ಡೇವಿಸನ್, ಕ್ಲಿಂಟನ್ ಜೋಸೆಫ್ (1881-1958 ) ೧೯೩೭
ಅಸಂಸಂ -ಭೌತಶಾಸ್ತ್ರ- ಪ್ರಯೋಗಗಳಿಂದ ಸ್ಪಟಿಕಗಳಿಂದಾಗುವ ಎಲೆಕ್ಟ್ರಾನ್ ವಿವರ್ತನ (Diffraction)ಕಂಡು ಹಿಡಿದಾತ.
ಚಿಕಾಗೋದಿಂದ ಪದವಿ ಪಡೆದ ಡೇವಿಸನ್ ಪ್ರಿನ್ಸ್‍ಟನ್‍ನಿಂದ ಪಿ.ಎಚ್.ಡಿ. ಗಳಿಸಿದನು. 1911ರಿಂದ 1917ರವರೆಗೆ ಡೇವಿಸನ್ ಕಾರ್ನೆಗಿ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕೆಲಸ ಮಾಡಿದನು. ಮುಂದೆ ಕಾರ್ನೆಗಿಯನ್ನು ತೊರೆದು ಯುದ್ದಕಾಲದ ನೇಮಕಾತಿಗಾಗಿ, ಆಗ ವೆಸ್ಟರ್ನ್ ಎಲೆಕ್ಟ್ರಾನಿಕ್ ಕಂಪನಿ ಲ್ಯಾಬೋರೇಟರಿ ಎಂದು ಹೆಸರಾಗಿದ್ದ ಈಗಿನ ಬೆಲ್ ಟೆಲಿಫೋನ್ ಲ್ಯಾಬೋರೇಟರಿಯನ್ನು ಸೇರಿ, 1945ರವರೆಗೆ ಅಲ್ಲಿಯೇ ಉಳಿದನು. ಡೇವಿಸನ್ ಹಾಗೂ ಜರ್ಮರ್ ಪ್ರಯೋಗಗಳಿಂದ , ಬ್ರೊಗಿಲಿಯ ವಾದದಂತೆ ಬೆಳಕಿನ ಕಣಗಳು ಅಲೆಗಳಂತೆಯೂ ವರ್ತಿಸುವುದು ಖಚಿತಗೊಂಡಿದ್ದಿತು. ಈ ಆಧಾರದ ಮೇಲೆ ಡಿರಾಕ್ ಹಾಗೂ ಷ್ರೌಡಿಂಜರ್ ಎಲೆಕ್ಟ್ರಾನ್‍ಗಳಿಗೂ ಕಣ ಹಾಗೂ ಅಲೆಗಳ ದ್ವೈತ ಗುಣಗಳಿರುವುದೆಂದು ಸೂಚಿಸಿದ್ದರು. ಡೇವಿಸ್‍ನ ಹಾಗೂ ಜರ್ಮರ್ ಇದಕ್ಕೆ ಪ್ರಾಯೋಗಿಕ ಸಾಕ್ಷ್ಯ ಒದಗಿಸಿದರು. ಇದು ಆಧುನಿಕ ಭೌತಶಾಸ್ತ್ರದ ದೃಷ್ಟಿಗೆ ಕ್ರಾಂತಿಕಾರಕ ಬದಲಾವಣೆ ನೀಡಿತು. ಡೇವಿಸನ್ ಹಾಗೂ ಜರ್ಮರ್ ರ ಈ ಸಂಶೋಧನೆ ಭಾಗಶ: ಆಕಸ್ಮಿಕವಾಗಿ ಹಾಗೂ ಭಾಗಶ: ಸನ್ನದು ವಿವಾದದ ಅಂಗವಾಗಿ ಹೊರಬಂದಿತು. ವೆಸ್ಟರ್ನ್ ಎಲೆಕ್ಟ್ರಿಕ್ ಕಂಪನಿಯ ಪರವಾಗಿ ಡೆ ಫಾರೆಸ್ಟ್ ರೂಪಿಸಿದ್ದ, ಆಕ್ಸೈಡ್ ಲೇಪಿತ ತಂತು ಹೊಂದಿದ್ದ ಮೂರು ತಂತುಗಳ ನಿರ್ವಾತ ಕವಾಟಕ್ಕೆ ಸನ್ನದು ಲಭಿಸಿದ್ದಿತು. ಆದರೆ ಇದೇ ಸಮಯಕ್ಕೆ ಜನರಲ್ ಎಲೆಕ್ಟ್ರಿಕ್ ಕಂಪನಿಯ ಲ್ಯಾಂಗ್‍ಮ್ಯೂಯಿರ್, ಟಂಗಸ್ಟನ್ ತಂತು ಬಳಸಿ, ಇದೇ ಬಗೆಯ ಸಾಧನ ನಿರ್ಮಿಸಿದ್ದನು. ಈ ಎರಡು ಕಂಪೆನಿಗಳ ಮಧ್ಯೆ ಈ ಸಾಧನವನ್ನು ರೂಪಿಸಿದ, ಸನ್ನದು ಯಾರಿಗೆ ದಕ್ಕಬೇಕೆನ್ನುವ ವಿಚಾರದಲ್ಲಿ ವಿವಾದ ತಲೆದೋರಿ ನ್ಯಾಯಾಲಯದ ಕಟ್ಟೆ ಹತ್ತಿ, ಒಂದು ದಶಕಕ್ಕೂ ಹೆಚ್ಚು ಕಾಲ ವ್ಯಾಜ್ಯ ಜರುಗಿತು. ಈ ವ್ಯಾಜ್ಯವನ್ನು ಒಂದು ಅಂತಿಮ ಘಟ್ಟಕ್ಕೆ ತರಬೇಕೆನ್ನುವ ದೃಷ್ಟಿಯಲ್ಲಿ ಡೇವಿಸನ್ ಹಾಗೂ ಜರ್ಮರ್ ಆಕ್ಸೈಡ್ ಲೇಪಿತ ಪ್ಲಾಟಿನಂ ಫಲಕವನ್ನು ಅಯಾನ್’ಗಳಿಂದ ತಾಡಿಸಿ ಉತ್ಸರ್ಜನೆಯನ್ನು ಅಳೆದರು. ನಳಿಕೆಯಲ್ಲಿರುವ ಆಮ್ಲಜನಕದ ಉಪಸ್ಥಿತಿಯಿಂದಾಗಿ ಎಲೆಕ್ಟ್ರಾನ್ ಉತ್ಸರ್ಜನೆಯ ಮೇಲೆ ಯಾವುದೇ ಪರಿಣಾಮಗಳಾಗುವುದಿಲ್ಲ ಎನ್ನುವುದನ್ನು ತೋರಿಸುವುದರ ಮೂಲಕ ಲ್ಯಾಂಗ್‍ಮೂಯಿರ್‍ನ ನಳಿಕೆ ತಮ್ಮ ಕಂಪನಿಯ ನಳಿಕೆಗಿಂತ ಭಿನ್ನವಲ್ಲ ಎನ್ನುವುದನ್ನು ತೋರಿಸುವುದೇ ಅವರ ಉದ್ದೇಶವಾಗಿದ್ದಿತು. ಡೇವಿಸನ್ ಹಾಗೂ ಜರ್ಮರ್‍ರ ಈ ಪ್ರಯೋಗಗಳ ಫಲಿತಾಂಶದಿಂದಾಗಿ, ಸರ್ವೋಚ್ಛ ನ್ಯಾಯಾಲಯ ವೆಸ್ಟರ್ನ್ ಎಲೆಕ್ಟ್ರಿಕ್ ಕಂಪನಿಯ ಪರವಾಗಿ ತೀರ್ಪು ಜಾರಿಗೊಳಿಸಿತು. ಇದೇ ಸಮಯದಲ್ಲಿ ಡೇವಿಸನ್ ಹಾಗೂ ಸಿ.ಎಚ್.