ಬೊಹ್ರ್ ,ನೀಲ್ಸ್ (ಹೆನ್ರಿಕ್ ಡೇವಿಡ್) (1885-1962) -1922
ಡೆನ್ಮಾರ್ಕ್ -ಸೈದ್ಧಾಂತಿಕ ಭೌತಶಾಸ್ತ್ರ -ಪರಮಾಣುಗಳ ಎಲೆಕ್ಟ್ರಾನಿಕ್ ರಾಚನಿಕ ಸ್ವರೂಪ ತಿಳಿಸುವ ಕ್ವಾಂಟಂ ಸಿದ್ಧಾಂತ ಪ್ರತಿಪಾದಿಸಿದಾತ.
ಖ್ಯಾತ ಕೌಟುಂಬಿಕ ಹಿನ್ನೆಲೆಯಲ್ಲಿ ಹುಟ್ಟಿದ ನೀಲ್ಸ್‍ನ ತಂದೆ ಕೊಪೆನ್‍ಹೆಗ್‍ನಲ್ಲಿ ಅಂಗರಚನಾಶಾಸ್ತ್ರದ ಹೆಸರಾಂತ ಪ್ರಾಧ್ಯಾಪಕನಾಗಿದ್ದನು. ನೀಲ್ಸ್ ತಮ್ಮ ಹೆರಾಲ್ಡ್ ಪ್ರತಿಭಾವಂತ ಗಣಿತಜ್ಞ ನೀಲ್ಸ್ ಹಾಗೂ ಹೆರಾಲ್ಡ್ ಶ್ರೇಷ್ಟ ಮಧ್ಯದ ಕಾಲ್ಚೆಂಡಿನ ಆಟಗಾರರಾಗಿದ್ದರು. ನೀಲ್ಸ್ 1922ರಲ್ಲಿ ಭೌತಶಾಸ್ತ್ರದಲ್ಲಿನ ಸಾಧನೆಗಾಗಿ ನೊಬೆಲ್ ಪ್ರಶಸ್ತಿ ಪಡೆದರೆ, ಅದೇ ವರ್ಷ ಜನಿಸಿದ ಅವನ ಮಗ ಅಗೆ ಬೊಹ್ರ್ 1975ರಲ್ಲಿ ಭೌತಶಾಸ್ತ್ರದಲ್ಲಿನ ಸಾಧನೆಗಾಗಿ ನೊಬೆಲ್ ಪುರಸ್ಕೃತನಾದನು. 1911ರಲ್ಲಿ ಡಾಕ್ಟರೇಟ್ ಮುಗಿಸಿದ, ನೀಲ್ಸ್ ಮುಂದಿನ 8 ತಿಂಗಳ ಕಾಲ ಕೇಂಬ್ರಿಜ್‍ನಲ್ಲಿ ಜೆ.ಜೆ. ಥಾಮ್ಸನ್ ಜೊತೆ ಕೆಲಸ ಮಾಡಿದನು. ಪರಮಾಣು ರಚನೆಯನ್ನು ಕುರಿತಾದಂತೆ ನೀಲ್ಸ್ ನ ಪರಿಕಲ್ಪನೆಗಳು ಜೆ.ಜೆ. ಥಾಮನ್ಸ್‍ಗೆ ಒಪ್ಪಿಗೆಯಾಗಿರಲಿಲ್ಲ. ಇದರಿಂದಾಗಿ ನೀಲ್ಸ್ ಮ್ಯಾಂಚೆಸ್ಟರ್‍ಗೆ ತೆರಳಿ ರುದರ್’ಫೋರ್ಡ್ ದಿಗೆ ಸೇರಿ 4 ವರ್ಷಗಳ ಕಾಲ ಸಂಶೋಧನೆ ಮುಂದುವರೆಸಿದನು. ಈ ವೇಳೆಗೆ ರುದರ್’ಫೋರ್ಡ್ ಪರಮಾಣು ರಚನೆಯ ಸಿದ್ಧಾಂತವನ್ನು ಮಂಡಿಸಿದ್ದನು. ಈ ಸಿದ್ಧಾಂತದ ಮಾದರಿಯಲ್ಲಿ ಎಲೆಕ್ಟ್ರಾನ್‍ಗಳು ಕೇಂದ್ರ ಧನಾತ್ಮಕ ಬೀಜದ ಸುತ್ತ ಹರಡಿದ್ದವು. ಆದರೆ ಅಭಿಜಾತ ಭೌತಶಾಸ್ತ್ರಕ್ಕನುಗುಣವಾಗಿ , ಇಂತಹ ಮಾದರಿ ಸಮಸ್ಥಿತಿಯಲ್ಲಿದ್ದು, ಸ್ಥಿರವಾಗಿರಲು ಅಸಾಧ್ಯ. ಈ ಸೈದ್ಧಾಂತಿಕ ದೋಷದ ಬಗೆಗೆ ಆಳವಾಗಿ ಚಿಂತಿಸಿದ ನೀಲ್ಸ್, ಎಲೆಕ್ಟ್ರಾನ್‍ಗಳು ಒಂದು ನಿರ್ದಿಷ್ಟ ಕಕ್ಷೀಯ ಕೋನೀಯ ಆವೇಗ (Orbital Angular Momentum) ಹೊಂದಿದ್ದರೆ ಅವು ಸ್ಥಿರವಾಗಿ, ಸಮಸ್ಥಿತಿಯಲ್ಲಿರಬಹುದೆಂದು ಸೂಚಿಸಿದನು. ಇದಕ್ಕನುಗುಣವಾಗಿ ಪ್ರತಿ ಎಲೆಕ್ಟ್ರಾನ್ ಒಂದು ನಿರ್ದಿಷ್ಟ ಕಕ್ಷೆಯಲ್ಲಿ ಮಾತ್ರ ಸುತ್ತುತ್ತದೆ. ಹಾಗೆ ಸುತ್ತುವ ಎಲೆಕ್ಟ್ರಾನ್ ಚೈತನ್ಯಗಳಿಸಿ ಮೇಲಿನ ಕಕ್ಷೆಗಳಿಗೆ ಹಾರಬಹುದು ಅಥವಾ ಚೈತನ್ಯ ಕಳೆದುಕೊಂಡು ಕೆಳಗಿನ ಕಕ್ಷೆಗಳಿಗೆ ಕುಸಿಯಬಹುದೆಂದು, ನೀಲ್ಸ್ ವಾದಿಸಿದನು. ಇದರ ಪ್ರಕಾರ ವಿಕಿರಣ ಹೊರಹೊಮ್ಮುವ ಅಥವಾ ಒಳ ಹೀರಲ್ಫಡುವ ಕ್ರಿಯೆ ಎಲೆಕ್ಟ್ರಾನ್ ಗಳಿಸಿದ ಚೈತನ್ಯದ ಮೇಲೆ ಆಕ್ರಮಿಸಲಿರುವ ಕಕ್ಷೆಯ ಮೇಲೆ ಅವಲಂಬಿತವಾಗಿರುತ್ತದೆ. ನೀಲ್ಸ್ ತನ್ನ ಈ ಸಿದ್ಧಾಂತವನ್ನು ಜಲಜನಕದ ಎಲೆಕ್ಟ್ರಾನ್ ಚೈತನ್ಯ ಹೀರಿದಾಗ ಅಥವಾ ಬಿಡುಗಡೆಗೊಳಿಸಿದಾಗ ದಕ್ಕಬಹುದಾದ ರೋಹಿತದ ಸ್ವರೂಪವನ್ನು ನಿರ್ದರಿಸಲು ಬಳಸಿದನು.
