರಂಗಗಳಲ್ಲಿ ಬಳಸಲು ಯತ್ನಿಸಿದನು. ಸೈಕ್ಲೋಟ್ರಾನ್‍ನಿಂದ ಮೆಸಾನ್‍ಗಳು, ಪ್ರತಿಕಣಗಳನ್ನು ಪಡೆಯಲಾಯಿತು. ಇದರಿಂದಾಗಿ ಮೂಲ ಕಣಗಳ ಅಧ್ಯಯನ ಬಹುವಾಗಿ ವಿಸ್ತರಿಸಿತು. ಲಾರೆನ್ಸ್ ಗೌರವಾರ್ಥವಾಗಿ 103ನೇಧಾತುವನ್ನು ಲಾರೆನ್ಸಿಯಂ ಎಂದು ಹೆಸರಿಸಲಾಗಿದೆ. 1940ರಲ್ಲಿ ಲಾರೆನ್ಸ್ ತಂಡ ಪ್ಲುಟೋನಿಯಂ ಹಾಗೂ ನೆಪ್ಚೂನಿಯಂಗಳನ್ನು ಪ್ರತ್ಯೇಕಿಸಿತು. ಲಾರೆನ್ಸ್ ಅಣ್ವಸ್ತ್ರ ತಯಾರಿಕೆಯಲ್ಲಿ ಗಣನೀಯ ಪಾತ್ರ ವಹಿಸಿದ್ದನು. ಲಾರೆನ್ಸ್ 1939ರ ನೊಬೆಲ್ ಪ್ರಶಸ್ತಿಯಿಂದ ಪುರಸ್ಕೃತನಾಗಿದ್ದಾನೆ
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/9/2020