ರಾಮನ್, ಸರ್ ಚಂದ್ರಶೇಖರ ವೆಂಕಟ (1888-1970) 1930
ಭಾರತ-ಭೌತಶಾಸ್ತ್ರ-ರಾಮನ್ ಪರಿಣಾಮ ಅನಾವರಣಗೊಳಿಸಿದಾತ.
ರಾಮನ್, ಮದ್ರಾಸ್ ವಿಶ್ವವಿದ್ಯಾಲಯದಿಂದ ವಿಜ್ಞಾನದಲ್ಲಿ ಅತ್ಯುತ್ತಮ ದರ್ಜೆಯಲ್ಲಿ ತೇರ್ಗಡೆಯಾದರೂ, ಆಗಿನ ಕಾಲದಲ್ಲಿ ಭಾರತದಲ್ಲಿ ಭೌತವಿಜ್ಞಾನಿಯಾಗಿ ಜೀವನ ಸಾಗಿಸುವುದು ಸಾಧ್ಯವಿರಲಿಲ್ಲ. ಆದ್ದರಿಂದ ಹತ್ತು ವರ್ಷಗಳ ಕಾಲ ಭಾರತೀಯ ಆಡಳಿತ ಸೇವೆಯ ವಿಭಾಗದಲ್ಲಿ ಲೆಕ್ಕಿಗನಾಗಿ ಸೇವೆ ಸಲ್ಲಿಸಿದನು. ಈಕಾಲದಲ್ಲಿ ಬಿಡುವಿನ ವೇಳೆಯಲ್ಲಿ ಭೌತಶಾಸ್ತ್ರದ ಅಧ್ಯಯನ ನಡೆಸುತ್ತಿದ್ದನು. ಶಬ್ದ ಹಾಗೂ ಬೆಳಕಿನ ವಕ್ರೀಭವನದ (Refraction) ಬಗೆಗೆ ರಾಮನ್ ಪ್ರಕಟಿಸಿದ ಲೇಖನಗಳು , ಕಲ್ಕತ್ತದಲ್ಲಿ ಪ್ರಾಧ್ಯಾಪಕ ಹುದ್ದೆ ಗಳಿಸಿಕೊಡುವಲ್ಲಿ ನೆರವಾದವು. 1917 ರಿಂದ 1933ರವರೆಗೆ ಇಲ್ಲಿದ್ದ ರಾಮನ್ 1925ರಲ್ಲಿ ಬೆಳಕಿನ ಚದುರಿಕೆಯ ಪರಿಣಾಮ ಗುರುತಿಸಿದನು. 1926ರಲ್ಲಿ ಇಂಡಿಯನ್ ಜರ್ನಲ್ ಆಫ್ ಫಿಸಿಕ್ಸ್ ಪ್ರಾರಂಭಿಸಿದನು. ಭಾರತೀಯ ವಿಜ್ಞಾನ ಕಾಂಗ್ರೆಸ್‍ನ ಅಧ್ಯಕ್ಷನಾದನು. 1930ರಲ್ಲಿ ನೊಬೆಲ್ ಪ್ರಶಸ್ತಿ ಸ್ವೀಕರಿಸಿದ ಏಷ್ಯಾ ಖಂಡದ ಮೊದಲಿಗನೆಂದು ಕೀರ್ತಿಗೆ ಪಾತ್ರನಾದನು. 1921ರಲ್ಲಿ ಮೆಡಿಟರೇನಿಯನ್ ಸಮುದ್ರದಲ್ಲಿ ಯಾನ ಮಾಡುತ್ತಿದ್ದಾಗ ಆಕಾಶ ಹಾಗು ಸಾಗರ ನೀಲಿಯಾಗಿರುವುದನ್ನು ರಾಮನ್ ಗಮನಿಸಿದನು. ರಾಲೆ, ಬೆಳಕಿನ ಚದುರಿಕೆಗೆ ವಾತಾವರಣದಲ್ಲಿ ತೇಲಾಡುವ ಕಣಗಳೇ ಕಾರಣಗಳೆಂದು ಹೇಳಿದ್ದನು. ಇದು ಸಮರ್ಪಕವಲ್ಲವೆಂದು ರಾಮನ್‍ಗೆ ಭಾಸವಾಯಿತು. ಇದಕ್ಕೆ ಬದಲಾಗಿ ಬೆಳಕಿನ ಚದುರಿಕೆಗೆ ನೀರಿನ ಕಣಗಳೇ ಕಾರಣಗಳೆಂದು ಹೇಳಿದನು. ಘನ, ದ್ರವ ಅಥವಾ ಅನಿಲದ ಮೇಲೆ ಬೆಳಕು ಬಿದ್ದಾಗ ,ಅವುಗಳ ಅಣುಗಳು ಚೈತನ್ಯ ಹೀರಿ ಅಥವಾ ಸೇರಿಸಿ, ಫೋಟಾನ್‍ಗಳನ್ನು ವಿಮುಖಗೊಳಿಸುತ್ತವೆ. ಇದೇ ಬೆಳಕಿನ ಚದುರಿಕೆಯ ಮೂಲ ಕಾರಣ ರಾಮನ್‍ನ ಈ ಅನಾವರಣ ಕ್ವಾಂಟಂ ಬಲಗತಿಶಾಸ್ತ್ರಕ್ಕೆ ಸಾಕ್ಷ್ಯಗಳನ್ನೊದಗಿಸಿತಲ್ಲದೆ ರಾಮನ್ ರೋಹಿತದರ್ಶನಕ್ಕೆ ಕಾರಣವಾಯಿತು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 8/24/2019