ಜರ್ಮನಿ-ಪ್ರಯೋಗಶೀಲ ಭೌತಶಾಸ್ತ್ರ; ಕ್ಷ- ಕಿರಣಗಳನ್ನು ಅನಾವರಣಗೊಳಿಸಿದಾತ.
ರಾಂಟ್‍ಜೆನ್, ಜೂರಿಕ್ ಪಾಲಿಟೆಕ್ನಿಕ್‍ನಲ್ಲಿ ಇಂಜಿನಿಯರಿಂಗ್ ಪದವಿಗೆ ಸೇರಿದನು. ಭೌತಶಾಸ್ತ್ರದ ಆಕರ್ಷಣೆಗೊಳಗಾಗಿ, ಇಂಜಿನಿಯರಿಂಗ್‍ನ್ನು ಮೊಟಕುಗೊಳಿಸಿ ವಿಜ್ಞಾನದ ಪದವೀಧರನಾದನು. ಮುಂದೆ ಜರ್ಮನಿಯ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಬೋಧಿಸಿದನು,. 1895ರಲ್ಲಿ ವುರ್ಜಬರ್ಗ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿದ್ದಾಗ ಕ್ಷ- ಕಿರಣಗಳನ್ನು ಅನಾವರಣಗೊಳಿಸಿದನು. ಅಲ್ಪ ಒತ್ತಡದಲ್ಲಿರುವ ಅನಿಲದ ನಳಿಕೆಯ ಮೂಲಕ ವಿದ್ಯುತ್ ಹಾಯಿಸಿದಾಗ, ಕೊಣೆಯ ಒಂದು ಕತ್ತಲ ಮೂಲೆಯಲ್ಲಿದ್ದ ಪ್ಲಾಟಿನೋಸೈನೈಡ್ ರಾಸಾಯನಿಕ ಲೇಪಿತಗೊಂಡ ಹಲಗೆ ಬೆಳಗುವುದನ್ನು ರಾಂಟ್‍ಜೆನ್ ಗುರುತಿಸಿದನು. ಸ್ವಲ್ಪ ಕಾಲದ ಪರಿಶೀಲನೆಯ ನಂತರ ನಳಿಕೆಯಲ್ಲಿ ವಿದ್ಯುತ್ ಹಾಯಿಸಿದಾಗ ಹೊರಹೊಮ್ಮುವ ವಿಕಿರಣದಿಂದಾಗಿ,ಹಲಗೆ ಬೆಳಗುವುದು ಖಚಿತವಾಯಿತು. ಈ ವಿಕಿರಣಗಳನ್ನು ರಾಂಟ್‍ಜೆನ್ ಕ್ಷ-ಕಿರಣಗಳೆಂದು ಕರೆದನು. ಇವು ಕ್ಯಾಥೋಡ್ ಕಿರಣಗಳಿಗಿಂತಲೂ, ಪ್ರಬಲವಾಗಿದ್ದು, ಸರಳ ರೇಖೆಯಲ್ಲಿ ಸಾಗಿ, ಕಾಂತ ಅಥವಾ ವೈದ್ಯುತ್ ಕ್ಷೇತ್ರಗಳಿಂದ ಪಲ್ಲಟಗೊಳ್ಳುವುದಿಲ್ಲವೆಂದು ರಾಂಟಜೆನ್ ತಿಳಿದನು. ಕ್ಷ ಕಿರಣಗಳು ಲೋಹದ ಫಲಕಗಳ ಮೂಲಕ, ದೇಹದ ಮೂಲಕ ಹಾದು ಹೋಗುವ ಸಾಮಥ್ರ್ಯ ಹೊಂದಿದ್ದು, ಛಾಯಾಗ್ರಹಣದ ರೀತಿಯಲ್ಲಿ ಹಾಳೆಯ ಮೇಲೆ ತಾವು ತೂರಿ ಹೋದ ವಸ್ತುವಿನ ಚಿತ್ರಗಳನ್ನು ಮೂಡಿಸುತ್ತಿದ್ದವು. ರಾಂಟ್‍ಜೆನ್ ಇವು ಬೆಳಕಿನಂತಹ ಆದರೆ ಅದಕ್ಕಿಂತಲೂ ಹ್ರಸ್ವ ತರಂಗಾಂತರದ ವೈದ್ಯುತ್ ಕಾಂತೀಯ ವಿಕಿರಣಗಳೆಂದು ವಿವರಿಸಿದನು. 1912ರಲ್ಲಿ ವಾನ್, ಲೆನಾರ್ಡ್ ಸಾಕ್ಷಿ ಒದಗಿಸಿದನು. 1901ರಲ್ಲಿ ಭೌತಶಾಸ್ತ್ರದ ಪ್ರಥಮ ನೊಬೆಲ್ ಪ್ರಶಸ್ತಿ ಗಳಿಸಿದ ರಾಂಟ್‍ಜೆನ್, ಗೌರವಾರ್ಥವಾಗಿ ಕ್ಷ-ಕಿರಣಗಳನ್ನು ರಾಂಟ್‍ಜೆನ್ ಕಿರಣಗಳೆಂದು ಹಾಗೂ ಕ್ಷ-ಕಿರಣ ಗುಟ್ಟಿಯ (Dose) ಏಕಮಾನಕ್ಕೆ ರಾಂಟ್‍ಜೆನ್ ಎಂದು ಹೆಸರಿಸಲಾಗಿದೆ. ಕ್ಷ-ಕಿರಣ ಭೌತಶಾಸ್ತ್ರ, ವೈದ್ಯಕೀಯ ಅಧ್ಯಯನಗಳಲ್ಲಿ ಕ್ರಾಂತಿ ತಂದು ದೈನಂದಿನ ಜನಜೀವನದಲ್ಲಿ ಹಾಸು ಹೊಕ್ಕಾಯಿತು. 1912ರಲ್ಲಿ ಬ್ರಾಗ್ ಕ್ಷ-ಕಿರಣಗಳನ್ನು ಬಳಸಿ ಸ್ಪಟಿಕಗಳ ಅಣು ರಚನೆ ನಿರ್ಧರಿಸಿದನು. ರಾಂಟ್‍ಜೆನ್ ತನ್ನ ಯಾವ ಸಂಶೋಧನೆಗಳಿಗೂ ಏಕಸ್ವಾಮ್ಯ ಪಡೆಯಲಿಲ್ಲ. ಅಷ್ಟೇ ಅಲ್ಲದೆ ಬವೇರಿಯಾದ ರಾಜ ನೀಡಿದ ವಾನ್ ಬಿರುದು ತಿರಸ್ಕರಿಸಿ, ಜನಪರ ನಿಲುವನ್ನು ತಳೆದನು. 1920ರಲ್ಲಿ ಪ್ರಾರಂಭವಾದ ಹಣದುಬ್ಬರಕ್ಕೆ ನಲುಗಿದ ರಾಂಟಜೆನ್ ಬಡತನದಲ್ಲಿಯೇ ಮರಣ ಹೊಂದಿದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019