ಬರ್ಟ್, ಸಕ್‍ಮನ್ –(1944-) ೧೯೯೧
ಜರ್ಮನಿ-ವೈದ್ಯಕೀಯ-ಮೆದುಳಿನಲ್ಲಿ ನರತಂತುಗಳಿಂದ ಬಂದ ವೈದ್ಯುತ್ ಪ್ರವಾಹಗಳನ್ನು ದಾಖಲಿಸುವ ವಿಧಾನ ರೂಪಿಸಿದಾತ.
ಸಕ್‍ಮನ್, ತಂದೆ ಜರ್ಮನ್ ಮೂಲದವನಾಗಿದ್ದು, ತಾಯಿಯ ಪೂರ್ವಿಕರು ಪ್ರಷ್ಯಾದಲ್ಲಿದ್ದರು. ಈತನ ತಾತ ಸಯಾಮಿನ ರಾಜನ ವೈದ್ಯನಾಗಿದ್ದನಲ್ಲದೆ, ಸಯಾಮಿನ ಮೊದಲ ಸಾರ್ವಜನಿಕ ಆಸ್ಪತ್ರೆಯ ಸಂಸ್ಥಾಪಕನೂ ಸಹ. ಸಕ್‍ಮನ್ ಸ್ಟುರ್ಟ್‍ಗರ್ಟ್‍ನಲ್ಲಿ ಜನಿಸಿದನಾದರೂ ಪ್ರಾಥಮಿಕ ಶಿಕ್ಷಣವನ್ನು ಸನಿಹದ ಲಿಂಡೌ ಹಳ್ಳಿಯಲ್ಲಿ ಮುಗಿಸಿದನು. ಬಾಲ್ಯದಿಂದಲೇ ಸಕ್‍ಮನ್‍ಗೆ ಇಂಜಿನಿಯರ್‍ನಾಗಬೇಕೆಂದು ಹಂಬಲವಿದ್ದಿತು. ಜೀವಿಗಳನ್ನು ಇಂಜಿನಿಯರಿಂಗ್ ತತ್ತ್ವಗಳಿಂದ ಅರಿಯುವುದು ಸಾಧ್ಯವೆಂದು ಸಕ್‍ಮನ್ ದೃಢವಾಗಿ ನಂಬಿದ್ದನು. ಆದ್ದರಿಂದ ಪದವಿಯಲ್ಲಿ ಭೌತಶಾಸ್ತ್ರ ಮತ್ತು ಜೀವಶಾಸ್ತ್ರದಲ್ಲಿ ಯಾವುದನ್ನು ಆರಿಸಿಕೊಳ್ಳಬೇಕೆಂಬ ದ್ವಂದ್ವದಲ್ಲಿ ಬಿದ್ದನು. ಅಂತಿಮವಾಗಿ ಟುಬಿನ್‍ಜೆನ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವಿಭಾಗ ಸೇರಿದನು.ಇಂಜಿನಿಯರಿಂಗ್‍ಗೆ ಹತ್ತಿರದ ವಿಷಯವಾಗಿದ್ದ ವೈದ್ಯುತ್ ಅಂಗಕ್ರಿಯಾಶಾಸ್ತ್ರದಲ್ಲಿ ಸಕ್‍ಮನ್‍ಗೆ ತೀವ್ರವಾದ ಆಸಕ್ತಿಯಿದ್ದಿತು. ಈ ಕಾಲದಲ್ಲಿ ವಿದ್ಯಾರ್ಥಿಗಳು ಏಕಕಾಲದಲ್ಲಿ ಹಲವಾರು ವೈದ್ಯಕೀಯ ಕಾಲೇಜುಗಳಲ್ಲಿ ಅಧ್ಯಯನ ಮುಂದುವರೆಸುವ ಅವಕಾಶವಿದ್ದಿತು. ಆದ್ದರಿಂದ ಫಿû್ರೀಬರ್ಗ್ ಬರ್ಲಿನ್, ಪ್ಯಾರಿಸ್‍ಗಳಲ್ಲಿ ವ್ಯಾಸಂಗ ಮುಂದುವರೆಸಿ ಮ್ಯೂನಿಕ್‍ನಿಂದ ಪದವಿ ಪಡೆದನು. ಈ ವೇಳೆಯಲ್ಲಿ ಕೀಟದ ದೃಗ್ ಪ್ರತಿಕ್ರಿಯೆಯನ್ನು , ಮಾಹಿತಿ ಸಿದ್ಧಾಂತದ ನೆರವಿನಿಂದ ಅರಿಯಲು ಹಲವಾರು ಜನ ಯತ್ನಿಸುತ್ತಿದ್ದರು. ಸಕ್‍ಮನ್, ಮ್ಯೂನಿಕ್‍ನಲ್ಲಿದ್ದ ಒಟ್ಟೋ ಕ್ರುಟ್ ಫೆಲ್ಡ್ ಕ್ರೆಪೆಟಿನ್ ಸಂಸ್ಥೆ ಸೇರಿದನು. ನರಜೀವಶಾಸ್ತ್ರದಲ್ಲಿನ ಸಂಶೋಧನೆಗೆ ಬೇಕಾದ ಎಲ್ಲಾ ಮೂಲ ಸೌಕರ್ಯಗಳೂ ಇಲ್ಲಿದ್ದವು. ಅಂಗಕ್ರಿಯಾಶಾಸ್ತ್ರದಲ್ಲಿ ಅಣ್ವಯಿಕ ಜೀವಶಾಸ್ತ್ರದ ಮೂಲ ತತ್ತ್ವಗಳನ್ನು ಅಳವಡಿಸಿಕೊಳ್ಳುವ ಪದ್ಧತಿಯನ್ನು ಸಕ್‍ಮನ್ ಬಳಕೆಗೆ ತಂದನು. ಮೆದುಳಿನಲ್ಲಿ ನರತಂತುಗಳಿಂದ ಬಂದ ವೈದ್ಯುತ್ ಪ್ರವಾಹಗಳನ್ನು ದಾಖಲಿಸುವ ವಿಧಾನ ರೂಪಿಸುವಲ್ಲಿ ಟೊಮೊಯುಕಿ ತಕಾಹಸಿಯೊಂದಿಗೆ ಸಕ್‍ಮನ್ ವಿಸ್ತೃತ ಸಂಶೋಧನೆಗಳನ್ನು ಕೈಗೊಂಡನು. ಇದಕ್ಕಾಗಿ 1991ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/24/2019