অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಬ್ಯಾರಿ, ಜೆ ಮಾರ್ಷಲ್

ಬ್ಯಾರಿ, ಜೆ ಮಾರ್ಷಲ್

ಬ್ಯಾರಿ, ಜೆ ಮಾರ್ಷಲ್ –(1951--)  ೨೦೦೫

ಆಸ್ಟ್ರೇಲಿಯಾ, ವೈದ್ಯಕೀಯ-ಕರುಳು ಹುಣ್ಣಿಗೆ ಕಾರಣವಾದ ಬ್ಯಾಕ್ಟಿರಿಯಾ ಗುರುತಿಸಿದಾತ.

ಬ್ಯಾರಿ 1951ರಲ್ಲಿ ಕಾಲ್ ಗೂರ್ಲಿ ಪಟ್ಟಣದಲ್ಲಿ ಜನಿಸಿದನು. 1892ರಲ್ಲಿ ಪ್ಯಾಡಿ ಹ್ಯಾನನ್ ಎಂಬ ಐರಿಷ್  ವ್ಯಕ್ತಿ ಬಂಗಾರದ ನಿಕ್ಷೇಪವನ್ನು ಪತ್ತೆ ಹಚ್ಚಿದ್ದನು. ಇದರ ನಂತರ ಇಲ್ಲಿ ಬಂಗಾರದ ಬೇಟೆ ಪ್ರಾರಂಭವಾಗಿ ಬ್ಯಾರಿ ಜನಿಸುವ ವೇಳೆಗೆ ಇದು ಸಮೃದ್ದಿಯ  ಪಟ್ಟಣವಾಗಿ ಬೆಳೆದಿದ್ದಿತು. ಬ್ಯಾರಿ ಜನಿಸಿದಾಗ ಆತನ ತಂದೆಗೆ 19 ವರ್ಷವಾಗಿದ್ದರೆ , ತಾಯಿ ಹದಿನೆಂಟು ವರ್ಷದವಳಾಗಿದ್ದಳು. ಬ್ಯಾರಿ ಬಾಲಕನಾಗಿರುವಾಗ ಉತ್ತಮ ಜೀವನವನ್ನು ಅರಸಿ ಆತನ ತಂದೆ ಉತ್ತರ ಪ್ರಾಂತದಲ್ಲಿದ್ದ ಯುರೇನಿಯಂ ನಿಕ್ಷೇಪ ಗಣಿಗಳನ್ನು ಹೊಂದಿದ್ದ ರಮ್ ಪ್ರದೇಶಕ್ಕೆ ವಲಸೆ ಹೋಗಲು ಯತ್ನಿಸಿದನು. ಆದರೆ ಮಾರ್ಗ ಮಧ್ಯದಲ್ಲಿದ್ದ ಕ್ಯಾರ್ನರ್‍ವಾನ್ ಪ್ರದೇಶದಲ್ಲಿ ಉತ್ತಮ ನೌಕರಿ ದೊರೆತುದರಿಂದ ಅಲ್ಲಿಯೇ ನೆಲೆಸಿದನು. ಬ್ಯಾರಿಯ ಪ್ರಾಥಮಿಕ ಶಿಕ್ಷಣ ಈ ನಗರದಲ್ಲಿಯೇ ಜರುಗಿತು. ಕ್ಯಾರ್ನರ್‍ವಾನ್ ಪಟ್ತಣದಲ್ಲಿ ಬಾಲಕರು ಪ್ರಾಥಶಾಲಾ ವಿದ್ಯಾಭ್ಯಾಸ ಮುಗಿಸಿದ ತಕ್ಷಣ ಗಣಿಗಾರಿಕೆಯ ಉದ್ಯಮದಲ್ಲಿ ನೌಕರಿಗೆ ಸೇರುವುದು ಸರ್ವ ಸಾಮಾನ್ಯವಾಗಿದ್ದಿತು. ಅವರಿಗೆ ಸಾಕಷ್ಟು ಆಕರ್ಷಕ ಸಂಬಳಗಳೂ ದೊರೆಯುತ್ತಿದ್ದವು. ಆದರೆ ಬ್ಯಾರಿಯ ತಾಯಿ, ತನ್ನ ಮಕ್ಕಳು ಇನ್ನು ಹೆಚ್ಚಿನ ವಿದ್ಯಾವಂತವಾಗಬೇಕೆಂಬ ಹಂಬಲ ಹೊಂದಿದ್ದಳು. ಬಾಲ್ಯದಿಂದಲೇ ಕಾರು ರಿಪೇರಿಗಾರನಾಗಿದ್ದ ತಂದೆಯಿಂದ ಯಾಂತ್ರಿಕ ಜ್ಞಾನ, ದಾದಿಯಾಗಿದ್ದ ತಾಯಿಯಿಂದ ವೈದ್ಯಕೀಯ ಜ್ಞಾನ ಬ್ಯಾರಿಗೆ ಲಭ್ಯವಾಗತೊಡಗಿದವು. ಮನೆಗೆ ಹಿರಿಯವನಾಗಿದ್ದ ಬ್ಯಾರಿಗೆ ತನ್ನಿಬ್ಬರು ತಮ್ಮಂದಿರನ್ನು ನೋಡಿಕೊಳ್ಳಬೇಕಾದ ಹೊಣೆಯೂ ಹೆಗಲೇರಿತು. ಈ ಸಂದರ್ಭದಲ್ಲಿ ಬ್ಯಾರಿ ತಮ್ಮಂದಿರೊಡಗೂಡಿ  ಹಲವಾರು ಬಗೆಯ ಜೋಡಣೆ, ಪ್ರಯೋಗ ಉಪಕರಣ ತಯಾರಿಕೆಯಲ್ಲಿ ಪರಿಣಿತನಾದನು. ಪ್ರೌಢ ಶಿಕ್ಷಣ ಮುಗಿದ ನಂತರ  ವೈದ್ಯುತ್ ಇಂಜಿನಿಯರಿಂಗ್ ಪದವಿಗೆ ಸೇರಲು ಬ್ಯಾರಿ ಅಶಿಸಿದ್ದನಾದರೂ  ಗಣಿತದಲ್ಲಿ ತನಗೆ ಅಂತಹ ಪರಿಶ್ರಮವಿಲ್ಲವೆಂದು ತೀರ್ಮಾನಿಸಿ ವೈದ್ಯಕೀಯ ವ್ಯಾಸಂಗವನ್ನು ಆಯ್ದುಕೊಂಡನು. ಇದರೊಂದಿಗೆ ಜೀವರಸಾಯನಶಾಸ್ತ್ರದ ಅಧ್ಯಯನದ ಅವಕಾಶವೂ ದಕ್ಕಿತು. 1975ರಲ್ಲಿ ಎಂಬಿಬಿಎಸ್ ಪದವಿ ಪಡೆದ ಬ್ಯಾರಿ ಕೆಲಕಾಲ ಕ್ವೀನ್ ಎಲಿಜಬೆತ್ ವೈದ್ಯಕೀಯ ಕೇಂದ್ರದಲ್ಲಿ ಸೇವೆ ಸಲ್ಲಿಸಿದನು. 1979ರಲ್ಲಿ ರಾಯಲ್ ಪರ್ತ್ ಆಸ್ಪತ್ರೆಗೆ ಹೋಗಿ ಸೇರಿದ ಬ್ಯಾರಿ ಅಲ್ಲಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆಯಲ್ಲಿ ಪರಿಣಿತಿ ಗಳಿಸಲು ಯತ್ನಿಸಿದನು. 1981ರಲ್ಲಿ ಬ್ಯಾರಿ ಇದನ್ನು ತೊರೆದು ಜೀರ್ಣಾಂಗ ವಿಭಾಗ ಸೇರಿದನು. ಇಲ್ಲಿ ಡಾ. ಟಾಮ್ ವಾಟರ್ಸ್‍ನ ಸೂಚನೆಯ ಮೇರೆಗೆ ಕರುಳಿನಲ್ಲಿ ವಿಶಿಷ್ಟ ಬಗೆಯ ಕೊಕ್ಕೆ ಬ್ಯಾಕ್ಟಿರಿಯಾ ಹೊಂದಿರುವ ರೋಗಿಗಳ ಅಧ್ಯಯನ ಪ್ರಾರಂಭಿಸಿದನು. 

