ಚಾರ್ಲ್ಸ್, ಗ್ಲೋವರ್ ಬಕ್ರ್ಲಾ –(1877-1944) ೧೯೧೭
ಇಂಗ್ಲೆಂಡ್-ಭೌತಶಾಸ್ತ್ರ-ದ್ವಿತೀಯಕ ವಿಕಿರಣಶೀಲತೆಯಲ್ಲಿ ಮುಂಚೂಣಿಗ.
ಚಾರ್ಲ್ಸ್ 7 ಜೂನ್ 1877ರಂದು ಲಂಕಾಷೈರ್’ನ ವಿಡ್ನೆಸ್‍ನಲ್ಲಿ ಜನಿಸಿದನು. ಇಲ್ಲಿ ಆತನ ತಂದೆ ಅಟ್ಲಾಸ್ ರಾಸಾಯನಿಕ ಕಂಪನಿಯಲ್ಲಿ ಕಾರ್ಯದರ್ಶಿಯಾಗಿದ್ದನು. ಚಾರ್ಲ್ಸ್. ಲಿವರ್‍ಪೂಲ್ ಇನ್ಸ್ಟಿಟ್ಯೂಟ್‍ನಲ್ಲಿ ಆರಂಭಿಕ ಶಿಕ್ಷಣ ಪಡೆದು, ಮುಂದೆ 1894ರಲ್ಲಿ ಲಿವರ್‍ಪೂಲ್ “ವಿಶ್ವವಿದ್ಯಾಲಯ ಸೇರಿ ಗಣಿತ ಹಾಗೂ ಭೌತಶಾಸ್ತ್ರದಲ್ಲಿ ವ್ಯಾಸಂಗ ಮಾಡಿದನು. ಇಲ್ಲಿರುವಾಗ ಕೆಲಕಾಲ ಆಲಿವರ್ ಲಾಡ್ಜ್‍ನ ಮಾರ್ಗದರ್ಶನ ದಕ್ಕಿತು. 1898ರಲ್ಲಿ ಪದವಿ ಪೂರ್ಣ ಗೊಳಿಸಿ, ಮುಂದಿನ ಒಂದೇ ವರ್ಷದಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ಸಹ ಪೂರೈಸಿದನು. 1851ರಲ್ಲಿ ರಾಯಲ್ ಕಮಿಷನರ್ಸ್‍ನಿಂದ, ಸಂಶೋಧನೆಗೆ ಸಹಾಯಧನ ಪಡೆದನು. ನಂತರ ಕೇಂಬ್ರಿಜ್‍ನ ಟ್ರಿನಿಟಿ ಕಾಲೇಜ್ ಸೇರಿ, ಕ್ಯಾವೆಂಡಿಷ್ ಪ್ರಯೋಗಾಲಯದಲ್ಲಿ ಜೆ.ಜೆ ಥಾಮ್ಸನ್‍ನ ಸಹಾಯಕನಾದನು. 1900ರಲ್ಲಿ ಕಿಂಗ್ಸ್ ಕಾಲೇಜಿಗೆ ಸೇರಿ, 1902ರಲ್ಲಿ ಫೆಲೋಷಿಪ್ ಗಳಿಸಿ ಲಿವರ್‍ಪೂಲ್‍ಗೆ ಮತ್ತೊಮ್ಮೆ ಬಂದನು. 1905ರಿಂದ 1909ರವರೆಗೆ ಪ್ರಯೋಗಾಲಯದ ವಿಶೇಷ ಪ್ರಾಧ್ಯಾಪಕ ಹಾಗೂ ಪ್ರದರ್ಶಕನಾಗಿ ನೇಮಕಗೊಂಡನು. 1909ರಲ್ಲಿ ಎಚ್.ವಿ ವಿಲ್ಸನ್‍ನಿಂದ ತೆರವಾದ ಪ್ರಾಧ್ಯಾಪಕ ಸ್ಥಾನ ತುಂಬಿದನು. 