ಪ್ಲಾಂಕ್, ಮ್ಯಾಕ್ಸ್ (ಕಾರ್ಲ್ ಅರ್ನಸ್ಟ್ ಲುಡ್‍ವಿಗ್) (1858-1947) ೧೯೧೮
ಜರ್ಮನಿ-ಭೌತಶಾಸ್ತ್ರ- ಕ್ವಾಂಟಂ ಸಿದ್ಧಾಂತ ಮಂಡಿಸಿ, ಅಭಿಜಾತ ಭೌತಶಾಸ್ತ್ರ, ಆಧುನಿಕವಾಗಲು ಕಾರಣನಾದಾತ.
ನಾಗರಿಕ ಕಾನೂನಿನ ಪ್ರಾಧ್ಯಾಪಕನ ಮಗನಾಗಿದ್ದ ಪ್ಲಾಂಕ್ ಬರ್ಲಿನ್ ಹಾಗೂ ಮ್ಯೂನಿಕ್‍ಗಳಲ್ಲಿ ವ್ಯಾಸಂಗ ಮಾಡಿ, 1880ರಲ್ಲಿ ಡಾಕ್ಟರೇಟ್ ಪಡೆದನು. ಕೀಲ್‍ಗೆ ಹೋದ ಪ್ಲಾಂಕ್, ಅಲ್ಲಿ 1885ರಲ್ಲಿ ಪ್ರಾಧ್ಯಾಪಕನಾದನು. ಇಲ್ಲಿ ಮೂರು ವರ್ಷವಿದ್ದ ಪ್ಲಾಂಕ್ ನಂತರ ಬರ್ಲಿನ್‍ನಲ್ಲಿ ನೆಲೆಸಿದನು. 1930ರಲ್ಲಿ ಕೈಸರ್ ವಿಲ್‍ಹೆಲ್ಮ್ ಸಂಸ್ಥೆಯ ನಿರ್ದೇಶಕನಾದನು. ನಾಝಿಗಳ ಯಹೂದಿ ವಿರೋಧಿ ತತ್ತ್ವ ವಿರೋಧಿಸಿ, 1937ರಲ್ಲಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದನು. ಎರಡನೇ ಜಾಗತಿಕ ಯುದ್ದದ ನಂತರ ಈ ಸಂಸ್ಥೆಯನ್ನು ಗಟ್ಟಿಂಜೆನ್‍ಗೆ ಸ್ಥಳಾಂತರಿಸಿ, ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟಿಟ್ಯೂಟ್ ಎಂದು ಮರುನಾಮಕರಣ ಮಾಡಲಾಯಿತು. ಪ್ಲಾಂಕ್ ಇದರ ಅಧ್ಯಕ್ಷನಾದನು. ಕಿರ್ಕ್‍ಹಾಫ್, ಸ್ಟೀಫನ್, ವೀನ್ ಹಾಗೂ ಗ್ಯಾಲೆ, ಕಪ್ಪು ಕಾಯದಿಂದ ಉತ್ಸರ್ಜಿತಗೊಂಡ ವಿಕಿರಣದ ವಿತರಣೆಯ ಬಗೆಗೆ ಅಧ್ಯಯನ ನಡೆಸಿ, ಅದು ಅದರ ತಾಪಮಾನ ಹಾಗೂ ಆವರ್ತನೆಯ (Frequency) ಮೇಲೆ ಅವಲಂಬಿತವಾಗಿರುವುದೆಂದು ತಿಳಿಸಿದ್ದರು. ವೀನ್, ಅಲ್ಪ ತಾಪಮಾನದಲ್ಲಿನ ರ್ಯಾಲೆ ಹಾಗೂ ಜೀನ್ಸ್ ಅಧಿಕ ತಾಪಮಾನದಲ್ಲಿರುವ ಕಪ್ಪು ಕಾಯದ ಉತ್ಸರ್ಜನೆಯನ್ನು ವಿವರಿಸಿದ್ದರು. ಪ್ಲಾಂಕ್ ಇವರ ಇತಿಮಿತಿಗಳನ್ನು ಅರಿತು ಎಲ್ಲಾ ತಾಪಮಾನಗಳಿಗೆ ಸಮರ್ಪಕವಾದ ಹೊಸ ವಿವರಣೆ ನೀಡಿದನು. ಇದಕ್ಕಾಗಿ, ಚೈತನ್ಯ ನಿರ್ದಿಷ್ಟ ಪೊಟ್ಟಣಗಳಲ್ಲಿ (ಕ್ವಾಂಟಾ=ಶಕಲಗಳಲ್ಲಿ) ಬಿಡುಗಡೆ ಅಥವಾ ಹೀರಿಕೆಯಾಗುವುದೆಂದು ಪರಿಗಣಿಸಿದನು. ಇದು ಅಭಿಜಾತ ಭೌತಶಾಸ್ತ್ರದ ಎಲ್ಲೆಯನ್ನು ಮೀರಿದುದಾಗಿತ್ತು. ಇದು ಭೌತಶಾಸ್ತ್ರವನ್ನು ಆಧುನಿಕತೆಯತ್ತ ಒಯ್ದಿತು. ಅಲ್ಪ ಕಾಲದಲ್ಲೇ ಇತರ ವಿಜ್ಞಾನಿಗಳು ಹಲವಾರು ವಿದ್ಯಾಮನಗಳನ್ನು ಶಕಲ ಬಲದ (ಕ್ವಾಂಟಂ ಮೆಕಾನಿಕ್ಸ್) ದೃಷ್ಟಿಯಲ್ಲಿ ಹೆಚ್ಚು ಸ್ಪುಟವಾಗಿ ಅರಿಯಬಹುದೆಂದು ಕಂಡುಕೊಂಡರು. ಇದು ಕ್ವಾಂಟಂ ಬಲ ವಿಜ್ಞಾನ ಶಾಖೆಗೆ ನಾಂದಿಯಾಯಿತು. 