ಇದೇ ಸಮಯದಲ್ಲಿ ತೀವ್ರ ಹೊಟ್ಟೆ ನೋವಿನಿಂದ ನರಳುತ್ತಿದ್ದ ಆದರೆ ಯಾವ ರೋಗ ಕಾರಣವನ್ನು ಗುರುತಿಸಲಾಗದ, ಮಹಿಳಾ ರೋಗಿಯೊಬ್ಬಳು ಬ್ಯಾರಿಯ ಗಮನ ಸೆಳೆದಳು. ಬ್ಯಾರಿ ಹಾಗೂ ಸಂಗಡಿಗರು ಇದಕ್ಕೆ ಕಾರಣಗಳನ್ನು ಹುಡುಕಲು ಯತ್ನಿಸಿ ವಿ¥sóÀಲರಾಗಿ, ಇದು ಮನೋರೋಗವೆಂದು ಭಾವಿಸಿ ಮನೋ ವೈದ್ಯರಲ್ಲಿಗೆ ಆಕೆಯನ್ನು ಕಳಿಸಿದರು,. ಆದರೆ ಕೆಲಕಾಲದಲ್ಲೇ ಇದು ಸಹ ವಿಫಲ ಯತ್ನವೆಂದು ಮನದಟ್ಟಾಯಿತು. ಆದರೆ ಕೆಲಕಾಲದ ನಂತರ ಈ ಮಹಿಳೆಯ ಉದರದ ಚರ್ಮ ಸ್ವಲ್ಪ ಕೆಂಪಾಗಿರುವುದು ಬ್ಯಾರಿಯ ಗಮನ ಸೆಳೆಯಿತು. ಇದನ್ನು ರೋಗಕಾರಣ ವಿಭಾಗದಲ್ಲಿದ್ದ ರಾಬರ್ಟ್‍ಗೆ ತಿಳಿಸಿದನು. ಇದಕ್ಕೆ ಪ್ರತಿಯಾಗಿ ರಾಬರ್ಟ್, ತಾನು ಈಗಾಗಲೇ ಪಡೆದಿದ್ದ ಕೊಕ್ಕೆ ಬ್ಯಾಕ್ಟೀರಿಯಾಗಳ ಪ್ರತಿಚಯ ಹಾಗೂ ವಿವರಗಳನ್ನು ಒದಗಿಸಿದನು. ಇದೇ ವೇಳೆಗೆ ಇತರರು ಕರುಳು ಬೇನೆ ತರುವ ಕ್ಯಾಂಪೈಲೊಬ್ಯಾಕ್ಟೆರ್ ಜೆಜುನಿ ಎಂಬ ಬ್ಯಾಕ್ಟೀರಿಯಾದ ಬಗೆಗೆ ಲೇಖನ ಪ್ರಕಟಿಸಿ ಇದು ನೀರಿನಿಂದ ಹಬ್ಬುವುದೆಂದು ತಿಳಿಸಿದ್ದರು . ಬ್ಯಾರಿ ಕರುಳು ಬೇನೆಗೆ ತುತ್ತಾಗಿದ್ದ ರೋಗಿಗಳ ಚರಿತ್ರೆಯನ್ನು ಕೂಲಂಕಷವಾಗಿ ಪರೀಕ್ಷಿಸಿದಾಗ  ಇಂತಹುದೇ ಬ್ಯಾಕ್ಟಿರಿಯಾಗಳ ಉಲ್ಲೇಖಗಳು  ವೈದ್ಯ ಸಾಹಿತ್ಯದಲ್ಲಿ ಎದ್ದು ಕಾಣುತ್ತಿದ್ದವಾದರೂ ಯಾರು ಅದನ್ನು ಗಂಭೀರವಾಗಿ ಪರಿಗಣಿಸದಿದ್ದುದನ್ನು ಗಮನಿಸಿದನು. ಆದರೆ ಬ್ಯಾರಿ ನಡೆಸಿದ ವಿಸ್ತೃತ  ಸಂಶೋಧನೆಗಳಿಂದ ಕೊಕ್ಕೆ ಬ್ಯಾಕ್ಟೀರಿಯಾಗಳು ಕರಳು ಹುಣ್ಣಿಗೆ ಕಾರಣವೆಂದು ಖಚಿತವಾಯಿತು. ಆದರೆ ಕರುಳು ಹುಣ್ಣಿಗೆ  ಅಜೈವಿಕ ಕಾರಣವಿದೆಯೆಂದು ನಂಬಿದ್ದ ವೈದ್ಯರುಗಳು ಬ್ಯಾರಿ ಸಂಶೋಧನೆ ಬಗ್ಗೆ ಪೂರ್ಣ ನಂಬಿಕೆ ಹೊಂದಲಿಲ್ಲ. ಕಳೆದ 200 ವರ್ಶಗಳಿಂದ ಹೊಟ್ಟೆ ಹುಣ್ಣಿಗೆ ಬಿಸ್ಮತ್ ದ್ರಾವಣವನ್ನು ಬಳಸುವ ಪದ್ದತಿ ವ್ಯಾಪಕವಾಗಿದ್ದಿತಲ್ಲದೆ, ಯಶಸ್ವಿ ಶಮನಕಾರಿಯೆಂದೂ ಸಹ ಸಾಬೀತಾಗಿದ್ದಿತು. 1983ರಲ್ಲಿ ಕಿಯೋಡ್ನಾ ಮೆಕ್‍ನಲ್ಟ್, ಕರಳು ಹುಣ್ಣಿಗೆ ಕಾರಣವಾಗುವ ಕೊಕ್ಕೆ ಬ್ಯಾಕ್ಟಿರಿಯಾಗಳು ಆಸ್ಟ್ರೇಲಿಯಾ ಮಾತ್ರವಲದೆ, ಬ್ರಿಟನ್‍ನಲ್ಲೂ ವ್ಯಾಪಕವಾಗಿರುವುದನ್ನು ತೋರಿಸಿದನು. ಇವೆಲ್ಲವನ್ನು ಕ್ರೋಢೀಕರಿಸಿ ಬ್ಯಾರಿ 1984ರಲ್ಲಿ ಲೇಖನ ಸಿದ್ದಪಡಿಸಿ ಪ್ರಕರಣೆಗೆ ಕಳಿಸಿದನು. ಬ್ಯಾರಿಯ ತೀರ್ಮಾನಗಳು ಅಪಕ್ವ, ಹಾಗೂ ಅಪರಿಪೂರ್ಣವೆಂದು ತಿರಸ್ಕರಿಸಲಾಯಿತು. ಇನ್ನು ಕೆಲ ವಿಜ್ಞಾನಿಗಳು ಬ್ಯಾಕ್ಟಿರಿಯಾಗಳು ಹುಣ್ಣಿನ  ಜಾಗದಲಿರುವುದರಿಂದ ಅವೇ ಹೊಟ್ಟೆ ಹುಣ್ಣಿಗೆ ಕಾರಣವೆಂದು ಹೇಳಲಾಗದೆಂದು ವಾದಿಸಿದರು. ಇದರಿಂದ ಬ್ಯಾರಿ ಕೆಲಕಾಲ ಖಿನ್ನಮನಸ್ಕನಾಗಿದ್ದನು. ಇಷ್ಟಾದರೂ ಬ್ಯಾರಿ ತನ್ನ ರೋಗಿಗಳಿಗೆ 2 ವಾರಗಳ ಅವಧಿಯ ಪ್ರತಿಜೈವಿಕ ಹಾಗೂ ಬಿಸ್ಮತ್ ದ್ರಾವಣ ಚಿಕಿತ್ಸೆ ನೀಡುವುದನ್ನು ನಿಲ್ಲಿಸಲಿಲ್ಲ. ಕರುಳು ಹುಣ್ಣಿನ ನಿವಾರಣೆಗೆ  ಅಗತ್ಯವಾಗಿದ್ದ ಶಸ್ತ್ರ ಚಿಕಿತ್ಸೆ ದೂರವಾಗಿ ಇವರೆಲ್ಲರೂ ಸುಧಾರಿಸಿಕೊಂಡರು. ಇದರಿಂದ ಬ್ಯಾರಿಯ ಆತ್ಮ ವಿಶ್ವಾಸ ಹೆಚ್ಚಿತು. ಆದರೆ ಈಗಲೂ ವಿಜ್ಞಾನಿಗಳು ಬ್ಯಾರಿಯ  ಸಂಶೋಧನೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲವಲ್ಲದೆ, ದೋಷ ಪೂರಿತವೆಂದು ಸಹ ಭಾವಿಸಿದರು. ಇವೆಲ್ಲವುಗಳಿಗೆ ಉತ್ತರವಾಗಿ, ತಾನೇ ಪ್ರಯೋಗ ಪ್ರಾಣಿಯಾಗಲು ಬ್ಯಾರಿ ನಿರ್ಧರಿಸಿದನು. ವೈದ್ಯಕೀಯ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಪತ್ನಿ ಹಾಗೂ  ಮಕ್ಕಳಿಗೂ ತಿಳಿಸದೆ ಬ್ಯಾರಿ ಕೊಕ್ಕೆ ಬ್ಯಾಕ್ಟೀರಿಯಾಗಳನ್ನು ಸೇವಿಸಿದನು. ಇದಾದ ಕೆಲ ವಾರಗಳಲ್ಲೇ ಹೊಟ್ಟೆಯಲ್ಲಿ ತೀವ್ರ ಹುಣ್ಣಾಗಿ ವಿಷಮ ಪರಿಸ್ಥಿತಿ ಎದುರಾಯಿತು. ಇದರಿಂದ ಬ್ಯಾರಿ ಸೂಚಿಸಿದಂತೆ  ಕರುಳುಹುಣ್ಣಿಗೆ ಕೊಕ್ಕೆ ಬ್ಯಾಕ್ಟಿರಿಯಾಗಳೇ ಕಾರಣವೆಂದು ಸಂಶಯಾತೀತವಾಗಿ ಸಾದಿತವಾಯಿತು. ಬ್ಯಾರಿಯ ಸ್ನೇಹಿತವಾಗಿದ್ದ ರಾಬರ್ಟ್‍ನ ಮೂಲಕ ಇದು ಪತ್ರಿಕಾ ವರದಿಗಾರನೊಬ್ಬನಿಗೆ ತಲುಪಿ ಜಗಜ್ವಾಹಿರಾಯಿತು. ಅಲ್ಪ ಕಾಲದಲ್ಲೇ ಜಗತ್ತಿನಾದ್ಯಂತ ಕರುಳು ಹುಣ್ಣಿನಿಂದ ನರಳುತ್ತಿದ್ದ ಜನ ಬ್ಯಾರಿಯ ಉಪಚಾರ ಬಯಸಿದರು. ಆದರೆ ಮತ್ತೊಬ್ಬ ವೈದ್ಯ ತಾನು ಬ್ಯಾರಿಗಿಂತಲೂ ಮೊದಲೇ ಇದನ್ನು ತಿಳಿದಿದ್ದೆನೆಂದು ಹೇಳುವುದರ ಮೂಲಕ ವಿವಾದ ಪ್ರಾರಂಭವಾಯಿತು. ಹಳೆಯ ರೋಗಿಗಳ ಉಪಚಾರದ ದಾಖಲೆಯಿಂದ ಬ್ಯಾರಿ ಈ ನಿಟ್ಟಿನಲ್ಲಿ ಮೊದಲಯವನೆಂದು ಖಚಿತವಾಗಿ ವಿವಾದ ತಣ್ಣಗಾಯಿತು. ಪ್ರೊಕ್ಟರ್ ಮತ್ತು ಗ್ಯಾಂಬಲ್‍ನಲ್ಲಿದ್ದ ಮೈಕ್ ಮ್ಯಾನ್ ಹರ್ಟ್, ಬ್ಯಾರಿಯ ಸಂಶೋಧನೆಗಳ ಹಕ್ಕು ಸ್ವಾಮ್ಯ ಪಡೆದು ಕರುಳುಹುಣ್ಣಿಗೆ ಬಿಸ್ಮತ್ ರಾಸಾಯನಿಕ ಪರಿಚಯಿಸಿದನು. ಜಗತ್ತಿನಾದ್ಯಂತ ಹರಡಿರುವ ಬಹುತೇಕ ಕರುಳುಹುಣ್ಣಿಗೆ ಇದು ರಾಮಬಾಣವಾಯಿತು. ಕರುಳು ಹುಣ್ಣಿಗೆ ಕಾರಣ ಹಾಗೂ ಚಿಕಿತ್ಸೆ ರೂಪಿಸಿದ್ದಕ್ಕಾಗಿ ಬ್ಯಾರಿ 2005ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 7/24/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate