ಬ್ರೊಗ್ಲಿ, ಲೂಯಿ-ವಿಕ್ಟರ್ ಪೀರೆ ರೇಮಂಡ್ ಡ್ಯೂಕ್ ಡೇ ಪ್ರಿನ್ಸ್ (1892-1987)-೧೯೨೯
ಫ್ರಾನ್ಸ್-ಭೌತಶಾಸ್ತ್ರ - ಕಣಗಳ ತರಂಗ ಸ್ವರೂಪವನ್ನು ಅನಾವರಣಗಳಿಸಿದಾತ.
ಬ್ರೊಗ್ಲಿ , ಫ್ರಾನ್ಸ್‍ನ ಖ್ಯಾತ ಪೀಡ್‍ಮಾಂಟೆಸಿ ಕುಟುಂಬದವನು. 1790ರಲ್ಲಿ ಫ್ರಾನ್ಸಿನ ದೊರೆಯಾಗಿದ್ದ ಹದಿನಾಲ್ಕನೇ ಲೂಯಿ ಬ್ರೊಗ್ಲಿಯ ಪೂರ್ವಜರಿಗೆ, ವಂಶಪಾರಂಪರ್ಯವಾದ ಡ್ಯೂಕ್ ಬಿರುದನ್ನು ನೀಡಿ ಗೌರವಿಸಿದ್ದನು. 1960ರಲ್ಲಿ ಭೌತಶಾಸ್ತ್ರಜ್ಞನೂ . ಲೂಯಿಯ ಹಿರಿಯಣ್ಣನೂ ಆಗಿದ್ದ ಮಾರಿಸ್ ತೀರಿಕೊಂಡ ನಂತರ , ಡ್ಯೂಕ್ ಬಿರುದು ಲೂಯಿಗೆ ದಕ್ಕಿತು. 1756 ಎಂದ 1763 ರವರೆಗೆ ಜರುಗಿದ ಯುದ್ದದಲ್ಲಿ ಆಸ್ಟ್ರಿಯನ್ ದೊರೆಗಳಿಗೆ ನೀಡಿದ ನೆರವಿಗಾಗಿ ಬ್ರೊಗ್ಲಿ ಕುಟುಂಬ ಪ್ರಿಝ್ ಎನ್ನುವ ಪಾರಂಪರಿಕ ಬಿರುದನ್ನು ಪಡೆಯಿತು. ಬ್ರೊಗ್ಲಿ ಮೂಲತ: ವೈಜ್ಞಾನಿಕ ಶಿಕ್ಷಣಾರ್ಥಿಯಲ್ಲ. ಸೊರೆಬೊನ್ನೆ ಕಾಲೇಜಿನಿಂದ ಚರಿತ್ರೆಯಲ್ಲಿ ಪದವಿ ಪಡೆದ ಬ್ರೊಗ್ಲಿ ಮೊದಲನೆ ಜಾಗತಿಕ ಯುದ್ದದ ಸಮಯದಲ್ಲಿ ಐಫೆಲ್ ಗೋಪುರದಲ್ಲಿ ರೇಡಿಯೋ ನಿಲಯದಲ್ಲಿ ಸೇವೆ ಸಲ್ಲಿಸುತ್ತಿದ್ದನು. ಇದರ ಪರಿಣಾಮವಾಗಿ ಅವನು ವಿಜ್ಞಾನದತ್ತ ಹೊರಳುವಂತಾಯಿತು. ಮುಂದುವರೆಸಿದ ವಿಧ್ಯಾಭ್ಯಾಸದ ಫಲವಾಗಿ ಸೊರೆಬೊನ್ನೆ ಕಾಲೇಜಿನಿಂದ ಬ್ರೊಗ್ಲಿ 1924ರಲ್ಲಿ ವಿಜ್ಞಾನದಲ್ಲಿ ಪಿ.ಎಚ್.ಡಿ. ಪಡೆದನು. 1924ರಿಂದ ಹೊಸದಾಗಿ ಸ್ಥಾಪಿತವಾಗಿದ್ದ ಹೆನ್ರಿ ಪ್ವಾನ್‍ಕ್ಯಾರೇ ಸಂಸ್ಥೆಯಲ್ಲಿ ಸೈದಾಂತಿಕ ಭೌತಶಾಸ್ತ್ರದ ಪ್ರಾಧ್ಯಾಪಕನಾದನು. ಬ್ರೊಗ್ಲಿ ಕ್ವಾಂಟಂ ಬಲವಿಜ್ಞಾನದ ದಿಕ್ಕನ್ನು ಬದಲಿಸಿದ ರೀತಿಯನ್ನು ಅರಿಯಬೇಕೆಂದರೆ, ಆವರೆಗೆ, ಕ್ವಾಂಟಂ ಬಲವಿಜ್ಞಾನದಲ್ಲಿದ್ದ ಪರಿಕಲ್ಪನೆಗಳನ್ನು ಒಂದು ನೋಟ ಹರಿಸಬೇಕು. 