অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಐನ್‍ಸ್ಟೀನ್ ,ಆಲ್ಬರ್ಟ್

ಐನ್‍ಸ್ಟೀನ್ ,ಆಲ್ಬರ್ಟ್

ಐನ್‍ಸ್ಟೀನ್ ,ಆಲ್ಬರ್ಟ್ (1879—1955) ೧೯೨೧

ಜರ್ಮನಿ-ಸ್ವಿಟ್ಸಲ್ರ್ಯಾಂಡ್-ಅಸಂಸಂ-ಸಾಪೇಕ್ಷ ಸಿದ್ಧಾಂತ ನೀಡಿದಾತ.

ಐನ್‍ಸ್ಟೀನ್ ತಂದೆ ವೈದ್ಯುತ್ ಇಂಜಿನಿಯರ್ ಆಗಿದ್ದು ವಿದ್ಯುತ್ ಉಪಕರಣಗಳನ್ನು ತಯಾರಿಸಿ ಮಾರುತ್ತಿದ್ದನು.  ವ್ಯವಹಾರದಲ್ಲಿ ಏಳ್ಗೆ ಕಾಣದೆ, ಮೇಲಿಂದ ಮೇಲೆ ಈತ ಊರುಗಳನ್ನು ಬದಲಾಯಿಸುತ್ತಿದ್ದನು.  ಉಲ್ಮ್ ಪಟ್ಟಣದಲ್ಲಿ ಐನ್‍ಸ್ಟೀನ್‍ನ ಜನನವಾಯಿತು. ಗಣಿತದಲ್ಲಿ ಉತ್ತಮ ಅಂಕ ಪಡೆಯದ ಕಾರಣ, ಬಹು ಪ್ರಯಾಸದಿಂದ 17ನೇ ವಯಸ್ಸಿನಲ್ಲಿ ಝೂರಿಕ್‍ನ ಫೆಡರಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೇರಿದನು. ಇಲ್ಲಿಂದ ಪದವಿ ಗಳಿಸಿ ಸ್ವಿಟ್ಸರ್ಲ್ಯಾಂಡ್ ಪ್ರಜೆಯಾದನು.  ಜೀವನೋಪಾಯಕ್ಕಾಗಿ ಶಾಲಾ ಶಿಕ್ಷಕ ಅಥವಾ ವಿಶ್ವವಿದ್ಯಾಲಯದಲ್ಲಿ ಯಾವುದಾದರೊಂದು ಕೆಲಸಕ್ಕೆ ಸೇರಲು ಯತ್ನಿಸಿ ವಿಫಲನಾದನು. ಅಂತಿಮವಾಗಿ ಹಿತೈಷಿಯೊಬ್ಬರ ನೆರವಿನಿಂದ ಬರ್ನ್‍ನಲ್ಲಿದ್ದ ಪೇಟೆಂಟ್ ಕಛೇರಿಯಲ್ಲಿ ಕೆಲಸಕ್ಕೆ ಸೇರಿದನು. ಇಲ್ಲಿ ಪೇಟೆಂಟ್‍ಗಾಗಿ ಸಲ್ಲಿಸಿದ ವಿವರಗಳನ್ನು ಪರಿಶೀಲಿಸುವ ಹೊಣೆ ಐನ್‍ಸ್ಟೀನ್‍ಗೆ ಬಿದ್ದಿತು. ಇದರಲ್ಲಿ ಸಾಕಷ್ಟು ಚುರುಕಾಗಿದ್ದ ಐನ್‍ಸ್ಟೀನ್‍ಗೆ ಸಾಕಷ್ಟು ಬಿಡುವಿನ ವೇಳೆ ದಕ್ಕಿ ಭೌತಶಾಸ್ತ್ರದಲ್ಲಿನ ತನ್ನ ಕೆಲಸಗಳನ್ನು ಮುಂದುವರೆಸಿದನು. 1903ರಲ್ಲಿ ಸಹಪಾಠಿಯಾಗಿದ್ದ ಮಿಲೆವಾ ಮಾರಿಕ್‍ಗಳನ್ನು ವಿವಾಹವಾದನು.  