ಡಿರಾಕ್ ಪೌಲ್ ಅಡ್ರಿಯನ್ ಮೌರಿಸ್ (1902-1984) ೧೯೩೩
ಬ್ರಿಟನ್-ಭೌತಶಾಸ್ತ್ರ-ಕ್ವಾಂಟಂ ಬಲಶಾಸ್ತ್ರಕ್ಕೆ ಮಹತ್ತರ ಕೊಡುಗೆ ನೀಡಿದಾತ -ಪಾಸಿಟ್ರಾನ್ ಹಾಗೂ ಇತರ ಪ್ರತಿ ಕಣಗಳ ಅಸ್ತಿತ್ವವನ್ನು ಮುನ್ನುಡಿದಾತ.
ಸ್ವಿಸ್ ತಂದೆ, ಇಂಗ್ಲೀಷ್ ತಾಯಿಯ ಮಗನಾದ ಡಿರಾಕ್ ಬ್ರಿಸ್ಟಲ್ ಹಾಗೂ ಕೇಂಬ್ರಿಜ್‍ನಲ್ಲಿ ವೈದ್ಯುತ್ ಇಂಜನಿಯರಿಂಗ್ ಹಾಗೂ ಗಣಿತಶಾಸ್ತ್ರದ ವ್ಯಾಸಂಗ ಮಾಡಿದನು. ಬಾಲ್ಯದಿಂದಲೇ ಡಿರಾಕ್‍ಗೆ ಶುದ್ಧಗಣಿತದ ಕಡೆಗೆ ತುಡಿತವಿದ್ದಿತು. ಆದರೆ ಶುದ್ಧಗಣಿತದ ಅಧ್ಯಯನದಿಂದ ಜೀವನ ನಿರ್ವಹಣೆ ಅಸಾಧ್ಯವೆಂದು ಭಾವಿಸಿದ್ದ ಡಿರಾಕ್ ವೈದ್ಯುತ್ ಇಂಜಿನಿಯರಿಂಗ್ ಪದವಿ ಪಡೆದನು. ಇಂಜಿನಿಯರಿಂಗ್ ಸಮಸ್ಯೆಗಳ ಪರಿಹಾರಕ್ಕೆ ಬಳಸುವ ಗಣಿತದಲ್ಲಿನ ಸೌಂದರ್ಯಕ್ಕೆ ಡಿರಾಕ್ ಮನಸೋತಿದ್ದನು. ಇಂಜಿನಿಯರಿಂಗ್ ಪದವಿ ಪಡೆದ ನಂತರವೂ ತಕ್ಷಣ ಉದ್ಯೋಗ ದೊರೆಯಲಿಲ್ಲ. ಆದರೆ ಡಿರಾಕ್‍ನ ಗಣಿತಾಸಕ್ತಿ ತಿಳಿದಿದ್ದ ಬ್ರಿಸ್ಟಲ್ ವಿಶ್ವವಿದ್ಯಾಲಯದ ಆಡಳಿತವರ್ಗ ಈತನನ್ನು ತನ್ನಲ್ಲಿಗೆ ಆಹ್ವಾನಿಸಿ, ಶುಲ್ಕ ರಹಿತ ವ್ಯಾಸಂಗಕ್ಕೆ ಅನುವು ಮಾಡಿತು. ಇದು ಡಿರಾಕ್ ಇಂಜಿನಿಯರಿಂಗ್‍ನ್ನು ಸಂಪೂರ್ಣವಾಗಿ ತೊರೆದು ಗಣಿತ ಹಾಗೂ ಭೌತಶಾಸ್ತ್ರದತ್ತ ಮುಖ ಮಾಡುವಂತೆ ಮಾಡಿತು. ಅಸಂಸಂಗಳಲ್ಲಿ ಕೆಲಕಾಲ ಬೋಧಕನಾಗಿ, ಜಪಾನ್ ಹಾಗೂ ಸೈಬೀರಿಯಾಗಳಿಗೆ ಭೇಟಿ ಇತ್ತನು. 1932ರಲ್ಲಿ ಕೇಂಬ್ರಿಜ್‍ನ ಲುಕೇಷಿಯನ್ ಪೀಠದ ಗಣಿತ ಪ್ರಾಧ್ಯಾಪಕನಾಗಿ ಡಿರಾಕ್ ನೇಮಕಗೊಂಡನು. 1969ರಲ್ಲಿ ನಿವೃತ್ತಿಯಾಗುವವರೆಗೆ ಡಿರಾಕ್ ಅದೇ ಸ್ಥಾನದಲ್ಲಿ ಅಲ್ಲೇ ಉಳಿದನು. ಇದಾದ ನಂತರ ಅಸಂಸಂಗಳ ಹಲವಾರು ವಿಶ್ವ ವಿದ್ಯಾಲಯಗಳಿಗೆ ಸಂದರ್ಶಕ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸತೊಡಗಿದ ಡಿರಾಕ್ 1971ರಲ್ಲಿ ಫ್ಲೋರಿಡಾ ರಾಜ್ಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕನಾದನು. ಭೌತಶಾಸ್ತ್ರದ ಅಪೂರ್ವ ಸೈದ್ಧಾಂತಿಕ ಸೈನ್ಯದಲ್ಲಿ ಒಬ್ಬನಾಗಿದ್ದ ಡಿರಾಕ್, ಅಂಬೆಗಾಲಿಡುತ್ತಿದ್ದ ‘ಕ್ವಾಂಟಂ’ ಮೆಕಾನಿಕ್ಸ್ ದೌಡಾಯಿಸುವಂತೆ ಮಾಡಿದನು. ಬಾರ್ನ್ ಹಾಗೂ ಜೋರ್ಡಾನ್‍ರ ನಂತರ 1926ರಲ್ಲಿ ಕ್ವಾಂಟಂ ಬಲವಿಜ್ಞಾನದ ಸಾರ್ವತ್ರಿಕ ರಾಚನಿಕ ಸ್ವರೂಪವನ್ನು ನೀಡಿದ ಕೀರ್ತಿ ಡಿರಾಕ್‍ಗೆ ಸಲ್ಲುತ್ತದೆ. 1925ರಲ್ಲಿ ಉಹ್ಲೆನ್‍ಬೆಕ್ ಎಲೆಕ್ಟ್ರಾನಿಕ್ಸ್ ಗಿರಕಿಗಳನ್ನು ಕಂಡು ಹಿಡಿದಿದ್ದನು. ಕ್ವಾಂಟಂ ಬಲವಿಜ್ಞಾನ ಕುರಿತಾದಂತೆ ಆಗ ಷ್ರೌಡಿಂಜರ್ ಮಂಡಿಸಿದ್ದ ಸಿದ್ಧಾಂತಕ್ಕೆ ಸಾಪೇಕ್ಷಿತ ತತ್ತ್ವ ಬಳಸಿ ಎಲೆಕ್ಟ್ರಾನ್‍ಗಳ ಗಿರಕಿಯನ್ನು ವಿವರಿಸಿದನು. 1930ರಲ್ಲಿ ಡಿರಾಕ್ ಎಲೆಕ್ಟ್ರಾನ್ ಸ್ಥಿತಿಗಳ ಅಸ್ತಿತ್ವಕ್ಕೆ ಸಂಭವನೀಯ ಋಣಾತ್ಮಕ ಚೈತನ್ಯದ ಪರಿಹಾರಗಳನ್ನು ಒದಗಿಸಿದನು. ಅಲ್ಲದೆ ಎಲೆಕ್ಟ್ರಾನ್‍ನ ಈ ಸ್ಥಿತಿಗಳು, ಋಣಾತ್ಮಕ ಕಣಗಳಿಂದ ತುಂಬಲ್ಪಟ್ಟಿದ್ದು ಬೇರೆಯ ಎಲೆಕ್ಟ್ರಾನ್ ಒಳ ಪ್ರವೇಶಿಸದಂತೆ ತಡೆಯೊಡ್ಡುತ್ತಿರುವವೆಂದು ನಿರೂಪಿಸಿದನು. ಇನ್ನು ಮುಂದುವರೆದ ಡಿರಾಕ್ ಸಾಕಷ್ಟು ಪ್ರಬಲ ಪ್ರೋಟಾನ್‍ನಿಂದ , ಎಲೆಕ್ಟ್ರಾನ್ ಋಣಾತ್ಮಕ ಸ್ಥಿತಿಯನ್ನು ತಾಡಿಸಿದರೆ, ಅದರಿಂದ ಎಲೆಕ್ಟ್ರಾನ್‍ಗಳು ಹೊರದಬ್ಬಲ್ಪಟ್ಟು, ಎಲೆಕ್ಟ್ರಾನ್-ಪಾಸಿಟ್ರಾನ್ ಜೋಡಿ ದಕ್ಕುವುದೆಂದು ಅನುಮಾನಿಸಿದನು. ಹೀಗೆ ಅಸ್ತಿತ್ವಕ್ಕೆ ಬಂದ, ಧನಾವಿಷ್ಟ ಕಣ, ಎಲೆಕ್ಟಾನ್‍ನ ಪ್ರತಿಕಣವಾಗಿದ್ದು ಅದನ್ನು ಪಾಸಿಟ್ರಾನ್ ಎಂದು ಹೆಸರಿಸಿದನು. ಒಂದು ಎಲೆಕ್ಟ್ರಾನ್ ಮತ್ತೊಂದು ಪಾಸಿಟ್ರಾನ್ ಸನಿಹಕ್ಕೆ ಬಂದಾಗ ಅವೆರಡೂ ಪರಸ್ಪರ ವಿನಾಶಕ್ಕೊಳಗಾಗಿ, ಪ್ರೋಟಾನ್ (ಬೆಳಕಿನ ಕಣ) ಬಿಡುಗಡೆಗೊಳ್ಳುತ್ತದೆ. ಡಿರಾಕ್‍ನ ಈ ಎಲ್ಲಾ ಊಹೆಗಳನ್ನು 1932ರಲ್ಲಿ ಸಿ.ಡಿ. ಅ್ಯಂಡರ್ಸನ್ ಪ್ರಯೋಗಗಳಿಂದ ದೃಢಪಡಿಸಿದನಲ್ಲದೆ, ಎಲೆಕ್ಟ್ರಾನ್ ಮಾತ್ರವಲ್ಲ. ಪ್ರತಿಯೊಂದು ಕಣವೂ ತನ್ನದೇ ಆದ ಪ್ರತಿಕಣವನ್ನು ಹೊಂದಿರುವುದೆಂದು ಸಾಧಿಸಿದನು. 1930ರಲ್ಲಿ ಡಿರಾಕ್ ಪ್ರಿನ್ಸಿಪಲ್ಸ್ ಆಫ್ ಕ್ವಾಂಟಂ ಮೆಕ್ಯಾನಿಕ್ಸ್ ಪ್ರಕಟಿಸಿದನು, ಹಲವಾರು ಸಮಕಾಲೀನ ಭೌತಶಾಸ್ತ್ರಜ್ಞರು ಅವನನ್ನು ನ್ಯೂಟನ್ ಪ್ರತಿಭೆಗೆ ಸಮನಾದವನೆಂದು ಗೌರವಿಸಿದ್ದಾರೆ. 1933ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಫ್ರೆಡರಿಕ್ ಹಾಗೂ ಡಿರಾಕ್ ಜಂಟಿಯಾಗಿ ಪಡೆದರು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/24/2020