ವಿಲ್ಸನ್, ಚಾಲ್ರ್ಸ್ ಥಾಮಸ್ ರೀಸ್ (1869-1959) ೧೯೨೭
ಬ್ರಿಟನ್-ಭೌತಶಾಸ್ತ್ರ- ವಿಲ್ಸನ್ ಮೇಘ ಕೋಠಿಯ (Cloud Chamber) ಉಪಜ್ಞೆಕಾರ.
ವಿಲ್ಸನ್ ನಾಲ್ಕು ವರ್ಷದ ಹಸುಳೆಯಿರುವಾಗ ಆತನ ತಂದೆ ತಾಯಿಗಳು ಸ್ಕಾಟ್ಲೆಂಡ್ ತೊರೆದು ಮ್ಯಾಂಚೆಸ್ಟರ್‍ನಲ್ಲಿ ನೆಲೆಸಿದರು. ಇಲ್ಲಿ ಜೀವಶಾಸ್ತ್ರದ ವಿದ್ಯಾರ್ಥಿಯಾಗಿ ವಿಲ್ಸನ್ ಕಾಲೇಜು ಶಿಕ್ಷಣಕ್ಕೆ ಸೇರಿದನು. ನಂತರ ಕೇಂಬ್ರಿಜ್‍ಗೆ ಹೋಗಿ ಭೌತಶಾಸ್ತ್ರದಲ್ಲಿ ಉತ್ತಮ ಸಾಧನೆ ಮಾಡಿ ಬ್ರಾಡ್’ಫೋರ್ಡ್‍ನಲ್ಲಿ ಬೋಧಕನಾದನು. ನಾಲ್ಕು ವರ್ಷ ಇಲ್ಲಿದ್ದ ವಿಲ್ಸನ್ 1896ರಲ್ಲಿ ಕೇಂಬ್ರಿಜ್ ಸೇರಿದನು. 1894ರಲ್ಲಿ ವಿಲ್ಸನ್, ಬೆನ್‍ನೆವಿಸ್ ಪರ್ವತದ ತುದಿಯಿಂದ ಮೇಘಗಳ ಅದ್ಬುತ ದೃಶ್ಯ ಕಂಡನು. ಆದ್ರ್ರ ಗಾಳಿಯನ್ನು ಒಮ್ಮೆಲೆ ವಿಕಸಿಸುವಂತೆ ಮಾಡಿ, ಇಂತಹುದೇ ಪರಿಣಾಮಗಳನ್ನು ಕೃತಕವಾಗಿ ಪ್ರಯೋಗಾಲಯದಲ್ಲಿ ತರಲು ಯತ್ನಿಸಿದನು. ಅನಿಲ ಹಿಗ್ಗಿದಾಗ ಅದರ ತಾಪಮಾನ ಕುಸಿದು, ಸಣ್ಣ ಹನಿಗಳಾಗಿ ಲಭ್ಯ ಮೇಲ್ಮೈಗಳಲ್ಲಿ ಸಾಂದ್ರೀಕರಣಗೊಳ್ಳುತ್ತದೆ. ಇದಕ್ಕೆ ಯಾವುದೇ ಅಣು ಬೀಜಗಳು ಲಭ್ಯವಾದರೂ ಸಾಕಾಗುತ್ತದೆ. ಸೂಕ್ಷ್ಮ ಧೂಳು ಇಲ್ಲವಾದರೆ ಆವಿಷ್ಟಗೊಂಡಿರುವ ಕಣ ಬೀಜದಂತೆ ವರ್ತಿಸಿ ಸಾಂದ್ರೀಕರಣಕ್ಕೆ ನೆರವಾಗುತ್ತವೆಯೆಂದು ತೋರಿಸಿದನು. 