ಇವರಿಗೆ ಒಬ್ಬ ಮಗಳು, ಇಬ್ಬರು ಗಂಡು ಮಕ್ಕಳು ಜನಿಸಿದರು. 1919ರಲ್ಲಿ ಈಕೆಯೊಂದಿಗೆ ವಿಚ್ಛೇದನ ಹೊಂದಿ, ಬಂಧುವಾಗಿದ್ದ ಎಲ್ಸಾಳನ್ನು ವಿವಾಹವಾದನು.  ಈಕೆಗೆ ಹಿಂದಿನ ವಿವಾಹದಿಂದ ಇಬ್ಬರು ಹೆಣ್ಣುಮಕ್ಕಳಿದ್ದರು. 1905ರಲ್ಲಿ ಪೇಟೆಂಟ್ ಕಛೇರಿಯಲ್ಲಿರುವಾಗ ಐನ್‍ಸ್ಟೀನ್ ಪ್ರಕಟಿಸಿದ ಮೂರು ಲೇಖನಗಳು ಇಡೀ ಭೌತಶಾಸ್ತ್ರದ, ವಿಜ್ಞಾನದ, ಮಾನವನ ಚಿಂತನೆಯ ಗತಿಯನ್ನೇ ಬದಲಿಸಿದವು. 1909ರಲ್ಲಿ ಝೂರಿಕ್ ವಿಶ್ವವಿದ್ಯಾಲಯದಲ್ಲಿ ಕಿರಿಯ ಪ್ರಾಧ್ಯಾಪಕನಾದ ಐನ್‍ಸ್ಟೀನ್ 1910ರಲ್ಲಿ ಪ್ರಾಗ್‍ನಲ್ಲಿ ಪ್ರಾಧ್ಯಾಪಕನಾದನು.  1912ರಲ್ಲಿ ಝೂರಿಕ್‍ಗೆ ಮರಳಿದನು.  1913ರಲ್ಲಿ ಬರ್ಲಿನ್‍ನ ಕೈಸರ್ ವಿಲ್‍ಹೆಲ್ಮ್ ಸಂಸ್ಥೆಯ ನಿರ್ದೇಶಕನಾದನು.  ಮೊದಲ ಜಾಗತಿಕ ಯುದ್ಧದ ಸಮಯದಲ್ಲಿ ಸಾಮಾನ್ಯ ಸಾಪೇಕ್ಷ ಸಿದ್ಧಾಂತ ರೂಪಿಸಿ 1915ರಲ್ಲಿ ಪ್ರಕಟಿಸಿದನು. 1921ರಲ್ಲಿ ನೊಬೆಲ್ ಪ್ರಶಸ್ತಿಗೆ ಪಾತ್ರನಾದನು. ಐನ್‍ಸ್ಟೀನ್ , ತನ್ನ ಹೊಸ ಸಿದ್ಧಾಂತ ಕುರಿತಾದಂತೆ ಉಪನ್ಯಾಸಗಳನ್ನು ನೀಡುತ್ತಾ ಸಂಚರಿಸತೊಡಗಿದನು.  1933ರಲ್ಲಿ ಹಿಟ್ಲರ್ ಅಧಿಕಾರಕ್ಕೆ ಬಂದಾಗ ಐನ್‍ಸ್ಟೀನ್ ಅಸಂಸಂಗಳ ಕ್ಯಾಲಿಫೋರ್ನಿಯಾದಲ್ಲಿದ್ದನು.  ಇಲ್ಲಿಂದಲೇ ತನ್ನ ಕೆಲಸಕ್ಕೆ ರಾಜಿನಾಮೆ ನೀಡಿ, ಪ್ರಿನ್ಸ್‍ಟನ್‍ನ ವiುಂದುವರೆದ ಅಧ್ಯಯನ ಸಂಸ್ಥೆ  ಸೇರಿದನು. ಐನ್‍ಸ್ಟೀನ್‍ನ ವೈಜ್ಞಾನಿಕ ಪ್ರಯತ್ನಗಳು ಗುರುತ್ವ , ವೈದ್ಯುತ್ ಕಾಂತೀಯ ಹಾಗೂ ಬೈಜಿಕ ಬಲಗಳನ್ನು ಒಂದೇ ಕ್ಷೇತ್ರದಲ್ಲಿ ಏಕ ಸೂತ್ರದ ಮೂಲಕ ಬಂಧಿಸುವಲ್ಲಿ ಕೇಂದ್ರಿಕೃತಗೊಂಡಿದ್ದವು.  ಆದರೆ ಐನ್‍ಸ್ಟೀನ್ ಅಂತಿಮವಾಗಿ ಇದರಲ್ಲಿ ಯಶಸ್ಸನ್ನು ಕಾಣಲಿಲ್ಲ.  ಹಿಟ್ಲರ್ ನೇತೃತ್ವದ ಜರ್ಮನಿ ಬೈಜಿಕಾಸ್ತ್ರ ತಯಾರಿಸುವ ಸಾಧ್ಯತೆಗಳನ್ನು ಅದರಿಂದ ಇಡೀ  ವಿಶ್ವಕ್ಕೆ ಒದಗಬಹುದಾದ ಅಪಾಯವನ್ನು ವಿವರಿಸಿ, 1939ರಲ್ಲಿ ಅಸಂಸಂ ಅಧ್ಯಕ್ಷ ರೂಸ್‍ವೆಲ್ಟ್‍ಗೆ ಐನ್‍ಸ್ಟೀನ್ ಪತ್ರವೊಂದನ್ನು ಬರೆದನು.  ಇದರಲ್ಲಿ ಅಸಂಸಂ ಬೈಜಿಕಾಸ್ತ್ರ ತಯಾರಿಕೆಗೆ ಮುಂದಾಗಬೇಕೆಂದು ಒತ್ತಾಯಿಸಿದ್ದನು. ಇದು ಹಾಗೂ ಇನ್ನಿತರ ವಿಜ್ಞಾನಿಗಳ ಒತ್ತಾಯದ ಮೇರೆಗೆ ರೂಸ್‍ವೆಲ್ಟ್ ಮ್ಯಾನ್ ಹಟನ್ ಯೋಜನೆಯ ಮೂಲಕ ಬೈಜಿಕಾಸ್ತ್ರ ತಯಾರಿಕೆಗೆ ಚಾಲನೆ ನೀಡಿದನು. ಎರಡನೇ ಜಾಗತಿಕ ಯುದ್ದದ ನಂತರ ಜನ್ಮ ತಳೆದ ಇಸ್ರೇಲ್‍ಗೆ ಅಧ್ಯಕ್ಷನಾಗುವ ಆಹ್ವಾನ ಐನ್‍ಸ್ಟೀನ್‍ಗೆ 1952ರಲ್ಲಿ ಬಂದಿತು. ಆದರೆ ಆತ ಇದನ್ನು ನಿರಾಕರಸಿದನು. ನಾಗಸಾಕಿ, ಹಿರೋಷಿಮಾಗಳ ಮೇಲೆ ಬೈಜಿಕಾಸ್ತ್ರ  ದಾಳಿಯ ನಂತರದ ಪರಿಣಾಮಗಳನ್ನು ಕಂಡು ಪರಮಾಣು ನಿಶ್ಯಸ್ತ್ರೀಕರಣ ತರಲು ಯತ್ನಿಸಿದನು.  ಸರಳ ಜೀವಿಯಾಗಿದ್ದ ಐನ್‍ಸ್ಟೀನ್‍ಗೆ ಸಂಗೀತ ಹಾಗೂ ಸಮುದ್ರಯಾನ ಬಿಡುವಿನ ಹವ್ಯಾಸಗಳಾಗಿದ್ದವು. 1828ರಲ್ಲಿ ರಾಬರ್ಟ್  ಬ್ರೌನ್, ನಿಶ್ಚಲ ನೀರಿನ ಮೇಲಿರುವ ಸೂಕ್ಷ್ಮವಾದ ಪರಾಗ ರೇಣುಗಳು ಯಾವುದೇ ಬಾಹ್ಯ ಪ್ರಚೋದನೆಯಿಲ್ಲದಿದ್ದರೂ, ತೀವ್ರ ಚಲನೆಯಲ್ಲಿರುವುದನ್ನು ವೀಕ್ಷಿಸಿ ದಾಖಲಿಸಿದ್ದನು. ಇದಕ್ಕೆ ಕಾರಣಗಳನ್ನು ನೀಡಲಾಗಿರಲಿಲ್ಲ.. ಆದರೆ ಐನ್‍ಸ್ಟೀನ್ ಗಣಿತದ ಲೆಕ್ಕಾಚಾರಗಳ ಮೂಲಕ ದ್ರವದ ಅಣುಗಳ ಚಲನೆಯೇ ಇದಕ್ಕೆ ಕಾರಣವೆಂದು ವಿವರಿಸಿದನು.  