1913ರಲ್ಲಿ ರಿಡ್‍ಬರ್ಗ್ ಹಾಗೂ ಬಾಮರ್ ಜಲಜನಕದ ಎಲೆಕ್ಟ್ರಾನ್ ಚೈತನ್ಯದ ರೋಹಿತವನ್ನು ಅಧ್ಯಯನ ನಡೆಸಿದಾಗ, ಅವು ನೀಲ್ಸ್ ಸಾದರಪಡಿಸಿದ ರೋಹಿತವನ್ನು ಚಾಚೂ ತಪ್ಪದಂತೆ ಹೋಲುತ್ತಿರುವುದು ಸ್ಪಷ್ಟವಾಯಿತು. 1916ರಲ್ಲಿ ನೀಲ್ಸ್ ಕೊಪೆನ್‍ಹೇಗ್‍ಗೆ ಮರಳಿ, ಎರಡು ವರ್ಷಗಳ ತರುವಾಯ, ಅಲ್ಲಿ ಸ್ಥಾಪನೆಗೊಂಡ ಸೈದ್ಧಾಂತಿಕ ಭೌತಶಾಸ್ತ್ರ ಸಂಸ್ಥೆಯ ಮೊದಲ ನಿರ್ದೇಶಕನಾದನು. ನೀಲ್ಸ್ ನಿರ್ದೇಶಕನಾಗಿದ್ದ ದೀರ್ಘ ಕಾಲದುದ್ದಕ್ಕೂ ಅವನ ಸಂಸ್ಥೆ ಜಗತ್ತಿನಾದ್ಯಂತ ಸೈದ್ಧಾಂತಿಕ ಭೌತಶಾಸ್ತ್ರದ ಕ್ವಾಂಟಂ ಸಿದ್ಧಾಂತದ ಕ್ಷೇತ್ರದಲ್ಲಿ ಜರುಗುತ್ತಿದ್ದ ಸಂಶೋಧನೆಗಳನ್ನು ಸಮನ್ವಯಗೊಳಿಸುವ ಕೇಂದ್ರವಾಗಿದ್ದಿತು. 1927ರಲ್ಲಿ ನೀಲ್ಸ್ ಪರಿಪೂರಕ ತತ್ತ್ವ (Complimentary Principle) ಮಂಡಿಸಿದನು. ಈ ತತ್ತ್ವದಂತೆ ಪರಮಾಣ್ವಕ ವಸ್ತುಗಳಿಗೂ (Atomic Objects) ಹಾಗೂ ಅವುಗಳನ್ನು ಅಳೆಯುತ್ತಿರುವ ಸಲಕರಣೆಗಳ, ಮಧ್ಯದ ಅಂತಕ್ರಿ0iÉು ಗುರುತಿಸುವಂತಹ ಯಾವ ವಿಭಿನ್ನತೆಯೂ ಇಲ್ಲ. ಈ ತತ್ತ್ವ ಬ್ರೊಗಿಲಿ ಭಾವಿಸಿದಂತೆ ದ್ರವ್ಯದ ಕಣ ಹಾಗೂ ಅಲೆ ಸ್ವರೂಪಗಳೆರಡಕ್ಕೂ ಸಮಾನ ಸ್ಥಾನ ನೀಡುವುದಲ್ಲದೆ, ಹೀಸೆನ್‍ಬರ್ಗ್‍ನ ಅನಿಶ್ಚಿತ ತತ್ತ್ವ ಹಾಗೂ ಬಾರ್ನ್ ದ್ರವ್ಯದ ಅಲೆಗಳನ್ನು ವಿವರಿಸಲು, ಬಳಸಿದ ಸಂಭಾವ್ಯತಾ ಮಾದರಿಗೂ ಸಲ್ಲುತ್ತದೆ. ನೀಲ್ಸ್ ಪರಿಪೂರಕ ತತ್ತ್ವಕ್ಕೆ ಜೋಡಿಯೆಂಬಂತೆ ಅನುಸಂವಾದಿ ತತ್ತ್ವವನ್ನು (Correspondence Principle) ಮಂಡಿಸಿದ್ದಾನೆ. ಈ ತತ್ತ್ವದ ಪ್ರಕಾರ ಸೂಕ್ಷ್ಮ ಮಟ್ಟದಲ್ಲಿ ಅಣು ಹಂತದಲ್ಲಿ ಅನ್ವಯಗೊಳ್ಳುವ ಕ್ವಾಂಟಂ ಸಿದ್ಧಾಂತ , ಸ್ಥೂಲ ಜಗತ್ತಿಗೂ , ಅಭಿಜಾತ ಭೌತಶಾಸ್ತ್ರಕ್ಕೆ ಅನ್ವಯವಾಗುತ್ತದೆ. 