1911ರಲ್ಲಿ ಈ ತತ್ತ್ವದ ಆಧಾರದ ಮೇಲೆ ವಿಲ್ಸನ್ ಸಾಧನವೊಂದನ್ನು ನಿರ್ಮಿಸಿದನು. ಈ ಸಾಧನದಲ್ಲಿ ಅಯಾನ್‍ಗಳನ್ನು ಸಣ್ಣ ಹನಿಗಳ ಜಾಡಿನ ರೂಪದಲ್ಲಿ ಪಡೆಯಲು ಸಾಧ್ಯವಾಯಿತು. ಈ ಸಾಧನ ಬಳಸಿ, ವಿಕಿರಣಪಟುತ್ವ ಧಾತುಗಳ ಆಲ್ಫಾ , ಬೀಟಾ ಶೈಥಿಲ್ಯವನ್ನು ಗುರುತಿಸುವುದು ಸುಲಭವಾಯಿತು. 1920ರಿಂದ 1930ರ ದಶಕದಲ್ಲಿ ಕಣ ಭೌತಶಾಸ್ತ್ರಜ್ಞರು ತಮ್ಮ ಪ್ರಯೋಗಗಳಿಗೆ ವ್ಯಾಪಕವಾಗಿ ವಿಲ್ಸನ್ ರೂಪಿಸಿದ ಮೇಘ ಕೋಠಿಯ ಮೊರೆ ಹೊಕ್ಕರು. 1895ರಲ್ಲಿ ಬೆನ್ ನೆವಿಸ್ ಪರ್ವತದ ತುದಿಯಲ್ಲಿರುವಾಗಲೇ, ಬಿರುಗಾಳಿಯೆದ್ದು, ವಿಲ್ಸನ್ ಸನಿಹ ಸಿಡಿಲೊಂದು ಬಡಿಯಿತು. ಇದರಿಂದ ಪ್ರೇರಿತನಾದ ವಿಲ್ಸನ್ ಒಣ ಹಾಗೂ ಆದ್ರ್ರ ಗಾಳಿಯ ವೈದ್ಯುತ್ ವಾಹಕತೆ ಅಳೆಯತೊಡಗಿದನು. ಇದಕ್ಕಾಗಿ ನಡೆಸಿದ ವ್ಯಾಪಕ ಪರೀಕ್ಷೆಗಳಿಂದ ಭೂಮಿಯಾಚೆಯಿಂದ ವೈದ್ಯುತ್ ಆವಿಷ್ಟಿತ ಕಿರಣಗಳು ಬರುತ್ತಿರಬಹುದೆಂದು ಹೇಳಿದನು. 1911ರಲ್ಲಿ ವಿ.ಎಫ್. ಹೆಸ್. ಇದರ ಸಮೂಲಾಗ್ರ ಅಧ್ಯಯನ ಮಾಡಿ ವಿಶ್ವ ಕಿರಣಗಳ ಅಸ್ತಿತ್ವವನ್ನು ಘೋಷಿಸಿದನು. ನಿವೃತ್ತಿಯ ನಂತರ ಸ್ಕಾಟ್‍ಲ್ಯಾಂಡ್‍ನಲ್ಲಿ ನೆಲೆಸಿದ ವಿಲ್ಸನ್, ತನ್ನ 86ನೇ ವಯಸ್ಸಿನಲ್ಲೂ ಸಿಡಿಲು, ಮಿಂಚುಗಳ ಅಧ್ಯಯನಕ್ಕಾಗಿ ಪರ್ವತಗಳನ್ನೇರುತ್ತಿದ್ದನು. 87ನೇ ವಯಸ್ಸಿನಲ್ಲಿ ಈ ಬಗ್ಗೆ ಲೇಖನ ಪ್ರಕಟಿಸಿದ್ದನು. 1927ರಲ್ಲಿ ವಿಲ್ಸನ್ ಹಾಗೂ ಆರ್ಥರ್ ಹೋಲಿ ಕಾಂಪ್ಟನ್ ನೊಬೆಲ್ ಪ್ರಶಸ್ತಿ ಪಡೆದರು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019