ಬ್ರಿಟನ್-ಭೌತಶಾಸ್ತ್ರ- ಬೆಳಕು, ಶಬ್ದ, ವಿದ್ಯುತ್ ಕುರಿತಾಗಿ ಸಂಶೋಧಿಸಿದಾತ.
ರೇಲಿ, ಪ್ರತಿಭಾವಂತ ಗಣಿತಜ್ಞನಾಗಿದ್ದು, ಭೌತಶಾಸ್ತ್ರದಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಗಣಿತವನ್ನು ಅಳವಡಿಸಿಕೊಳ್ಳುವಲ್ಲಿ ನಿಷ್ಣಾಂತನೆನಿಸಿದ್ದನು. ಇದು ರೇಲಿ ಭೌತಶಾಸ್ತ್ರ, ಅದರ ಪ್ರಯೋಗಗಳತ್ತ ಹೊರಳುವಂತೆ ಮಾಡಿತು. 1873ರಲ್ಲಿ ರೇಲಿಗೆ ಪಿತ್ರಾರ್ಜಿತವಾದ ಆಸ್ತಿ ದಕ್ಕಿತು. ಇದರ ನಂತರ ಎಸೆಕ್ಸ್‍ನ ಟೆನ್ರಿಂಗ್ ಪ್ಲೇಸ್‍ನಲ್ಲಿದ್ದ ತನ್ನ ಮನೆಯಲ್ಲಿಯೇ ಪ್ರಯೋಗಾಲಯ ಸ್ಥಾಪಿಸಿದನು. ನಂತರ 1865ರಲ್ಲಿ ಕೇಂಬ್ರಿಜ್‍ನಿಂದ ಗಣಿತದಲ್ಲಿ ಪದವಿ ಪಡೆದನು. ಈತನ ತಂದೆಗೆ ಲಾರ್ಡ್ ಪದವಿ ದಕ್ಕಿದ್ದಿತು. ಇದೇ ಪದವಿಯನ್ನು ರೇಲಿ 1873ರಲ್ಲಿ ಪಡೆದು ಲಾರ್ಡ್ ರೇಲಿಯೆಂದು ಹೆಸರಾದನು. ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದ ಕಾಲದಲ್ಲಿ ಭೌತಶಾಸ್ತ್ರ ಒಂದು ಪೂರ್ಣ ಪ್ರಮಾಣದ ಅಧ್ಯಯನ ವಿಷಯವಾಗಿರಲಿಲ್ಲ. ಹೆನ್ರಿ ಕ್ಯಾವೆಂಡಿಷ್ ವಂಶದವರು ಕೇಂಬ್ರಿಜ್‍ಗೆ ದೇಣಿಗೆ ನೀಡಿ ಭೌತಶಾಸ್ತ್ರದ ಶಾಖೆ ತೆರೆದಿದ್ದರು. ಇದರ ಪ್ರಯೋಗಾಲಯದ ಪ್ರಥಮ ಪ್ರಾಧ್ಯಾಪಕನಾಗಿ ಕ್ಲಾರ್ಕ್ ಮ್ಯಾಕ್ಸ್‍ವೆಲ್ ನಿಯೋಜಿತನಾದನು. ಮ್ಯಾಕ್ಸ್‍ವೆಲ್ ತೆರವುಗೊಳಿಸಿದ ಸ್ಥಾನ ಅಲಂಕರಿಸಿದ ರೇಲಿ ಅಲ್ಲಿ ಐದುವರ್ಷಗಳ ಕಾಲ ಸೇವೆ ಸಲ್ಲಿಸಿದನು. ಈ ಅವಧಿಯಲ್ಲಿ ಭೌತಶಾಸ್ತ್ರದ ವಿದ್ಯಾರ್ಥಿಗಳ ಸಂಖ್ಯೆ ಹತ್ತರಷ್ಟಾಯಿತು. ರೇಲಿ ಶಬ್ಧ ಹಾಗೂ ಬೆಳಕಿನ ತರಂಗಗಳ ಮೇಲೆ ತನ್ನ ಆರಂಭಿಕ ಸಂಶೋಧನೆಗಳನ್ನು ಕೇಂದ್ರೀಕರಿಸಿದ್ದನು. ಬೆಳಕಿನ ಚದುರಿಕೆ ಅದರ ತರಂಗಾಂತರಕ್ಕೆ ವಿಲೋಮವಾಗಿರುವುದೆಂದು (Inverse) ವಿವರಿಸಿದನು. ಇದರಿಂದ ನೀಲಿ ಬೆಳಕು ಕೆಂಪು ಬೆಳಕಿಗಿಂತ ಹತ್ತರಷ್ಟು ಅಧಿಕವಾಗಿ ಚದುರುವುದೆಂದು, ಈ ಕಾರಣದಿಂದಾಗಿ ಬಿಳಿ ಬೆಳಕು ಬೆಳಗು ಬೈಗಿನಲ್ಲಿ ಕೆಂಪು ಎದ್ದು ಕಾಣುವಂತೆ ಚದುರಿದರೆ, ಆಗಸ ನೀಲಿಯಂತೆ ಗೋಚರಿಸುವುದೆಂದು ಬೆಳಕಿನ ಈ ಚದುರಿಕೆಗೆ ವಾತಾವರಣದಲ್ಲಿನ ಕಣಗಳು ಕಾರಣವೆಂದು ಹೇಳಿದನು. ಆದರೆ ಆಗಸ ಹಾಗೂ ಸಾಗರ ನೀಲಿಯಾಗಿ ಕಾಣುವಂತೆ ಬೆಳಕು ಚದುರಲು ಬೇರೆಯದೇ ಆದ ಸೂಕ್ತ ವಿವರಣೆಯನ್ನು ಸಿ.ವಿ.ರಾಮನ್ ನೀಡಿದನು. ನೈಲ್ ನದಿಯ ದೋಣಿ ಮನೆಯಲ್ಲಿ ರೇಲಿ ಬರೆದ ದಿ ಥಿಯರಿ ಆಫ್ ಸೌಂಡ್ ಅಭಿಜಾತ ಶಾಸ್ತ್ರದಲ್ಲಿನ ಪ್ರಸಿದ್ಧ ಕೃತಿಗಳಲ್ಲಿ ಒಂದೆನಿಸಿತು. ಉತ್ತಮ ಪ್ರಯೋಗಪಟುವಾಗಿದ್ದ ಈತ, ಕೇಂಬ್ರಿಜ್‍ನಲ್ಲಿ ವೈದ್ಯುತ್ ರೋಧತ್ವ ಹಾಗೂ ಪ್ರವಾಹಗಳ ಅಳತೆ ಮಾಡಿದನು. ಪ್ರೌಟ್, ಅನಿಲಗಳ ಸಾಂದ್ರತೆ ಕುರಿತಾಗಿ, ವಾದಗಳನ್ನು ಮಂಡಿಸಿದ್ದನು. ರ್‍ಯಾಮ್ಸೆ ಆರ್ಗಾನ್ ಅನಿಲವನ್ನು ಪತ್ತೆ ಹಚ್ಚಿದ್ದನು. ಇವುಗಳಿಂದ ರೇಲಿ, ಪ್ರಭಾವಿತನಾಗಿದ್ದನು. ವಿಕಿರಣ ಹಾಗೂ ರೋಹಿತಗಳ ಬಗೆಗೆ ಆಸಕ್ತನಾಗಿದ್ದ, ಈತ ಕಪ್ಪು ಕಾಯದ ವಿಕಿರಣತೆಯ ಅಧ್ಯಯನ ಮಾಡಿ ರೇಲಿ ಜೀನ್ಸ್ ಸೂತ್ರ ನೀಡಿದನು. ಈ ಸೂತ್ರ ದೀರ್ಘ ತರಂಗಗಳಿಗೆ ಸೂಕ್ತ ವಿವರಣೆ ನೀಡಿದರೆ, ಹ್ರಸ್ವ ತರಂಗಗಳನ್ನು ಅರಿತುಕೊಳ್ಳಲು ವಿಫಲವಾಯಿತು. ಪ್ಲಾಂಕ್, ಕ್ವಾಂಟಂ ಬಲವಿಜ್ಞಾನ ಪ್ರಾರಂಭಿಸಿ, ಇದಕ್ಕೆ ಪರಿಹಾರ ಒದಗಿಸಿದನು. ಪ್ಲಾಂಕ್‍ನ ಕ್ವಾಂಟಂ ಬಲಶಾಸ್ತ್ರದಲ್ಲಿ ಚೈತನ್ಯ ಪೊಟ್ಟಣಗಳಲ್ಲಿ (ಕ್ವಾಂಟಾ) ಹೊರ ಹೊಮ್ಮುತ್ತದೆ. ರೇಲಿ ಪ್ಲಾಂಕ್‍ನ ಈ ಪರಿಕಲ್ಪನೆಯನ್ನು ಕೊನೆಯವರೆಗೂ ಪೂರ್ಣವಾಗಿ ಒಪ್ಪಲಿಲ್ಲ. 1904ರಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದ ರೇಲಿ ಬ್ರಿಟನ್‍ನ ಬುದ್ದಿ ಜೀವಿ ಪ್ರಧಾನ ಮಂತ್ರಿಯೆಂದು ಖ್ಯಾತನಾಗಿದ್ದ ಎ.ಜೆ.ಬೌಲ್’ಫ್ಲೋರ್ ಸೋದರಿಯನ್ನು ವಿವಾಹವಾಗಿದ್ದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019