1930ರವೇಳೆಗೆ ರುದರ್’ಫೋರ್ಡ್ ನಡೆಸಿದ ಚಟುವಟಿಕೆಗಳು ಅಣ್ವಯಿಕ ಭೌತಶಾಸ್ತ್ರಕ್ಕೆ ಕಾರಣವಾಗಿದ್ದವು. ಈ ಜ್ಞಾನವನ್ನು ಬಳಸಿಕೊಂಡು ನೀಲ್, ತನ್ನ ಸಿದ್ಧಾಂತವನ್ನು ಪರಮಾಣು ಬೀಜಕ್ಕೂ ಅನ್ವಯಿಸಿದನು. ಈ ಅನ್ವಯ ಹಾಗೂ ಸಿದ್ಧಾಂತ ಮುಂದುವರಿಕೆಯಾಗಿ ಹೊಸ ಸಂಗತಿಗಳು ಬೆಳಕಿಗೆ ಬಂದವು. 1936ರಲ್ಲಿ ನೀಲ್ಸ್ ಪರಮಾಣು ಬೀಜದಲ್ಲಿ ಪ್ರೋಟಾನ್ ಹಾಗೂ ನ್ಯೂಟ್ರಾನ್‍ಗಳು ಪರಸ್ಪರ ಪ್ರಬಲ ಶಕ್ತಿಯಿಂದ ಬಂಧಿಸಲ್ಪಟ್ಟಿವೆ ಎಂದು ಸಾರಿದನು. 1939ರಲ್ ಜೆ. ಎ. ವೀಲರ್ ಜೊತೆ ಸೇರಿ, ನೀಲ್ಸ್ ಬೈಜಿಕ ಸದಳನ ಸಾಧ್ಯತೆಯನ್ನು, ಅದನ್ನು ವಿವರಿಸುವ ಸಿದ್ಧಾಂತವನ್ನು ಮಂಡಿಸಿದನಲ್ಲದೆ, ಯುರೇನಿಯಂ 235ರ ಸಮಸ್ಥಾನಿ (Isotope), ಯುರೇನಿಯಂ 238ಕ್ಕಿಂತಲು ಇಂತಹ ಸದಳನಕ್ಕೆ ಬಹು ಸಮರ್ಪಕವಾದುದೆಂದು ಸೂಚಿಸಿದನು. ಇದೇ ಸಂಗತಿಯನ್ನು ಆಲ್ಬರ್ಟ್ ಐನ್‍ಸ್ಟೀನ್ ತಿಳಿಸಿದ್ದನಲ್ಲದೆ, ಬೈಜಿಕಾಸ್ತ್ರ (Nuclea Weapon ) ತಯಾರಿಕೆಗೆ ಇದು ಹೇಗೆ ಕಾರಣವಾಗುವುದೆಂದು ಸೂಚಿಸಿದ್ದನು. ಎರಡನೇ ಜಾಗತಿಕ ಯುದ್ದದಲ್ಲಿ ಡೆನ್ಮಾರ್ಕ್ ನಾಝಿಗಳ ಕಣ್ಗಾವಲ ಕೆಳಗೆ ಬಂದಿತು. ನೀಲ್ಸ್ ಬೋರ್’ನ ತಾಯಿ ಯಹೂದಿಯಾದುದರಿಂದ ನಾಝಿಗಳ ಕೆಂಗಣ್ಣಿಗೆ ಗುರಿಯಾದ ನೀಲ್ಸ್ ಮೀನುಗಾರರ ದೋಣಿಯೊಂದರಲ್ಲಿ ಸ್ವೀಡನ್ನಿಗೆ ಪರಾರಿಯಾದನು. ಸ್ವೀಡನ್ ನಿಂದ ಒಂದು ಸಣ್ಣ ಯುದ್ದ ವಿಮಾನದಲ್ಲಿ ಯಾರಿಗೂ ತಿಳಿಯದಂತೆ ಇಂಗ್ಲೆಂಡಿಗೆ ಹೋದನು. ಡೆನ್ಮಾರ್ಕ್ ತೊರೆಯುವ ಮುಂಚೆ, ಯಾರಿಗೂ ತಿಳಿಯಬಾರದೆಂದು ನೊಬೆಲ್ ಪುರಸ್ಕೃತನಾದಾಗ ನೀಡಲಾಗಿದ್ದ ಚಿನ್ನದ ಪದಕವನ್ನು ನೀಲ್ಸ್ ಆಮ್ಲದಲ್ಲಿ ಕರಗಿಸಿ, ಅದರ ದ್ರಾವಣವನ್ನು ಒಯ್ದನು. ಮುಂದೆ ಅದನ್ನು ಮತ್ತೊಮ್ಮೆ ಲೋಹಕ್ಕೆ ಪರಿವರ್ತಿಸಿ, ಅದೇ ಚಿನ್ನದಿಂದ ಮತ್ತೊಮ್ಮೆ ನೊಬೆಲ್ ಪದಕ ಮಾಡಲಾಯಿತು. ಅಣ್ವಸ್ತ್ರ ಬಳಸದಂತೆ ರಷ್ಯಾ ಹಾಗೂ ಯುರೋಪಿಯನ್ ದೇಶಗಳು ಪರಸ್ಪರ ಒಪ್ಪಂದ ಮಾಡಿಕೊಳ್ಳಲು ಒತ್ತಾಯ ಹೇರುವ ದಿಶೆಯಲ್ಲಿ ಅಸಂಸಂಗಳು ಕ್ರಿಯಾಶೀಲವಾಗುವಂತೆ ಮಾಡಿದನು. ಇದರ ಫಲವಾಗಿ 1955ರಲ್ಲಿ ನೀಲ್ಸ್ ಜೀನೀವಾದಲ್ಲಿ ಶಾಂತಿಗಾಗಿ ಅಣುಶಕ್ತಿ ಬಳಕೆಗೆ ಚಲನೆ ನೀಡುವ ಸಮ್ಮೇಳನ ನಡೆಸಿದನು.
1962ರಲ್ಲಿ ನೀಲ್ಸ್ ಕೊನೆಯುಸಿರೆಳೆದಾಗ, ಐನ್‍ಸ್ಟೀನ್ ನಂತರದ ಇಪ್ಪತ್ತನೇ ಶತಮಾನದ ಮಹಾನ್ ಸೈದ್ಧಾಂತಿಕ ಭೌತಶಾಸ್ತ್ರನೆಂದು ವಿಶ್ವದಾದ್ಯಂತ ಖ್ಯಾತನಾಗಿದ್ದನು. ನೀಲ್ಸ್ ನ ಪರಮಾಣು ಮಾದರಿ, ಹಾಗೂ ಸಾದರ ಪಡಿಸಿದ್ದ ರೋಹಿತದ ಸಿದ್ಧಾಂತಗಳು ಜಲಜನಕದಂತಹ ಸರಳ ಧಾತುಗಳಿಗೆ ಮಾತ್ರ ಖಚಿತವಾಗಿ ಅನ್ವಯವಾಗುತ್ತಿದ್ದವು, ಮುಂದೆ ನೀಲ್ಸ್ ನ ಮಾದರಿಯಲ್ಲಿ ಹಲವಾರು ಸೈದ್ಧಾಂತಿಕ ಮಾರ್ಪಾಡುಗಳನ್ನು ಮಾಡಿ ಅದು ಎಲ್ಲಾ ಧಾತುಗಳಿಗೂ ಸರಿ ಹೊಂದುವಂತೆ ಮಾಡಲಾಯಿತು. ಬೇರೆ ಭೌತಶಾಸ್ತ್ರಜ್ಞರಿಗಿಂತ ಭಿನ್ನವಾಗಿದ್ದ ನೀಲ್ಸ್ ಸಹ ಸಂಶೋಧಕರಲ್ಲಿ , ವಿದ್ಯಾರ್ಥಿ ವೃಂದದಲ್ಲಿ, ಸಮಾನರಲ್ಲಿ ಬಹು ಜನಪ್ರಿಯನಾಗಿದ್ದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 1/8/2020