ಕಾರ್ಲ್, ಎಂ ಸೀಗ್‍ಬನ್ –(1918--) 1924
ಸ್ವೀಡನ್-ಭೌತಶಾಸ್ತ್ರ-ರೋಹಿತ ಅಧ್ಯಯನಗಳ ಮುಂದಾಳು.
ಕಾರ್ಲ್ ಸ್ವೀಡನ್‍ನ ಒರೆಬ್ರೋ ಪಟ್ಟಣದಲ್ಲಿ 3 ಡಿಸೆಂಬರ್ 1886 ರಂದು ಜನಿಸಿದನು. ಈತನ ತಂದೆ ರೇಲ್ವೇ ಸ್ಟೇಷನ್ ಮಾಸ್ಟರ್ ಕೆಲಸದಲ್ಲಿದ್ದನು. 1906 ರಲ್ಲಿ ಲುಂಡ್ ವಿಶ್ವವಿದ್ಯಾಲಯ ಸೇರಿ ಕಾಂತ ಕ್ಷೇತ್ರದ ಬಗೆಗೆ ಸಂಶೋಧನೆ ನಡೆಸಿ 1911 ರಲ್ಲಿ ಡಾಕ್ಟರೇಟ್ ಗಳಿಸಿದನು. ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಜೆ.ಆರ್ ರೈಡ್‍ಬರ್ಗ್‍ನ ಸಹಾಯಕನಾಗಿ ಉಪನ್ಯಾಸಕ ಹುದ್ದೆಯಲ್ಲಿದ್ದನು. ರೈಡ್‍ಬರ್ಗ್‍ನ ಮರಣಾನಂತರ 1920 ರಲ್ಲಿ ಪ್ರಾಧ್ಯಾಪಕನಾಗಿ ನೇಮಕಗೊಂಡನು. 1923 ರಲ್ಲಿ ಉಪ್ಸಾಲ ವಿಶ್ವವಿದ್ಯಾಲಯಕ್ಕೆ ಹೋದನು. 1937 ರಲ್ಲಿ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್‍ನಲ್ಲಿ ಪ್ರಾಯೋಗಿಕ ಸಂಶೋಧಕ ಪ್ರಾಧ್ಯಾಪಕನಾದನು. ನೊಬೆಲ್ ಇನ್ಸ್ಟಿಟ್ಯೂಟ್ ಆಫ್ ಅಕಾಡೆಮಿ ಭೌತಶಾಸ್ತ್ರದ ವಿಭಾಗ ಪ್ರಂಭಿಸಿದಾಗ ಕಾರ್ಲ್ ಅದರ ಪ್ರಥಮ ನಿರ್ದೇಶಕನಾಗಿ ನೇಮಕಗೊಂಡನು. 1912 ರಿಂದ 1937 ರ ಅವಧಿಯಲ್ಲಿ ಕಾರ್ಲ್ ಕ್ಷ-ಕಿರಣ ರೋಹಿತ ತಂತ್ರಗಳಲ್ಲಿ ಹಲವಾರು ಹೊಸ ವಿಧಾನಗಳನ್ನು ಪರಿಚಯಿಸಿದನು. ಕ್ಷ-ಕಿರಣ ನಳಿಕೆಗಳನ್ನು ಉತ್ತಮಪಡಿಸಿ ಪ್ರಯೋಗಗಳಲ್ಲಿ ಕರಾರುವಾಕ್ಕಾದ ಅಳತೆಗಳನ್ನು ಪಡೆಯುವಲ್ಲಿ ಯಶಸ್ವಿಯಾದನು. ಕಾರ್ಲ್‍ನ ಈ ಹೊಸ ತಂತ್ರದಿಂದ ಅಣುವಿನ ಶಲ್ಕದಲ್ಲಿನ ಎಲೆಕ್ಟ್ರಾನ್‍ಗಳ ಚೈತನ್ಯ ಮತ್ತು ವಿಕಿರಣ ತೀವ್ರತೆಯ ಅಳತೆ ನಿಖರವಾಗಿ ದಕ್ಕಿತು. ಕಾರ್ಲ್ ಸೀಗ್‍ಬನ್ ನೆತೃತ್ವದಲ್ಲಿ ಬೈಜಿಕ ಭೌತಶಾಸ್ತ್ರದಲ್ಲಿನ ಅಧ್ಜ್ಯಯನಗಳು ಸಾಗಿದವು. ಅಸ್ಥಿರ ಬೈಜಿಕ ಕೇಂದ್ರಗಳ ಪರಿಶೀಲನೆಗಾಗಿ ಸೈಕ್ಲೋಟ್ರಾನ್ ನಿರ್ಮಾಣದ ಮುಂದಾಳತ್ವವನ್ನು ಸಹ ಕಾರ್ಲ್ ವಹಿಸಿದ್ದನು. ವಿಶಿಷ್ಟವಾದ ಎಲೆಹ್ಟ್ರಾನ್ ಸೂಕ್ಷ್ಮದರ್ಶಕದ ನಿರ್ಮಾಣದಲ್ಲೂ ಕಾರ್ಲ್ ಪರಿಶ್ರಮಿಸಿದನು. ರೋಹಿತ ಅಧ್ಯಯನ ರಂಗದಲ್ಲಿ ಕಾರ್ಲ್ ಅಧಿಕೃತ ವಾಣಿಯಾಗಿದ್ದನು. ಇದರಲ್ಲಿನ ಸಾಧನೆಗಳಿಗಾಗಿ 1924ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಕಾರ್ಲ್‍ನ ಮಗನಾದ ಕಾಯ್ ಸೀಗ್‍ಬನ್ ಸಹ 1981ರಲ್ಲಿ ಭೌತಶಾಸ್ತ್ರದಲ್ಲಿನ ನೊಬೆಲ್ ಪ್ರಶಸ್ತಿ ಪುರಸ್ಕೃತನಾಗಿದ್ದಾನೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 5/1/2020