ಇದು ಅಣುಗಳ ಅಸ್ತಿತ್ವಕ್ಕೆ ನೀಡಿದ ಮೊಟ್ಟ ಮೊದಲ ವಿವರಣೆಯಾಗಿದ್ದಿತು. 1908ರಲ್ಲಿ ಪೆರಿನ್ ತನ್ನ ವಿಶಿಷ್ಟ ಪ್ರಯೋಗಗಳ ಮೂಲಕ ಅಣುಗಳ ಅಸ್ತಿತ್ವವನ್ನು ಖಚಿತಗೊಳಿಸಿದನು. ಮ್ಯಾಕ್ಸ್‍ವೆಲ್ ಬೆಳಕು ತರಂಗರೂಪಿಯೆಂದು ವಿವರಿಸಿದ್ದನು. ಆವರೆಗಿನ ವೀಕ್ಷಣೆಗಳು ಇದಕ್ಕೆ ಬೆಂಬಲ ಒದಗಿಸಿದ್ದವು. ಆದರೆ ದ್ಯುತಿವೈದ್ಯುತ್ (Photoelectric) ಪರಿಣಾಮವನ್ನು ಮ್ಯಾಕ್ಸ್’ವೆಲ್ ಪರಿಗಣನೆಯಿಂದ ವಿವರಿಸಲು ಸಾಧ್ಯವಾಗಿರಲಿಲ್ಲ,.  1902ರಲ್ಲಿ ಲೆನಾರ್ಡ್ ದ್ಯುತಿ ವೈದ್ಯುತ್  ಪರಿಣಾವiದ ಮೇಲೆ ಹಲವಾರು ಪ್ರಯೋಗಗಳನ್ನು ನಡೆಸಿ, ಕೆಲವು ನಿರ್ದಿಷ್ಟ ಸಂಗತಿಗಳನ್ನು Sಚಿತಗೊಳಿಸಿದ್ದನು. ಇವುಗಳಿಂದ ಲೋಹದ ಫಲಕದಿಂದ ಉತ್ಸರ್ಜನೆಗೊಂಡ ಎಲೆಕ್ಟ್ರಾನ್‍ಗಳ ಚೈತನ್ಯ,ಫಲಕದ ಮೇಲೆ ಬಿದ್ದ ಬೆಳಕಿನ ತೀವ್ರತೆಯನ್ನು ಆಧರಿಸದೆ, ಆದರೆ ತರಂಗಾಂತರದ (Wave Length)  ಮೇಲೆ ಅವಲಂಬಿತವಾಗಿರುವುದು ಖಚಿತವಾಗಿದ್ದಿತು.  ಈ ತಿಳುವಳಿಕೆಯ ಹಿನ್ನೆಲೆಯಲ್ಲಿ ಐನ್‍ಸ್ಟೀನ್ , ಬೆಳಕು ಮ್ಯಾಕ್ಸ್‍ವೆಲ್ ಭಾವಿಸಿದಂತೆ ಅಲೆಯಾಗಿರದೆ, ಮ್ಯಾಕ್ಸ್ ಪ್ಲಾಂಕ್ ಮಾದರಿಯಲ್ಲಿ ನಿರ್ದಿಷ್ಟ ಚೈತನ್ಯ ಹೊಂದಿದ ಪೊಟ್ಟಣಗಳಲ್ಲಿ (ಕ್ವಾಂಟಂ) ಹೊಮ್ಮುವುದೆಂದು ಭಾವಿಸಿದಾಗ, ಲೆನಾರ್ಡ್‍ನ ವೀಕ್ಷಣೆಗಳನ್ನು ವಿವರಿಸಬಹುದೆಂದು ಗಣಿತೀಯವಾಗಿ  ತೋರಿಸಿದನು.  ಐನ್‍ಸ್ಟೀನ್ ಮೊದಲೆರಡು ಲೇಖನಗಳಲ್ಲಿ ಬ್ರೌನಿಯನ್ ಚಲನೆ, ದ್ಯುತಿ ವೈದ್ಯುತ್ ಪರಿಣಾಮಕ್ಕೆ ಪರಿಹಾರಗಳು ದಕ್ಕಿದವು. ತನ್ನ ಮೂರನೇ ಲೇಖನದಲ್ಲಿ ಸಮರೂಪದಲ್ಲಿ ಚಲಿಸುವ ಎರಡು ಕಾಯಗಳನ್ನು ಪರಿಗಣಿಸಿ ವಿಶೇಷ ಸಾಪೇಕ್ಷವಾದ (Special Theory of Relativity)  ಮಂಡಿಸಿದನು. ಮ್ಯಾಕ್ಸ್’ವೆಲ್ ಬೆಳಕನ್ನು ಕುರಿತಾಗಿ ನೀಡಿದ್ದ ವೈದ್ಯುತ್ ಕಾಂತೀಯ ಸಿದ್ಧಾಂತ ಆವರೆಗಿನ ಅಭಿಜಾತ ಸಿದ್ಧಾಂತ ಹಲವಾರು ತತ್ತ್ವಗಳನ್ನು ಮುರಿದಿದ್ದಿತು. ಈ ಸಿದ್ಧಾಂತದಂತೆ ಬೆಳಕಿನ ವೇಗ , ಅದರ ಆಕರದ ವೇಗ ಅಥವಾ ಅದನ್ನು ವೀಕ್ಷಿಸುವವರ ವೇಗದಿಂದ ಸ್ವತಂತ್ರವಾಗಿ, ಯಾವಾಗಲೂ ಸ್ಥಿರವಾಗಿರುತ್ತದೆ. ಇದಕ್ಕೆ ಲೊಹ್ರೆಂಟ್ಸ್, ಫ್ರಿಟ್’ಜೆರಾಲ್ಡ್ ಮತ್ತು ಪ್ವಾನ್‍ಕ್ಯಾರೆ ವಿಶಿಷ್ಟ ಗಣಿತದಿಂದ ವಿವರಿಸಿದ್ದರು.  ಇದರ ಮುಂದುವರಿಕೆಯಂತೆ ಐನ್‍ಸ್ಟೀನ್ ಬೆಳಕು ಎಲ್ಲಾ ಪರಾಮರ್ಶನ ಚೌಕಟ್ಟುಗಳಲ್ಲಿ ಒಂದೇ ವೇಗ ಹೊಂದಿರುವುದೆಂದು ಪ್ರತಿಪಾದಿಸಿದನು.  ಈ ಮೊದಲೇ 1887 ರಲ್ಲಿ ಮೈಖೆಲ್‍ಸನ್ ಮತ್ತು ಮಾರ್ಲೆ ತಮ್ಮ ಪ್ರಯೋಗಗಳಿಂದ ಇದನ್ನು ಖಚಿತಗೊಳಿಸಿದ್ದರು.  ಆದರೆ ಇದರ ಅರಿವು ಐನ್‍ಸ್ಟೀನ್‍ಗಿರಲಿಲ್ಲ. ಐನ್‍ಸ್ಟೀನ್ ಪರಿಕಲ್ಪನೆಗಳಿಂದ ಭೌತಿಕ ನಿಯಮಗಳು ಎಲ್ಲಾ ಚೌಕಟ್ಟುಗಳಲ್ಲೂ ಒಂದೇ ಆಗಿರುವುದೆಂದು ಸ್ಪಷ್ಟವಾಗಿ, ಮ್ಯಾಕ್ಸ್‍ವೆಲ್ ಸಿದ್ಧಾಂತ ಹಾಗೂ ಲೊಹ್ರೆಂಟ್ಸ್, ಫ್ರಿಟ್’ಜೆರಾಲ್ಡ್ , ಪ್ವಾನ್‍ಕ್ಯಾರೇ ವಿವರಣೆಗಳಿಗೂ ಹೊಂದಾಣಿಕೆಯಾಯಿತು.  ಇದರ ಮುಂದುವರಿದ ವಿಶ್ಲೇಷಣೆಯಿಂದ ದ್ರವ್ಯ ಹಾಗೂ ಚೈತನ್ಯ E=mC2  (ಚೈತನ್ಯ = ದ್ರವ್ಯ x ಬೆಳಕಿನ ವೇಗ)  ಸಂಬಂಧ ಹೊಂದಿರುವುದು ತಿಳಿದು ಬಂದಿತು.  1907ರಲ್ಲಿ ಸಾಮಾನ್ಯ ಸಾಪೇಕ್ಷವಾದದ (General Theory of Relativity)ಮೂಲಕ ಗುರುತ್ವದ ಪ್ರಭಾವದಿಂದ ಬೆಳಕಿನ ಕಿರಣಗಳು ಸಹ ಬಾಗುತ್ತವೆಯೆಂದು ಐನ್‍ಸ್ಟೀನ್ ಮುನ್ನುಡಿದನು.  ದೂರದ ತಾರೆಯಿಂದ ಬರುವ ಬೆಳಕು ಸೂರ್ಯನ ಸನಿಹ  ಹಾದುಬರುವಾಗ 1.7 ಸೆಕೆಂಡ್‍ಗಳಷ್ಟು ಕೋನದಲ್ಲಿ ಬಾಗುವುದೆಂದು ಲೆಕ್ಕಾಚಾರ ಹಾಕಿದನು.  1919ರಲ್ಲಿ ಪೂರ್ಣ ಸೂರ್ಯಗ್ರಹಣ ಜರುಗಿದಾಗ ಎಡಿಂಗ್ಟನ್ ನಡೆಸಿದ ಪ್ರಯೋಗಗಳು ಐನ್‍ಸ್ಟೀನ್ ಲೆಕ್ಕಾಚಾರಗಳು ಸರಿಯೆಂದು ಸಾರಿದವು.  ಈ ಪ್ರಯೋಗದ ಫಲಿತಾಂಶಗಳು ಒಮ್ಮೆಲೇ ಐನ್‍ಸ್ಟೀನ್‍ನನ್ನು ಜಗದ್ವಿಖ್ಯಾತನನ್ನಾಗಿಸಿದವು.  ರೀಮನ್ ರೇಖಾಗಣಿತ ಮಿಂಕೋವ್ಸ್‍ಕಿ ಪರಿಕಲ್ಪನೆ, ರಿಕ್ಕಿಯ ಸೂತ್ರಗಳನ್ನು ಬಳಸಿ, ಐನ್‍ಸ್ಟೀನ್ ಗುರುತ್ವಕ್ಕೆ 1915ರಲ್ಲಿ ಹೊಸ ವಿವರಣೆ ನೀಡಿದನು. ಈ ವ್ ಇವರಣೆಯಂತೆ ದ್ರವ್ಯದ ಸನಿಹದಲ್ಲಿರುವ ಆಕಾಶ, ದ್ರವ್ಯದ ಪರಿಣಾಮದಿಂದಾಗಿ ವಕ್ರಗೊಳ್ಳುತ್ತದೆ, ಈ ವಕ್ರತೆಯಲ್ಲಿ ಕಾಯಗಳು ಪರಸ್ಪರ ಬಂಧಿಸಲ್ಪಡುತ್ತವೆ.  ಇದೇ ಗುರುತ್ವಬಲ ಎಂದು ಹೇಳಿದನು. ಇದರಿಂದಾಗಿ ಗುರುತ್ವ ಎನ್ನುವುದು ಆವರೆಗೆ ಭಾವಿಸಿದಂತೆ ಒಂದು ಬಲವಾಗಿರದೆ , ದ್ರವ್ಯ ಮತ್ತು ಆಕಾಶಗಳ ಮಧ್ಯದ ಅಂತಕ್ರಿಯೆಯಂದು ಸ್ಪಷ್ಟವಾಯಿತು.  ಇದು ನ್ಯೂಟನ್‍ನ ಗುರುತ್ವ ನಿಯಮವನ್ನು ತನ್ನೊಳಗೆ ಹುದುಗಿಸಿಕೊಂಡಿದ್ದಿತು. ಅಲ್ಲದೆ ನ್ಯೂಟನ್‍ನ ಗುರುತ್ವ ನಿಯಮದಲ್ಲಿ ಅತ್ಯಲ್ಪ ತಿದ್ದುಪಡಿಯನ್ನು ಸೂಚಿಸಿತು. ಇದರ ಫಲವಾಗಿ ಶತಮಾನಗಳಿಗೊಮ್ಮೆ ಬುಧಗ್ರಹದ ಕಕ್ಷೆ 43 ಸೆಕೆಂಡ್‍ಗಳಷ್ಟು ವ್ಯತಸ್ತವಾಗಬೇಕು.  ಇದನ್ನು ಮುಂದೆ ಇತರರು ಅಳೆದು ಸರಿಯೆಂದು ಸಾಧಿಸಿದರು.  ಐನ್‍ಸ್ಟೀನ್ ಸಾಪೇಕ್ಷ ಸಿದ್ಧಾಂತದ ಉಪ ಉತ್ಪನ್ನವಾಗಿ, ಬೆಳಕು ಗುರುತ್ವದ ಒಂದು ಕ್ಷೇತ್ರದಿಂದ , ಇನ್ನೊಂದು ಕ್ಷೇತ್ರಕ್ಕೆ ಸಾಗುವಾಗ ಅದರ ತರಂಗಾಂತರ ಪಲ್ಲಟಗೊಳ್ಳಬೇಕು . 1925ರಲ್ಲಿ ಇದು ಅಂತರಿಕ್ಷದಿಂದ ಖಚಿತಗೊಂಡರೆ , 1959ರಲ್ಲಿ ಆರ್.ಪಾಂಡ್ ಹಾಗೂ ಜಿ.ರೆಬ್ಕಾ  ಭೂಮಿಯ ಮೇಲೆ, 23 ಮೀ ಎತ್ತರದ ಗೋಪುರದ ಮೇಲೆ ಮೋಸ್‍ಬೌವೆರ್ ಪರಿಣಾಮದ ಮೂಲಕ ನಡೆಸಿದ ಪ್ರಯೋಗಗಳಿಂದ ಸರಿಯೆಂದು ತೋರಿಸಿದರು. ಐನ್‍ಸ್ಟೀನ್ ಸಿದ್ಧಾಂತಗಳಿಂದ ವಿಶ್ವ ಮಾದರಿಯೇ ಬದಲಾಯಿತು. ಸಾಪೇಕ್ಷ ಸಿದ್ಧಾಂತ ಬಳಸಿ, 1922ರಲ್ಲಿ ಫ್ರೀಡ್‍ಮನ್ ಹಿಗ್ಗುತ್ತಿರುವ ವಿಶ್ವದ ಸ್ವರೂಪ ನೀಡಿದನು. 1920ರಿಂದ 1930ರ ದಶಕದಲ್ಲಿ ಐನ್‍ಸ್ಟೀನ್‍ಗೆ ಬೌದ್ಧಿಕ ಅಘಾತಗಳು ಕಾದಿದ್ದವು. ಬಾರ್ನ್, ಕ್ವಾಂಟಂ ಬಲವಿಜ್ಞಾದಲ್ಲಿ ಸಂಭಾವ್ಯತಾ ಸಿದ್ಧಾಂತ ಸೇರಿಸಿ ಯಾವುದೇ ಘಟನೆ ನಿರ್ಧಾರಾತ್ಮಕವಲ್ಲವೆಂದೂ, ಅದು ಕೇವಲ ಸಂಭವನೀಯವೆಂದೂ, ದ್ರವ್ಯದ ಸ್ಥಿತಿಯೂ ಇದಕ್ಕೆ ಹೊರತಲ್ಲವೆಂದೂ ಸಾಧಿಸಿದನು. ಇದನ್ನು ಐನ್‍ಸ್ಟೀನ್ ತೀವ್ರವಾಗಿ ಆಲ್ಲಗಳೆದನು. ಆದರೆ ಕ್ವಾಂಟಂ ಸಿದ್ಧಾಂತ ಪ್ರಬಲವಾದಂತೆ, ಐನ್‍ಸ್ಟೀನ್ ನಿಲುವುಗಳು ಬದಲಾಗಲೇ ಬೇಕಾಯಿತು.  ಇದರಿಂದಾಗಿ 1921ರಲ್ಲಿ ಮಹಾನ್ ಸಂಶೋಧನೆಗಳು ಹದಿಹರೆಯದ ಯುವಕರಿಗೆ ಹೊರತು ನನ್ನಂತಹವರಿಗಲ್ಲ ಎಂದು ಸಾರಿದನು.  ಜಗತ್ತಿನ ಅರಿವಿನ ಸ್ವರೂಪ ಬದಲಿಸಿದ ಬೆರಳೆಣಿಕೆಯ ವಿಜ್ಞಾನಿಗಳಲ್ಲಿ ಐನ್‍ಸ್ಟೀನ್ ಸಹ ಒಬ್ಬನೆಂಬುದು ವಿವಾದಾತೀತ.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 4/24/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate