ಥಾಮ್ಸನ್, ಸರ್ ಜಾರ್ಜ್ ಪಗೆಟ್ (ಜೆ.ಪಿ.ಥಾಮ್ಸನ್) (1892-1975) ೧೯೩೭
ಬ್ರಿಟನ್-ಭೌತಶಾಸ್ತ್ರ-ಸ್ಪಟಿಕಗಳಲ್ಲಿ ಪರಮಾಣುಗಳಿಂದ ಎಲೆಕ್ಟ್ರಾನ್‍ಗಳು ವ್ಯತಿಕರಣಗೊಳ್ಳುವುದನ್ನು ಪ್ರಯೋಗಗಳಿಂದ ಅನಾವರಣಗೊಳಿಸಿದಾತ.
ಜೆ.ಪಿ.ಥಾಮ್ಸನ್ ಖ್ಯಾತ ವಿಜ್ಞಾನಿ ಜೆ.ಜೆ. ಥಾಮ್ಸನ್‍ನ ಏಕೈಕ ಪುತ್ರ. ಮೊದಲನೆ ಜಾಗತಿಕ ಯುದ್ದದಲ್ಲಿ ಭಾಗವಹಿಸಿದ ಥಾಮ್ಸನ್ ಭೂ ಪಡೆಯಲ್ಲಿದ್ದು ಅಲ್ಪದರಲ್ಲೇ ಪ್ರಾಣಾಪಾಯದಿಂದ ತಪ್ಪಿಸಿಕೊಂಡನು. 1915ರಲ್ಲಿ ರಾಯಲ್ ಫೆ್ಲೈಯಿಂಗ್ ಕಾಪ್ರ್ಸ್‍ಗೆ ಸೇರಿ, ವಿಮಾನಗಳ ಸ್ಥಿರತೆಯ ಅಧ್ಯಯನದ ತಂಡದಲ್ಲಿದ್ದನು. 1919ರಲ್ಲಿ ಕೇಂಬ್ರಿಜ್‍ಗೆ ಹಿಂದಿರುಗಿ ತನ್ನ ತಂದೆಯ ಪ್ರಯೋಗಾಲಯದಲ್ಲಿ ವಿಕಿರಣಗಳ ಬಗ್ಗೆ ಅಧ್ಯಯನ ನಡೆಸಿದನು. ನಂತರ ಅಬೆರ್ಡ್‍ನ್ ವಿಶ್ವವಿದ್ಯಾಲಯಕ್ಕೆ ಸೇರಿ, ಮೂವತ್ತನೇ ವಯಸ್ಸಿನಲ್ಲಿ ಪ್ರಾಧ್ಯಾಪಕನಾದನು. 1927ರಲ್ಲಿ ತನ್ನ ವಿದ್ಯಾರ್ಥಿಯಾಗಿದ್ದ ಅಲೆಕ್ಸ್ ರೀಡ್‍ನೊಂದಿಗೆ ತೆಳುವಾದ ಲೋಹದ ರೇಕುಗಳ (Foil) ಮೂಲಕ ಹಾದು ಹೋಗುವ ಎಲೆಕ್ಟ್ರಾನ್‍ಗಳು ವ್ಯತಿಕರಣ (Interference) ಹೊಂದುವುದನ್ನು ಗುರುತಿಸಿದನು. ಇದು ಬ್ರೊಗ್ಲಿ ಈ ಮೊದಲೇ ಹೇಳಿದಂತೆ ಎಲೆಕ್ಟ್ರಾನ್‍ನ ಕಣ ಹಾಗೂ ತರಂಗದ ಸ್ವಭಾವವನ್ನು ಖಚಿತಪಡಿಸುತ್ತಿದ್ದಿತು. ಡೇವಿಸನ್ ಸ್ವತಂತ್ರವಾಗಿ, ಲೋಹದ ರೇಕುಗಳ ಬದಲಿಗೆ ನಿಕಲ್ ಸ್ಪಟಿಕ ಬಳಸಿ, ಇದೇ ಫಲಿತಾಂಶಗಳನ್ನು ಪಡೆದಿದ್ದನು. 1937ರಲ್ಲಿ ಥಾಮ್ಸನ್ ಹಾಗೂ ಡೇವಿಸನ್ ನೊಬೆಲ್ ಪ್ರಶಸ್ತಿ ಪಡೆದರು. 1930ರಲ್ಲಿ ಥಾಮ್ಸನ್ ಲಂಡನ್‍ನ ಇಂಪೀರಿಯಲ್ ಕಾಲೇಜನ್ನು ಸೇರಿದನು. ಲೀಥಿಯಂ ಧಾತುವಿಗೆ ಎರಡು ಸಮಸ್ಥಾನಿಗಳಿವೆಯೆಂದು (Isotopes) ಅನಾವರಣಗೊಳಿಸಿದನು. ಥಾಮ್ಸನ್ 1939ರಲ್ಲಿ ಜರ್ಮನಿ ಯುರೇನಿಯಂ ಪರಮಾಣು ಅಸ್ತ್ರ ತಯಾರಿಸುವ ಸಾಧ್ಯತೆಯನ್ನು ಮನಗಂಡನು. ಥಾಮ್ಸನ್ ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ ಬ್ರಿಟನ್ ಸರ್ಕಾರಕ್ಕೆ ಪರಮಾಣು ಅಸ್ತ್ರಗಳ ಬಗ್ಗೆ ಸಲಹೆ ನೀಡಲು ನಿಯೋಜಿತಗೊಂಡ ಮೌಡ್ ಸಮಿತಿಯ ಮುಖ್ಯಸ್ಥನಾದನು. ಜುಲೈ 1941ರಲ್ಲಿ ಈ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿ, ಪ್ರತ್ಯೇಕಿಸಿದ ಯುರೇನಿಯಂ-235 ಬಳಸಿ ಪರಮಾಣು ಅಸ್ತ್ರ ತಯಾರಿಸಬೇಕೆಂದು ಶಿಫಾರಸ್ಸು ಮಾಡಿತು. ಇದರ ಕಾರ್ಯ ಸಮನ್ವತೆಯ ಹೊಣೆಯನ್ನು ಚಾಡ್‍ವಿಕ್‍ಗೆ ವಹಿಸಲಾಯಿತು. ಮುಂದೆ ಥಾಮ್ಸನ್ ಕೆನಡಾ ದೇಶದ ವೈಜ್ಞಾನಿಕ ಸಲಹೆಗಾರನಾದನು. ನಂತರ 1943ರಲ್ಲಿ ಬ್ರಿಟನ್‍ನ ವಾಯುಯಾನ ಸಚಿವಾಲಯಕ್ಕೆ ಸಲಹೆಗಾರನಾಗಿದ್ದನು. ಯುದ್ದದ ನಂತರ 1952ರಲ್ಲಿ ಕೇಂಬ್ರಿಜ್‍ಗೆ ಮರಳಿದನು. ವೈಜ್ಞಾನಿಕ ವೃಂದದಲ್ಲಿ ಥಾಮ್ಸನ್ ಜಿ.ಪಿ ಎಂದೇ ಹೆಸರಾಗಿದ್ದನು. ಉತ್ತಮರ ಸ್ನೇಹಕ್ಕೆ ಸದಾ ಹಾತೊರೆಯುತ್ತಿದ್ದ ಥಾಮ್ಸನ್ ದೋಣಿ ವಿಹಾರ, ದೋಣಿಗಳ ಮಾದರಿ ತಯಾರಿಕೆಯಲ್ಲಿ ಆಸಕ್ತನಾಗಿದ್ದನು. ಜಲಾಂತರ್ಗಾಮಿ ಹಡಗುಗಳ ಮಾದರಿ ತಯಾರಿಸಿ, ಆನಂದಿಸುತ್ತಿದ್ದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 3/13/2019