ಕುನ್ಸ್‍ಮನ್, ಎಲೆಕ್ಟ್ರಾನ್ ತಾಡನದಡಿಯಲ್ಲಿ, ಎಲೆಕ್ಟ್ರಾನ್ ಉತ್ಸರ್ಜನೆಯ ಹಾಗೂ ನಮನದ ಅಧ್ಯಯನಕ್ಕೆ ಪ್ರಾರಂಭಿಸಿದರು. ಈ ಅಧ್ಯಯನದಲ್ಲಿ ಕೆಲವು ಎಲೆಕ್ಟ್ರಾನಗಳು ಸಂಪಾತ (Incident) ಬಿಂದುವಿನ ಬದಿಗೆ ವಿಮುಖಗೊಳ್ಳುವುದು ತಿಳಿಯಿತು. 1925ರಲ್ಲಿ ದ್ರವ ವಾಯುವಿನ ಶೀಷೆಯೊಂದು ಸಿಡಿದು ಡೇವಿಸನ್ ಪ್ರಯೋಗಕ್ಕೆ ಬಳಸುತ್ತಿದ್ದ ನಿಕ್ಕಲ್ ಮೇಲೈಯನ್ನು ಉತ್ಕರ್ಷಿಸಿತು (Oxidised). ಇದನ್ನು ಬಿಸಿಮಾಡಿ ಡೇವಿಸನ್ ಸ್ವಚ್ಛಗೊಳಿಸಿದಾಗ ಅಚ್ಚರಿಯೊಂದು ಕಾದಿತ್ತು. ಕೆಲವು ನಮನ ಹೊಂದಿ ವಿಶಿಷ್ಟ ರೀತಿಯಲ್ಲಿ ಚದುರುತ್ತಿರುವವೆಂದು ವಿವರಿಸಿದರು. ಕೆಲವು ಕೋನಗಳಲ್ಲಿ ಈ ನಿಕ್ಕಲ್ ಫಲಕ ಎಲೆಕ್ಟ್ರಾನ್‍ಗಳ ಗರಿಷ್ಟ ಚದುರಿಕೆಯನ್ನು ದಾಖಲಿಸಿದ್ದಿತು. 1926ರಲ್ಲಿ ಆಕ್ಸ್‍ಫರ್ಡ್‍ಗೆ ಭೇಟಿ ನೀಡಿದ ಡೇವಿಸನ್‍ಗೆ ತಾನು ಬೆಳಕು ಅಲೆಯಂತೆಯೂ ವರ್ತಿಸುವುದೆಂಬ ಬ್ರೊಗ್ಲಿಲಿಯ ವಾದ ತಿಳಿಯಿತು. ತತಕ್ಷಣವೇ ಡೇವಿಸನ್‍ಗೆ , ತಾನು ಎಲೆಕ್ಟ್ರಾನ್‍ನ ಗರಿಷ್ಟ ವಿವರ್ತನ ವೀಕ್ಷಿಸಿದ್ದು ಅರಿವಾಯಿತು. 1927ರಲ್ಲಿ ಜರ್ಮರ್‍ರ ಜೊತೆ ಸೇರಿ ಡೇವಿಸನ್ ಪ್ರಯೋಗಗಳ ಮೂಲಕ ಬೆಳಕು ಅಲೆಯಂತೆ ವರ್ತಿಸುವುದನ್ನು ಖಚಿತಪಡಿಸಿದನು. ಇದರಿಂದ ಲೋಹ ಸ್ಪಟಿಕಗಳಲ್ಲಿನ ಪರಮಾಣು ಜೋಡಣೆಯಿಂದ ಎಲೆಕ್ಟ್ರಾನ್‍ಗಳು ಪ್ರತಿಫಲನಗೊಂಡು ವಿವರ್ತನೆಗೊಂಡಿರುವುದು ಸಾಬೀತಾಯಿತು. ಇದಕ್ಕಾಗಿ 1937ರಲ್ಲಿ, ಇದೇ ಬಗೆಯ ವಿದ್ಯಾಮಾನವನ್ನು ಹೊರಗೆಡಹಿದ್ದ ಜೆ.ಪಿ. ಥಾಮ್ಸನ್ ಜೊತೆ ಡೇವಿಸನ್ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 6/17/2020