ಗುಸ್ತಾವ್, ಲುಡ್‍ವಿಗ್ ಹಟ್ರ್ಸ್ (1887-1975) ೧೯೨೫
ಜರ್ಮನಿ-ಭೌತಶಾಸ್ತ್ರ-ಎಲೆಕ್ಟ್ರಾನ್‍ಗಳ ಚೈತನ್ಯ ನಷ್ಟ ವಿವರಿಸಿದಾತ.
ಹಟ್ರ್ಸ್ ತಂದೆ ಹ್ಯಾಂಬರ್ಗ್‍ನಲ್ಲಿ ವಕೀಲನಾಗಿದ್ದನು. ಹಟ್ರ್ಸ್ 22 ಜುಲೈ 1887ರಂದು ಜನಿಸಿದನು. ಹ್ಯಾಂಬರ್ಗ್‍ನ ಜೊಹಾನ್ನಿಯಂ ಶಾಲೆಯಲ್ಲಿ ಪ್ರೌಢ ಶಿಕ್ಷಣ ಮುಗಿಸಿ, 1906ರಲ್ಲಿ ಗಟ್ಟಿಂಜೆನ್ ವಿಶ್ವವಿದ್ಯಾಲಯ ಸೇರಿದನು. ಮುಂದೆ ಬರ್ಲಿನ್ ಹಾಗೂ ಮ್ಯೂನಿಕ್‍ಗಳಲ್ಲಿ ವಿದ್ಯಾಭ್ಯಾಸ ಮಾಡಿ 1911ರಲ್ಲಿ ಪದವಿ ಗಳಿಸಿದನು. 1913ರಲ್ಲಿ ಬರ್ಲಿನ್‍ನ ಭೌತಶಾಸ್ತ್ರ ಸಂಶೋಧನಾ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕನಾದನು. ಮೊದಲನೆ ಜಾಗತಿಕ ಯುದ್ದ ಪ್ರಾರಂಭವಾಗಿ 1914ರಲ್ಲಿ ಸೇನೆಗೆ ನಿಯೋಜಿಸಲ್ಪಟ್ಟನು. 1915ರಲ್ಲಿ ಯುದ್ದ ರಂಗದಲ್ಲಿ ಗಾಯಗೊಂಡನು. 1917ರಲ್ಲಿ ಬರ್ಲಿನ್‍ಗೆ ಮರಳಿದನು. 1920 ರಿಂದ 1925 ರವರೆಗೆ ಐಂಡ್ ಹೂವೆನ್‍ನ ಫಿಲಿಪ್ಸ್ ಇನ್ಕ್ಯಾಂಡೆಸೆಂಟ್ ಲ್ಯಾಂಪ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿದನು. 1925ರಲ್ಲಿ ಹ್ಯಾಲೆ ವಿಶ್ವವಿದ್ಯಾಲಯದ ಭೌತಶಾಸ್ತ್ರ ಸಂಸ್ಥೆಯ ಪ್ರಾಧ್ಯಾಪಕನಾಗಿ ನೇಮಕಗೊಂಡನು. 1929ರಲ್ಲಿ ಬರ್ಲಿನ್‍ಗೆ ಮರಳಿ ಬಂದು ಚಾರ್ಲೋಟೈನ್‍ಬರ್ಗ್ ತಾಂತ್ರಿಕ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ನಿರ್ದೇಶಕನಾದನು. ಇಲ್ಲಿ 1935ರವರೆಗಿದ್ದ ಹಟ್ರ್ಸ್ ರಾಜಕೀಯ ಕಾರಣಗಳಿಂದ ಇದಕ್ಕೆ ರಾಜಿನಾಮೆಯಿತ್ತು ಸೀಮನ್ಸ್ ಕಂಪನಿಗೆ ನಿರ್ದೇಶಕನಾದನು. 1945ರಲ್ಲಿ ಸೋವಿಯತ್ ರಷ್ಯಾಕ್ಕೆ ಹೋದ ಹಟ್ರ್ಸ್ 1954ರವರೆಗೆ ಅಲ್ಲಿಯ ಸಂಶೋಧನಾಲಯದಲ್ಲಿ ಮುಖ್ಯಸ್ಥನಾಗಿ ಸೇವೆ ಸಲ್ಲಿಸಿದನು. ಇದಾದ ನಂತರ ಲೀಪ್‍ಜಿಗ್‍ನ ಕಾರ್ಲ್ ಮಾಕ್ರ್ಸ್ “ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ವಿಭಾಗದ ನಿರ್ದೇಶಕನಾದನು. 1961ರನಂತರ ಲೀಪ್‍ಜಿಗ್ ಹಾಗೂ ಬರ್ಲಿನ್ ವಿಶ್ವವಿದ್ಯಾಲಯಗಳಲ್ಲಿ ನಿವೃತ್ತ ಪ್ರಾಧ್ಯಾಪಕನಾಗಿದ್ದನು. ಹಟ್ರ್ಸ್ ತನ್ನ ಆರಂಭಿಕ ಸಂಶೋಧನೆಗಳು ಇಂಗಾಲದ ಡೈ ಆಕ್ಸೈಡ್‍ನ ಒತ್ತಡ ಹಾಗೂ ಅಂಶಿಕ ಒತ್ತಡಗಳಿಗೆ ಸಂಬಂಧಿಸಿರುವಂತೆ ಅವಗೆಂಪು ಕಿರಣಗಳ ಹೀರಿಕೆಯನ್ನು ಕುರಿತಾಗಿದ್ದವು. 