1900ರಲ್ಲಿ ಪ್ಲಾಂಕ್‍ನ ಕ್ವಾಂಟಂ ಬಲವಿಜ್ಞಾನದ ಮೊದಲ ಲೇಖನ ಪ್ರಕಟಣೆಗೊಂಡರೆ, 1905ರಲ್ಲಿ ಇದಕ್ಕೆ ಬೆಂಬಲ ಒದಗಿಸುವಂತಹ ಲೇಖನವೊಂದನ್ನು ಆಲ್ಬರ್ಟ ಐನ್‍ಸ್ಟೀನ್ ಪ್ರಕಟಿಸಿದನು. ಪ್ಲಾಂಕ್ ತಾನು ನೀಡಿದ ಹೊಸ ದೃಷ್ಟಿ ಎಂತಹ ಕ್ರಾಂತಿಕಾರಕ ಬದಲಾವಣೆಗಳನ್ನು ತರಬಹುದೆಂದು ಶೀಘ್ರದಲ್ಲೇ ತಿಳಿದನು. ಪ್ಲಾಂಕ್‍ನಿಂದ ಅಭಿಜಾತ ಭೌತಶಾಸ್ತ್ರ, ಯುಗಾಂತವನ್ನು ಕಂಡಿತು. ಐನ್‍ಸ್ಟೀನ್ ಮಂಡಿಸಿದ ದ್ಯುತಿವೈದ್ಯುತ್ ಪರಿಣಾಮ (Photoelectric Effect), ಬೊಹ್ರ್ 1913ರಲ್ಲಿ ನೀಡಿದ ಪರಮಾಣುವಿನ ರಾಚನಿಕ ಸ್ವರೂಪಗಳು, ಪ್ಲಾಂಕ್‍ನ ಕ್ವಾಂಟಂ ಬಲವಿಜ್ಞಾನವನ್ನು ಆಚಾರ್ಯ ಸ್ಥಾನದಲ್ಲಿರಿಸಿದವು. 1920ರಲ್ಲಿ ಪ್ಲಾಂಕ್ ಹಾಗೂ ಇತರರು ಬಹುತೇಕ ಎಲ್ಲಾ ಬಗೆಯ ವೀಕ್ಷಿತ ವಿದ್ಯಾಮಾನಗಳಿಗೂ ಸಮರ್ಪಕ ವಿವರಣೆ ನೀಡಬಲ್ಲ ಕ್ವಾಂಟಂ ಬಲವಿಜ್ಞಾನದ ಶಾಖೆಯನ್ನು ಅಭಿವೃದ್ಧಿಗೊಳಿಸುವಲ್ಲಿ ಯಶಸ್ಸನ್ನು ಕಂಡರು. 1919ರಲ್ಲಿ ಪ್ಲಾಂಕ್ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಪ್ಲಾಂಕನ ವೈಯಕ್ತಿಕ ಜೀವನ ದು:ಖ ಹಾಗೂ ದುರಂತಗಳ ಸರಮಾಲೆಯಾಗಿದ್ದಿತು. ಆತನ ಅವಳಿ ಹೆಣ್ಣು ಮಕ್ಕಳು ಬಾಲ್ಯದಲ್ಲೇ ಅಸು ನೀಗಿದರು. ಮೊದಲನೆ ಜಾಗತಿಕ ಯುದ್ದದಲ್ಲಿ ಎರಡನೇ ಮಗ ಹತನಾದರೆ, ಜುಲೈ 1944ರಲಿ ಹಿಟ್ಲರ್ ಹತ್ಯೆ ರೂಪಿಸಿದ ಸಂಚಿನ ಅಪರಾಧಕ್ಕಾಗಿ ಅವನ ಮೊದಲ ಮಗ ಇರ್ವಿನ್ ಮರಣ ದಂಡನೆಗೊಳಗಾದನು. ಪ್ಲಾಂಕ್ ನಾಝಿ ತತ್ತ್ವಗಳ ಪರಮ ವಿರೋಧಿಯಾಗಿದ್ದನು. ಆದರೆ ಪ್ಲಾಂಕನ ಸ್ನೇಹಿತನಾಗಿದ್ದ ಐನ್‍ಸ್ಟೀನ್ ಅತ ನಾಝಿಗಳಿಗೆ ಪ್ರಬಲ ವಿರೋಧ ತೋರಿಸಲಿಲ್ಲವೆಂದು ಅತನ ಬಗೆಗೆ ಅಸಹನೆ ತಳೆದಿದ್ದನು. 1952ರಲ್ಲಿ ಡಾಯಿಷ್ ಮಾರ್ಕ್ ನಾಣ್ಯದ ಮೇಲೆ ಪ್ಲಾಂಕ್‍ನ ಚಿತ್ರ ಅಚ್ಚಾಯಿತು. ಈ ಗೌರವಕ್ಕೆ ಪಾತ್ರರಾದ ಬೆರಳೆಣಿಕೆಯ ಜರ್ಮನ್‍ರಲ್ಲಿ ಪ್ಲಾಂಕ್ ಒಬ್ಬನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/24/2019