1900ರಲ್ಲಿ ಮ್ಯಾಕ್ಸ್ ಪ್ಲಾಂಕ್, ಕ್ವಾಂಟಕ್ಕೆ ಬಲವಿಜ್ಞಾನಕ್ಕೆ ನಾಂದಿ ಹಾಡಿದನೆನ್ನಬಹುದು. ದ್ರವ್ಯರಾಶಿ ಹಾಗೂ ಚೈತನ್ಯಗಳ ಮಧ್ಯದ ಸಂಬಂಧ ಹಾಗೂ ಆಧುನಿಕ ಚಿಂತನೆಗಳು 1905ರಲ್ಲಿ ಆಲ್ಬರ್ಟ್ ಐನ್‍ಸ್ಟೀನ್ ಹಾಕಿದ ಭದ್ರ ಬುನಾದಿಯ ಮೇಲೆ ಬೆಳೆಯಲಾರಂಭಿಸಿದವು. ಇದರ ವiುಂದುವರಿಕೆಯಾಗಿ ವೀನ್ ವೈದ್ಯುತ್ ಕಾಂತೀಯ ನಿಯಮವನ್ನು ರೂಪಿಸಿದ್ದನು. ಈ ನಿಯಮದಂತೆ ಬೆಳಕು ತರಂಗ ರೂಪಿಯಾದುದು. ಆದರೆ ಹಲವಾರು ವೀಕ್ಷಿತ ವಿದ್ಯಾಮಾನಗಳು ಬೆಳಕನ್ನು ಕಣರೂಪಿಯಂತೆ ತೋರಿಸಿದ್ದವು. ಈ ನಿಟ್ಟಿನಲ್ಲಿ ಬ್ರೊಗ್ಲಿ ಬೆಳಕು ಕ್ವಾಂಟಂ ಅಲೆಯಂತೆ ವರ್ತಿಸುವ ಕಣರೂಪಿ ಏಕಿರಬಾರದೆಂದು ಚಿಂತಿಸಿದನು. ಇದರಿಂದ ಬೆಳಕು ಅಲೆ ಹಾಗೂ ಕಣರೂಪಿ ಎಂದೂ ಆಗುತ್ತದೆ. ಎಲೆಕ್ಟ್ರಾನ್‍ನಂತಹ ಕಣಗಳು ಹಲವಾರು ದ್ರವ್ಯರಾಶಿಯ ಅಲೆಗಳಂತೆ ಗುಂಪಿನಲ್ಲಿ ವೇಗಗಳಿಸುತ್ತವೆ. ಅಂತಹ ತರಂಗಾಂತರದಿಂದ ಕಣ ಅಲೆಯಂತೆ ತೋರುತ್ತದೆಯೆಂಬ ಬ್ರೊಗ್ಲಿಯ ಕ್ರಾಂತಿಕಾರಕ ನೋಟ 1924ರಲ್ಲಿ ಅವನು ಡಾಕ್ಟರೇಟ್‍ಗಾಗಿ ಮಂಡಿಸಿದ ಸಂಪ್ರಂಬಂಧದಲ್ಲಿ ವಿವರಿಸಲ್ಪಟ್ಟಿದ್ದಿತು. 1925ರಲ್ಲಿ ಅನ್ನಾಲೆಸ್ ಡೆ ಫಿಸಿಕ್ ಪತ್ರಿಕೆಯಲ್ಲಿ, ನೂರು ಪುಟಗಳಿಗಿಂತಲೂ, ಹೆಚ್ಚಿನ ಲೇಖನವಾಗಿ ಇದು ಪ್ರಕಟಗೊಂಡಿತು. ಸ್ಫಟಿಕ ಜಾಲಕದ (Crystal Lattice) ಅಣುಗಳನ್ನು ವಿವರ್ತನ (Diffraction) ಪಟ್ಟಿಯಂತೆ ಬಳಸಿ ಬೆಳಕನ್ನು ವ್ಯತಿಕರಣಗೊಳಿಸಿ (Interference)ನಡೆಸಿದ ಪ್ರಯೋಗ ಫಲಿತಾಂಶಗಳಿಂದ ಬ್ರೊಗ್ಲಿ ವಿವರಣೆಯಂತೆ, ಬೆಳಕು ಕ್ವಾಂಟಂ ಅಲೆಯಂತೆ ಗುಂಪಾಗಿ ವರ್ತಿಸುವುವೆಂದು ಖಚಿತವಾಯಿತು. 1927ರಲ್ಲಿ ನಿಧಾನಗತಿಯ ಎಲೆಕ್ಟ್ರಾನ್‍ಗಳನ್ನು ಬಳಸಿ, ಡೇವಿಸನ್ ಹಾಗೂ ಜರ್ಮರ್, ಕ್ಷಿಪ್ರಗತಿಯ ಎಲೆಕ್ಟ್ರಾನ್‍ಗಳನ್ನು ಬಳಸಿ ಜಿ.ಪಿ. ಥಾಮ್ಸನ್ ನಡೆಸಿದ ಪ್ರಯೋಗಗಳು ಬ್ರೊಗ್ಲಿಯ ಹೊಸ ವಿವರಣೆಗೆ ಸದೃಡ ಬೆಂಬಲ ಒದಗಿಸಿದವು. ಷ್ರೋಡಿಂಜರ್ ಬೆಳಕಿನ ಅಲೆ-ಕಣರೂಪದ ದ್ವಿಮುಖ ವರ್ತನೆಯನ್ನು ಆಧಾರವಾಗಿರಿಸಿಕೊಂಡು ಕ್ವಾಂಟಂ ಬಲವಿಜ್ಞಾನಕ್ಕೆ ಹೊಸ ರೂಪ ನೀಡಿದನು. ಇದರಿಂದಾಗಿ ಕ್ವಾಂಟಂ ಬಲವಿಜ್ಞಾನ ಹಲವಾರು ಸಂಭವನೀಯತೆಗಳ ಮೇಲೆ ನಿಂತು ಅದರ ನಿರ್ಧಾರಾತ್ಮಕತೆಯೇ ಚರ್ಚೆಗೀಡಾಯಿತು. 1929ರಲ್ಲಿ ಬ್ರೊಗ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 5/11/2020