1913ರಿಂದ ಜೆ. ಫ್ರಾಂಕ್ ಜೊತೆಗೆ, ಎಲೆಕ್ಟ್ರಾನ್ ಸಂಘಾತದ ಅಧ್ಯಯನ ನಡೆಸಿದನು. ವಿವಿಧ ಅನಿಲಗಳಲ್ಲಿನ ಅಯಾನೀಕರಣದ ಸಾಧ್ಯತೆ ಸ್ವರೂಪಗಳ ಅರಿವಿಗೆ ಪ್ರಯೋಗಗಳನ್ನು ನಡೆಸಿದನು. ಸ್ಥಿರ ಚೈತನ್ಯದ ಸ್ಥಿತಿಯಲ್ಲಿರುವ ಪರಮಾಣುಗಳನ್ನು ಎಲೆಕ್ಟ್ರಾನ್‍ಗಳು ಸಂಘಟ್ಟಿಸಿದಾಗ, ಅವುಗಳಲ್ಲಿ ಚೈತನ್ಯ ನಷ್ಟವಾಗುತ್ತದೆ. ಆಗ ರೋಹಿತದ ರೇಖೆಗಳಲ್ಲಿ ಬದಲಾವಣೆಗಳಾಗುತ್ತವೆ. ಇಂತಹ ರೋಹಿತದ ರೇಖೆಗಳ ಸರಣಿಗಳನ್ನು ಹೇಗೆ, ಎಲೆಕ್ಟ್ರಾನ್‍ಗಳ ಚೈತನ್ಯ ನಷ್ಟದೊಂದಿಗೆ ಪರಿಣಾತ್ಮಕವಾಗಿ ವಿವರಿಸಬಹುದೆಂದು ತೋರಿಸಿದನು. ಹಟ್ರ್ಸ್‍ನ ಪ್ರಯೋಗಗಳು ಪ್ಲಾಂಕ್‍ನ ಕ್ವಾಂಟಂ ಸಿದ್ಧಾಂತ ಒಳಗೊಂಡಂತೆ ನೀಲ್ಸ್ ಬೊಹ್ರ್‍ನ ಪರಮಾಣು ರಚನಾ ಸಿದ್ಧಾಂತಕ್ಕೆ ಬೆಂಬಲ ಒದಗಿಸಿದವು. 1928ರಲ್ಲಿ ಬರ್ಲಿನ್‍ಗೆ ಬಂದ ಮೇಲೆ, ಯುದ್ದ ಕಾಲದಲ್ಲಿ ನಾಶವಾಗಿದ್ದ ಭೌತಶಾಸ್ತ್ರದ ವಿಭಾಗವನ್ನು ಪುನರುಜ್ಜೀವನಗೊಳಿಸುವ ಹೊಣೆ ಹಟ್ರ್ಸ್ ಮೇಲೆ ಬಿದ್ದಿತು. ಎಡೆಬಿಡದ ಪರಿಶ್ರಮದಿಂದ ಇದನ್ನು ಸುಸಜ್ಜಿತಗೊಳಿಸುವಲ್ಲಿ ಹಟ್ರ್ಸ್ ಯಶಸ್ವಿಯಾದನು. ಇಲ್ಲಿಯೇ ನಿಯಾನ್‍ನ ಸಮಸ್ಥಾನಿಗಳನ್ನು (Isotopes) ಧುಮ್ಮಿಕುವ ವಿಸರಣ (Cascading Diffusion) ವಿಧಾನದಿಂದ ಬೇರ್ಪಡಿಸಿದನು. ಹಟ್ರ್ಸ್ ಸ್ವತಂತ್ರವಾಗಿ ಹಾಗೂ, ಪ್ಲಾಂಕ್, ಕ್ಲಾಪರ್ಸ್‍ರವರೊಂದಿಗೆ ಎಲೆಕ್ಟ್ರಾನ್ ಹಾಗೂ ಪರಮಾಣುಗಳ ಸಂಘಟನೆಯಲ್ಲಾಗುವ ಚೈತನ್ಯದ ವರ್ಗಾಂತರವನ್ನು ಕುರಿತು, ಸಮಸ್ಥಾನಿಗಳನ್ನು ಕುರಿತು ಹಲವಾರು ಲೇಖನಗಳನ್ನು ಪ್ರಕಟಿಸಿದನು. ಹಟ್ರ್ಸ್ ಬರ್ಲಿನ್‍ನ ಅಕಾಡೆಮಿ ಆಫ್ ಸೈನ್ಸ್‍ನ ಗಟ್ಟಿಂಜೆನ್ ಅಕಾಡೆಮಿ ಆಫ್ ಸೈನ್ಸಸ್ ಸದಸ್ಯನಾಗಿದ್ದನು. ಸೋವಿಯತ್ ದೇಶದಲ್ಲಿರುವಾಗ ಅಕಾಡೆಮಿ ಆಫ್ ಸೈನ್ಸ್‍ನ ವಿದೇಶಿ ಸದಸ್ಯನಾಗಿದ್ದನು. ಜರ್ಮನಿಯ ಭೌತಶಾಸ್ತ್ರ ಸಮಾಜದ ಮಾಕ್ಸ್ ಪ್ಲಾಂಕ್ ಪದಕ ಪುರಸ್ಕೃತನಾದನು. 1925ರಲ್ಲಿ ಸಮಸ್ಥಾನಿಗಳು ಹಾಗೂ ಎಲೆಕ್ಟ್ರಾನ್ ಚೈತನ್ಯಗಳನ್ನು ಕುರಿತಾದ ಸಂಶೋಧನೆಗಳಿಗಾಗಿ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019