1913ರಲ್ಲಿ ಎಡಿನ್‍ಬರೋ ವಿಶ್ವವಿದ್ಯಾಲಯದ ನೈಸರ್ಗಿಕ ತತ್ತ್ವಶಾಸ್ತ್ರದ ಪೀಠ ಅಲಂಕರಿಸಿದನು. ಚಾಲ್ರ್ಸ್‍ನ ಆರಂಭಿಕ ಸಂಶೋಧನೆಗಳು, ವಾಹಕಗಳಲ್ಲಿನ ವಿದ್ಯುತ್ ಪ್ರವಾಹ ವೇಗವನ್ನು ಕುರಿತಾಗಿದ್ದವು. ಆದರೆ 1902ರಿಂದ ಕ್ಷ ಕಿರಣಗಳ ಬಗೆಗೆ ಆಸಕ್ತನಾದನು. ಪ್ರತಿ ಧಾತುವಿಗೂ, ಅದರದೇ ವಿಶಿಷ್ಟವಾದ ಕ್ಷ ಕಿರಣ ರೋಹಿತವಿರುತ್ತದೆಯೆಂದು ಚಾರ್ಲ್ಸ್ ತೋರಿಸಿದನು. ದ್ವಿತೀಯಕ ವಿಕಿರಣಶೀಲತೆ ಎರಡು ಬಗೆಯದಾಗಿರುವುದೆಂದು ಹೇಳಿದ ಮೊದಲಿಗ ಚಾರ್ಲ್ಸ್. ಇದರಲ್ಲಿ ಮೊದಲನೆಯದರಲ್ಲಿ ಕ್ಷ-ಕಿರಣಗಳಿದ್ದು ಚದುರಿದ್ದರೂ ಬದಲಾಗದ ಸ್ವರೂಪದಲ್ಲಿರುತ್ತದೆ ಎರಡನೆಯವು ಪ್ರದೀಪ್ತ ವಿಕಿರಣಗಳಾಗಿದ್ದು ಪ್ರತಿ ಧಾತುವಿಗೂ ವಿಶಿಷ್ಟವಾಗಿರುತ್ತವೆ. ಕ್ಷ ಕಿರಣಗಳು ಧೃವೀಕರಣಗೊಳ್ಳುವುವೆಂದು ಚಾರ್ಲ್ಸ್ ಪ್ರಯೋಗಗಳಿಂದ ಸ್ಪಷ್ಟವಾಯಿತು. ಕ್ಷ ಕಿರಣಗಳ ಹೀರಿಕೆ, ದ್ಯುತಿಕ್ರಿಯಾಶೀಲತೆಯನ್ನು ಚಾರ್ಲ್ಸ್ ವಿವರಿಸಿದನು. ಈತ ಕ್ವಾಂಟಂ ಸಿದ್ಧಾಂತ ಕ್ಷ ಕಿರಣಗಳ ಸ್ವರೂಪ ಅರಿಯುವಾಗ ಎಲ್ಲಿ ನೆರವಾಗುತ್ತದೆ, ಎಲ್ಲಿ ಮಿತಿಗೊಳಗಾಗುತ್ತದೆಯೆಂದು ನಿರ್ಧರಿಸಿದನು. ರಾಯಲ್ ಸೊಸೈಟಿಯ ಫೆಲೋ ಆಗಿದ್ದ ಚಾರ್ಲ್ಸ್ ಹಲವಾರು ಗೌರವ ಪದವಿಗಳನ್ನು ಹೊಂದಿದ್ದನು. ರಾಯಲ್ ಸೊಸೈಟಿಯ ಬಕೇರಿಯನ್ ಉಪಾಧ್ಯಾಯನಾಗಿ ನೇಮಕಗೊಂಡನು. 1917ರಲ್ಲಿ ಹ್ಯೂಗ್ಸ್ ಪದಕ ಗಳಿಸಿದನು. ಚಾರ್ಲ್ಸ್, ಅತ್ಯುತ್ತಮ ಗಾಯಕನಾಗಿದ್ದನು. ಚಾರ್ಲ್ಸ್ ಕ್ಷ-ಕಿರಣ ಕುರಿತಾದಂತೆ ನಡೆಸಿದ ಸಂಶೋಧನೆಗಳಿಗಾಗಿ 1917ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/17/2020