ಫ್ರಾನ್ಸ್-ಭೌತಶಾಸ್ತ್ರ - ಪೀಝೋ-ವೈದ್ಯುತ್ ಪರಿಣಾಮವನ್ನು ಕಂಡು ಹಿಡಿದಾತ.ವಿಕಿರಣಶೀಲ ಅಧ್ಯಯನಾಸಕ್ತ
ಸೊರೆಬೊನ್ನೆಯ ವೈದ್ಯನ ಮಗನಾಗಿದ್ದ, ಪೀರೆ ಅಲ್ಲಿಯೇ ಪದವಿ ಗಳಿಸಿ, 1878ರಲ್ಲಿ ಸಹಾಯಕ ಬೋಧಕನಾದನು. 1882ರಲಿ ‘ಸ್ಕೂಲ್ ಆಫ ಇಂಡಸ್ಟ್ರೀಯಲ್ ಫಿನಿಕ್ಸ್ ಅಂಡ್ ಕೆಮಿಸ್ಟ್ರಿ’ ಪ್ರಯೋಗಾಲಯದ ಮುಖ್ಯಸ್ಥನಾಗಿ ನೇಮಕಗೊಂಡನಲ್ಲದೆ , 1904ರಲ್ಲಿ ಸೊರೆಬೊನ್ನೆಯಲ್ಲಿ ಸ್ಥಾಪಿತವಾಗಿದ್ದ ಭೌತಶಾಸ್ತ್ರದ ಪೀಠಕ್ಕೆ ನೇಮಕಗೊಂಡನು. ಪೀರೆ ಹಾಗೂ ಅವನ ಸೋದರ ಜಾಕ್ವೆಸ್ ಮೊದಲ ಬಾರಿಗೆ ಒಂದು ನಿರ್ದಿಷ್ಟ ವಿದ್ಯಾಮಾನವನ್ನು ಗುರುತಿಸಿ ಅದನ್ನು ‘ಪೀಝೊ-ಪರಿಣಾಮ’ವೆಂದು ಕರೆದರು. ಪೀಝೋ-ವೈದ್ಯುತ್ ಪರಿಣಾಮದಲ್ಲಿ ಕ್ವಾರ್ಟ್ಸ್‍ನಂತಹ ಸ್ಪಟಿಕಗಳು ವಿರೂಪಗೊಂಡಾಗ , ಅವುಗಳ ಎರಡು ವಿರುದ್ದ ಮುಖಗಳಲ್ಲಿ ವಿರುದ್ದವಾದ ವೈದ್ಯುತಾವಿಷ್ಟವಿರುತ್ತದೆ. ಅಥವಾ ಇದಕ್ಕೆ ಪ್ರತಿಯಾಗಿ,ಈ ಸ್ಪಟಿಕಗಳ ವಿರುದ್ದ ಮುಖಗಳನ್ನು ವೈದ್ಯುತಾವಿಷ್ಟಗೊಳಿಸಿದರೆ ಅವು ವಿರೂಪಗೊಳ್ಳುತ್ತವೆ. ತೀವ್ರವಾಗಿ ಬದಲಾಗುವ ವಿದ್ಯುತ್ ಪ್ರವಾಹದಿಂದ, ಈ ಹರಳುಗಳು ಅದೇ ತೀವ್ರತೆಯಲ್ಲಿ ವಿರೂಪಗೊಂಡು ಕಂಪಿಸುತ್ತವೆ. ಈ ಪರಿಣಾಮವನ್ನು ಶ್ರವಣಾತೀತ ಶಬ್ಧದ ಉತ್ಪಾದನೆಗೆ ಬಳಸಬಹುದು. ಪೀಝೋ ವೈದ್ಯುತ್ ಪರಿಣಾಮಕ್ಕೆ ಒಳಗಾಗುವ ಸ್ಪಟಿಕಗಳನ್ನು ಮೈಕ್ರೋಫೋನ್, ಒತ್ತಡ ಮಾಪಕ, ಕ್ವಾರ್ಟ್ಸ್ ಕಂಪಕ ಹಾಗೂ ಕ್ವಾರ್ಟ್ಸ್ ಕೈಗಡಿಯಾರಗಳಲ್ಲಿ ಬಳಸಲಾಗುತ್ತಿದೆ. ಜಾಕ್ವೆಸ್ ಹಾಗೂ ಪೀರೆ ಈ ಪರಿಣಾಮವನ್ನು ಬಳಸಿ ಅತ್ಯಲ್ಪ ವಿದ್ಯುತ್ ಪ್ರವಾಹಗಳನ್ನು ಅಳೆಯುವ ಮಾಪಕಗಳನ್ನು ರೂಪಿಸಿದರು. ಮುಂದೆ ಮಿಕಿರಣಶೀಲತೆಯನ್ನು ಅಳೆಯಲು ಪೀರೆಯು ಪತ್ನಿ ಮೇರಿ, ಇದೇ ಉಪಕರಣವನ್ನು ಬಳಸಿದಳು. ಪೀರೆ ಫೆರೋ ಕಾಂತೀಯತೆ ಮೇಲೆ ಶಾಖದ ಪರಿಣಾಮವನ್ನು ಕುರಿತಾಗಿ ಅಧ್ಯಯನ ಪ್ರಾರಂಭಿಸಿದನು. ಇದರ ಫಲಿತಾಂಶವಾಗಿ, ಫೆರೋಕಾಂತೀಯ ವಸ್ತುಗಳು, ವಸ್ತು ನಿರ್ದಿಷ್ಟವಾಗಿ , ಒಂದು ನಿರ್ದಿಷ್ಟ ತಾಪಮಾನವನ್ನು ತಲುಪಿದನಂತರ, ಫೆರೋಕಾಂತೀಯ ಗುಣಗಳನ್ನು ಕಳೆದುಕೊಂಡು ಅನುಕಾಂತೀಯವಾಗುತ್ತದೆಯೆಂದು (Paramagnetic) ತಿಳಿದು ಬಂದಿತು. ಈ ನಿರ್ದಿಷ್ಟ ತಾಪಮಾನವನ್ನು ಕ್ಯೂರಿ ಬಿಂದು ಎಂದು ಗುರುತಿಸಲಾಗಿದೆ. ಪಾರಕಾಂತೀಯ (Diamagnetic) ಸಾಮಗ್ರಿಗಳ ಕಾಂತೀಯ ಅಂಗೀಕಾರ (Succeptibility) ತಾಪಮಾನದಿಂದ ಸ್ವತಂತ್ರವಾಗಿದ್ದು, ಅನುಕಾಂತೀಯ ಸಾಮಾಗ್ರಿಗಳಿಗೆ ನಿರಪೇಕ್ಷ ತಾಪಕ್ಕೆ ಅನುಲೋಮವಾಗಿರುವುದೆಂಬ ‘ಕ್ಯೂರಿ ನಿಯಮ’ವನ್ನು ಸಹ ಪೀರೆ ನೀಡಿದ್ದಾನೆ. ಮೇರಿಯನ್ನು ಮದುವೆಯಾದ ನಂತರ, ಪೀರೆ, ಅವಳ ಸಂಶೋಧನೆಗೆ ನೆರವಾಗಲು ತನ್ನ ಸಂಶೋಧನೆಗಳನ್ನು ನಿಲ್ಲಿಸಿದನು. ಮೇರಿಯೊಂದಿಗೆ ಸೇರಿ, ವಿಕಿರಣಶೀಲತೆಯ ಅರಿವಿಗಾಗಿ ಶ್ರಮಿಸಿದ್ದರಿಂದ, 1903ರ ನೊಬೆಲ್ ಪ್ರಶಸ್ತಿಯನ್ನು ಪತ್ನಿ ಮೇರಿ ಹಾಗೂ ಬೆಕೂರೆ ಜೊತೆ ಪಡೆದನು. ಪೀರೆ ಒಂದು ಗ್ರಾಂ ರೇಡಿಯಂ ಗಂಟೆಗೆ 500 ಜೌಲ್‍ನಷ್ಟು ಚೈತನ್ಯ ಬಿಡುಗಡೆಗೊಳಿಸುವುದನ್ನು ತೋರಿಸಿ, ಅಣ್ವಯಿಕ ಚೈತನ್ಯದ ಅಂದಾಜನ್ನು ನೀಡಿದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 6/15/2020