ಕೊಡಗಿನ ಕಾಡುಮೆಣಸಿನ ತಳಿಯೊಂದನ್ನು ಮಾದಾಪುರದ ಕೃಷಿಕರೊಬ್ಬರು ಆಸಕ್ತಿಯಿಂದ ಬೆಳೆಸಿದ್ದಾರೆ. ಈ ತಳಿಯ ಗುಣಾವಗುಣಗಳ ಬಗ್ಗೆ ಹೆಚ್ಚಿನ ಅಧ್ಯಯನ ಆದಷ್ಟು ಶೀಘ್ರ ನಡೆಯಲಿ ಕೊಡಗಿನ ಕಾಡಿನಲ್ಲಿ ಇರುವ ಕಾಳುಮೆಣಸಿನ ಒಂದು ತಳಿಯನ್ನು ಮಾದಾಪುರದ ಕೃಷಿಕರೊಬ್ಬರು ಆಸಕ್ತಿಯಿಂದ ಬೆಳೆಸುತ್ತಾ ಬಂದಿದ್ದಾರೆ. ಈ ರೈತ, ಪೂಣಚ್ಚ ನಾಪಂಡ ಇರುವುದು ಮಡಿಕೇರಿಯಿಂದ 40 ಕಿಲೋಮೀಟರ್ ದೂರದ ಗರ್ವಾಲೆ ಗ್ರಾಮದಲ್ಲಿ. ಈ ಕಾಡುತಳಿಗೆ ಪೂಣಚ್ಚ ‘ಆದಿ’ ಎಂದು ಹೆಸರು ಕೊಟ್ಟಿದ್ದಾರೆ. ಇದು ಕಾಳುಮೆಣಸಿದ ಅದೇ ತಳಿ – Piper nigrum ಅಲ್ಲ, ಬದಲಿಗೆ ಇದು Piper relactum ಎನ್ನುತ್ತಾರೆ ಕೋಝಿಕ್ಕೋಡಿನ ಸಂಬಾರವಸ್ತು ಸಂಶೋಧನಾ ಕೇಂದ್ರದ ಮುಖ್ಯ ವಿಜ್ಞಾನಿ ಡಾ.ಸಜಿ. ಮಾಮೂಲಿ ಕಾಳುಮೆಣಸಿಗಿಂತ ಸ್ವಲ್ಪ ಭಿನ್ನವಾದ ಪರಿಮಳ ಇದರದು. ಕಾಳು ದೊಡ್ಡ. ಮಾಮೂಲಿ ಕಾಳುಮೆಣಸು ನೂರು ಕಿಲೋ ಹಸಿಯಿಂದ 33 ರಿಂದ 38 ಕಿಲೋ ಒಣಮೆಣಸು ಸಿಕ್ಕರೆ ಇದರಲ್ಲಿ 38 ರಿಂದ 42 ಕಿಲೋ ಸಿಗುತ್ತದಂತೆ. “ಒಣಮೆಣಸು ಒಂದು ಕಿಲೋ ಆಗಲು ಅಂದಾಜು ಆರರಿಂದ ಏಳುಸಾವಿರ ಕಾಳು ಬೇಕು”. ಕೊಯ್ಲಿನ ಸೀಸನೂ ಭಿನ್ನ. ಇದು ದಶಂಬರ - ಜನವರಿಯಲ್ಲಿ ಕೊಯ್ಲಿಗೆ ಸಿದ್ಧವಾಗುತ್ತದೆ. ಪೂಣಚ್ಚ ಅವರ ಊರು ಗರ್ವಾಲೆಯಲ್ಲಿ - ಇದು ಸಮುದ್ರಮಟ್ಟದಿಂದ 3800 ಅಡಿ ಎತ್ತರದಲ್ಲಿದೆ - ಮಳೆ ಹೆಚ್ಚು. ಹೀಗಾಗಿ ಅಲ್ಲಿ ಕಾಳುಮೆಣಸಿನ ತಳಿಗೆ ರೋಗವೂ ಹೆಚ್ಚು. “ಈ ಕಾಡುಮೆಣಸಿನ ತಳಿಗೆ ಶೀಘ್ರ ಮತ್ತು ನಿಧಾನ ಸೊರಗು ರೋಗ ಬರುವುದಿಲ್ಲ. ಆದರೆ ಕಾಂಡ ಕೊಳೆಯುವ ಒಂದು ರೋಗ ಇದೆ. ಅದೇನೆಂದು ಗೊತ್ತಾಗಿಲ್ಲ” ಎನ್ನುತ್ತಾರೆ ಇವರು. ಇವರಲ್ಲಿ 18 ವರ್ಷ ಹಳೆಯ ಕಾಡುಮೆಣಸಿನ ಬಳ್ಳಿಯಿಂದ ಅಭಿವೃದ್ಧಿಪಡಿಸಿದ ಗಿಡಗಳು ಹಲವಿವೆ. ಈ ಪೈಕಿ ಸರಾಸರಿ ಏಳು ವರ್ಷ ಪ್ರಾಯದ 60 ಬೆಳೆ ಬರುವ ಬಳ್ಳಿಗಳಿವೆ. ಕಳೆದ ವರ್ಷ ಇಷ್ಟು ಗಿಡಗಳಿಂದ 20 ಕಿಲೋ ಮೆಣಸು ಸಿಕ್ಕಿದೆ ಎನ್ನುತ್ತಾರೆ. ಕಾಳುಮೆಣಸಿಗೆ ಹೋಲಿಸಿದರೆ, ಈ ಕಾಡು ಮೆಣಸಿನ ಕರೆಯಲ್ಲಿ ಮೆಣಸಿನ ಕಾಳು ಇರುವುದು ಅಜ್ಜಿಯರ ಹಲ್ಲಿನಂತೆ - ಸ್ವಲ್ಪ ದೂರದೂರ. ಪೂಣಚ್ಚರ ಪ್ರಕಾರ, “ನನ್ನ ಹೆಚ್ಚಿನ ಗಿಡಗಳೂ ಬೀಜದಿಂದ ಮಾಡಿದವು ಆಗಿದ್ದು ಇವುಗಳ ಕೊತ್ತು (ಕರೆ)ಯ ರೀತಿಯಲ್ಲಿ ವ್ಯತ್ಯಾಸ ಇದೆ. ಕೆಲವು ಆಯ್ದ ಬಳ್ಳಿಗಳಲ್ಲಿ ಕಾಳು ಒತ್ತೊತ್ತಾಗಿದೆ.” ಆದಿ ಕಾಡುಮೆಣಸಿನಲ್ಲಿ ಗಂಡು-ಹೆಣ್ಣಿನ ಗಿಡಗಳು ಪ್ರತ್ಯೇಕ. ಇವು ಬೆಳೆ ಬಂದ ಮೇಲಷ್ಟೇ ಗೊತ್ತಾಗುತ್ತವೆ. ಒಂದೆಕ್ರೆಗೆ ಐದಾರು ಗಂಡು ಗಿಡ ಇದ್ದರೆ ಸಾಕಂತೆ. ಬೀಜದಿಂದ ಮಾಡಿದ ಗಿಡಗಳನ್ನು ಇವರು ಮಾರುತ್ತಿದ್ದು ಹೆಚ್ಚು ಮಳೆ ಬೀಳುವ ಪ್ರದೇಶದ ಕೃಷಿಕರು ಒಯ್ದಿದ್ದಾರೆ ಎನ್ನುತ್ತಾರೆ. ಈಚೆಗೆ ಪೂಣಚ್ಚ ಬಳ್ಳಿಯಿಂದಲೂ ಶೀಘ್ರ ಪುನರುತ್ಪಾದನಾ ವಿಧಾನದಲ್ಲಿ ಗಿಡ ತಯಾರಿಸತೊಡಗಿದ್ದಾರಂತೆ. ಆದಿ ಕಾಡುಮೆಣಸಿನ ಬಳ್ಳಿಗಳು ಕೊಡಗಿನ ಬೇರೆಬೇರೆ ಕಡೆ ಇರಬಹುದು. ಇದರಲ್ಲಿ ನಿಜವಾಗಿ ಯಾವ್ಯಾವ ರೋಗಗಳಿಗೆ ನಿರೋಧಕ ಗುಣವಿದೆ - ಯಾವ ರೋಗ ಬರುತ್ತದೆ ಎಂಬ ಬಗ್ಗೆ ವೈಜ್ಞಾನಿಕ ಅಧ್ಯಯನ ಆಗಬೇಕಿದೆ. ಈ ತಳಿಗೆ ಗಮನ ಹರಿಸಿ ಸಾರ್ವಜನಿಕರ ದೃಷ್ಟಿಗೆ ಒಡ್ಡಿದ ಪೂಣಚ್ಚ ಅಭಿನಂದನಾರ್ಹರು. ಆದಷ್ಟು ಶೀಘ್ರ ಈ ತಳಿಯ ಗುಣಾವಗುಣಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಲಿ.
ಮೂಲ : ಶ್ರಮಜೀವಿ
ಕೊನೆಯ ಮಾರ್ಪಾಟು : 1/28/2020
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳು ಹಾಗೂ ಜಾನುವಾರು ...
ಜಲಾನಯನ ಅಭಿವೃದ್ಧಿ ಪರಿಕಲ್ಪನೆ ಮತ್ತು ತತ್ವಗಳ ಬಗ್ಗೆ ಇಲ್ಲ...
ಕೌಶಲ್ಯ ಅಭಿವೃದ್ಧಿ
ಮಹಿಳೆಯರ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತಾದ ಮಾಹಿತಿ ಇಲ್ಲಿ...