ಸ್ಟಾಹ್ಕ್, ಜೊಹಾನ್ನಸ್ (1874-1957) ೧೯೧೯
ಜರ್ಮನಿ-ಭೌತಶಾಸ್ತ್ರ-
ಸ್ಟಾಹ್ಕ್‍ನಂತಹ ವೈವಿಧ್ಯಮಯ ಜೀವನ ಸಾಗಿಸಿದ ವಿಜ್ಞಾನಿಗಳು ಅತಿ ವಿರಳ. ಸ್ಟಾಹ್ಕ್, ಭೌತಶಾಸ್ತ್ರದಲ್ಲಿನ ತನ್ನ ನಿಲುವುಗಳನ್ನು ಹಲವಾರು ಬಾರಿ ಬದಲಿಸಿದನು. ಸಹೋದ್ಯೋಗಿಗಳೊಂದಿಗೆ ಸೆಣಸಿದನು. ಜನಾಂಗೀಯ ಬೇಧ ನೀತಿಯನ್ನು ಬೆಂಬಲಿಸಿ ರಾಜಕೀಯಕ್ಕಿಳಿದನು. ಕಾರಾಗೃಹವಾಸ ಅನುಭವಿಸಿದನು. ವಿದ್ಯಾರ್ಥಿ ಜೀವನವನ್ನು ಸಾಧಾರಣವಾಗಿಯೇ ಕಳೆದ ಸ್ಟಾಹ್ಕ್ 1900ರಲ್ಲಿ ಗಟ್ಟಿಂಜೆನ್‍ನಲ್ಲಿ ಉಪನ್ಯಾಸಕನಾದನು. ನಂತರ ನಾಲ್ಕು ಜರ್ಮನ್ ವಿಶ್ವವಿದ್ಯಾಲಯಗಳಲ್ಲಿ ಪೀಠವನ್ನಲಂಕರಿಸಿದನು. 1902ರಲ್ಲಿ ಸ್ಟಾಹ್ಕ್, ಉತ್ಸರ್ಜನ ಕೊಳವೆಯಲ್ಲಿ ಶೀಘ್ರ ಚಲನೆಯಲ್ಲಿರುವ ಅಯಾನುಗಳು ತರಂಗಾಂತರ ಬದಲಾವಣೆಯ ಡಾಪ್ಲರ್ ಪರಿಣಾಮ ಹೊಂದಿರಬೇಕೆಂದು ಹೇಳಿದನು. 1905ರಲ್ಲಿ ಬಹು ಸುಕ್ಲಿಷ್ಟ ಪ್ರಯೋಗಗಳ ಮೂಲಕ ಈ ಪರಿಣಾಮ ಜಲಜನಕದ ಪರಮಾಣುಗಳಿಗೆ ನಿಜವೆಂದು ತೋರಿಸಿದನು. ಭೂಮಿಯಲ್ಲಿನ ಬೆಳಕಿನ ಆಕರಕ್ಕೆ ಡಾಪ್ಲರ್ ಪರಿಣಾಮ ಪತ್ತೆಯಾದ ಮೊದಲ ವಿದ್ಯಾಮಾನವಿದು. ಕಾಂತ ಕ್ಷೇತ್ರದಲ್ಲಿ ರೋಹಿತದ ಸಾಲುಗಳು ಸೀಳುವ ಝೀಮನ್ ಪರಿಣಾಮಕ್ಕೆ ಸಂವಾದಿಯಾದ ವಿದ್ಯಾಮಾನವನ್ನು ಸ್ಟಾಹ್ಕ್ 1913ರಲ್ಲಿ ಪ್ರಯೋಗಗಳಿಂದ ಪಡೆದನು. ಇದು ಈಗ ಸ್ಟಾಹ್ಕ್ ಪರಿಣಾಮವೆಂದು ಹೆಸರಾಗಿದೆ. ಸ್ಟಾಹ್ಕ್ 1919ರ ನೊಬೆಲ್ ಪ್ರಶಸ್ತಿ ಪಡೆದನು. ಈ ಕಾಲದಲ್ಲೇ ತನ್ನ ಸಿದ್ಧಾಂತಗಳ ಬಗೆಗೆ ತಾನೇ ಬೇರೊಂದು ಬಗೆಯ ನಿಲುವು ತಳೆಯುತ್ತ, ಜೊತೆಯ ವಿಜ್ಞಾನಿಗಳೊಂದಿಗೆ ವಾದ ವಿವಾದಗಳಿಗಿಳಿಯುತ್ತಿದ್ದನು. ಸ್ಟಾಹ್ಕ್ ಪ್ರಯೋಗ ಹಾಗೂ ಅದರ ಫಲಿತಾಂಶಗಳು ಸಾಪೇಕ್ಷತಾ ಸಿದ್ಧಾಂತ , ಬೊಹ್ರ್ ಪರಮಾಣು ಸಿದ್ಧಾಂತಗಳಿಗೆ ಸಾಕ್ಷ್ಯ ಒದಗಿಸಿದರೆ ಸ್ಟಾಹ್ಕ್ ಇವರ ಮೇಲೆಯೇ ವಾಗ್ದಾಳಿ ನಡೆಸಿದನು. 1920ರಲ್ಲಿ ವುರ್ಜ್‍ಬರ್ಗ್ ಪೀಠ ತ್ಯಜಿಸಿ, ನೊಬೆಲ್ ಪ್ರಶಸ್ತಿಯ ಹಣದಿಂದ, ಪಿಂಗಾಣಿ ತಯಾರಿಕೆಯ ಕಾರ್ಖಾನೆ ಪ್ರಾರಂಭಿಸಿದನು. ಇದರಲ್ಲಿ ವಿಫಲನಾಗಿ ಮತ್ತೊಮ್ಮೆ ಸಂಶೋಧನೆಗೆ ಬರಲು ಯತ್ನಿಸಿದನು. ಬಹುತೇಕ ಎಲ್ಲ ಸಂಗಡಿಗ ವಿಜ್ಞಾನಿಗಳನ್ನು ಸ್ಟಾಹ್ಕ್ ಎದುರು ಹಾಕಿಕೊಂಡಿದ್ದನು. 1934ರ ನಂತರ ಆಧುನಿಕ ಭೌತಶಾಸ್ತ್ರದ ಸಿದ್ದಾಂತಗಳೆಲ್ಲವನ್ನು ಹೀಗೆಳೆದನು. ಯಹೂದಿಗಳದು ವಿಜ್ಞಾನವೇ ಅಲ್ಲವೆಂದು ವಾದಿಸಿದನು. ಲೆನಾರ್ಡ್‍ನೊಂದಿಗೆ ನಾಝಿ ಆಡಳಿತವನ್ನು ಪ್ರಶಂಸಿಸಿದನು. ಜರ್ಮನಿಯ ವಿಜ್ಞಾನ ರಂಗವನ್ನೇ ತನ್ನ ಹತೋಟಿಯಲ್ಲಿರಿಸಿಕೊಳ್ಳಲು ಯತ್ನಿಸಿದನು. ಕಾಲಾನುಕ್ರಮದಲ್ಲೇ ನಾಝಿ ಪಕ್ಷದ ಬೆಂಬಲ ಕಳೆದುಕೊಂಡನು. ಇದಾದ ನಂತರ ನಿವೃತ್ತಿ ಹೊಂದಿ 1939ರಲ್ಲಿ ಬವೇರಿಯಾದಲ್ಲಿ ನೆಲೆಸಿದನು. 1947ರಲ್ಲಿ ಜರ್ಮನಿಯ ಮಾನವನ ಹಕ್ಕುಗಳ ನ್ಯಾಯಾಲಯ ಸ್ಟಾಹ್ಕ್’ಗೆ ನಾಲ್ಕು ವರ್ಷಗಳ ಕಠಿಣ ಸಜೆ ವಿಧಿಸಿತು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/24/2019