ಕೊರಿ, ಕಾರ್ಲ್ ಫರ್ಡಿನ್ಯಾಂಡ್ (1896-1984 ) ೧೯೪೭
ಝೆಕೆಸ್ಲೋವಾಕಿಯ-ಅಸಂಸಂ -ಜೀವ ರಸಾಯನಶಾಸ್ತ್ರ -
1920ರಲ್ಲಿ ಪ್ರಾಗ್‍ನಿಂದ ವೈದ್ಯಕೀಯದಲ್ಲಿ ಪದವಿ ಗಳಿಸಿದ ಫರ್ಡಿನ್ಯಾಂಡ್ , ಅದೇ ವರ್ಷ ತನ್ನ ಸಹಪಾಟಿ ಗೆರ್ಟಿ ನಿಷ್‍ಳನ್ನು ಮದುವೆಯಾದನು. ವಿದ್ಯಾರ್ಥಿಗಳಾಗಿದ್ದಾಗಿನಿಂದಲೂ ಅವರಿಬ್ಬರದೂ ಪರಸ್ಪರ ಪೂರಕ ಕ್ರಿಯಾಶೀಲ ಸಂಶೋಧಕ ಜೀವನ. 1922ರಲ್ಲಿ ಅಸಂಸಂಗಳಿಗೆ ಬಂದು ನೆಲೆಸಿದ ಈ ದಂಪತಿಗಳು 1947ರಲ್ಲಿ ಜೊತೆಯಾಗಿಯೇ ನೊಬೆಲ್ ಪ್ರಶಸ್ತಿ ಪಡೆದರು. 1903 ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಮೇರಿ ಕ್ಯೂರಿ ಹಾಗೂ ಜೊಲಿಯಟ್‍ನನ್ನು ಹೊರತು ಪಡಿಸಿದರೆ, ನೊಬೆಲ್ ಪ್ರಶಸ್ತಿ ಹಂಚಿಕೊಂಡ ದಂಪತಿಗಳೆಂದರೆ ಫರ್ಡಿನ್ಯಾಂಡ್ ಹಾಗೂ ಗೆರ್ಟಿ ಮಾತ್ರ. ಪ್ರಾಣಿಗಳ ದೇಹದಲ್ಲಿ ಗ್ಲುಕೋಸ್, ಗ್ಲೈಕೋಜೆನ್ ಆಗಿ ಪರಿವರ್ತಿತವಾಗುವ ಹಾಗೂ ಹಿಮ್ಮುಖ ಒಡೆತನಕ್ಕೊಳಗಾಗುವ ಸಂಶೋಧನೆಗಳಿಂದ ಕೊರಿ ದಂಪತಿಗಳು ಖ್ಯಾತ . 1850ರಲ್ಲಿ ಬರ್ನಾಡ್ ಗ್ಲೈಕೋಜಿನ್ ಯಕೃತ್ ಹಾಗೂ ಸ್ನಾಯುಗಳಲ್ಲಿ ಶಕ್ತಿ ಸಂಚಯದಂತೆ ಸಂಗ್ರಹವಾಗಿದ್ದು, ಅಗತ್ಯ ಬಿದ್ದಾಗ ಸರಳ ಸಕ್ಕರೆಗಳ ರೂಪಕ್ಕೆ ಪರಿವರ್ತಿತವಾಗುವುದೆಂದು ತೋರಿಸಿದ್ದನು. ಕೋರಿ ದಂಪತಿಗಳು ಪ್ರಾಣಿಗಳ ಶರೀರದಲ್ಲಿ ಚಯಾಪಚಯ ಕ್ರಿಯೆಯಲ್ಲಿ ಗ್ಲೂಕೋಸ್‍ನ ಪರಿವರ್ತನೆಯನ್ನು ಅಮೂಲಾಗ್ರವಾಗಿ ವಿವರಿಸಿದರು,. ಸ್ನಾಯುಗಳಲ್ಲಿ ಗ್ಲೈಕೋಜೆನ್ ವಿಭಜನೆ ಹೊಂದುವುದನ್ನು ಅಧ್ಯಯನ ನಡೆಸಿದರು. ಗ್ಲೈಕೋಜನ್ ವಿಭಜನೆ ಹೊಂದಲು ಗ್ಲುಕೋಸ್-1 ಪ್ರೊಸ್ಪೇಟ್ ಎಂಬ ಮಧ್ಯವರ್ತಿ ಸಂಯುಕ್ತದ ಅಗತ್ಯತೆಯನ್ನು ಗುರುತಿಸಿ ಅದನ್ನು ಫಾಸ್ಪಾರಿಲೈಸಿಸ್ ಕ್ರಿಯೆಯಿಂದ ಬೇರ್ಪಡಿಸಿದ ಖ್ಯಾತಿ ಇವರದು. ಈ ಸಂಯುಕ್ತ ಈಗ ಕೊರಿ ಎಸ್ಟರ್ ಹೆಸರಿನಲ್ಲಿ ಖ್ಯಾತವಾಗಿದೆ. ಸ್ನಾಯುಗಳು ಕ್ರಿಯಾಶೀಲವಾದಾಗ ಅವುಗಳಲ್ಲಿನ ಗ್ಲೈಕೋಜಿನ್ ಲ್ಯಾಕ್ಟಿಕ್ ಆಮ್ಲವಾಗಿರುತ್ತದೆ. ಇದು ಆಮ್ಲಜನಕ ಪ್ರಭಾವದಿಂದ, ಪಿತ್ತ ಜನಕಾಂಗದಲ್ಲಿ ಗ್ಲೈಕೋಜಿನ್ ರೂಪದಲ್ಲಿ ಶೇಖರಣೆಗೊಳ್ಳುತ್ತದೆ, ಸ್ನಾಯುಗಳು ಮತ್ತೆ ಕಾರ್ಯನಿರತವಾದಾಗ ಲ್ಯಾಕ್ಟಿಕ್ ಆಮ್ಲವಾಗಿ ಪರಿವರ್ತನೆಗೊಳ್ಳುತ್ತದೆ.
ಇದನ್ನು ಕೋರಿ ಚಕ್ರವೆಂದು ಕರೆಯಲಾಗುತ್ತದೆ. ಕೊರಿ ಚಕ್ರದಲ್ಲಿ ಭಾಗವಹಿಸುವ ಕೆಲವು ಕಿಣ್ವಗಳನ್ನು ಸಹ ಕೂರಿ ದಂಪತಿಗಳು ಪ್ರತ್ಯೇಕಿಸಿದರು. ಶರ್ಕರ ಪಿಷ್ಟಗಳನ್ನು ಅರಗಿಸಿಕೊಳ್ಳುವ ಕ್ರಿಯೆಯಲ್ಲಿ ಇನ್ಸುಲಿನ್ ಮತ್ತು ಎಪಿನ್‍ಪ್ರಿನ್‍ಗಳ ಪ್ರಾಮುಖ್ಯತೆಯನ್ನು ಗುರುತಿಸಿದರು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/17/2020